ಜೀವನ ಅತ್ಯಮೂಲ್ಯವದದ್ದು. ಅದರಲ್ಲೂ ಮಾನವ ಜನ್ಮ ಬಹುದೊಡ್ಡದು.
ಹಿಂದೂ ಮಾನ್ಯತೆಯ ಪ್ರಕಾರ ಈ ಮಾನವ ಜನ್ಮ ದೊರೆಯಬೇಕಾದರೆ ಅದರ ಹಿಂದೆ ಪಾಪ-ಪುಣ್ಯ ಹಾಗೂ
ಕರ್ಮಕಾಂಡದ ಲೆಕ್ಕಾಚಾರ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾದರೆ ದುರ್ಲಭ ಮಾನವ ಜನ್ಮದ
ಸಾರ್ಥಕತೆಯೂ ಅಷ್ಟೇ ಮುಖ್ಯ. ಅದಕ್ಕಾಗಿಯೇ ನಮ್ಮ ವೇದ-ಪುರಾಣಾದಿಗಳಾಗಿ ಅನೇಕ ಸಂತರು, ದಾಸರು, ಶರಣರು ಒತ್ತು
ನೀಡಿದ್ದು ಮಾನವನ ಅಸ್ತಿತ್ವದ ಪರಮಗುರಿಯಾದ ಜೀವನ ಔನ್ಯತ್ಯಕ್ಕೆ. "ಮಾನವ ಜನ್ಮ ದೊಡ್ಡದು, ಇದ ಹಾನಿಮಾಡಲು
ಬೇಡಿ ಹುಚ್ಕಾಪ್ಪಗಳಿರ ಮಾನವ ಜನ್ಮ ದೊಡ್ಡದು" ಅಂತ ನಮ್ಮ ಪೂರ್ವಜರು ನುಲಿದ ಈ ಸಾಲುಗಳೇ
ನಮ್ಮವರು ಜೀವನ ಸಾಕ್ಷಾತ್ಕಾರಕ್ಕೆ ನೀಡಿದ ಮಹತ್ವದ ಬಗ್ಗೆ ತಿಳಿಸುತ್ತದೆ.
ಮಾನವನ ಇಂದಿನ ಸ್ಥಿತಿಗೆ ಮುಖ್ಯವಾಗಿ ಎರಡು ಅಂಶಗಳು ಕಾರಣ
ಒಂದು ಪ್ರಾರಬ್ಧ ಮತ್ತು ಇನ್ನೊಂದು ಪುರುಷಾರ್ಥ. ಪ್ರಾರಬ್ಧ ನಮ್ಮ ದೌರ್ಬಲ್ಯಗಳ ಸಂಕೇತವಾದರೆ, ಪುರುಷಾರ್ಥ
ನಮ್ಮ ಸಾಹಸ, ಸಂಯಮ, ಸದಾಚಾರ ಮತ್ತು ಜಿತೆಂದ್ರಿಯತೆಯ ಸಂಕೇತ. ಇದಕ್ಕೆ ತಕ್ಕಂತೆ ಮಾನವನ (ಆತ್ಮನ)
ಯೋನಿ-ಜನ್ಮ-ಸ್ವಭಾವ-ಜೀವನ-ಮರಣಗಳು ನಿರ್ಧಾರವಾಗುತ್ತವೆ. ೮೪ ಲಕ್ಷ ಯೋನಿಗಳಲ್ಲಿ ಮಾನವ
ಯೋನಿಯೊಂದೆ ನಮ್ಮನ್ನು ನಮ್ಮ ಪುರುಷಾರ್ಥದಿಂದ ಪ್ರಾರಬ್ಧವನ್ನು ಸಮರ್ಥವಾಗಿ ಎದುರಿಸಿ, ಕರಗಿಸಿ
ಮುಕ್ತಿಯ ಕಡೆ ಕೊಂಡೊಯ್ಯಬಲ್ಲದು.
