Pages

Sunday, July 31, 2011

ಉತ್ತರಾಖಂಡದ ದೇವಭೂಮಿಯ ದರ್ಶನ


ಜೂನ್ 7, 2011

ಆದು ಬೆಳಗಿನ ಜಾವ ಸರಿ ಸುಮಾರು 4:30 ಗಂಟೆ ಆಗಿರ ಬೇಕು, ಜಸ್ಟ್ ಸ್ವಲ್ಪ ಮುಂಚೆಯಷ್ಟೇ ಕಣ್ಣಿನ ಪರದೆ ಎಳೆದಿತ್ತು. ಅಷ್ಟರಲ್ಲಿ ನಮ್ಮ ಬಸ್ಸಿನ ಗೈಡ ಮನೀಷ, ಡ್ರೈವರ್ ಕ್ಯಾಬಿನ್‌ನಿಂದ ಹೊರಗೆ ಬಂದು, "ಬೇಗ ಎದ್ದೇಳಿ, ಹರಿದ್ವಾರ ತಲುಪಿದ್ದೇವೆ. ಬೇಗ ಎದ್ದು ಬಿಟ್ಟು, ನಿಮ್ಮ-ನಿಮ್ಮ ರೂಮ್ ಕೀ ನ ತಗೊಂಡು ಹೋಗಿ ಬೇಗನೆ ಫ್ರೆಷಾಗಿ ಬನ್ನಿ. 6:00 ಗಂಟೆಗೆ ಇಲ್ಲಿಂದ ಹೃಷಿಕೇಶಕ್ಕೆ ಹೊರಡಬೇಕು. ಇಲ್ಲಾಂದ್ರೆ ತಡವಾಗುತ್ತೆ" ಅಂತ ಹೇಳಿ ಬಸ್ಸ್ ಕೆಳಗಿಳಿದ. ಅವನ ಹಿಂದೇನೆ ಎಲ್ಲರು ಕೆಳಗಿಳಿದು ಹೊರಟು ಬಿಟ್ರು. ಆಮೇಲೆ ಸರಿಯಾಗಿ 6:00 ಗಂಟೆಗೆ ಹರಿದ್ವಾರದಿಂದ ಹೊರಟು ದಾರಿಯಲ್ಲೇ ಟ್ರಾವೆಲ್ಸ ನವರ ಹೋಟಲಲ್ಲಿ ತಿಂಡಿ ಮುಗಿಸಿ, ಹೃಷಿಕೇಶ ತಲುಪಿದಾಗ 9:00 ಗಂಟೆಯಾಗಿತ್ತು.

ಹೃಷಿಕೇಶ ನಮ್ಮ ಪ್ರವಾಸದ ಮೊದಲ ತಾಣವಾಗಿತ್ತು. ಹೃಷಿಕೇಶ ಅತ್ಯಂತ ಪುರಾತನ ಇತಿಹಾಸವುಳ್ಳ ಧಾರ್ಮಿಕ ಕ್ಷೇತ್ರ, ಅದಲ್ಲದೆ ಜಿಲ್ಲಾ ಕೇಂದ್ರವು ಹೌದು. ಪರ್ವತಗಳ ಮಧ್ಯ ಸುಂದರವಾಗಿ ಬೆಳೆದು ನಿಂತ ರಮಣೀಯ ತಾಣವದು. ಆಲ್ಲಿ ಏಷ್ಟೋಜನ ಸಾಹಸ ಪ್ರೀಯರು ಗಂಗೆಯ ದಡದಲ್ಲಿ ರಾಫ್ಟಿಂಗ ಮಡೋದಕ್ಕೆ ದೇಶ-ವಿದೇಶಗಳಿಂದ ಭೇಟಿ ನೀಡ್ತಾರೆ. ಆಲ್ಲಿ ಕೆಲವು ಕಡೆ ರಾಫ್ಟಿಂಗಗೆ ಬೇಕಾದ ಎಲ್ಲಾ ಸಲಕರಣೆಗಳೂ ದೊರೆಯುತ್ತವೆ.

ಹೃಷಿಕೇಶದಲ್ಲಿ ನಾವು ನೋಡಿದ್ದು ಮಹರ್ಷಿ ಶಿವಾನಂದರ ಭವ್ಯವಾದ ಆಶ್ರಮ ಮತ್ತು ಅಲ್ಲಿಯ ಪ್ರರ್ಥನಾ ಮಂದಿರ ಮತ್ತು ಉಚಿತ ಆಯುರ್ವೇದಿಯ ಆರೋಗ್ಯ ಧಾಮ. ಆಲ್ಲಿಂದ ಮುಂದೆ ಹೊರಟು ನೋಡಿದ್ದು ಗಂಗಾ ದಡದಲ್ಲಿ ಪಾಂಡವರು ಪ್ರತಿಷ್ಠಾಪಿಸಿದ ರಾಮೇಶ್ವರ ಈಶ್ವರಲಿಂಗ ದೇವಸ್ಥಾನ. ಆಲ್ಲಿಯೇ ನಮ್ಮ ಮೊದಲ ಗಂಗಾ ದರ್ಶನ. ಮಗುವಾಗಿದ್ದಾಗಿಂದ ಇಲ್ಲಿಯ ವರೆಗೆ ಬರೀ ಗಂಗೇಯ ಹೆಸರು ಮತ್ತು ಪಾವಿತ್ರ್ಯತೆಯ ಕಥೆಗಳನ್ನೇ ಕೇಳಿದ್ದ ನಮಗೆ ಆ ಮೊದಲ ರಮಣೀಯ ನೋಟ ಪುಲಕಿತರನ್ನಾಗಿಸಿತು. ಆಲ್ಲಿ ನೀರಿಗಿಳಿದು, ಗಂಗೆಯನ್ನ ಮನದಲ್ಲಿ ನೆನೆದು, ಸ್ವಲ್ಪ ನೀರು ಬಾಯಿಗೆ ಹಾಕಿ, ಇನ್ನು ಸ್ವಲ್ಪ ನೀರನ್ನ ಕಣ್ಣಿಗೆ ಒತ್ತಿಕೊಂಡೆವು. ಆ ನಂತರ ನೋಡಿದ ವಿಶೇಷ ಸ್ಥಾನಗಳಲ್ಲಿ ಗಂಗಾ ಮಂದಿರ, ಲಕ್ಷ್ಮೀ-ನಾರಾಯಣ ಮಂದಿರ, ರಾಮ-ಭರತರ ಮಂದಿರಗಳು ಮತ್ತು ರುದ್ರಾಕ್ಷಿ ಮರ ವಿಶೇಷ. ಇನ್ನುಳಿದೆರಡು ತಾಣಗಳ ಬಗ್ಗೆ ಎಲ್ಲರಿಗೂ ಗೊತ್ತು. ಒಂದು ರಾಮ ಝೂಲಾ ಹಾಗೂ ಇನ್ನೊಂದು ಲಕ್ಷ್ಮಣ ಝೂಲಾ. ಝೂಲಾ ಅಂದರೆ ಕನ್ನಡದಲ್ಲಿ ಉಯ್ಯಾಲೆ ಅಂತ ಅರ್ಥ. ಹೆಸರಿಗೆ ತಕ್ಕ ಹಾಗೆ ಆ ಎರಡೂ ಸೇತುವೆಗಳನ್ನ ಗಂಗೆಯ ಎರಡೂ ಬದಿಯ ಎರಡು ಪರ್ವತಗಳನ್ನ ಆಧರಿಸಿ ಕಟ್ಟಲಾಗಿದೆ. ನಿಜಕ್ಕೂ ಆ ಎರಡೂ ಸೇತುವೆಗಳು ಉಯ್ಯಾಲೆಗಳ ಹಾಗೆನೇ ಕಾಣಿಸುತ್ತವೆ. ಎರಡು ಸೇತುವೆಗಳ ಮೆಲಿನ ಅಗಲ ತುಂಬಾ ಕಡಿಮೆ ಇದ್ದರೂ ಜನಸಂದಣಿಗೆ ಏನೂ ಕಡಿಮೆ ಇಲ್ಲ. ಅವುಗಳ ಸುತ್ತಲಿನ ನಿಸರ್ಗ ರಮಣೀಯತೆ ತುಂಬಾ ಅದ್ಭುತ.

