"ಅಲೆಲೆಲೆಲೆ....ಲೆಲೆ...!
ಮರಿ...ಬಂಗಾರ...ಗುಬ್ಬಚ್ಚಿ, ಎಷ್ಟು ಛಂದ
ಅದಾನ ರೀ ಮಾಮಿ ನಿಮ್ಮ ಮಗ! ನಗತಾನ ನೋಡ್ರಿ, ಲೇ, ಕಳ್ಳ, ಕೃಷ್ಣ! ನಾನೆನಾದ್ರು ಸಣ್ಣಕ್ಕಿ ಇದ್ದಂದ್ರ ಇವನಿಗೆ
ಮದ್ವಿ ಅಗ್ತಿದ್ದ ನೋಡ್ರಿ", ಅಂತ
ಹೇಳಿ ಎದುರಿನ ಮನಿ ಪಲ್ಲವಿ, ಪಕ್ಕದ್ಮನಿ
ರಾಗಿಣಿ, ವಿಜಾಬಾಯಿ ವಠಾರದ ಸಾವಿತ್ರಿ ಎಲ್ಲರು ನನಗ ತೊಟ್ಟಲಾಗ ನೋಡಿ ಆಡಿಸ್ತಿದ್ದಿದು ಮಗಂದು ನನಗ ಇನ್ನ
ನೆನಪ ಹೋಗಿಲ್ಲ ನೋಡ್ರಿ. ಅವರೆಲ್ಲಾ ನನಗಿಂತ 12-15 ವರ್ಷ ದೊಡ್ಡವರು. ಆದ್ರು ಅಷ್ಟೊಂದು ಪ್ರೀತಿ.
ಅದರಲ್ಲೂ
ಶಾಮಲಾ ಮಾಮಿ ಮತ್ತ ವಂದನಾ ಟೀಚರಂತು ನಾನು ಹೈಸ್ಕೂಲ್ ಕಟ್ಟಿ ಏರತನಕ, ನೀನು ನನ್ನ ಮಗಳು ಸಂಗೀತಾಗ ಲಗ್ನ ಮಾಡ್ಕೊಬೇಕು, ನನ್ನ ಮಗಳು ವೈಶಾಲಿಗ ಮದ್ವಿ ಮಾಡ್ಕೊಬೇಕು ಅಂತ
ಕಿತ್ತಾಡ್ತಿದ್ರು. ನನಗೂ ಸ್ವಲ್ಪ ಅರ್ಥ ಆಗ್ತಿತ್ತು ಆದ್ರು ತಿಳಿಲಾರದವನ ಹಂಗ ಮುಗ್ಧ ಮಾರಿ ಮಾಡ್ಕೊಂಡು
ಸುಮ್ನಿರ್ತಿದ್ದ. ರೀ ಸಣ್ಣತನದಾಗ ಇದೆಲ್ಲಾ ಅದೆಷ್ಟು ಛಂದ ಇತ್ತರಿ. ಈಗ ಅದೆಲ್ಲಾ ನೆನಪ ಮಾಡ್ಕೊಂಡ್ರ
ಮಜಾ ಅನ್ನಸ್ತದ. ನಾನು ಹತ್ತನೆ ಮುಗ್ಸಿ ಪಿ. ಯು. ಸಿ. ಒದಕ್ಕಂತ ಗುಲಬರ್ಗಾ-ಕ ಬಂದ ಬಿಟ್ಟೆ. ಆಮೇಲಿಂದ
ಅವರೆಲ್ಲಾ ಎಲ್ಲಿ ಹೋದ್ರು, ಏನ್ಮಾಡ್ತಿದಾರೆ
ಅಂತಲೂ ಸರಿಯಾಗಿ ಗೊತ್ತಿಲ್ಲ.
ಈಗ ನೋಡ್ರಿ
ಕಳೆದ ಒಂದುವರಿ ವರ್ಷದಿಂದ ಲಗ್ನ ಮಾಡ್ಕೊಬೇಕು ಅಂತ ಹುಡ್ಗಿರ್ನ ನೋಡ್ತಾ ಇದಿನಿ ಒಂದೂ ಕಲಿತಾ ಇಲ್ಲ.
