Pages

Tuesday, May 24, 2011

ಬಾರದ ಸೋಮವಾರ ಬಂದಾಗ


ಬೆಳಿಗ್ಗೆ 5:30 ಕ್ಕೆ ಮೊಬೈಲ್ ಅಲಾರಾಮು ಜೋರಾಗಿ ಹೊಡ್ಕೊಳ್ಳೊಕೆ ಶುರುವಾಯಿತು. ಅಲ್ಲೆ ಕಣ್ಣು ತಿಕ್ಕತಾ ಗುಣುಗುಟ್ಟಕೊಂಡು, "ಇದೇನಿದು ಇವತ್ತು ಸೂರ್ಯನಿಗೆ ಅಮೇರಿಕನ್ನರು ಬೇಗ ತಳ್ಳಿ ಓಡಿಸಿ ಬಿಟ್ರಾ ಹ್ಯಾಗೆ? ಈಗ ತಾನೆ ದೊಡ್ಡಮ್ಮನಿಗೆ ಮಲಗಿಸಿ ಬಿಟ್ಟು ನಾನು ಮಲಗಿದ್ದೆ, ಛೇ", 10 ನಿಮಿಷ ಬಿಟ್ಟ ಬಿಟ್ಟು ಎದ್ದ್ರಾಯಿತು ಅಂತ ಆ ಅಲಾರಾಮ್ ಸೈರನ್ ಅನ್ನ ಸ್ನೂಜ಼್ ಮಾಡಿ ಮತ್ತೆ ಹೊದ್ದುಕೊಂಡೆ. ಅಷ್ಟರಲ್ಲಿ ಮತ್ತೆ ಅಲಾರಾಮ್ ಹೊಡ್ಕೊಳ್ಳೊಕೆ ಶುರು ಮಾಡ್ತು, "ಹಾಳಾದ್ದು ಇದಕ್ಕೆ ಪುರಸೊತ್ತೆ ಇಲ್ಲ" ಅಂತ ಅದನ್ನ ಸ್ಟಾಪ್ ಮಾಡಿ ಮತ್ತೆ 10 ನಿಮಿಷ ಬಿಟ್ಟು ಎದ್ದೇಳೊಣ ಅಂದೋನು, ಎಚ್ಚರ ಆದಾಗ 8 ಗಂಟೆ ಆಗಿತ್ತು. ಇನ್ನೇನು ಆಗಿದ್ದಾಯಿತು, ಹ್ಯಾಗು ನಾಳೆ ಆಫ಼ೀಸಿಗೆ ಬೇಗ ಹೋಗಬೆಕಿತ್ತು, ಬೆಳಿಗ್ಗೆ ಸ್ಟೇಷನ್ ನಿಂದ ಶ್ರೀನಿವಾಸಾಚಾರ್ಯರಿಗೆ ಕರಕೊಂಡು ಬರಬೇಕಿದೆ. ಏನ್ಮಾಡೋದು? ಆದ್ರೆ ಮುಂದಿನ ಸೋಮವಾರದಿಂದ ಮಾತ್ರ ನನ್ನ ಎಲ್ಲಾ ಟೈಮ್ ಟೇಬಲ್ ಫ಼ಿಕ್ಸು.