ಹೃಷಿಕೇಶದಲ್ಲಿ ನಾವು ಕೊನೆಯದಾಗಿ ಭೇಟಿ ಕೊಟ್ಟದ್ದು ರುದ್ರಾಕ್ಷ, ಸ್ಪಟಿಕ ಹಾಗೂ ನವರತ್ನಗಳ ಅಂಗಡಿಗೆ. ಅಲ್ಲಿಯ ಎಲ್ಲಾ ವಸ್ತುಗಳ ಬೆಲೆಯೂ ದೂರದಿಂದಲೆ ಕೇಳಿ ನೋಡಿದ್ದಕ್ಕೆ ಧನ್ಯತೆ ಸೂಚಿಸುವಂತಿದ್ದವಾದ್ರೂ ಮಾರುವವರ ಮಾತಿನ ಚಾಕಚಕ್ಯತೆ ಹ್ಯಾಗಂದ್ರೆ ಇನ್ನೇನು ನಾವು ಎಲ್ಲವನ್ನು ಧರಿಸಿ ಪರಮ ಸುಖಿಗಳಾಗೋಣ ಅನ್ನಿಸೋದು. ಎಲ್ಲರು ತಮ್ಮ ಜೇಬಿಗೆಟುಕಿದ್ದನ್ನೆ ಖರೀದಿಸಿ ಅದೃಷ್ಟ ಅನ್ಕೊಂಡು ಹೊರಗೆ ಬಂದ್ವಿ. ಏನೇ ಆದ್ರು ನಾಳೆ ಬರಬಹುದಾದ ಅದೃಷ್ಟಕ್ಕೆ ಇವತ್ತೇ ಜೇಬು ಖಾಲಿಮಾಡಿ ಕಷ್ಟ ಪಡಬೇಕಾ?’ ಅನ್ನೊ ಕಳವಳದ ಪ್ರಶ್ನೆ ಎಲ್ಲರ ಮುಖದಲ್ಲೂ ಎದ್ದು ಕಾಣಿಸ್ತಿತ್ತು.  

ಆಮೇಲೆ ವಾಪಸ ನಮ್ಮ ಭೋಜನ ತಾಣಕ್ಕೆ ಬಂದು, ಊಟ ಮುಗಿಸಿ ಅಲ್ಲಿಂದ ಹೊರಟಾಗ ಸರಿಯಾಗಿ 3:30 ಗಂಟೆ. ಅಲ್ಲಿಂದ ಪ್ರಾರಂಭವಾಯಿತು ಎತ್ತರದ ಪರ್ವತ ಶೃಂಗ. ಅದು ನಮಗೆ ಮುಂದೆ ಪ್ರವಾಸದಲ್ಲಿ ಬರುವ ಭಾವೋತ್ಕಟತೆಯ ಉತ್ತುಂಗಕ್ಕೆ ಕೈ ಮಾಡಿ ಕರೆದಂತಿತ್ತು. ಸಾಯಂಕಾಲ ನಾವು ನಮ್ಮ ಪೂರ್ವ ನಿಯೋಜಿತ ಶ್ರೀನಗರ ಎಂಬ ಜಿಲ್ಲಾ ಕೇಂದ್ರದ ವಸತಿ ಗೄಹಕ್ಕೆ ತಲುಪಿದಾಗ 6:30 ದಾಟಿತ್ತು. ಇನ್ನೇನು ಹೊದ ಕೂಡಲೆ ಕೋಣೆಗೆ ಹೋಗಿ ಹಾಸಿಗೆಯ ಮಡಿಲು ಸೇರಿದೋರು ರಾತ್ರಿ ಊಟದ ಕೊಠಡಿಯಲ್ಲಿಯೇ ಮತ್ತೆ ನಮ್ಮ ಸಹ ಪ್ರವಾಸಿಗಳ ಭೇಟಿಯಾಯಿತು. ಆಗಲೆ ಬಿಸಿಲನಾಡಿನ ಅನುಭವ ಕಳೆದು, ಎಲ್ಲರ ಬಾಯಲ್ಲೂ "ಎಷ್ಟು ಚಳಿ ಇದೆಯಲ್ಲಾ!" ಅನ್ನೊ ಉದ್ಗಾರ ಶುರುವಾಗಿತ್ತು. ಸುಮಾರು 10:00 ಗಂಟೆಯಷ್ಟಕ್ಕೆ ಎಲ್ಲರು ನಿದ್ರಾದೇವಿಗೆ ಶರಣಾಗಿದ್ರು.

ಜೂನ್ 8, 2011

ಬೆಳಿಗ್ಗೆ ಮತ್ತೆ ಅದೇ ಕಥೆ, ಆ ಎಸ್ಕೊರ್ಟ್ಸ ಬಂದು ಬಾಗಿಲು ತಟ್ಟಿದಾಗ, ಇವನೇನು ನಕ್ಷತ್ರಿಕನ ವಂಶದೋನಾ? ಅನ್ನೋಷ್ಟು ಸಿಟ್ಟು. ಏನೇ ಆಡಿಕೊಂಡ್ರೂ ಏಳಲೇ ಬೇಕು. ಇಲ್ಲಾಂದ್ರೆ ನಮಗೆ ಮಾತ್ರ ತಡವಾದ್ರೆ, ಉಳಿದ ಸಹ ಪ್ರಯಾಣಿಕರೆದುರು ಹೋಗೊಕ್ಕೆ ಏನೋ ಕಸಿವಿಸಿ. ಆಂತು ಇಂತು ಬೆಳಿಗ್ಗೆ 5:30 ಕ್ಕೆ ನಮ್ಮ ಬಸ್ಸ್ ಅಲ್ಲಿಂದ ಗೌರಿಕುಂಡದೆಡೆಗೆ ದಾಪುಗಾಲು ಹಾಕಿತು.

ಮತ್ತೆ ಮುಂದುವರಿದ ಅದೇ ಪರ್ವತಮಲೆಗಳ ನಡುವೆ ಉದಯ ರವಿಯ ಬೆಳಕಿನ ಕಣ್ಣು ಮುಚ್ಚಾಲೆ. ಕಡಿದಾದ ರಸ್ತೆಗಳನ್ನ ಕಂಡರೆ ಕತ್ತಿಯ ಅಂಚಲ್ಲಿ ನಡೆಯುವ ಅನುಭವಇದೇನು ದೊಂಬರಾಟವೇನೋ ಎಂಬ ಅನುಮಾನ. ಆ ಹಚ್ಚ ಹಸುರಿನ ಪರ್ವತ ಸಾಲುಗಳ ಮಧ್ಯ ಹರಿಯುವ ನದಿಗಳು. ಸದಾ ಸಹ್ಯಾದ್ರಿ ಶ್ರೇಣಿಯನ್ನೇ ನೋಡಿದ ನಮಗೆ ಅದೊಂದು ಹೊಸ ರೋಮಾಂಚನ. ನಾ ದೊಡ್ಡೋನು, ತಾ ದೊಡ್ಡೋನು ಅನ್ನೊ ಬಲಾಬಲದ ಸ್ಪರ್ಧೆ ಆ ಪರ್ವತಗಳ ಮಧ್ಯ ಇದೆ ಏನೋ ಅನ್ನೊ ಶಂಕೆ ಮೂಡಿಸುತ್ತಿದ್ದವು. ರೆಪ್ಪೆ ಬಡಿದ್ರೂ ಎನೋ ಕಳೆದು ಕೊಳ್ಳೊ ತವಕ ಎಲ್ಲರಲ್ಲು.

ಹೃಷಿಕೇಶದಿಂದ ಗೌರಿಕುಂಡದ ದಾರಿಯಲ್ಲಿ ಬರೋದು ರುದ್ರಪ್ರಯಾಗ. ಪ್ರಯಾಗ ಅಂದರೆ ನದಿ ಸಂಗಮ ಅಂತ ಅರ್ಥ. ರುದ್ರಪ್ರಯಾಗ ಇತ್ತೀಚೆಗಷ್ಟೇ ರಚನೆಯಾದ ಉತ್ತರಾಖಂಡ ರಾಜ್ಯದ ಅತೀ ಸುಂದರ ಜಿಲ್ಲೆ. ಇಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮ ಇದೆ. ಉತ್ತರಾಖಾಂಡದ ಪಂಚ ಪ್ರಯಾಗಗಳಲ್ಲಿ ಇದೂ ಒಂದು. ಇಲ್ಲಿಯ ಸಂಗಮ ಸ್ಥಾನದ ನಿಸರ್ಗ ರಮಣೀಯತೆಯ ಮತ್ತು ರೌದ್ರತೆ ಕಣ್ಮನ ತಣಿಸುವಂತಹುದು. ಸಂಗಮ ಸ್ಥಳದ ಪಕ್ಕದಲ್ಲಿಯೇ ರುದ್ರನಾಥನ ದೇವಸ್ಥಾನ ಮತ್ತು ದೇವಋಷಿ ನಾರದ ಶಿಲೆಯೂ ಇದೆ. ಇಲ್ಲಿಯೇ ನಾರದರಿಗೆ ಬ್ರಹ್ಮನು ವೀಣೆ ಪ್ರದಾನ ಮಾಡಿದನೆನ್ನುವ ಕಥೆಯೂ ಇದೆ. ಇನ್ನುಳಿದ ನಾಲ್ಕು ಪ್ರಯಾಗಗಳಲ್ಲಿ ಒಂದು ದೇವಪ್ರಯಾಗ ಇಲ್ಲಿ ಭಾಗೀರಥಿ ಮತ್ತು ಅಲಕನಂದಾ ನದಿಗಳ ಸಂಗವಿದೆ. ಈ ಸಂಗಮದಿಂದ ಮುಂದೆ ಎರಡೂ ನದಿಗಳು ಸೇರಿ ಗಂಗೆಯಾಗಿ ಹರಿಯುತ್ತವೆ. ಎರಡನೇಯದಾಗಿ ನಂದ ಪ್ರಯಾಗ, ಇಲ್ಲಿ ಅಲಕನಂದಾ ಮತ್ತು "ನಂದಾಕಿನಿ" ನದಿಗಳ ಮಿಲನವಿದೆ. ಮೂರನೆಯದು ಕರ್ಣ ಪ್ರಯಾಗ. ಇಲ್ಲಿ ಅಲಕನಂದಾ ಗೆ "ಪಿಂಡರಿ" ಜೊತೆಗೂಡತಾಳೆ. ಕೊನೆಯದಾಗಿ ಅಂದರೆ ನಾಲಕನೆಯದಾಗಿ ಬರೋದು ವಿಷ್ಣು ಪ್ರಯಾಗ. ಈ ಪ್ರಯಾಗದಲ್ಲಿ ಅಲಕನಂದಾ ನದಿಯಯು "ಗಂಗೆ"ಯ ಜೊತೆ ಕೈ ಜೋಡಿಸಿ ಹತಿಯುತ್ತಾಳೆ. ಈ ಐದು ಪ್ರಯಾಗಗಳ ದರ್ಶನ ತುಂಬಾ ವಿಶಿಷ್ಠ ಮತ್ತು ಶುಭಕರವಂತೆ.