ಅವರೆಲ್ಲಾ ಈಗ ಇದ್ದ್ರ, ನನ್ನ ಸುತ್ತಾಟ
ಡೀಪ್ರೆಷನ್ ಆದ್ರು ತಪ್ಪತಿತ್ತು. ಹಿಂಗ ಅನ್ಕೊಂಡ ಎರಡ್ಮೂರು ದಿವ್ಸದಾಗ ನಾನು, ನಮ್ಮಾಮ್ಮಾ ಗುಲ್ಬರ್ಗಾದಾಗ ಬಾಜ಼ಾರಕ್ಕ ಹೋದಾಗ
ನಮ್ಮ ವಂದನಾ ಟೀಚರ್ ಅವರು ಭೇಟಿ ಆಗಿದ್ರು. ನಾನು, ಮನಸ್ಸಲ್ಲೆ ಅಟ್ಲೀಸ್ಟ್ ಅವರ ಮಗಳು ವೈಶಾಲಿಗೆ ಇನ್ನು ಮದ್ವಿ ಆಗಿರ್ಲಿಲ್ಲಾ ಅಂದ್ರ
ನನ್ನ ಸಲ್ವಾಗಿ ಕೇಳಬಹುದಲ್ಲಾ ಅನ್ಕೊಂಡೆ. ಅದು ಇದು ಮಾತಾಡ್ತಾ ಟೀಚರು ಎನು ಇವನು ನಿಮ್ಮ ಮಗ್ನಾ, ಎನು ಗೊತ್ತೆ ಸಿಗೊದಿಲ್ವಲ್ಲಪ್ಪಾ? ಸಣ್ಣವಯಿದ್ದಾಗ ಭಾಳ ಮುದ್ದಾಗಿದ್ದಿ ಈಗ ಫ಼ುಲ್
ಬದಲಾಗಿ ಬಿಟ್ಟಿ. ವೈಶಾಲಿ ಇವಾಗಾ M. Tech. ಮುಗ್ಸಿ ಅಮೇರಿಕಾಗೆ ಹೋಗ್ಯಾಳ. ಅಕಿಗಿ ಈಗಾ 2-3 ಸಂಬಂಧಗಳು
ಬಂದಾವ ಎಲ್ಲಾ ಅಮೇರಿಕಾ, UK ಲಿಂದ.
ನಾವೇ ಅವಳು ಬರಲಿ ಅಂತ ಕಾಯಲಿಗತ್ತಿವಿ. ನಿನ್ನ ಮದ್ವಿ ಆಯಿತಾ? ಅಂತ ಕೇಳಿದ್ರು, ನಾನಿನ್ನೇನು ಹೇಳೊದು, ಆವಾಗೆ ಎಲ್ಲಾ ಮುಗ್ಧೊಗಿತ್ತು. ಇನ್ನೆನು
"ಬರ್ರಿ ಮನಿ ಕಡಿ, ಇಲ್ಲೆ ಬಾಜು
ರೋಡಿನಾಗೆ ನಮ್ಮ ಮನಿ ಅದ", ಅಂತ
ಹೇಳಿ ಅಲ್ಲಿಂದ ಹೊರಟು ಬಿಟ್ವಿ.
ಹರಿದು ಹೋಗಿರ ಜೀನ್ಸಗೋಳು,
ಸವದುಹೋದ ಚಪ್ಪಲಿಗೋಳು, ಜೋತು ಬಿದ್ದ ಮಾರಿ(ಮುಖ)ಗೋಳು, ಜೊಲ್ಲು ಸುರಿಸ ಕಣ್ಣುಗೋಳು, ಹೀಂಗಾದ್ರೆ ನಾಳಿಗಿ ನಮ್ಮದು ಏನುಪ್ಪಾ, ಹ್ಯಾಂಗಪ್ಪಾ ಅನ್ನ ವಿಚಾರಗೋಳು, ಅಂಜಸ ಹೆಣ್ಣಿನವರ ಡಿಮ್ಯಾಂಡ್‌ಗೋಳು, ದೇವದಾಸಾದ ಮನಸುಗೋಳು, ಮುಂಗಾರಿನ ಮೋಡಗಳು ಕಾಣಲಾರದೆ ಕಂಗಾಲಾದ ಕನಸಗೋಳು, ಒಂದೊಂದು ಸಲಾ ಕನಸ ಜೀವನಾನ ಅನಸ್ತದ.