ಮನೆಯವರ ಕೋರಿಕೆ, ಗೆಳೆಯರ ಕುಚೆಷ್ಟೆ, ಸಹುದ್ಯೋಗಿಗಳ ಕೊಂಕು ನುಡಿ, ಎಲ್ಲಾ ಸಾಕಗಿ, ಆರು ತಿಂಗಳ ಹಿಂದೆ, ’ಮಾಸ್ಟರ್ ಹೆಲ್ಥ್ ಚೆಕಪ್ ಮಾಡ್ಸಿದ್ದೆ. ಡಾಕ್ಟರು ಎಲ್ಲಾ ರಿಪೋರ್ಟ್ ಗಳನ್ನ ತರಿಸಿ, ನನ್ನ ಮುಂದೆ ಇಟ್ಟು, "ನೀವು, ನಿಮ್ಮ ಎತ್ತರ (ಹೈಟು), ವಯಸ್ಸು (ಏಜು), ತೂಕಕ್ಕೆ (ವೇಟು) ತಕ್ಕಂತೆ ಸರಿ ಸುಮಾರು, 8 ಕೆಜಿ ಜಾಸ್ತಿ ಭಾರ ಇದ್ದಿರಾ. ನಿಮ್ಮ ಕೊಲೆಸ್ಟ್ರಾಲ್ ಕೂಡ ತುಂಬ ಹೆಚ್ಚಾಗಿದೆ ಅದಕ್ಕೆ ನೀವು ಇನ್ನು ಮುಂದೆ ಬೆಳಿಗ್ಗೆ ಹಾಗು ಸಾಯಂಕಾಲ 1 ರಿಂದ 2 ಕಿಲೊಮೀಟರ್ ದಿನಾಲು ನಡಿ ಬೇಕು, ಕೆಲವೊಂದು ಸುಲಭವಾದ ವ್ಯಾಯಾಮ ಕುಡ ಹೆಳಿರ್ತಿನಿ ಅದನ್ನ ತಪ್ಪದೆ ಮಾಡಿ. ಇಲ್ಲವಾದ್ರೆ ನಿಮ್ಮ ಆರೋಗ್ಯ ಇನ್ನೂ ಸಂತುಲನೆ ಕಳೆದು ಕೊಳ್ಳತಾ ಹೋಗುತ್ತೆ, ಮುಂದೆ ತುಂಬ ಕಷ್ಟ ಆಗುತ್ತೆ, ಎಣ್ಣೇಲಿ ಕರೆದದ್ದು, ಬೇಕರಿ ಐಟಮ್‌ಗಳನ್ನ ತಿನ್ನಬೇಡಿ. ಎಲ್ಲಾ ನಿಮ್ಮ ಒಳ್ಳೇದಕ್ಕೆ ಹೇಳ್ತಾ ಇರೋದು. ಎರಡು ತಿಂಗಳಾದ್ಮೇಲೆ ಮತ್ತೆ ಬಂದು ಭೇಟಿ ಮಾಡಿ." ಅಂತ ಹೇಳಿ ಹೆಲ್ಥೋಪದೆಶ ಮಾಡಿ ಕಳಿಸಿದ್ರು.

ಅಂದಿನಿಂದ ಇಲ್ಲಿವರೆಗು ಪ್ಲಾನ್ ಹಾಕ್ತಾನೆ ಇದಿನಿ. ಆದ್ರೆ ಎನಾದ್ರೊಂದು ಎಡವಟ್ಟಾಗುತ್ತೆ, ಮತ್ತೆ ಅದರಿಂದ ಉತ್ಸಾಹ ಕಳೆದು ಹೋಗುತ್ತೆ ಆಮೇಲೆ ಪ್ಲಾನು ಪೋಸ್ಟ್‌ಪೋನ್ ಆಗುತ್ತೆ. ಪ್ರತಿ ಬಾರಿ "ಈ ಸೋಮವಾರದಿಂದ ಖಂಡಿತವಾಗಿ ಪ್ರಾರಂಭ ಮಾಡೋಣ" ಅಂತ ಅಂದುಕೊಂಡು, ಆ ವಾರವೆಲ್ಲಾ ಪ್ರತಿದಿವಸ ಒಂದೊಂದರಂತೆ ಒಂದೊಂದು ತಿಂಡಿನ ತಿನ್ನೊದು, ಒಂದು ದಿವಸ ಪಫ಼್‌ಸು, ಒಂದು ದಿವಸ ಖಾರಾ ಬನ್ನು, ಇನ್ನೊಂದು ದಿವಸ ಗೌಡ್ರ ಅಂಗಡಿಯ ಭಜ್ಜಿ, ಎಲ್ಲಾನು ಸಕ್ಕತ್ತಾಗಿ ಸವರಿ ಬಿಡೋದು.  ಆಮೇಲೆ ತಪ್ಪಿದಾಗ ಮುಂದಿನ ಸೋಮವಾರ ಇನ್ನು ಇದೆಯಲ್ಲ, ಅದು ಇನ್ನು ದೂರ ಇದೆಯಲ್ಲ ಅಂದುಕೊಂಡು ಮಲಗೋದು. ಹಾಗೆ ನೊಡಿದ್ರೆ ಈ ಭಾನುವಾರ, ಸೋಮವಾರ, ಎಣಿಸೋದೆಲ್ಲ ಯಾರಿಗೆ ಬೇಕು? ಎಲ್ಲಾ ಅವರಿವರಿಗೋಸ್ಕರ.