ಅಲ್ಲಿಂದ ಹೊರಟು, ರಾಮಪುರ ಎಂಬ ಹಳ್ಳಿಯ ವಸತಿಗೃಹ ತಲುಪಿ ಊಟ ಮುಗಿಸಿ ಅಲ್ಲಿಂದ 8 K.M. ದೂರ ಇರುವ ಗೌರಿಕುಂಡದ ಕಡೆಗೆ ಮಧ್ಯಾನ್ಹ 12:30 ರ ಸುಮಾರಿಗೆ ಪ್ರಯಾಣ ಬೆಳೆಸಿದ್ವಿ. ಅದು ತುಂಬಾ ಜನಸಂದಣಿಯ ರಸ್ತೆ. ಅದರಲ್ಲೂ ಸಿಂಗಲ್ ರೋಡ ಇರೋದ್ರಿಂದ ವಾಹನಗಳು ಮಧ್ಯದಲ್ಲಿ ನಿಂತೂ-ನಿಂತು ಸಾಗಬೇಕು. ಆ 8 K.M. ದಾರಿ ದಾಟೋದಿಕ್ಕೆ ನಮಗೆ ತಗುಲಿದ ಸಮಯ 2:00 ಗಂಟೆ. ಗೌರಿಕುಂಡ ತಲುಪಿದ್ವಿ ಅನ್ನೊ ಖುಷಿಯಲ್ಲಿ ಇರುವಾಗ್ಲೆ ಜೋರಾದ ಮಳೆ ಬೇರೆ ಬಂದು ಬಿಟ್ತು. ಹಾಗೂ ಹೀಗೂ ಬಡಿದಾಡಿ ಕೇದಾರನಾಥ ಮಂದಿರದ ಕಡೆಗೆ ಹೋಗೊ ರಸ್ತೆ ಹತ್ರ ಎಲ್ಲರು ಬಂದು ಸೇರಿದೆವು.

ಅಲ್ಲಿಂದ 14 K.M. ಕಾಲ್ನಡಿಗೆಯಲ್ಲಿ ಹೋಗಬೇಕು ಅಥವಾ ಕುದುರೆ ಸವಾರಿ ಅಥವಾ ಡೋಲಿ ಕೂಡ ಬಾಡಿಗೆಗೆ ಪಡೆಯ ಬಹುದು. ಮುಂಚೆಯಿಂದಲು ನಡೆದುಕೊಂಡು ಹೋಗೋಣ ಅಂತಿದ್ದವರೆಲ್ಲರ ಜೋಶಾಗ್ನಿ ಮಳೆಯಲ್ಲಿ ನಂದಿಹೋಗಿತ್ತು. ಅಂತು ಇಂತು ಕುದುರೆ ಮಾಲೀಕರ ಜೊತೆ ಕಿತ್ತಾಡಿ ಒಂದು ನಿಗದಿತ ಬೆಲೆಗೆ ಅವರನ್ನ ಒಪ್ಪಿಸಿ ಹೆದರಿಕೊಳ್ಳತಾನೇ ಕುದುರೆ ಹತ್ತಿದ್ವಿ. ಕುದುರೆ ಊರು ದಾಟಿ ಶಿಖರ ಹತ್ತಕ್ಕೆ ಪ್ರಾರಭಿಸಿದಾಗ, ಒಂದುಕಡೆ ಪ್ರಪಾತ, ಇನ್ನೊಂದು ಕಡೆ ದಿಣ್ಣೆ, ಅದರಲ್ಲೂ ಹೋಗುವವರಿಗೂ ಬರುವವರಿಗೂ ಒಂದೇ ದಾರಿ. ಇಕ್ಕಟ್ಟಿನ ರಸ್ತೆಗಳು, ಮೇಲಿಂದ ಸುರಿಯೊ ಜಿಟಿ ಜಿಟಿ ಮಾಳೆ ಬೇರೆ. ಎಲ್ಲವೂ ನಮ್ಮ ಯಾತ್ರೆಗೆ ಮೇಳೈಸಿದಂತಿದ್ವು. ಕುದುರೆ ಪ್ರಪಾತದ ಅಂಚಿನ ಕಡೆಗೆ ಹೋದಾಗ್ಲೆಲ್ಲಾ ಜೀವ ಬಾಯಿಗೆ ಬಂದಂತಾಗಿ "ಲೈಫು ಇಷ್ಟೇನಾ?" ಅನ್ನಿಸೋದು. ದಾರಿಯುದ್ದಕ್ಕೂ "ಓ ಘೋಡೆವಾಲೆ ಭಯ್ಯಾ, ಜರಾ ದೇಖೋತೊ ಸಹಿ, ಯೆ ಕಂಹಾ ಜಾ ರಹಾ ಹೈ?" ಅನ್ನೋದೊಂದೇ ಜಪ. ಕೊನೆ ಕೊನೆಗಂತು ಕುದುರೆ ಇಳಿದು ಓಡಿಹೋಗಬೇಕೆನ್ನಿಸೋದು. ಎತ್ತರಕ್ಕೆ ಹೋದಹಾಗೆಲ್ಲ ಚಳಿ ಇನ್ನೂ ಜಾಸ್ತಿ. ಆಗಲೆ ಕತ್ತಲಾಗಿ ಹೋಗಿತ್ತು. ಚಳಿಗೆ ಮೈ-ಕೈ ಮೇಲಿನ ನಮ್ಮ ಹತೋಟಿ ತಪ್ಪಿ ಹೋಗಿತ್ತು. ಅಷ್ಟರಲ್ಲಿ ಕೇದಾರನಾಥದ ದೀಪಗಳ ಮಿಣಿ-ಮಿಣಿ ಮಂದ ಬೆಳಕನ್ನ ಕಂಡು ಯಾರೋ ಹೆಪ್ಪುಗಟ್ಟಿದ ದೇಹಕ್ಕೆ  ಮಂದ ಶಾಖ ಮೂಡಿಸಿದಂತಿತ್ತು. ಅಷ್ಟರಲ್ಲಿ ಊರು ಬಂತು. ನಂತರ, ಕುದುರೆ ಕೆಳಗಿಳಿದು ಆಯಾಸಪಟ್ಟು "ಹಿಮಾಂಚಲ ಹೌಸ್" ಎಂಬ ನಮ್ಮ ವಸತಿ ಗೄಹಕ್ಕೆ ಹತ್ತಿ ಕೋಣೆಯ ಒಳಕ್ಕೆ ಸೇರಿಕೊಂಡಾಗ ರಾತ್ರಿ 10:30 ರ ಸಮಯ. ಇನ್ನೇನು ಬದುಕಿಕೊಂಡೆವು ಅನ್ನೊ ಖುಷಿ ಅಷ್ಟೇ ಮನಸ್ಸಲ್ಲಿ. ದಣಿದ ದೇಹಕ್ಕೆ ಹಸಿವಂತೂ ಇರಲೇ ಇಲ್ಲ. ಆದ್ರು ಚೂರು-ಪಾರು ತಿಂದು ರಜಾಯಿ (ಕಂಬಳಿ) ಒಳಗೆ ಹೊಕ್ಕಿದ್ದು 11:00 ಗಂಟೆಗೆ.