ಮ್ಯಾಗಿ
ದಾಗ ಮಿಂದು,
ಬೇಕರ್ಯಾಗ ತಿಂದು, ಬಿಸ್ಕಿಟ್ ಸತ್ಯಾಗ್ರಹ ಮಾಡಿ, ಎರಡೂ ಹೋತ್ತ ಮಂಡಾಳನ ಮೇಯ್ದು, ನಾಲ್ಕು ದಿನಕ್ಕೊಂದ ಸಲಾ ಉಪ್ಪಿಟ್ಟಿನ ಮೃಷ್ಟಾನ್ನ
ಭೋಜನ ಮಾಡಿ,
ದಿನಕ್ಕ ಹತ್ತ ಸಲಾ ಟೀ, ಕಾಫ಼ಿ ಕುಡದು, ಸಜಾ-ಏ-ಕಾಲಾಪಾನಿ ಅನ್ನಹಂಗ ಬದುಕಿ, ಒಲಿಯದ ದೇವರಿಗಿ ದಿನ್ನಾ ಎರಡ ಸಲಾ ಭೇಟಿ ಕೊಟ್ಟು, ಬಂದ ಭಕ್ತರನ್ನ ವಿಚಾರಿಸಿ, ಬಂದ ಗೆಳೆಯರೆಲ್ಲಾ ಕೂಡಿ ಅಲ್ಲಿರೊ ಕನ್ಯಾಮಣಿಯರನ್ನ
ನೋಡಿ, ಆಷ್ಟೋತ್ತರ ಹೇಳಿ, ಅರ್ಚನೆ ಮಾಡ್ಸಿ, ಏನ್ಮಾಡಿದ್ರನು ಝಪ್ಪ್ ಅನ್ನದ ಈ ಹಣೀಬಾರ, ಇದೇನು ಆಜೀವನ ಬ್ರಹ್ಮಚರ್ಯದ ಕಾರಾವಾಸನ
ನಮ್ಮದು ಅನಸ್ತದ.
ಅಲ್ಲಾ ಹುಡ್ಗಿರು
ಸಿಗದ ಧೊಡ್ಡದು ಆಗ್ಯದ ಈಗಿನ ಕಾಲದಾಗ, ಅಂಥದ್ರಾಗ
ಮನಿಯವರ ತಾಳಾ ಬ್ಯಾರೆನೆ. ಮನ್ನ ಮೂರು ವಾರದ ಹಿಂದ ಕೋಣನಕುಂಟೆ-ದಾಗ ಒಬ್ಬರ ಮನಿಗಿ ಹೋಗಿದ್ದೇವು ಹೆಣ್ಣು
ನೋಡಲಿಕ್ಕಂತ,
ಹುಡ್ಗಿ ಎನೊ ಪರವಾಗಿರಲಿಲ್ಲ. ಹೆಣ್ಣಿನ
ಕಡಿಯವರಿಗಿ ಒಪ್ಪಿಗೆ ಆಗಿತ್ತು. ಆದ್ರ ನಮ್ಮಪ್ಪಾ ಬಂದು ಬಿಟ್ಟು ಹುಡಗಿದು ಎಡಗಾಲಾಗ ಆರು ಬೆರಳ ಅವ, ಹಾಂಗಿದ್ರ ಮಾವ ಇಲ್ಲದ ಮನಿಗಿನ ಅಕಿಗಿ ತರ್ಬೇಕು.