ಮುಕ್ತಿ ಇದು ಪುರುಷಾರ್ಥದಿಂದ (ಜೀವನದ ಎತ್ತರಗಳಲ್ಲಿ) ಒಂದು
ಆತ್ಮಕ್ಕೆ ದೊರೆಯಬಲ್ಲ ಅತ್ಯಂತ ಶ್ರೇಷ್ಠವಾದ ಹಾಗೂ ಕೊನೆಯ ಘಟ್ಟ. ಇದರ ನಂತರ ಆತ್ಮನಿಗೆ ಲೌಕಿಕ
ಬಂಧನಗಳಿಲ್ಲ. ಜೀವನಕ್ಕೆ ಇಂತಹುದೊಂದು ಮಹತ್ವದ ಗುರಿಯನ್ನು ನೀಡಿದ್ದು, ಆ ಪಯಣದ ದಾರಿಯನ್ನು ಜಗತ್ತಿನ ಮುಂದೆ
ಬಿಚ್ಚಿಟ್ಟಿದ್ದು, ನಮ್ಮ ಪೂರ್ವಜರು ಈ ಮಾನವ ಕುಲಕ್ಕೆ ನೀಡಿದ ಬಹುದೊಡ್ಡ ಕೊಡುಗೆ.
ಸನಾತನ ಕಾಲದಿಂದ ಹಿಡಿದು ಈ ಹಿಂದಿನ ಕೆಲ ವರ್ಷಗಳವರೆಗೂ
ನಮ್ಮವರು ಇದೆ ಶ್ರೇಷ್ಠ ಮಾರ್ಗದಲ್ಲಿ ಜೀವನ ಸವಿಸಿದ್ದಾರೆ. ಕಳೆದ ಕೆಲ ದಶಕಗಳಲ್ಲಿ ಇದು
ಬದಲಾಗಿದೆ. ಪುರುಷಾರ್ಥದ ಮಜಲುಗಳು ತ್ಯಾಗ, ಪ್ರೇಮ, ವೈರಾಗ್ಯ, ಆತ್ಮೋನ್ನತಿ, ದ್ವೈತ-ಅದ್ವೈತಗಳು ಆಗದೆ, ಹಣ, ಸ್ವತ್ತು, ಸಂಪತ್ತು, ಪ್ರತಿಷ್ಥೆ, ಗೌರವ-ಘನತೆಗಳಾಗಿವೆ. ಲೌಕಿಕ
ಪುರುಷಾರ್ಥದಲ್ಲಿ ಪಡೆಯುವದಕ್ಕಿಂತ ವಯಕ್ತೀಕವಾಗಿ ಕಳೆದು ಕೊಳ್ಳುವುದೇ ಹೆಚ್ಚು. ಮೊಟ್ಟ ಮೊದಲಾಗಿ
ಮಾನವ ಜನ್ಮದ ಅತ್ಯಮೂಲ್ಯವಾದ ಸಮಯದ ವ್ಯರ್ಥ ವ್ಯಯ. ನಂತರ ಕ್ಷಣಿಕ ಸುಖಕ್ಕಾಗಿ ಶ್ರಮ ಮತ್ತು
ಸಂಪತ್ತಿನ ವ್ಯಯ. ಹೆಸರು ಮತ್ತು ಪ್ರತಿಷ್ಠೆಗಾಗಿ ನಮ್ಮ ಮನಸ್ಸಿನ ಶಾಂತಿ,ಸಮಾಧಾನ ಮತ್ತು
ದೇಹದ ಆರೋಗ್ಯವನ್ನು ಬಲಿಕೊಡುತ್ತೇವೆ. ಕೊನೆಗೊಂದು ದಿನ ಜೀವನ ಸಾಧನೆಯನ್ನು ವಿಶ್ಲೇಷಿಸಿದಾಗ
ಬಿಟ್ಟು ಹೋಗಲು ಕೋಟಿ ಇದ್ದರು, ಜೊತೆ ಒಯ್ಯುವ ಬುತ್ತಿ ಮಾತ್ರ ಖಾಲಿ-ಖಾಲಿ.