ಜೂನ್ 9, 2011

ಬೆಳಿಗ್ಗೆ ಎದ್ದಾಗ 4:30. ಬಿಸಿ ನೀರು ತರಿಸಿ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೊರಟೆವು. ಇನ್ನೂ ಮಳೆಯ ವಾತಾವರಣವೇ ಮುಂದುವರೆದಿತ್ತು. ಎಲ್ಲಿ ನೋಡಿದರು ಮಂಜು, ಮೋಡದ ಅಂಚು ಸರಿಸಿ ಇನುಕೋ ಪರ್ವತಗಳು. ಅ ಚಳಿಗೆ ಕೇದಾರನಾಥನೇ ಆ ಪರ್ವತಗಳಿಗೆ ಮೋಡಗಳ ಚಾದರು ಹೊದಿಸಿದಂತಿತ್ತು. ಕೆಳಗೆ ಕ್ಷೀರ ಸಾಗರದಂತೆ ಹರಿಯುವ ನದಿಗಳು, ಸುತ್ತ ಹಸಿರನುಟ್ಟು ಶೃಂಗರಿಸಿದ ಭೂಮಾತೆ, ಮಧ್ಯದಲ್ಲಿ ಕೇದಾರನಾಥ ಸನ್ನಿಧಿ. ಕೇಳಿದರಷ್ಟೇ ಸಾಲದು, ಇದನ್ನೆಲ್ಲ ನೋಡಿ ಆನಂದಿಸಬೇಕು ಅನ್ನೊ ಪ್ರತ್ಯಕ್ಷ ದರ್ಶಿಗಳ ಮಾತು ನಿಜ ಅನ್ನಿಸಿತು. ಇನ್ನು ಕೇದಾರನಾಥ ಮಂದಿರ, ಅತಿ ಪುರಾತನವಾದದ್ದು. ಅಲ್ಲಿಯ ಗರ್ಭಗುಡಿಯ ದೇವರ ನಿರಾಕಾರ ಮೂರ್ತಿಯನ್ನು ಕಂಡು ತಲೆ ತಗ್ಗಿಸಿ ನಮಸ್ಕರಿಸಿದಾಗ ಇಡೀ ಜಗತ್ತೇ ತೃಣಮತ್ರ ನೀನೇ ಸತ್ಯ, ನಿನೇ ನಿತ್ಯ, ನೀನೆ ಚಿರಂತನ ಎನ್ನುವ ಭಾವ ಉತ್ಕಟವಾಯಿತು. ಜೀವನ ಧನ್ಯತೆಯ ಪರಾಕಾಷ್ಠೆಯನ್ನು ಮುಟ್ಟಿದ ಎಲ್ಲ ಭಕ್ತರಲ್ಲೂ ತಮಗಿಂತ ಧನ್ಯರಿಲ್ಲ, ಅವನಿಗಿಂತ ಕರುಣಾಮಯಿಗಳಿಲ್ಲ ಎನ್ನುವ ಭಾವ.



ಅಲ್ಲಿಯೇ ಬೆಳಗಿನ ತಿಂಡಿ ಮುಗಿಸಿ ವಾಪಾಸು ಗೌರಿಕುಂಡದ ಕಡೆ ಹೊರಟೆವು. ಮತ್ತೆ ಕುದುರೆಗಳನ್ನ ಕಂಡು, ಕುದುರೆಗಿಂತಲು ಜೋರಾಗಿ ಜಿಗಿದು ಓಡಬೇಕೆಂಬ ಬಯಕೆ. ಹತ್ತಕ್ಕೆ ಒಲ್ಲದ ಮನಸ್ಸು, ಬಿಡದ ಕುದುರೆ ಮಾಲೀಕ, "ನಾನು ನಿಮ್ಮನ್ನ ಕೆಳಗೆ ಗೌರಿಕುಂಡದಲ್ಲಿ ಬಿಟ್ಟು ಮತ್ತೆ ಬೇರೆ ಸವಾರಿಗಳನ್ನ ಮೇಲೆ ದೇವಸ್ಥಾನಕ್ಕೆ ಕರೆದುಕೊಂಡು ಬರಬೇಕು, ಬೇಗ ಕುತ್ಕೊಳ್ಳಿ, ತಡವಗುತ್ತೆ" ಅನ್ನೋನು. ಇಳಿಯುವಾಗ ಇನ್ನೂ ಕಷ್ಟ. ಕುದುರೆಯ ಮುಂದೆ ನಮಗೆ ಹಿಡಿಯಲು ಮಾಡಿದ ಹಿಡಿಕೇನ ಜೋರಾಗಿ ಹಿಡಿದು-ಹಿಡಿದು, ಕೈಗಳೆಲ್ಲ ಎಲ್ಲಿ ಕಿತ್ತಿ ಹೋಗುವವೋ ಅನ್ನೊ ಹೆದರಿಕೆ. ತೊಡೆಗಳಂತು ನರಕಯಾತನೆ ಅನುಭವಿಸ್ತಿದ್ವು. ಇದೆಲ್ಲದರ ಮಧ್ಯ ಕೇದರನಾಥನ ದರ್ಶನ ಪಡೆದ ಭಾಗ್ಯಶಾಲಿಗಳು ಎಂಬ ಭಾವವೊಂದೇ ದಣಿವು ನಿವಾರಕ. 3:00 ಗಂಟೆಗೆ ಗೌರಿಕುಂಡ ತಲುಪಿ ಅಲ್ಲಿಯ ಬಿಸಿನೀರ ಕುಂಡದಲ್ಲಿ ಸ್ನಾನ ಮಾಡಿ ದಣಿವಾರಿಸಿಕೊಂಡೆವು. ಅಲ್ಲಿಂದ ಮತ್ತೆ ರಾಮಪುರ ತಲುಪಿ ಅಲ್ಲಿಯ ವಸತಿ ಗೃಹದಲ್ಲಿ ಊಟ ಮಾಡೋಷ್ಟರಲ್ಲಿ ಮನಸ್ಸು, ದೇಹ ಎಲ್ಲವೂ ಉಸ್ಸಂತಿತ್ತು.

ಅನಂತರ ಅಲ್ಲಿಂದ ಕೆಲವೊಬ್ಬರು (ಇನ್ನುಳಿದವರು ಅಲ್ಲಿಯೇ ವಸತಿಗ್ರೂಹದಲ್ಲಿ ವಿಶ್ರಾಂತಿ ಪಡೆದ್ರು) ಬೇರೊಂದು ವಾಹನದಲ್ಲಿ 22 K.M. ದೂರದಲ್ಲಿರೊ, ಶಿವ-ಪಾರ್ವತಿಯರ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದೆವು. ಅಲ್ಲಿಯೇ ಶಿವ ಪಾರ್ವತಿಯರ ಮದುವೆ ಆಗಿದ್ದು ಅನ್ನೊ ಪ್ರತೀತಿ ಇದೆ. 10:00 ಗಂಟೆ ಸುಮಾರಿಗೆ ವಾಪಸ ಬಂದು ರಾತ್ರಿ ಊಟ ಮುಗಿಸಿ ಮಲಗಿದೆವು.

 ಜೂನ್ 10, 2011

ಅಲ್ಲಿಂದ ಬೆಳಿಗ್ಗೆ 4:00 ಗಂಟೆಗೆ ಎದ್ದು, ಬದರೀನಾಥದ ಕಡೆ ಪ್ರಯಾಣ ಬೆಳೆಸಿದೆವು. ಅದೇ ದಾರಿಯಲ್ಲಿ ಬರೋದು, ಚೌಪ್ತ ಎಂಬ ಹಳ್ಳಿ. ಇದನ್ನ ಮಿನಿ ಸ್ವಿಟ್ಝರ್‌ಲ್ಯಾಂಡ್ ಅಂತಲೂ ಕರೆಯೊದಂತೆ. ನಾವು ಅಲ್ಲಿಯೇ ಇಳಿದು ನಮ್ಮ ಬ್ರೆಕ್‌ಫಾಸ್ಟ್ ಮುಗಿಸಿದೆವು. ನಾವು ಅಲ್ಲಿ ಇರುವಷ್ಟು ಹೊತ್ತು ತುಂಬಾನೆ ಮಂಜು ಕವಿದ ವಾತಾವರಣವಿತ್ತು. ಆದ್ರು ಕಂಡದ್ದೆಲ್ಲ, ಅಮೋಘ, ಅವಿಸ್ಮರಣೀಯ. ಅಲ್ಲಿಂದ ಔಲಿ ಎಂಬ ಊರು ಬರೀ 12 K.M. ದೂರ. ಔಲಿ, ಶೀತಕಾಲದಲ್ಲಿ ಐಸ್-ಸ್ಕೆಟಿಂಗ್‌ಗೆ ತುಂಬಾ ಹೆಸರುವಾಸಿ. ಆದ್ರೆ ಅದು ನಮ್ಮ ಪ್ರವಾಸ ಪಟ್ಟಿಯಲ್ಲಿ ಇರದ ಕಾರಣ ನಾವು ಆ ಕಡಗೆ ಹೋಗದೆ ಬದರೀನಾಥದೆಡೆ ಮುಂದುವರಿದೆವು.

ನಂತರ ಪೀಪಲಕೋಟದ ವಸತಿಗೃಹದಲ್ಲಿ ಮಧಾನ್ಹದ ಭೋಜನ ಮುಗಿಸಿ ಬದರೀನಾಥದ ಕಡೆ ಮುಂದುವರಿದೇವು. ದಾರಿಯಲ್ಲಿ ನಾವು ಭೇಟಿ ನೀಡಿದ್ದು, ಜೋಶಿಮಠ ಎಂಬ ಪಟ್ಟಣ. ಇದು ಸಹ ಆ ಗುಡ್ಡಗಾಡಲ್ಲಿಯೇ ಅರಳಿದ ತಾವರೆಯ ತರಹ ಇದೆ. ಅಲ್ಲಿ ನಾವು ನೋಡಿದ್ದು, ನರಸಿಂಹ ಮಂದಿರ, ನವದುರ್ಗಾ ಮಂದಿರ ಹಾಗೂ ಶಂಕರಾಚಾರ್ಯಾರ ಮಠ.