ಇಲ್ಲಾಂದ್ರ ಎಲ್ಲಾ ಎಡವಟ್ಟಾಗತದ ಅಂತ ಹೇಳಿ, ಮುಂದ ನಿಮಗ ಹ್ಯಾಂಗ ಛೊಲೊ ಅನಸ್ತದ ಹಂಗ ಮಾಡ್ರಿ ಅಂದ ಬಿಟ್ರು. ನಾನು ಅಮ್ಮನ ಎದರ
ನಿಂತು, ಅಲ್ಲಾ ಅಮ್ಮಾ ನಾನು ಅವಳ ಕಾಲಿಂದು ಎಕ್ಸಟ್ರಾ
(ಆರನೆ) ಬಟ್ಟನ ಲಗ್ನ ಆಗಕ್ಕಿಂತ ಮೊದ್ಲ ಆಪರೆಷನ್ ಮಾಡಿಸ್ಬಿಟ್ಟು ತಗ್ಸಿ ಲಗ್ನ ಆಗ್ತಿನಿ ಅಂತ ಅಪ್ಪಗ
ಹೇಳ್ಬಿಡು ಅಂದೆ. ಅದಕ್ಕೆ ಅಮ್ಮಾ, ಏನಪ್ಪಾ
ನೀನೆ ಹೇಳ್ಬಾರದಾ? ಶಾಸ್ತ್ರ
ಅಂದ್ರ ನಿಮಗೆಲ್ಲಾ ಆಟ ಆಗ್ಯದ..." ಅಂತ ಗೊಣಗಿದ್ಲು. ಎನ್ಮಾಡದು, ಜಾಸ್ತಿ ಏನು ಅನ್ನ ಹಾಂಗಿಲ್ಲಾ, ಯಾಕಂದ್ರ ಇದು ಭಾಳ ಎಮೋಷನಲ್ ವಿಷಯಾ ಬ್ಯಾರೆ.
ಒಳಗೊಳಗೆ ಗುಣಗುಟ್ಟತಾ ತಂಗಿ ಬರ್ತಿವವ್ವಾ ಅಂತ ಹೇಳಿ ಬಂದು ಬಿಟ್ಟೆವು.
ಇನ್ನೊಂದು
ವಿಷಯ ಎನಂದ್ರ,
ನಾನು ದಿನ್ನಾ ನಾಷ್ಟಾ, ಊಟ ಮಾಡ್ಲಿಕ್ಕಿ ಒಂದು ಹೋಟಲಿಗಿ ಹೋಗ್ತಾ ಇದ್ದ.
ಸುಮಾರು ಎರಡು ವರ್ಷ ದಿಂದ ಅದೇ ಹೋಟಲಗೆ ಹೋಗ್ತಿನಿ. ಯಾಕಂದ್ರ ಆ ಎರಿಯಾದಾಗ ಅದೊಂದೆ ಹೋಟಲ್ ಛೊಲೊ
ಇರದು. ಆ ಹೊಟಲ್ನಾಗ ಕಳೆದ ಎರಡು ವರ್ಷದಾಗ ತಿಂಡಿ ರೇಟಗೋಳು ಹೆಚ್ಚು ಕಮ್ಮಿ 3-4 ಸಲಾ ಬದಲಾಸಿರಬೇಕು.
ಒಂದುವರೆ ತಿಂಗಳ ಹಿಂದೆ ಕೊನಿ ಬಾರಿ ರೇಟಗೋಳು ಹೆಚ್ಚಾಗಿರದು. ಆದ್ರೆ ಹೋಟಲ್ ಮಾಲೀಕ ಮಾತ್ರ ನನ್ನ
ಕಡಿ ಹಳೆ ರೇಟೇ ತಗೊತಾನ, ಯಾಕ ಅಂತ
ಕೆಳಿದ್ದಕ್ಕ,
"ಇರಲಿ ಬಿಡಿ
ಸಾರ್" ಅಂತಾನ. ಆಮೇಲೆ ಅಲ್ಲಿ ಕೆಲ್ಸಾ ಮಾಡವರೆಲ್ಲಾ ನಂಗ ಈಗ ಪರಿಚಯ ಇರದ್ರಿಂದ ಹಂಗೆ ಮುಗುಳ್ನಗತಾರ ಮತ್ತ ಬ್ಯಾರೆಯವರಿಗಿ ಕೊಡದರ ಕಿಂತಾ ಜಾಸ್ತಿನೇ
ಹಾಕಿ ಕೊಡ್ತಾರ. ಇದನ್ನೆಲ್ಲಾ ನೋಡಿದ್ರ, ಹೋಟಲ್ ಅವರಿಗೆ ನನ್ನ ಮ್ಯಾಲ, ನನ್ನ ಬ್ಯಾಚೆಲ್ಲರ್ ಲೈಫ಼ ಮ್ಯಾಲ ಇರಷ್ಟನು ಕರುಣ ಆ ದೇವರಿಗಿ ನನ್ನ ಮ್ಯಾಲ ಕರುಣೆ
ಬರ್ತಿಲ್ಲಲ್ಲಪ್ಪಾ ಅಂತ ಬೇಜಾರಾಗ್ತದ.
