ಆಸ್ಪತ್ರೆ
-----
ಪ್ರಕೃತಿಯ
ವಿಕೋಪಕ್ಕೆ,
ನರರ ಹೀನ
ಕೃತ್ಯಕ್ಕೆ,
ದೈವದ ಹೊಡೆತಕ್ಕೆ,
ಬಲಿಯಾದ
ನರರ ಬಾಳಿನದೊಂದು
ಆಶಾ ಸೌಧ
- ಈ ಆಸ್ಪತ್ರೆ
ಯಮನ ಜೊತೆಗಿನ
ಸಮರದಿ ಸೋತವರ,
ಬದುಕುವ
ಆಸೆ ಹೊತ್ತ ಶವಗಳ ಸನೀಹದವರ
ನೊಂದ ಹೃದಯಕ್ಕೆ
ಕಣ್ಣೀರಿಡದೆ
ಬರೀ ದಿಗ್ಭ್ರಮೆಯ
ನೋಟ ಬೀರುತ್ತ,
ತನ್ನೊಳಗೆ
ತಾ ಕುಸಿಯದೆ ನಿಂತ
ಜೀವಂತ ಸ್ಮಾರಕ
- ಈ ಆಸ್ಪತ್ರೆ
ರೋಗಿ
------
ಬದುಕಿನ
ಆಗರದಿ ತೇಲಿ ತೇಲಿ
ಸುಳಿಗೆ
ಸಿಲುಕದೆ, ನೆರೆಗೆ ಅಳುಕದೆ
ಪ್ರವಾಹದ
ದಾಳಿಗೆ ಸೋಲದೆ
ದಡ ಸೇರಲು
ಹೊರಟ
ಅಂಗಹೀನ
ಪ್ರಾಣಿ - ಈ ರೋಗಿ
ಸತ್ತ ದೇಹದಿ
ಜೀವನ ಬೀಜ ಬಿತ್ತಿ
ಮತ್ತೆ ಹಸಿರುಗನಸನು
ಕಾಣುವ
ಸ್ವಪ್ನಲೋಕಿ
- ಈ ರೋಗಿ
ನಾಲ್ಕು
ಗೋಡೆಗಳ ನಡುವೆ
ಜೀವಗಾಳಿಯನು
ಬಯಸಿ
ನಿಟ್ಟುಸಿರು
ಹಿಡಿದು
ಬದುಕುವ
ಜೀವಿ - ಈ ರೋಗಿ
ವೈದ್ಯ
-----
ಜೀವದಾಸೆಯ
ತೊರೆದು ಬಂದಿಹ ಜೀವಕ್ಕೆ
ತನ್ನ ಮಾತಿನ ಶುಷ್ರುಶೆಯ ನೀಡಿ
ಮಡಿದ ಸಸಿಗೆ
ಮತ್ತೊಮ್ಮೆ ಕಸಿ ಮಾಡುವ
ಇಚ್ಛೆ ಹೊತ್ತ
ಕೃಷಿಕ - ಈ ವೈದ್ಯ
ಹಣೆಯ ಕೆಂಪು
ಮಾಸಿದ ಹೆಣ್ಣಿಗೆ
ಮತ್ತೆ ಹಸಿರ
ಉಟ್ಟು-ತೊಟ್ಟು
ನಲಿವ ಸೌಭಾಗ್ಯ
ತಂದವನಂತೆ
- ಈ ವೈದ್ಯ
-- ಕಲ್ಯಾಣ ಕುಲ್ಕರ್ಣಿ
No comments:
Post a Comment