ನಾವು ಎಡವಿದ್ದೆಲ್ಲಿ ಎಂದು ಪ್ರಾಮಾಣಿಕವಾಗಿ ಚಿಂತಿಸಿದಾಗ
ತಿಳಿಯುವುದು, ಅದೇ ನಾವು ಮಾಡಿದ ಬಹುದೊಡ್ಡ ತಪ್ಪು. ಈ ಜಗತ್ತಿನಲ್ಲಿ ಯಾರ್ಯಾರೋ ಯಾವುದ್ಯಾವುದೋ ಸ್ಥಾನ-ಮಾನಗಳಲ್ಲಿ
ಇರುತ್ತಾರೆ. ಅದು ಅವರವರ ಪ್ರಾರಬ್ಧ ಮತ್ತು ಪುರುಷಾರ್ಥದ ಸಮನ್ವಯ ಬಿಂದುವಿಗೆ ಅನುಗುಣವಾಗಿರುತ್ತದೆ.
ಅವರನ್ನು ಕಂಡು ನಾವು ಮತ್ಸರ ಪಡುವುದು ಅಥವಾ ಹೀನ ಭಾವವನ್ನು ಹೊಂದುವುದು ಎಷ್ಟು ಸರಿ? ಕೆಲವೊಮ್ಮೆ
ನಮ್ಮ ಸುತ್ತ-ಮುತ್ತಲಿನವರು ನಮ್ಮ ಕಣ್ಮುಂದೆಯೇ ನಮ್ಮನ್ನು ದಾಟಿ ಮುಂದೆ ಸಾಗುತ್ತಾರೆ, ಲೌಕಿಕ
ಮಜಲುಗಳನ್ನು ಸರಸರನೆ ಹತ್ತುತ್ತಾರೆ. ಆಗ ಅದೆಷ್ಟೋ ಬಾರಿ ನಾವು ಕೂಡ ಅಸಮಾಧಾನ ಪಟ್ಟು, ಎಲ್ಲವನ್ನು
ಮರೆತು ಅವರನ್ನು ಹಿಂದೆ ಹಾಕಲು ಅಥವಾ ಕಾಲು ಎಳೆಯಲು ಮುಂದಾಗುತ್ತೇವೆ. ನಾವು ನಮ್ಮ ಮಾನಸೀಕ ಸಂತುಲನೆಯನ್ನು ಕಳೆದುಕೊಳ್ಳದೆ
ನಮ್ಮ ಮೂಲ ಸ್ವಭಾವವನ್ನು ನಮ್ಮ ಅಲೌಕಿಕ ಗುರಿಯನ್ನು ನೆನೆದು ಮುಂದೆ ಸಾಗಬೇಕು. ಆ ಜ್ಞಾನದ ಬೆಳಕು
ನಮಗೆ ಧೈರ್ಯ, ಆತ್ಮವಿಶ್ವಾಸ, ಮಾನಸಿಕ ಸ್ಥಿರತೆ ಮತ್ತು ಸಮಾಧಾನವನ್ನು ಕೊಡುತ್ತದೆ.
ಜೀವನ ಸಂತುಷ್ಟಿಯ ರಹಸ್ಯ ಒಂದಿದೆ.