ಅವಳು ಜೀನ್ಸ
ಹಾಕ್ತಾಳಂತ,
ಅವಳಿಗಿ ಅಡಗಿ ಮಾಡಲಿಕ್ಕಿ ಬರಲ್ಲಂತ, ಅವರದು ಸಂಪ್ರದಾಯಸ್ಥರ ಮನಿ ಅಲ್ಲಂತ, ಅವಳ ಹೈಟು ಜಾಸ್ತಿ, ಅವಳ ದು ನಿನ್ನ ಜೋಡಿ ತಂದಿ ಮಗಳ ತರಹ ಕಾಣಸ್ತದ, ಅವಳು ಭಾಳ ಮಾಡರ್ನ ಹಳ ಅಂತ, ಅವರದು ಯಾರೊ ದುರದ ಬಳಗದವರ ಪೋರಿ ಯಾವನ ಸರಿನೊ
ಓಡಿಹೋಗಿದ್ಲಂತ ಆಯ್ಯೋ.....!, ಒಂದಾ, ಎರಡಾ?
ಇದೆಲ್ಲದರಿಂದ
ಬಚಾವ ಆದ್ರ ಇನ್ನೊಬ್ಬ ನಕ್ಷತ್ರಿಕ ಇರ್ತಾನ, ಅವನೇ ಈ ಶಾಸ್ತ್ರಿ. ನಮಗಿಷ್ಟಾ ಆಗಿದ್ ಹುಡುಗಿಯ ಕುಂಡಲಿ ಕಲಿಯಂಗಿಲ್ಲಾ ಅಂತ ಹೇಳಿ, ಹಿಡಿಸಲಾರದ ಹುಡಗಿ ಫೋಟೊ ಮತ್ತ ಕುಂಡಲಿ ತಂದು, ಇದರಲ್ಲಿ 36 ಗುಣ ಕಲಿತಾವ ಅಂತ ಹೇಳಿ ಮನಸ್ಸಿಂದು
ನೆಮ್ಮದಿ ಹಾಳ ಮಾಡ್ತಾನ. ಗುಣಗೋಳು ಕಲಿತಿಲ್ಲಾ, ಗೋತ್ರ ಕೂಡ್ತಿಲ್ಲ, ನಾಡಿಗಳು
ಬ್ಯಾರೆ-ಬ್ಯಾರೆ ಇರಬೇಕು, ಷಾಖೆ ಬೇರೆ
ಇರಬೇಕು, ರಾಕ್ಷಸ ಗಣ ಇರ ಬಾರದು, ಮಂಗಳ ಇದ್ರ ಯಾವಾಗಲು ಅಮಂಗಳನೆ, ನಿಮ್ಮ ಜಾತಕಕ್ಕ ಗುರು ಬಲ ಇನ್ನು ಬಂದಿಲ್ಲ,... ಮುಗಿಯದ ಬಂಧನಗೋಳು, ಅಡಿ-ತಡಿಗೋಳು. ಒಂದು ಮದುವೆ ಆಗಲಿಕ್ಕ, ಮನುಷ್ಯರಿಗಿ ಅಲ್ಲದೆ ಈ ಗೃಹ, ನಕ್ಷತ್ರ ಎಲ್ಲರ್ದು ಮನಸ್ಸ ವೊಲಿಸಬೇಕು.