ಅಲ್ಲಿಂದ ಮುಂದೆ ಹಸುರಿನ ಸಾಲು ಮುಗಿದು, ದೊಡ್ಡ ದೊಡ್ಡ ಬಂಡೆಗಳ, ಚೂಪುಗಲ್ಲಿನ ಪರ್ವತಗಳು ಕಾಣಸಿಗುತ್ವೆ. ಈ ಎಲ್ಲ ಪರ್ವತ ಶ್ರೇಣಿಗಳನ್ನ ಶಿವಾಲಿಕ್ ಪರ್ವತ ಶ್ರೇಣಿ ಅಂತ ಕರೆಯೋದು. ನಾನು ಅಲ್ಲಿಂದ ಬಸ್ಸ್ ಚಾಲಕನ ಕ್ಯಾಬಿನ್‌ನಲ್ಲೆ ಹೋಗಿ ಕುಳಿತುಕೊಂಡೆ. ಶೇಶಷಾಯಿಯ (ಬದರಿ ವಿಶಾಲನ) ದರ್ಶನಕ್ಕೆ ಹೋಗುವ ದಾರಿಗಳುಕೂಡ ಶೇಶಸುರುಳಿಯ ಹಾಗಿದ್ದವು ಆ ಕಡಿದಾದ ರಸ್ತೆಗಳು. ಇದು ಪ್ರಕೃತಿ ಮಾತೆಯು ತಾನಾಗಿಯೇ ಆರಿಸಿಕೊಂಡ ವಾಸಸ್ಥಾನವಾಗಿರಬೇಕು. ಪರ್ವತಗಳ ಮಧ್ಯದಲ್ಲಿ ಎಡೆ-ಬಿಡದೆ ಬರುವ ನದಿಗಳು ಮತ್ತು ಅವು ಕೊಡುವ ಪವಿತ್ರತೆಯ ನೋಟಗಳು ಎಂಥ ಕಟುಕನ ಮನಸ್ಸಿಗೂ ಮುದನೀಡುವಂಥವು. ನಾವೇನು ಪರ್ವತದಲ್ಲಿ ಕೊರೆದ ರಸ್ತೆಗಳಿಂದ ನದಿಗೆ ಪ್ರದಕ್ಷಿಣೆ ಹಕುತ್ತಿದ್ದೆವೇನೋ ಅಥವಾ ನದಿಗಳು ನಮಗೆ ಪ್ರದಕ್ಷಿಣೆ ಹಾಕುತ್ತಿರುವವೋ ಎಂಬ ವಿಲಕ್ಷಣ ವಿಚಾರ ಯಾರಿಗಾದರು ಬರದೆ ಇರದು. ಆಗಸಕ್ಕೆ ಮೆಟ್ಟಿಲು ಹಿಡಿದಂತೆ ಕಾಣುವ ಪರ್ವತಗಳು ಮತ್ತು ಭೂಮಿ ಬಿರುಕು ಬಿಟ್ಟಂತೆ ಕಾಣುವ ಕಂದರಗಳು, ಆ ರಸ್ತೆಗಳ ತುದಿಗಳಿಂದ ಸೃಷ್ಟಿಯಕಡೆ ದೃಷ್ಟಿ ಹರಿಸಿದಾಗ ಸ್ವರ್ಗ ಮತ್ತು ಪಾತಾಳಗಳನ್ನ ಒಟ್ಟೊಟ್ಟಿಗೆ ಕಾಣುವ ಅನುಭವ. ಜೀವನ ಸಾರ್ಥಕ್ಯದ ಉಸಿರು ಬಿಟ್ಟಾಗ ಏನೋ ಅಲೌಕಿಕ ಅನುಭವ, ಎಲ್ಲೆಡೆ ಶಾಂತಿ.



ಅದೇ ದಾರಿಯಲ್ಲಿ, ಸಿಖ ಸಂಪ್ರದಾಯದವರ ತೀರ್ಥಸ್ಥಾನವಾದ "ಹೇಮಕುಂಡ" ಬರುತ್ತದೆ. ಅಲ್ಲಿ ಸವಿರಾರು ಸಿಖ್ ಯಾತ್ರಾರ್ಥಿಗಳನ್ನೂ ಕಾಣ ಬಹುದು. ಅಲ್ಲಿಗೆ ಹೋಗ ಬಯಸುವವರು, ಬದ್ರಿನಾಥದ ರಸ್ತೆಯಿಂದ 25 K.M. ನಷ್ಟು ಒಳಗೆ ಹೋಗಬೇಕಾಗುತ್ತದೆ. ಇನ್ನು "ಫೂಲೋಂ ಕೀ ಘಾಟಿ " ಅಥವಾ "Vyally of Flowers" ಕೂಡ ಅದೇ ದಾರಿಯಿಂದ 19 K.M. ದೂರದಲ್ಲಿದೆ. ಅಲ್ಲಿ ಹೇಮಂತ ಋತುವಿನಲ್ಲಿ (ಆಗಸ್ಟ ಯಿಂದ ಡಿಸೆಂಬರ್)ವಿಭಿನ್ನ ರೀತಿಯ ಸಾವಿರಾರು ಹೂಗಳನ್ನ ನೋಡಬಹುದಂತೆ. ಇದನ್ನೆಲ್ಲ ದಾಟಿ ಮುಂದೆ ಬಂದಾಗ ಸಿಗೋದು "ಹನುಮಾನ ಚಟ್ಟಿ" ಎನ್ನುವ ಸ್ಥಾನ. ಇದು ಭೀಮನು ಹನುಮಂತನ ಬಾಲವನ್ನ ದಾರಿಯಿಂದ ಎತ್ತಲು ಪ್ರಯತ್ನಿಸಿ ವಿಫಲನಾದ ನಂತೆ ಎಂದು ನಾವು ಪುರಾಣಗಳಲ್ಲಿ ಕೇಳಿದ ಕಥೆಯು ಘಟಿಸಿದ ಸ್ಥಳವಂತೆ. ಅಲ್ಲಿಯೇ ಆಂಜನೇಯನ ದೇವಸ್ಥಾನವೂ ಇದೆ. ಆಗಲೇ ಬಹಳ ಸಮಯವಾಗಿದ್ದರಿಂದ ನಾವೆಲ್ಲರು ಬಸ್ಸೊಳಗಿಂದಲೆ ಆಂಜನೇಯನ ದರ್ಶನ ಪಡೆದೆವು. ತದನಂತರ ನಾವು ಕಂಡ ಇನ್ನೊಂದು ಪ್ರಕೃತ್ತಿಯ ಅವಿಸ್ಮರಣೀಯ ವಿಸ್ಮಯ ಎಂದರೆ ಗ್ಲೇಷಿಯರ್ಸ್. ಗ್ಲೇಷಿಯರ್ಸ್ ಎಂದರೆ ಮಂಜಿನಿಂದ ತಯ್ಯಾರಾದ ಗಟ್ಟಿ ಕಲ್ಲು ಅವು ಕೆಲವೊಮ್ಮೆ ಬೇಸಿಗೆಯ ಬಿಸಿಲಿಗೆ ಕರಗಿ ನೀರಾಗಿ ಹರಿಯುತ್ತವೆ. ಮತ್ತೆ ದಾರಿ ಸಾಗಿ ನಾವು ಬದರಿನಾಥಕ್ಕೆ ಮುಟ್ಟಿದಾಗ ಸುಮಾರು 9:00 ಗಂಟೆ ಆಗಿತ್ತು. ಅಲ್ಲಿ "ಯೋಗ" ವಸತಿಗೃಹದಲ್ಲಿ ರಾತ್ರಿ ಭೋಜನ ಮಾಡಿ ಮಲಗಿದಾಗ 11:00 ಗಂಟೆಯಾಗಿತ್ತು.

