ಕೆಂಗಟ್ಟು ಕಂಬನಿಗರೆದ ಕೋಟಿ ಕಂಗಳಲಿ
ಮತ್ತೆ ವರುಣಧ್ವಜದ ಬಣ್ಣದ ಕನಸುಗಳ
ಹೆಣೆಯುತ್ತಿದೆ ಈ ಪರಿವರ್ತನೀಯ ಕಾಲದ ಇರುಳು
ಧರೆಯ ಒಂದೊಂದು ತುಣುಕು
ಅಹಂಭಾವದಲಿ ಸೆಟೆದು
ಅರ್ಥಹೀನ ಸ್ವತಂತ್ರ್ಯದ ಗೀತೆಯ ಹಾಡುತಿರಲು,
ಎಲ್ಲ ದ್ವೇಷದ ಖಡ್ಗಗಳ ಮುರಿದು
ಭ್ರಾತೃತ್ವದ ಹೊಸ ಪಸಿರ ಕ್ರಾಂತಿಗೆ ಪ್ರಾರ್ಥನೆಯ ಹಾಡಿ,
ನೀಡಿದೆ ಜೀವರಾಶಿಗೊಂದು ಜೀವ-ಜೀವನ.
ಜಂಬದ ರವಿಯ ಕೊಂಬಿನ ಇರಿತವ ತಾಳದೆ,
ಸಜೀವ ದಹನಕ್ಕೆ ಸಜ್ಜಾದ ಶರೀರಗಳ
ಕೊರಳ ಕೊಳಲಿಗೆ ಕಿವಿಗೊಟ್ಟು,
ರವಿಗೆ ಚಳ್ಳೆಯ ತಿನಿಸಿ, ಮೋಡಗಳು ಹಂದಿರ ಹೂಡಿ,
ಬುವಿಗೆ ನವ ವಧುವಂತೆ ಶೃಂಗರಿಸಲು
ವರ್ಷದ ನೆಪಮಾಡಿ ಬಂದ ಮೊದಲ ಮುಂಗಾರಿಗೆ
ತತ್ತರಿಸಿದ ಜೀವಗಳಲ್ಲಿ ಉದಿಸಿದ
ಆನಂದದ, ಸಂತೃಪ್ತಿಯ, ಶಾಂತಿಯ ಉಸಿರಿನ ನಮನ
-ಕಲ್ಯಾಣ ಕುಲ್ಕರ್ಣಿ
No comments:
Post a Comment