ಈ ತರಾತುರಿ
ಎಲ್ಲಾ ಒಂದಕಡಿ ಆದ್ರ, ಇನ್ನ ಸುತ್ತಾ
ಇರ, ಸಂಬಧಿಕರು, ದೋಸ್ತರು ಚುಡಾಯಿಸದೆ ಬೇರೆ ಆಗಿರ್ತದ. ಉರ್ಯ
ಭ್ಯಂಕ್ಯಾಗ ತುಪ್ಪಾ ಹಾಕಿ ಸ್ವಾಹಾ ಅನ್ನವ್ರು ಇವರು. "ಎನಪ್ಪಾ ನಮ್ಮ ರಾಜೇಶನಿಗಂತು ಒಳ್ಳೆ
ಸಂಬಂಧ ಸಿಕ್ಕದ, ನೀನು ನೋಡ್ತಾ
ಇದಿಯಾ ಇಲ್ಲಾ?
ಇಷ್ಟೊಂದು ಹುಡ್ಗಿಯರಿದಾರಲ್ಲಾ ಯಾಕ
ಇನ್ನು ಯಾವುದು ಕೂಡಿ ಬಂದಿಲ್ಲೆನು? ಎನಪ್ಪಾ, ನಿಂದೇನು ವಿಷೇಶ ಡಿಮ್ಯಾಂಡ್ಸ್ ಅವ ಎನು?" ಅಂತ ನನ್ನ ದೋಸ್ತ ರಾಜೇಶನ ಅಮ್ಮಾ ಕೇಳ್ತಿದ್ರು.
ಅದಕ್ಕ ನಾನು "ಹಾಗಲ್ಲಾ, ಆಂಟಿ, ನಮ್ಮ ಸಮಾಜದ ಮಂದಿ ಥೊಡೆ ಕಮ್ಮಿನೆ ಹರ, ಅದಕ್ಕ ಕೂಡಿ ಬರದು ಸ್ವಲ್ಪ ತಡಾ ಆಗ್ಲಿಗತ್ತದ"
ಅಂದ. ಇನ್ನು ಕೆಲವರು, "ಇನ್ನೆನು
ಈಗಾ, ಕೆಲ್ಸಾ ಆಯಿತಲ್ಲಾ, ಝಲ್ದಿ ಮದ್ವಿ ಮಾಡ್ಕೊ, ಮನಿಗಿ ಸೊಸಿ ಅಂತ ಬಂದ್ರ, ನಿಮ್ಮ ಅಪ್ಪಾ ಅಮ್ಮಗನು ಸ್ವಲ್ಪ ಜಿಮ್ಮೇದಾರಿ
ಕಮ್ಮಿ ಆಗಿ,
ರೆಸ್ಟ್ ಸಿಗ್ತದ" ಅಂತ ಕಾಳಜಿ
ತೋರಿಸ್ತಾನೆ ಚಿವುಟಿ ಹೋಗ್ತಾರ. ಸಂಪತ ನ ಅಪ್ಪೋರು, ಮನ್ನ ಊರಿಗಿ ಹೋದಾಗ ಹಾದ್ಯಾಗ ಸಿಕ್ಕಿದ್ರು ಆವಾಗ, "ಹ್ಯಾಗಿದ್ದಿಯಪ್ಪಾ? ಮುಂದಿನ ತಿಂಗಳು 28 ಕ್ಕ ನಿನ್ನ ದೋಸ್ತ, ನನ್ನಮಗಾ ಸಂಪತನ ಮಗನ ಬರ್ಥ ಡೆ ಪಾರ್ಟೀ ಅದ ಬರಲಿಕ್ಕಿ
ಮರಿಬ್ಯಾಡಪ್ಪಾ", ಅಂದ್ರ ನನ್ಮಗಂದು
ಮದ್ವಿ ಆಗಿ ಮಗಾ ಹುಟ್ಟಿ, ಅವಂದು ಮೊದಲ್ನೆ
ಹುಟ್ಟಿದ ಹಬ್ಬಾನು ಬಂತು ಆದ್ರ ನಿನ್ನದಿನ್ನು ಲಗ್ನ ಆಗಿಲ್ಲಲ್ಲ ಅನ್ನದಿತ್ತು ಅವರ ಮಾತಿನ ಅರ್ಥ.