"ರೀ, ಮನೆ ರೆಂಟು ಕೊಡಬೇಕಿತ್ತು", "ಸೋಮವಾರ ನೆನಪು ಮಾಡು"; "ಲೋ ವಿಶ್ವನಾಥ, ನನ್ನ ಔಷಧಿ ಮುಗಿದು ಹೋಗಿದೆ ಕಣೋ", "ಅಮ್ಮ, ಬರೊ ಸೋಮವಾರ ತರ್ತಿನಿ", "ಅಪ್ಪಾ, ನೋಟಬುಕ್ ಬೇಕಿತ್ತು", "ಸೋಮವಾರ ಬರಬೇಕಾದ್ರೆ ತಗೊಂಡು ಬರ್ತಿನಿ"ಈ ರೀತಿ ಕೆಲವೊಬ್ಬರಿಗೆ ಏನೆ ಕೇಳಿದ್ರು ಅದು ಸೋಮವಾರವೇ ಶುರು ಆಗಬೇಕು. ಎಷ್ಟೋ ಬಾರಿ ಆ ಸೋಮವಾರ ಬರೋದೆ ಇಲ್ಲ.

ಕಳೆದ ಸೋಮವಾರ ಮಾತ್ರ ಹಾಗಾಗ್ಲಿಲ್ಲ. ಅವತ್ತು ನಮ್ಮ ವಿಶ್ವನಾಥ ಆಫ಼ೀಸಿಂದ ಬಂದವನೇ ಸುಸ್ತಾಯಿತು ಅಂತ ಹೇಳಿ ಉಶ್... ಅಂತ ಕುತ್ಕೊಂಡು ಬಿಟ್ಟ. ಅವನ ಹೆಂಡತಿ ಸುಮತಿ ಎಂದಿನಂತೆ ಇವರದು ಯಾವಾಗ್ಲು ಇದ್ದದ್ದೆ, "ಬರಬೇಕಾದ್ರೆ, ಇವರಿಗೆ ಪಕ್ಕದ ಹಿಟ್ಟಿನ ಗಿರಣಿ ಇಂದ ಬೀಸಿರೊ ನಮ್ಮ ರಾಗಿ ಹಿಟ್ಟನ್ನ ತರಕ್ಕೆ ಹೇಳಿದ್ದೆ, ಇವರಿಗೆ ಅಷ್ಟಕ್ಕೇ ಸುಸ್ತಾಗಿ ಹೋಯಿತು,.... ಅಲ್ಲಾ ಅದಕ್ಕೆ ಇವರಿಗೆ ಡಕ್ಟರು ಸ್ವಲ್ಪ ವಾಕಿಂಗ್ ಮಾಡಿ, ಎಕ್ಸರ್ಸೈಜ಼್ ಮಾಡಿ ಅಂತ ಹೇಳಿದ್ರು ಒಂದನ್ನೂ ಕಿವಿಗೆ ಹಕ್ಕೊಳ್ಳದೆ, ಆ ಸೋಮವಾರದಿಂದ ಶುರು ಮಾಡ್ತಿನಿ, ಈ ಸೋಮವಾರ ಶುರು ಮಡ್ತಿನಿ ಅಂತ ಹೇಳಿದ್ದೆ ಆಯಿತು, ಯಾವಾಗ ಮಡೋದೊ ಏನೋ" ಅಂತ ತನ್ನ ಸಿಟ್ಟನ್ನ ತೋರಿಸ್ತಾ ಕಾಫ಼ೀ ಕಪ್ಪನ್ನ ತಂದು ವಿಶ್ವನಾಥನ ಎದ್ರು ಇಟ್ಟು ಅಡಿಗೆ ಮನೆಗೆ ಹೋದ್ಳು.

