ಕಲ್ಲೀನ ಮೂರ್ತ್ಯಾಗ ಭಿತ್ತಿಯ ಚಿತ್ರದಾಗ ಚಂದಾಗಿ ಕಾಣುವವನ
ನೀ ದ್ಯಾವರಂತ ತಿಳಿಯ ಬ್ಯಾಡವೋ ತಮ್ಮ
ಅವನಿಗೆ ಕಣ್ಣಿಲ್ಲ, ಕರುಳಿಲ್ಲ, ಕಿವಿ, ಹೃದಯ ಮೊದಲಿಲ್ಲ
ಇದ್ದರು ಅಲ್ಲೇನು ಹುರುಳಿಲ್ಲವೋ ತಮ್ಮ ||
ಅಲ್ಲಿಹನು, ಇಲ್ಲಿಹನು ಮನದೊಳಗ ಬೆರೆತಿಹನು
ಎಂದೆಲ್ಲ ನೀ ಅಂದಕೊ ಬ್ಯಾಡಲೋ ಹುಚ್ಚ
ಕುರಿ, ಕೊಳಿಯನೆಲ್ಲ ಕುಣಿ-ಕುಣಿದು ತಿನ್ನೊನು
ಚಿತ್ತಕ್ಕೆ ಚಿಂತೆಯ ಚಿತೆ ಹಚ್ಚಿ ಒಳಗೊಳಗೆ ಸುಡುವವನು
ದ್ಯಾವರಲ್ಲವೋ ತಮ್ಮ ||
ಆರಿದ ಬಾಯೋರ ಕಣ್ಣಾಗ ನಿಲ್ಲದ ಮಳೆಯಾಗಿ ಸುರಿಯೋನು
ಮೈ ಮುಚ್ಚಿ ಕೊಳ್ಳೋಕೆ ಬಡಿದಾಡೋರ ಕಂಡು ಅಣಕಿಸೋನು
ಕಷ್ಟದ ಸುಳಿಗಾಳಿಗೆ ಒದ್ದಾಡೋರ ನೋಡ್ಬಿಟ್ಟು ಬಿದ್ದು ಬಿದ್ದು ನಗುವವನು
ದ್ಯಾವರಲ್ಲವೋ ತಮ್ಮ ||
ಸಿರಿವಂತರ ಕಾಲಹಿಡಿದು ಕೆಸರಿಗೆ ಎಳೆಯೋನು
ಬಡವರ ಬೆನ್ನ ಬಗ್ಸಿ ಬೆವರ್ನೀರ ಕುಡಿಸೋನು
ಮಕ್ಕಳ ಕನಸನ್ನ ಮುರಿದ್ದೊಮ್ಮೆ ಅಳಿಸೋನು
ಒಲವಲ್ಲಿ ಒಲಿದೆರಡು ಹೃದಯಕ್ಕೆ ಅಡ್ಡಹಾಕಿ ಕುರೋನು
ದ್ಯಾವರಲ್ಲವೋ ತಮ್ಮ ||
ಬ್ಯಾನ್ಯಂತ, ಬ್ಯಾಸರಂತ, ಸೋಲಂತ, ಸಾವಂತ
ಒಂದಲ್ಲೊಂದು ಗಾಳದಲಿ ನಮ ಹಿಡಿದ-ಹಿಡಿದು ಪೀಡಸೋನು
ತನ್ನ ಮೋಹ, ಮದ, ಮತ್ಸರ, ಅಹಂಕಾರ, ಸಿಟ್ಟೆಂಬ
ಬ್ರಹ್ಮಾಸ್ತ್ರಗಳನೆಲ್ಲ ಈ ಬಡ ಜೀವಗಳ ಮೇಲೆ ಬಿಟ್ಟ-ಬಿಟ್ಟು ಕೊಲ್ಲೋನು
ದ್ಯಾವರಲ್ಲವೋ ತಮ್ಮ ||
ಕೇಳದೆ ಕೊಡುವವನು, ಕೊಟ್ಟೊಮ್ಮೆ ಬೇಡುವವನು
ಕೊಡದಿದ್ರ ಸಿಡುಕೋನು, ಕೊಟ್ಟಿದ್ದು ಕಿತ್ತುಕೊಳ್ಳೋನು
ಕೊಟ್ಟಿದ್ದು ಸಾಲದಂತ ಮತ್ತ ಮತ್ತೆ ಕಾಣಿಕೆ ಕೇಳೊನು
ನಮ್ಮ ಭ್ರಷ್ಟ ರಾಜಕಾರಣಿಗಳ ತರಹ ಆಡೋನು
ದ್ಯಾವರಲ್ಲವೋ ತಮ್ಮ ||
ಕಾಡ-ಬೇಡಿ ಕೊಲ್ಲೋನು, ತನ್ನ ಮನದಂತೆ ಕುಣಿಸೋನು
ತನಗೆ ಒಪ್ಪಾದ್ರೆ ಒಲಿವವನು, ಇಲ್ದಿದ್ರ ಮುನಿವವನು
ನಮ್ಮ ತಪ್ಪಿಗೆ ಕಿವಿ ಹಿಂಡೋನು, ತನ್ ತಪ್ಪಿಗೆ ತೊಡೆ ತಟ್ಟಿ ನಿಲ್ಲೋನು
ಪ್ರೇತಿಗೆ ಬೆಲೆ ಕೊಡದೋನು, ತನ್ ಮಾತೆ ಕೊನೆಯಂತ ಮೆರೆಯೋನು
ದ್ಯಾವರಲ್ಲವೋ ತಮ್ಮ ||
ಮನಸಿಗೆ ಮುರಿದ ಹಾಕಿ, ಭಾವಕ್ಕೆ ಬರಿ ಹಾಕಿ
ಕನಸಿಗೆ ಕಲ್ಲ ಹಾಕಿ, ಗಾಯಕ್ಕೆ ಉಪ್ಪ ಹಾಕಿ
ವೇದನೆಗೆ ರಾಗ ಹಾಕಿ, ಬಿಕ್ಕಳಿಕೆಗೆ ತಾಳ ಹಾಕಿ
ಬಳಲಿದ ಜೀವಕ್ಕೆ ನೋಡೊಮ್ಮೆ ತಕ ಥೈ ಕುಣಿಯೋನು
ದ್ಯಾವರಲ್ಲವೋ ತಮ್ಮ ||
ಅವ ದೇವರಂದ್ರ ಆ ಹುಸಿ ಪಟ್ಟ ಅವನೇನೆ ಇಟ್ಕೊಳ್ಳಲಿ
ಈ ಮಾನವರ ಪರದಾಟ ತಾ ನೋಡಿ ಅನಂದ ಪಟ್ಕೊಳಲಿ
ಇದು ಅವನಿಗೆ ಸಮಾಧಾನ ತರೋದಾದ್ರೆ ತಂದ್ಕೊಡಲಿ
ಯಾಕಂದ್ರೆ ಹಿಂಗೆಲ್ಲ ಆಡೋನೇ ಈ ಕಾಲದಲ್ಲಿ ದ್ಯಾವರಂತಲ್ಲೋ, ತಮ್ಮಾ? ||
-- ಕಲ್ಯಾಣ ಕುಲ್ಕರ್ಣಿ
No comments:
Post a Comment