ಇನ್ನ ಗೆಳೆಯರು, "ಲೋ ಮಗಾ ನೀನು ಬೇಗಾ ಮದ್ವೆ ಆಗು ನಮ್ಮ ಥರ, ಎಲ್ರು ಸೇರಿ ಒಂದೆ ಸಾರಿ ಮಧುಚಂದ್ರಕೆ (ಹನಿಮೂನ್‌ಗೆ)
ಹೋಗ ಬಹುದು", "ಒಂಟಿ
ಬಾಳು ಸಾಕಾಗ್ಲಿಲ್ವಾ ನಿಂಗೆ?", "ಅಂದ ಹಂಗ ನೀ ಯಾಕ ನಮ್ಮ ಸಂತೊಷನ ಮಗನ ತೊಟ್ಟಿಲ (ನೇಮಿಂಗ ಸೆರೆಮನಿ) ಕಾರ್ಯಕ್ರಮಕ್ಕ
ಬರಲಿಲ್ಲ?,
ಶಿಷ್ಯಾ ಅಷ್ಟೊಂದು ಬಿಜಿನಾ?"
ಇವರೆಲ್ಲಾ
ಮಾತಾಡೊದು ಕೇಳಿದ್ರ, ಇವರೆಲ್ಲಾ
ಹಂಗ ಆವಾಗವಾಗ ನನ್ನನ್ನ ಕೆದಕಿ ಮಜಾ ತಗೊಳ್ಳಿಗತ್ತಾರ ಏನೋ ಅನಸ್ತದ. ಮತ್ತ ಒಬ್ಬೊಬ್ರಿಗಿ ಹಿಡಿದು
ಭಾರಿಸಿಬಿಡಬೇಕು ಅನ್ನಷ್ಟು ಸಿಟ್ಟ ಬರ್ತದ.
ಅದಕ್ಕೆ
ರೀ ಈ ಬಾಚೆಲ್ಲರ್ ಜೀವನ ಭಾಳ ತ್ರಾಸದ್ದು ಅಂತ ಹೇಳದು. ಈ "ಮೋಸ್ಟ್ ಎಲಿಜಿಬಲ್ ಬ್ಯಾಚುಲರ್" ಅನ್ನ ಪಟ್ಟ ಕೇಳಲಿಕ್ಕ ಛೊಲೊ, ಅನುಭವಿಸದು ಮಾತ್ರ ಭಾಳ ಕಷ್ಟ. ಇದು ಒಂಥರಾ ಸಿಂಹಾಸನ ಇಲ್ಲದ ಮುಳ್ಳಿನ ಕಿರೀಟ ಇದ್ದಹಂಗ. ಒಂದ ಕಡಿ ಮುಂದಕ್ಕ್ ಹೋಗಲಾರದ ಜೀವನ ಚಕ್ರ, ಇನ್ನೊಂದ ಕಡಿ ಕಿತ್ತ ತಿನ್ನ ಯೌವ್ವನ. ಆತ್ಮಹತ್ಯಾ
ಮಾಡ್ಕೊಳ್ಳಬೇಕು ಅಂದ್ರ, "ಮಾನವ
ಜನ್ಮ ದ್ವಾಡ್ಡದು, ಇದನ್ನ ಹಾಳು
ಮಾಡ ಬ್ಯಾಡ್ರಿ ಹುಚ್ಚಪ್ಪಗೋಳ್ಯಾ, ಬಂದದ್ದೆಲ್ಲನು
ಅನುಭವಿಸ ಬೇಕು" ಅಂತ ದಾಸರು, ಶರಣುರು
ಹೇಳಿದ ಮಾತು ಬ್ಯಾರೆ ತಡೀತದ.
ಅಂದ ಹಂಗ
ನಿಮ್ಮ ಬಳಗದಾಗ, ಪರಿಚಯದವರ ಒಳಗ ಯಾವದರೆ ಹುಡ್ಗಿ ಇದ್ರ ಜರೂರ ತಿಳಿಸ್ರಿ, ಪುಣ್ಯಾ ಕಟ್ಟಕೊಳ್ರಿ.
ನಿಮ್ಮವ,
ಕಲ್ಯಾಣ ಕುಲ್ಕರ್ಣಿ
Neeja....
ReplyDelete