ಎಷ್ಟೋ ಹೊತ್ತಾದಮೇಲೆ ಹಾಲಿಗೆ ಬಂದಾಗ ಅವಳು ನೋಡಿದ್ದು, ಬರೀ ಅರ್ಧ ಖಾಲಿ ಆದ ಕಾಫ಼ಿ ಕಪ್ಪನ್ನ. ವಿಶ್ವನಾಥ ಅಲ್ಲೆ ಪಕ್ಕದಲ್ಲೆ ಮಲಗಿದ್ದ. ಅವನನ್ನ ನೋಡಿ ಸುಮತಿ, "ಯಾಕ್ರಿ ಎನಾಯಿತು, ಕಾಫ಼ಿನ ಹಾಗೆ ಇಟ್ಟಿದ್ದಿರಲ್ಲ, ಯಾಕೆ ಇಷ್ಟ ಆಗ್ಲಿಲ್ವಾ ಏನು?" ಅಂತ ಕೇಳ್ತಾ ವಿಶ್ವನಾಥನ ಹತ್ರ ಬಂದ್ಳು. ಆಗ ವಿಶ್ವನಾಥ ತನ್ನ ಎರಡೂ ಕೈಯಿಂದ ತನ್ನ ಎದೆಯ ಎಡಗಡೆಗೆ ಜೋರಾಗಿ ಒತ್ತತಾ ಇದ್ದ. ಮುಖ ಎಲ್ಲ ನೀಲಿಯಾಗಿ ಬೆವರ್ತಾ ಇದ್ದ, ಮಾತಾಡಕ್ಕೆ ಆಗ್ತಿರಲಿಲ್ಲ. ಸುಮತಿ ಆತನ ಅವಸ್ಥೆ ನೋಡಿ ಬಿಟ್ಟು, "ರೀ ಏನಾಯಿತ್ರಿ ನಿಮಗೆ, ಯಾಕೆ ಹೀಗೆ ವಿಚಿತ್ರವಾಗಿ ಆಡ್ತಾ ಇದಿರಾ? ತಡೀರಿ, ಪಕ್ಕದ ಮನೆ ಮೂರ್ತಿಯವರಿಗೆ ಕರೀತಿನಿ." ಅಂದೋಳೆ ಕೂಗ್ತಾ ಹೊರಗಡೆ ಓಡಿದ್ಳು, "ಶುಭಾ..., ಶುಭಾ..., ನಿಮ್ಮಪ್ಪಾ ಇದರಾ? ಸ್ವಲ್ಪ ಬೇಗ ಕರೀತಿಯಾ ಅವರನ್ನ" ಅಂತ ಅಲ್ಲಿಂದ ಮತ್ತೆ ಓಳಗೆ ಓಡಿದ್ಳು. ಅಷ್ಟರಲ್ಲೆ ಮೂರ್ತಿಯವರು ಅಲ್ಲಿಗೆ ಬಂದ್ರು. ಸುಮತಿ ನಡೆದದ್ದನ್ನೆಲ್ಲಾ ಅವರ ಹತ್ರ ಹೇಳಿದ್ಳು. ಮೂರ್ತಿಯವರು ಆಂಬ್ಯುಲನ್ಸ್‌ಗೆ ಫೋನ್ ಮಾಡಿ ಕರೆಸಿದ್ರು. ವಿಶ್ವನಾಥನ ಅಲ್ಪ ಪ್ರಙ್ನಾ ಸ್ಥಿತಿಯಲ್ಲೇ ಆಂಬ್ಯುಲನ್ಸ್ ಅವರು ಅವರನ್ನ ಸ್ಟ್ರೆಚ್ಚರಲ್ಲಿ ಹಾಕ್ಕೊಂಡು ಹೊರಟೇ ಬಿಟ್ಟ್ರು. ಸುಮತಿ ಕೂಡಾ ಮೂರ್ತಿಯವರ ಹೆಂಡತಿ ಮತ್ತು ಅತ್ತೆಯವರಿಗೆ ಮನೆ ಕಡೆ ಗಮನ ಇರಲಿ ಅಂತ ಹೇಳಿ, ಮೂರ್ತಿಯವರ ಜೊತೆ ಆಂಬ್ಯುಲನ್ಸ್ ನಲ್ಲೆ ಆಸ್ಪತ್ರೆಗೆ ಹೊರಟು ಬಿಟ್ಳು.