ಆಧ್ಯಾತ್ಮಿಕವಾಗಿ ಪರಮಾತ್ಮನ ಸನೀಹರಾಗುವುದು, ಆತನ ಪ್ರೀತಿಗೆ ಪಾತ್ರರಾಗುವುದು ಮತ್ತು
ಕೊನೆಯದಾಗಿ ಮುಕ್ತಿಯನ್ನು ಹೊಂದುವುದು ಒಂದು ಆತ್ಮದ ಅತಿ ಶ್ರೇಷ್ಠವಾದ ಗುರಿ. ಹೀಗಿರುವಾಗ ಜಗತ್ತಿನಲ್ಲಿ ಕೋಟ್ಯಾಂತರ ಜನ ನಮಗಿಂತ
ಶ್ರೀಮಂತರಿರಬಹುದು, ಲಕ್ಷಾಂತರ ಜನ ನಮಗಿಂತ ಬಹು ದೊಡ್ಡ ಸ್ಥಾನದಲ್ಲಿರಬಹುದು. ಅಮೇರಿಕೆಯ ಅಧ್ಯಕ್ಷನೆ ಇರಲಿ, ಭಾರತದ ಪ್ರಧಾನಮಂತ್ರಿಯೇ ಇರಲಿ, ಟಾಟಾ, ಅಂಬಾನಿಯರಂತಹ ಅಘರ್ಭ ಶ್ರೀಮಂತರೇ ಇರಬಹುದು ಆಧ್ಯಾತ್ಮಿಕ/ಅಲೌಕಿಕ ಮಾರ್ಗಕ್ಕೆ
ಬಂದಾಗ ಅವರು ಮತ್ತು ನಾವು ಎಲ್ಲರೂ ಒಂದೇ ಸ್ಥಾನದಲ್ಲಿರಬಹುದು ಇಲ್ಲವೆ ನಾವು ಅವರಿಗಿಂತಲೂ ಹಿರಿಯ
ಸ್ಥಾನದಲ್ಲಿರಬಹುದು. ನಾವು ನಮ್ಮ ದೃಷ್ಟಿಕೋನವನ್ನು ಬದಲಿಸಬೇಕು ಅಷ್ಟೇ.
ಇದನ್ನು ಅರಿತಾಗ ನಮಗೂ ಅವರಿಗೂ ಇರುವ
ಅವಕಾಶಗಳು ಸರಿಸಮಾನ, ಅವರು ಲೌಕಿಕವಾಗಿ ಜಗತ್ತಿನಲ್ಲಿ ನಮಗಿಂತ ಮುಂದೆ ಇರುವುದರಿಂದ ಅವರಿಗೆ ಯಾವುದೇ ಹೆಚ್ಚಿನ
ಪರಿಗಣನೆ ಅಥವಾ ನಮಗಾಗಿ ಯಾವುದೇ ತಾರತಮ್ಯ ಇರುವುದಿಲ್ಲ ಅನ್ನುವ ಪರಿಜ್ಞಾನ ಮೂಡುತ್ತದೆ. ನಾವು ಸರಿಯಾದ
ದಾರಿಯಲ್ಲಿದ್ದೇವೆ ಮತ್ತು ಈ ದಾರಿಯಲ್ಲಿ ನಮ್ಮ ಗುರಿತಲುಪುತ್ತೇವೆ ಎನ್ನುವ ವಿಶ್ವಾಸ
ಉಂಟಾಗುತ್ತದೆ. ಈ ಅರಿವು ನಮ್ಮಲ್ಲಿ ಶಾಂತಿ, ಸಮಾಧಾನ ಮತ್ತು ಧೃಢತೆಯನ್ನು ಮತ್ತು ಆ ಭಗವಂತನಲ್ಲಿ ಅತೀವ ನಂಬಿಕೆ, ಪ್ರೀತಿ ವಿಶ್ವಾಸಗಳನ್ನು ಮೂಡಿಸುತ್ತದೆ.
ಅದೇ ನಮ್ಮ ಜೀವನ ಸಾಕ್ಷಾತ್ಕಾರಕ್ಕೂ ಮತ್ತು ಆತನ ಸಾಮಿಪ್ಯಕ್ಕೂ ನಾಂದಿಯಾಗುತ್ತದೆ.
-- ಕೆ. ಕಲ್ಯಾಣ
No comments:
Post a Comment