ಜೂನ್ 11, 2011



ಬೇಳಿಗ್ಗೆ 4:30 ಕ್ಕೆ ಎದ್ದು, ಎಲ್ಲರು ಬೆಳಗಿನ ಕಾರ್ಯಕ್ರಮ ಮುಗಿಸಿ ಹೊರಗೆ ಬಂದಾಗ ನಮಗೊಂದು ಅದ್ಭುತ ಕಾದಿತ್ತು. ಅದೇನೆಂದ್ರೆ, ಸೂರ್ಯನ ಪ್ರಥಮ ಕಿರಣಗಳಿಂದ ಬಂಗಾರದ ಖಣಿಯಂತೆ ಹೊಳೆಯುತ್ತಿದ್ದ ನೀಲಕಂಠ ಪರ್ವತ. ನರ ಮತ್ತು ನಾರಾಯಣ ಎಂಬೆರಡು ಪರ್ವತಗಳ ಮಧ್ಯ ಇರೋದೇ ಈ ನೀಲಕಂಠ ಪರ್ವತ. ಅದರ ರೂಪ ಸೂರ್ಯೋದಯದಲ್ಲಿ ಸ್ವರ್ಣ ಮತ್ತು ಸ್ವಲ ಹೊತ್ತಿನ ನಂತರ ರಜತ (ಬೆಳ್ಳಿ) ಮತ್ತು ನಂತರ ದಿನವಿಡೀ ಮಂಜಿನ ಬಿಳಿ ಬಣ್ಣದ್ದಾಗಿ ಕಾಣಿಸುತ್ತದಂತೆ. ಅದರ ಬೆಳಗಿನ ರೂಪ ಮಾತ್ರ ವರ್ಣನಾತೀತ. ನಂತರ ನಮ್ಮ ಗೈಡ ಮೊದಲೇ ತಿಳಿಸಿದಂತೆ ದೇವಸ್ಥಾನದ ಬಲಬದಿಯಲ್ಲಿರುವ ತಪ್ತ ಕುಂಡದ ಬಿಸಿನೀರ ಬುಗ್ಗೆಯಲ್ಲಿ ಸ್ನಾನ ಮಾಡಿದೆವು. ಅದು ನಿಜಕ್ಕು ವಿಚಿತ್ರ, ಅಷ್ಟೊಂದು ಮೈ ಕೊರೆಯುವ ಚಳಿಯಲ್ಲೂ ಆ ಕುಂಡದಲ್ಲಿ ಸುಡು ಬಿಸಿನೀರು ಪ್ರಾಕೃತಿದತ್ತವಾಗಿ ಬರುತ್ತದೆ ಎಂದರೆ ಅದು ಬದರಿನಾಥನ ಮಹಿಮೆ ಅಥವಾ ಆತನ ಕೃಪೆಯೇ ಆಗಿರಬೇಕು. ಸ್ನಾನಮಾಡಿ ದರ್ಶನದ ಸರದಿಯಲ್ಲಿ ಹೋಗಿ ನಿಂತುಕೊಂಡಾಗ 5:45 ರ ಸಮಯ. ಅಂಥ ಚಳಿಯಲ್ಲಿ ಕಾಲು ನೆಲಕ್ಕೆ ಇಡಕ್ಕೆ ಆಗ್ತಿಲ್ಲ ಆದ್ರು ಭಕ್ತರ ಆಗಮನಕೆ ಕೊನೆಯೇ ಇಲ್ಲ. ಇದೆಲ್ಲದರ ಮಧ್ಯ ಪರ್ವತಗಳ ಪರದೆ ದಾಟಿ ಬಂದ ಸೂರ್ಯ ಎಲ್ಲರಿಗೂ ಒಂದು ತರಹದ ನೆಮ್ಮದಿಯನ್ನು ಕೊಟ್ಟ. ರವಿಯ ಆ ಸ್ಪರ್ಶ ಎಂದಿಗೂ ಮರೆಯಲಾಗದ್ದು. ಇಷ್ಟೊಂದು ಕಷ್ಟಪಟ್ಟು ದೇವರ ಸನ್ನಿಧಿಗೆ ಬಂದ ನಾವೇ ಧನ್ಯರು ಅನ್ನೋದರೊಳಗೆ ನಮಗೆ ಭೇಟಿಯಾಗಿದ್ದು 60 ರ ವಯಸ್ಸಿನ ಗುಜರಾತಿನಿಂದ ಬಂದ ಒಬ್ಬ ಯುವಕ. ಅವರು ಕಳೆದ 2 ತಿಂಗಳಿಂದ ಎಲ್ಲಾ ಯತ್ರಾಸ್ಥಳಗಳನ್ನು ಪಾದಯಾತ್ರೆ ಮಾಡಿಕೊಂಡೇ ದರ್ಶನ ಪಡೆದಿದ್ದಾರಂತೆ. ಅವರನ್ನ ಭೇಟಿಯಾದನಂತರ ನಾವೇನು, ನಮಗಿಂತ ಅವರು ಧನ್ಯರು ಅನ್ನಿಸಿತು.

ಮುಂದೆ ನಮಗೆ ಬದರೀ ನಾರಾಯಣನ ದರ್ಶನ ಲಭಿಸಿದಾಗ ಸುಮಾರು 11:45. ಸರಿಯಾಗಿ 6:00 ಗಂಟೆ ಬೇಕಾಯಿತು ದರ್ಶನಕ್ಕೆ. ಬದರೀನಾಥನ ಸನ್ನಿಧಾನ ಅಂದರೆ ಗರ್ಭಗುಡಿಯಲ್ಲಿ ಹೋದಾಗ ಅದೇನೊ ವರ್ಣಿಸಲಿಕ್ಕಾಗದ ಭಾವ. ಅಲ್ಲಿ ಬರೀ ನಾನು ಮತ್ತೆ ನನ್ನ ಆ ದೇವರು, ಬೇರೆಯವರ್ಯಾರೂ ಬೇಕಿಲ್ಲ, ಇನ್ನೇನೂ ಬೇಕಿಲ್ಲ, ಯಾವ ಲೌಕಿಕ ಜಂಜಾಟಗಳೂ ಬೇಕಿಲ್ಲ, ಮನಸ್ಸಿನ ವಿಕಾರಗಳೆಲ್ಲ ತೊಳೆದು ಹೋದಂತೆ. ಮನಸ್ಸು ಶಾಂತ, ಭಾವ ಮೌನ, ಕಣ್ಣು ಧನ್ಯ. ಆತನ ಪಂಚಾಯತಿಯಲ್ಲಿ ಆತನಜೊತೆ ಇರೋದು, ಗಣೇಶ, ಉದ್ಧವ, ಕುಬೇರ, ಲಕ್ಷ್ಮೀ, ನಾರಾಯಣ ಮತ್ತು ನರ ರು. 

ಅಲ್ಲಿಂದ ಆಲಕನಂದಾ ತೀರದ ದಡದಲ್ಲಿ ಇರೊ ಬ್ರಹ್ಮಕಪಾಲದಲ್ಲಿ, ಅಪ್ಪಾ (ಬಾಬಾ) ಅವರಿಗೆ ಪಿತೃತರ್ಪಣ (ಶ್ರಾದ್ಧ) ಮಾಡಿಸಿದೆವು. ಅಲ್ಲಿಯ ತರ್ಪಣ ಸಂಸ್ಕಾರ ತುಂಬಾ ಶ್ರೇಷ್ಠವಂತೆ. ಅಲ್ಲಿಯೇ ಪ್ರಸಾದ ಪಡೆದು, ವಸತಿಗೃಹಕ್ಕೆ ಬಂದು ಮಧ್ಯಾನ್ಹದ ಊಟ ಮುಗಿಸಿ ಹೊರಟಾಗ ಮಧ್ಯಾನ್ಹ 2:00 ಗಂಟೆ.

ಮುಂದೆ ಅಲ್ಲಿಂದ ಹೊರಟಿದ್ದು 3 K.M. ದೂರದಲ್ಲಿರುವ ಮಾಣಾ ಗಾಂವ ಗೆ. ಇದು ಆ ಕ್ಷೇತ್ರಲ್ಲಿ ಬರುವ ಭಾರತದ ಸೀಮೆಯ ಕೊನೆಯ ಹಳ್ಳಿ. ಅದರನಂತರ 30-40 K.M. ವರೆಗೆ ನಿರ್ಜನ ಪ್ರದೇಶವಿದ್ದು ಅಲ್ಲಿ ಭಾರತ ಮತ್ತು ಚೀನಾ ನಡುವಿನ ಸೀಮ ರೇಖೆ ಬರ್ತ್ತದಂತೆ. ಅಲ್ಲಿ ಸಾಕಷ್ಟು, ಅರೆ-ಸೇನಾಪಡೆ ಮತ್ತು ಸೀಮಾ ಸುರಕ್ಷಾ ಪಡೆಗಳವರನ್ನ ಮತ್ತು ಅವರ ಡೇರೆಗಳನ್ನ ಕಾಣಬಹುದು. ಅದು ಪ್ರಾಕೃತಿಕವಾಗಿ ಸುಂದರವಾದ ಹಳ್ಳಿ. ಅಲ್ಲಿ ಕಾಣಸಿಗುವ ಸ್ವಲ್ಪ ಬಯಲು ಮತ್ತು ನಂತರದ ಪರ್ವತ ಶ್ರೇಣಿಗಳು ಕಣ್ಣ್ಮನ ತಣಿಸುವಂತಹವು. ಆಗಸಕೆ ತಾಕಿದ ಪರ್ವತಗಳು, ಅವುಗಳಿಗೆ ಹತ್ತಿಕೋಂಡ ಮೋಡಗಳನ್ನ ನೋಡಿದ್ರೆ ಆ ದೇವರು ಆಮೋಡಗಳನ್ನ ಮರೆಮಾಡಿ ನಮಗೆ ಕಾಣದಂತೆ ಭೂಮಿಗೆ ಬಂದಿಳಿದು ದಿನವೂ ಇಲ್ಲಿ ವಿಹರಿಸಿ ಹೋಗುವನೇನೋ ಅಂತ ಅನ್ನಿಸುತ್ತೆ. ಮಾಣಾ ಕೆ ಹತ್ತಿಕೊಂಡೇ ಎರಡು ಪರ್ವತಗಳ ಮಧ್ಯ ಇರುವ ಒಂದು ಗ್ಲೇಷಿಯರ್ ನಂತೆ ಕಾಣುವ ಬಿಳಿ ಕಲ್ಲನ್ನು ತೋರಿಸಿ, ಇದನ್ನ ಸತೋಪಂತ ಅಥವಾ ಸ್ವರ್ಗಾರೋಹಿಣಿ ಅಂತ ಕರೀತಾರೆ. ಇಲ್ಲಿಂದಲೇ ಪಾಂಡವರು ಸ್ವರ್ಗಕ್ಕೆ ಹೊರಟಿದ್ದು. ಸ್ವರ್ಗ ದಕ್ಕಿದ್ದು ಯುಧಿಷ್ಠೀರ ಮತ್ತು ಆತನ ನಾಯಿಗೆ ಮಾತ್ರ. ಉಳಿದ ಪಾಂಡವರೆಲ್ಲರು ದಾರಿಯಲ್ಲಿಯೇ ಅವಸಾನಗೈದರು ಅಂತ ನಮ್ಮ ಗೈಡ ಮನೀಷ ಭಾಯಿ ಹೇಳಿದ.