ಆಸ್ಪತ್ರೆಗೆ ತಲುಪಿದ ತಕ್ಷಣನೆ, ಕೆಲವೊಂದು ಟೆಸ್ಟಗಳನ್ನ ಮಾಡಿ, ಇನ್ನೂ ಕೆಲವು ಟೆಸ್ಟಗಳನ್ನ ನಾಳೆ ಮಾಡ್ತಿವಿ ಅಂತ ಹೇಳಿ, ವಿಶ್ವನಾಥನನ್ನ ಐ. ಸಿ. ಯು. (ಸೂಕ್ಷ್ಮ ನಿಗಾ ಕೋಣೆ) ನಲ್ಲಿ ಇರಿಸಿದ್ರು. ಸುಮತಿಗೆ ರಾತ್ರಿ ಎಲ್ಲಾ ನಿದ್ದೆ ಇಲ್ಲಾ, ಏನಾಯಿತೊ? ಏನಾಗುತ್ತೊ? ಅನ್ನೊ ವಿಚಾರಗಳೆ ತಲೇಲಿ. ಪಕ್ಕದ ಜಿಲ್ಲೇಲಿ ಇದ್ದ ಅವರ ಅಣ್ಣ ಮತ್ತು ಊರಲ್ಲಿದ್ದ ಅವಳ ತಂದೆ-ತಾಯಿಯನ್ನು ಫೋನ್ ಮಾಡಿ ಕರೆಸಿದ್ಳು. ಮರುದಿನ ಎಲ್ಲಾ ಟೆಸ್ಟ್‌ಗಳು ಆದ್ಮೇಲೆ ಇವರಿಗೆ ಹಾರ್ಟಲ್ಲಿ (ಹೃದಯದಲ್ಲಿ) ಬ್ಲಾಕ್ ಆಗಿದೆ, ಅದಕ್ಕೆ ಇವರಿಗೆ ಆದಷ್ಟು ಬೇಗ ಆಂಜಿಓಗ್ರಾಫ಼ಿ (ಆಪರೇಷನ್) ಮಾಡಬೇಕು ಅಂತ ಹೇಳಿದ್ರು. ಒಂದುವಾರದ ಮೇಲೆ ಆಪರೇಷನ್‌ಗೆ ಡೇಟ್ ಕೊಟ್ಟು ಹಣಾ ಹೋಂದಸಕ್ಕೆ ಹೇಳಿದ್ರು. ಅಣ್ಣ, ಅಪ್ಪಾ-ಅಮ್ಮಾ ಕೊಟ್ಟ ದುಡ್ಡು ಬರೀ ಔಷಧಿಗೆ ಸಾಕಾಗಿ ಹೋಯಿತು. ಇನ್ನೇನು ದಾರಿ ಇಲ್ಲದೆ ಮಗಳು ಪೌರ್ಣಿಮಾನ ಮದುವೆಗೆ ಅಂತ ಬ್ಯಾಂಕಲ್ಲಿ ಫ಼ಿಕ್ಸ್ ಡಿಪೋಜಿಟ್ ಮಾಡಿ ತೆಗೆದಿಟ್ಟಿದ್ದ ಎರಡು ಲಕ್ಷ ಹಣನ ತೆಗೆದುಕೊಳ್ಳಬೇಕಾಯಿತು. ಹಾಗು ಹೀಗೂ, ಆಪರೇಷನ್ ಅಂತು ಮುಗಿದು ಹೋಯಿತು. ದೇವರು ದೊಡ್ಡೊನು’, ’ಬೀಸೊ ದೊಣ್ಣೆನ ತಪ್ಪಿಸಿಕೊಂಡ್ರೆ ನೂರ ವರ್ಷ ಆಯಸ್ಸಂತೆ ಅಂತೆಲ್ಲಾ ಹೇಳಿ ಸಮಾಧಾನ ಮಾಡ್ಕೊಂಡು ಹದಿನಾಲ್ಕು ದಿವಸದ ವನವಾಸ ಮುಗ್ಸಿ ಒಂದು ಮುಕ್ಕಾಲು ಲಕ್ಷದ ತಲೆದಂಡ ಕಟ್ಟಿ, ಸುಮತಿ ಗಂಡನ್ನ ಮನೆಗೆ ಕರ್ಕೊಂಡು ಬಂದ್ಳು.