ನಂತರ ಸ್ವಲ್ಪ ದೂರ ನಡೆದು ನೋಡಿದ್ದು, ಸರಸ್ವತಿ ನದಿಯ ಉಗಮ ಸ್ಥಾನ. ಎಲ್ಲರು ಹೇಳೊದು ಸರಸ್ವತಿ ನದಿ ಗುಪ್ತಗಾಮಿನಿ ಅಂತ ಆದ್ರೆ ಅವಳ ಉಗಮ ಸ್ಥಾನದಲ್ಲಿ ಮಾತ್ರ ಅವಳು ತುಂಬಾ ಜೋರಾಗಿ ರಭಸದಿಂದ ಉಕ್ಕಿ-ಉಕ್ಕಿ ಹರಿತಾಳೆ. ತುಸು ದೂರ ಹೋಗಿ ಗುಪ್ತಳಾಗ್ತಾಳೆ. ಮತ್ತೆ ಲಹಾಬಾದ (ಪ್ರಯಾಗ)ದಲ್ಲಿ ಕಾಣಿಸಿ ಕೊಳ್ತಾಳೆ (ಅದಕ್ಕೆ ಲಹಾಬಾದನ್ನ ಪ್ರಯಾಗ ಅಂತ ಕರೀತಾರೆ. ಅಲ್ಲಿ ಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮವಿದೆ). ಪಕ್ಕದಲ್ಲಿ ಒಂದು ಬಂಡೆಯಿಂದ ನೀರು ಹನಿಗುಟ್ಟುತಿತ್ತು, ಈ ನೀರು, ಕೈಲಾಸ ಮಾನಸ ಸರೋವರದ್ದು ಅನ್ನೊ ಅಭಿಪ್ರಾಯಗಳಿದೆ ಅಂತ ಮನೀಷ ಹೆಳಿದ. ನಂತರ ಪಕ್ಕದಲ್ಲಿಯೇ ಇದ್ದ ಚಿಕ್ಕದಾದ ಸರಸ್ವತಿ ಮಂದಿರದಲ್ಲಿ ತಾಯಿ ಸರಸ್ವತಿಯ ದರ್ಶನ ಪಡೆದೆವು. ಆಮೇಲೆ ನೋಡಿದ್ದು "ಭೀಮ ಸೇತುವೆ". ಇದರ ವೈಶಿಷ್ಠ್ಯ ಎನೆಂದರೆ, ಇದನ್ನ ಭೀಮ ನಿರ್ಮಿಸಿದ್ದು ಅಂತ. ಸ್ವರ್ಗಾರೋಹಣಕ್ಕೆ ಹೋಗುವ ಸಮಯದಲ್ಲಿ ದ್ರೌಪದಿಗೆ ಆ ಎರಡು ಪರ್ವತಗಳ ಮಧ್ಯದ ಅಂತರವನ್ನ ದಾಟಲು ಆಗದಿದ್ದಾಗ ಭೀಮ ಅಲ್ಲಿಯೇ ಇದ್ದ ಒಂದು ದೊಡ್ಡ ಬಂಡೆಯನ್ನ ಎರಡೂ ಬೆಟ್ಟಗಳ ಮಧ್ಯೆ ಸರಸ್ವತಿ ನದಿಗೆ ಅಡ್ಡಲಾಗಿ ತಂದಿಟ್ಟನಂತೆ. ಅದುವೆ "ಭೀಮ ಸೇತುವೆ" ಅಥವಾ "ಭೀಮ ಪೂಲ". ಅಲ್ಲಿ ಅವನ ಒಂದು ಕಾಲು ಮತ್ತು ಬಲಗೈ ಗುರುತುಗಳು ಸಹ ಕಾಣ ಸಿಗುತ್ತವೆ. ಅಲ್ಲಿಂದ ಸ್ವಲ್ಪ ದೂರದಲ್ಲಿ "ವ್ಯಾಸ ಗುಫ಼" ಕೂಡ ಇದೆ. ಅಲ್ಲಿ ಗಣೇಶ ವ್ಯಾಸರಿಗೆ ಮಹಾಭಾರತದ ಕಥೆಯನ್ನ ಹೇಳಿದನಂತೆ ಎನ್ನುವ ವಾಡಿಕೆ ಇದೆ.

ಇದೆಲ್ಲವೂ ಒಂದು ಅದ್ಭುತ ಅನುಭವ. ಇಲ್ಲಿಯವರೆಗೂ ನಾವು ರಾಮಾಯಣ ಮತ್ತು ಮಹಾಭಾರತದಲ್ಲಿ ಕೇಳಿದ ಅದೆಷ್ಟೋ ಸಂಗತಿಗಳು ಮತ್ತು ಸ್ಥಾನ ವಿಶೇಷಗಳನ್ನ ಇಲ್ಲಿ ನೋಡಬಹುದು. ಉತ್ತರಾಖಂಡದ ಎಲ್ಲ ಯಾತ್ರಾ ಸ್ಥಳಗಳ ದಾರಿಯುದ್ದಕ್ಕೂ "ದೇವಭೂಮಿ ಉತ್ತರಾಖಂಡಕ್ಕೆ ನಿಮಗೆ ಸ್ವಾಗತ" ಅಂತ ಬರೆದು ಹಾಕಿರುವ ದಾರಿ ಫಲಕಗಳು, ಸ್ವರ್ಗದ ಕಲ್ಪನೆಗೆ ಮೂರ್ತ ರೂಪಕೊಡುವ ಪ್ರಕೃತಿ ಮತ್ತು ಏನು ನೋಡಿದರು, ಏನು ಮುಟ್ಟಿದರು, ಅದು ದೇವರ ಸ್ವತ್ತು ಅನ್ನೊ ಹಾಗಿರುವ ಸವಿರಾರು ದೇವಸ್ಥಾನಗಳು, ಪುಣ್ಯ ನದಿಗಳು, ಪರ್ವತ ಶ್ರೇಣಿಗಳು, ನಿಜಕ್ಕೂ ಸ್ವರ್ಗದಲ್ಲಿ ವಿಹರಿಸುವ ಅನುಭವ ಕೊಡುತ್ತವೆ. ಉತ್ತರಾಖಂಡ ನಿಜಕ್ಕೂ ದೇವಭೂಮಿಯೇ ಹೌದು.

ಅಲ್ಲಿಂದ ನೇರವಾಗಿ ಜೋಶಿಮಠದ ಮಾರ್ಗವಾಗಿ, ರಾತ್ರಿ ಬಂದು ತಲುಪಿದ್ದು, ಪೀಪಲಕೋಟಕ್ಕೆ. ಅಲ್ಲಿಯ ವಸತಿ ಗೃಹದಲ್ಲಿ ರಾತ್ರಿ ಊಟ ಮುಗಿಸಿ ಮಲಗಿದ್ದು 11:00 ಗಂಟೆಗೆ.

ಜೂನ್ 12, 2011

ಬೆಳಿಗ್ಗೆ ಅಲ್ಲಿಂದ 5:30 ಗಂಟೆಗೆ ಹೊರಟು ಮತ್ತೆ ಅದೇ ದಾರಿ, ಗೋಪೇಶ್ವರ, ಶ್ರೀನಗರ ಮಾರ್ಗವಾಗಿ ಹೃಷಿಕೇಶಕ್ಕೆ ಬಂದು ಅಲ್ಲಿ ಸುಮಾರು 3:30 ಕ್ಕೆ ಭೋಜನ ಮುಗಿಸಿ, ಹರಿದ್ವಾರದ ಕಡೆ ಹೊರಟೇವು. ಅಲ್ಲಿಂದ ಹರಿದ್ವಾರ ಬರೀ 23 K.M. ಆದ್ರೂ ತುಂಬಾ ಟ್ರಾಫಿಕ್ ಇದ್ದಿದ್ರಿಂದ ನಾವು ಹರಿದ್ವಾರದ ಗಂಗಾ ತಟ ಅಂದ್ರೆ, "ಹರ ಕೀ ಪೌಡಿ" (ಗಂಗಾ ಸ್ನಾನ ಮತ್ತು ಪೂಜಾ ಸ್ಥಳ) ಗೆ ತಲುಪಿದಾಗ 6:00 ಗಂಟೆಯಾಗಿತ್ತು. ನಮ್ಮ ಬಸ್ಸಿನ ಸಹ ಯಾತ್ರರ್ಥಿಗಳಲ್ಲಿ ಕೆಲವೊಬ್ಬರು ಇಲ್ಲಿಂದಲೇ ಇಳಿದು ತಮ್ಮ ತಮ್ಮ ಊರಿಗೆ ಹೊರಟು ಹೋದ್ರು. ಉಳಿದವರು ಗಂಗಾ ಸ್ನಾನಕ್ಕಾಗಿ "ಹರ ಕೀ ಪೌಡಿ" ಗೆ ಹೋದ್ವಿ. ಅಲ್ಲಿ ಎಲ್ಲಿನೋಡಿದರಲ್ಲಿ ಜನ. ಒಂದು ಕಡೆ ಗಂಗಾ ಸಾಗರ, ಇನ್ನೊಂದು ಕಡೆ ಜನ ಸಾಗರ. ಕೈ ಬಿಟ್ರೆ ಕಳೆದುಕೊಳ್ಳೊ ಭೀತಿ. ಆಗಲೆ ಅಲ್ಲಿ ಕೆಲವು ಮಕ್ಕಳು ಮನೆಯವರಿಂದ ತಪ್ಪಿಸಿಕೊಂಡ ಬಗ್ಗೆ ಧ್ವನಿವರ್ಧಕದಲ್ಲಿ ಅನೌನ್ಸ್ ಮಾಡ್ತಾ ಇದ್ದ್ರು.  ಅಂಥದ್ರಲ್ಲೆ ಒಂದುಕಡೆ ಪಕ್ಕಕ್ಕೆ ನೀರಲ್ಲಿ ಇಳಿದು 5 ಸಾರಿ ಮುಳುಗೆದ್ದು, ಸಪ್ತ ಪವಿತ್ರ ನದಿಗಳನ್ನ ಸ್ಮರಿಸಿ, ಗಾಯತ್ರಿ ಮಂತ್ರ ಜಪಿಸಿ, ಸೂರ್ಯನಿಗೆ ಸಯಂಕಾಲದ ಅರ್ಘ್ಯ ಬಿಟ್ಟೆವು. ನದಿಯ ಮಧ್ಯದಲ್ಲಿ ಗಂಗೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ ಅದು ಗಂಗೆಯಲ್ಲಿ ಮಿಂದು, ಪಾಪ ತಳೆದು, ಪವಿತ್ರವಾದ ಮನಸ್ಸಿನ ಭಾವೋದ್ವೇಗಕ್ಕೆ ಮತ್ತಷ್ಟು ಚಾಲನೆ ನೀಡಿ ಗದ್ಗತಿತರನ್ನಾಗಿಸಿತು. ತದನಂತರ ಪೂಜೆ ಮಾಡಿ ಆಶೀರ್ವಾದ ಪಡೆದೆವು. ಗಂಗಾತಟದ ಇನ್ನೊಂದೆಡೆಗೆ, ಅದೇ ಗಂಗೆಯ ನೀರಿನ ಹರಿವನ್ನು ತಿರುವಿ, ದೊಡ್ಡದಾದ ಒಂದು ಕುಂಡದ ತರಹ ರಚಿಸಲಾಗಿದೆ, ಅದರ ಮೇಲೆ ಮೆಟ್ಟಿಲುಗಳನ್ನ ನಿರ್ಮಿಸಲಾಗಿದೆ ಮತ್ತು ತುದಿಯಲ್ಲಿ ಗಂಗಾ ಮಂದಿರವಿದೆ. ಅಲ್ಲಿ ಪ್ರತಿನಿತ್ಯ ಸೂರ್ಯಾಸ್ತದ ನಂತರ ಗಂಗಾ ಆರತಿ ಮಾಡಲಗುವುದಂತೆ. ಅಂದು ಸಾವಿರಾರು ಜನರ ನಡುವೆ ನಾವು ಸಹ ಅದರ ಅಲೌಕಿಕ ಭಕ್ತಿಯ ರಸಾನುಭವ ಪಡೆದು ಪುನಿತರಾದೆವು. ಇನ್ನು ಹರಿದ್ವಾರದಲ್ಲಿ ವಿಶೇಷವಾದ ಮಾನಸಾದೇವಿಯ ಮಂದಿರಕ್ಕೆ ಹೋಗಬೇಕಿತ್ತು ಆದರೆ ಅಲ್ಲಿ ದಿನಾಲು 7:00 ಗಂಟೆಗೆ  ಗೇಟ ಮುಚ್ಚಿ ಬಿಡುತ್ತಾರಂತೆ, ಆಗಲೇ 7:30 ಗಂಟೆಯಾಗಿ ಹೋಗಿದ್ದರಿಂದ ಅದನ್ನ ಕೈ ಬಿಡಬೇಕಾಯಿತು.



ನಂತರ ಗಂಗಾ ತಟದಲ್ಲಿಯೇ ಇರುವ ಸಾಲು ಮಳಿಗೆಗಳಿಗೆ ಭೇಟಿ ನೀಡಿದೇವು. ಅಲ್ಲಿ ಮನೆಗೆ ಬೇಕಾದ ಗಂಧದ ಅಚ್ಚು, ತಾಮ್ರ ತಂಬಿಗೆ, ಗಂಗೆ ತುಂಬಿರುವ ಗಿಂಡಿ ಗಳನ್ನ ಎಲ್ಲಾ ಬಂಧು ಮಿತ್ರರಿಗೂ ಪ್ರಸಾದವಾಗಿ ಕೊಡಲು ಕೊಂಡು ಕೊಂಡೆವು ನಂತರ ಚಹಾ ಕುಡಿದು ಸ್ವಲ್ಪ ಹೊತ್ತು ಅಲ್ಲಿಯೇ ವಿಶ್ರಮಿಸಿ ನಂತರ ನಮ್ಮ ರಾತ್ರಿ ಊಟದ ವ್ಯವಸ್ಥೆ ಮಾಡಲಾದ ಸಾಯಿ ಧರ್ಮಶಾಲೆ ಗೆ ಹೋಗಿ ಊಟಮುಗಿಸಿ ರಾತ್ರಿ ವಾಪಸ ದೆಹಲಿಯ ಪ್ರಯಾಣಕ್ಕೆ ಸಿದ್ಧರಾದೆವು. ದಾರಿಯಲ್ಲಿ ಹರಿದ್ವಾರದಿಂದ ಸ್ವಲ್ಪವೇ ದೂರದಲ್ಲಿರುವ ಸ್ವಾಮಿ ರಾಮದೇವರ ಪತಾಂಜಲಿ ಯೋಗಪೀಠ ಕ್ಕೆ ಹೊರಗಿನಿಂದಲೆ ನೋಡಿ ಹೊರಟೇವು. ದಾರಿಯುದ್ದಕ್ಕೂ ಆ ಏಳು ದಿನಗಳ ಪ್ರವಾಸದಲ್ಲಿ ಪಡೆದ ಆ ಅವಿಸ್ಮರಣೀಯ ಮೃಷ್ಟಾನ್ನ ಭೋಜನ ಹಾಗೂ ಅಮೃತಪಾನದ ಕ್ಷಣಗಳನ್ನ ನೆನೆಯುತ್ತ, ಮೆಲಕು ಹಕುತ್ತ, ಒಲ್ಲದ ಮನಸ್ಸಿಗೆ ಕಿವಿಗೊಡದೆ ಎಳೆದೆಳೆದು ಕರೆದುಕೊಂಡು ಹೋಗುವ ಅನುಭವ. ಸ್ವರ್ಗ ದಿಂದ ಮರುಜನ್ಮ ಪಡೆದು ಭೂಲೋಕಕ್ಕೆ ಹೋಗುವ ಅನಿಸಿಕೆ. ದೆಹಲಿಗೆ ತಲುಪಿದಾಗ ಬೆಳಗಿನಜಾವ 4:30 ಗಂಟೆಯಾಗಿತ್ತು. ಅಲ್ಲಿಂದ ನಮ್ಮ ಲಗೇಜ್ ತಗೆದುಕೊಂಡು ಕರೋಲ ಬಾಗ ನ ನಮ್ಮ ಹೋಟಲ್ "ಹಿಲ್ ಪ್ಯಾಲೆಸ" ತಲುಪಿ ರೂಮೊಳಗೆ ಹೊಕ್ಕು "ಊಶ್" ಅಂತ ಉಸಿರು ಬಿಟ್ಟೆವು. ಎಲ್ಲವೂ ಕನಸು ನನಸಾಗಿ ಮತ್ತೆ ಕನಸಾದ ಹಾಗೇ...!

-- ಕಲ್ಯಾಣ ಕುಲ್ಕರ್ಣಿ

No comments:

Post a Comment