ಒಂದೇರಡು ತಿಂಗಳು ಕಳೆದ್ಮೇಲೆ ವಿಶ್ವನಾಥ ಮತ್ತೆ ಮೊದಲಿನಂತೆ ಆಗಿದ್ದ. ಈಗ ಮಾತ್ರ ಸೋಮವಾರಗಳ ಹುಚ್ಚಾಟ ಬಿಟ್ಟು ದಿನಾಲು ತಪ್ಪದೆ ಬೆಳಿಗ್ಗೆ ವಾಕಿಂಗ್ ಹೋಗಿ ಬಂದು ಮೈಲ್ಡ್ ಎಕ್ಸರ್‌ಸೈಜ಼ು ಮಾಡ್ತಾ ಇದಾನೆ, ಇನ್ಮುಂದೆ ಸಾಯಂಕಾಲ ಪ್ರಾಣಾಯಾಮ ಮಾಡ್ತಿನಿ ಅಂತಿದ್ದ. ಇದು ಒಂದು ಮುಕ್ಕಾಲು ಲಕ್ಷದ ಅನುಭವ, ಮಾಡದೆ ಇನ್ನೇನು ಮಾಡ್ತಾನೆ. ಇಷ್ಟು ದಿವಸ ನನಗೇನಾಗುತ್ತೆ ಅಂತ ಜಾಲಿಯಾಗಿ ತಿರುಗಾಡ್ತಿದ್ದೋನು, ಆರೋಗ್ಯಾನ ನಿರ್ಲಕ್ಷಿಸಿದ್ರೆ ಯಾರಿಗೆ ಬೇಕಾದ್ರು, ಏನು ಬೇಕಾದ್ರು ಆಗುತ್ತೆ ಅನ್ನೊ ಸ್ವಯಂ ಅರ್ಜಿತ ಉಪದೇಶನ ರೋಡು ಪಾರ್ಕು, ಆಫ಼ಿಸಲ್ಲಿ ಸಿಕ್ಕವರೆಲ್ಲರಿಗೂ ಸಾರತಾ ಇರ್ತಾನೆ.

ಬರಬೇಕಾದ ಸೋಮವಾರ ಬರದಿದ್ದದಾಗ ಬಾರದ ಸೋಮವಾರಗಳು ಬರುತ್ವೆ. ಅದಕ್ಕೆ, ಬೇಡದ ಸೋಮವಾರಗಳು ಬರೋದಕ್ಕೆ ಮೊದಲು ಎಚ್ಚೆತ್ಕೊಂಡೋನೆ ಜಾಣ. ಏನಂತಿರಾ ಸ್ವಾಮಿ?

- ಕಲ್ಯಾಣ ಕುಲ್ಕರ್ಣಿ

1 comment: