Pages

Sunday, February 27, 2011

ಬಕ್ರಾ...!


"ಏನು? ಬಕ್ರಾ ನಾ!" ಅಂತ ಮುಖ ಕೆಡಿಸಿಕೊಳ್ಳಬೇಡಿ. ಇಲ್ಲಿ ನಾನು, ಎಮ್ ಟಿವಿ ಬಕ್ರಾ ಇಲ್ಲ ಉದಯ ಟಿವಿಯ ಕುರಿಗಳು ಸರ್ ಕುರಿಗಳು ಕಾರ್ಯಕ್ರಮದ ಬಗ್ಗೆ ಏನೊ ಚರ್ಚೆ ಮಾಡ್ತಿನಿ ಅನ್ಕೊಂಡ್ರ? ಇಲ್ಲಾಂದ್ರೆ ಕೆಲವೊಂದು ಸಾರಿ, ಕೆಲವು ಪರಿಸ್ಥಿತಿಗಳು, ಅಥವಾ ಕೆಲವೊಬ್ರು ನಮಗೆ ನಾಮ ಹಾಕೋದ್ರ ಬಗ್ಗೆ ವಿಮರ್ಷೆ ಮಾಡ್ತಿನಿ ಅಂತಿರ್ಬೇಕು ಅಲ್ಲಾ?

ನಾನು ವರ್ಣನೆ ಮಾಡಕ್ಕ ಹೊರಟಿರೋದು ಈ ಥರದ ಯಾವ ಕುರಿಯ/ಬಕ್ರಾ ಬಗ್ಗೆನು ಅಲ್ಲಾರಿ. ನಮ್ಮ ಬಕ್ರಾನೇ ಬೇರೆ, ಅದರ ವೈಶಿಷ್ಠ್ಯವೆ ಬೇರೆ. ನಮ್ಮ ರೇಡಿಯೊ-ಸಿಟಿ ನ ಲಿಂಗೊ-ಲೀಲಾ ಅವರ ಕನ್ನಡ ಸ್ಲ್ಯಾಂಗಲ್ಲಿ (ಒರಟು ಪದದಲ್ಲಿ) ಇದರ ನಿವ್-ಗನ್ನಡದ(ಆಂಗ್ಲೊ-ಕನ್ನಡ) ಅರ್ಥ ಹೇಳೋದಾದ್ರೆ ಬಕ್ರಾ = ಸಾಫ಼್ಟವೇರ್ ಎಂಜಿನೀಯರ್ ಅಂತ.

"ಏನ್ರಿ ಹೀಗೆ ಹೇಳ್ತಿದಿರಾ ನೀವೂಸಾಫ಼್ಟವೇರ್ ಎಂಜಿನೀಯರ್ ಎಲ್ಲಿ, ಬಕ್ರಾ ಎಲ್ಲಿ? ಬರೀಬೇಕು ಅಂತ ಏನೇನೊ ಬರೆದು ನಿಮ್ಮ ತಲೇನು ಕೆಡಿಸ್ಕೊಂಡು ಬೇರೆಯವರ ತಲೆಗು ಹುಳಾ ಬಿಡಬೇಡಿ. ಅವರಿಗೆ ತಂತ್ರ ಗ್ನಾನ (ಟೆಕ್ನಿಕಲ್ ನಾಲೇಜ್) ಇರುತ್ತೆ, ಏನೆಲ್ಲ ಅವಿಷ್ಕಾರ ಮಾಡಿದಾರೆ, ಮಾಡ್ತಿದಾರೆ. ನಿಜವಾದ ಅರ್ಥದಲ್ಲಿ ಹೇಳೊದಾದ್ರೆ ನಮ್ಮ ಇಂದಿನ ಆಧುನಿಕ ಜಗತ್ತಿನ ಕೊಡುಗೆಗೆ ಆವರೇ ಮೂಲ ಕಾರಣರು. ನಿಮ್ಮ ಮಾತಿಗೆ ನಾವು ಒಪ್ಪೋದಿಲ್ಲ" ಅಂತಿರಾ?

ರಿ...ರೀ..., ಸ್ವಲ್ಪ... ಸ್ವಲ್ಪ ತಡಿತೀರಾ...!  ನೀವು ಹೇಳಿರೋದು ನೂರಕ್ಕ್ ನೂರು ಸತ್ಯ. ಇದರಲ್ಲಿ ದೂಸರಾ ಮತೇ ಇಲ್ಲ. ಸದ್ಯಕ್ಕೆ ಇಲ್ಲಿ ಅವರ ಕೊಡುಗೆಗಳನ್ನ ಒಂದು ಚುರು ಪಕ್ಕಕ್ಕಿಟ್ಟು, ಜಗತ್ತು (ಬೇರೆಯವರು) ಅವರ ಬಗ್ಗೆ ಏನು ಅನ್ಕೊತಾರೆ ಅಂತ ಯೋಚಿಸಿದ್ರೆ ನಿಮಗೆ ಇದರ ವಾಸ್ತವ ಗೊತ್ತಾಗಬಹುದು. ಙ್ನಾನದಲ್ಲಿ (ನಾಲೇಜಲ್ಲಿ) ಅವರಿಗೆ  ಸರಿಸಾಟಿ ಸಿಗೋದು ಕಷ್ಟ, ಆದ್ರೆ ಲೌಕಿಕ ವ್ಯವಹರದಲ್ಲಿ ಮಾತ್ರ ೧೦೦ಕ್ಕೆ ೯೦ (೯೦/೧೦೦) ಮಂದಿ ಹಿಂದೇನೆ. ಇದರ ಲಾಭ ಬೇರೆಯವರು ತಗೊಂಡು ಅವರನ್ನ  ಬಕ್ರಾ ಮಾಡ್ತರೆ. ನೀವು ಸಾಫ಼್ಟವೇರ್ ಎಂಜಿನೀಯರ್ ಆಗಿದ್ರೆ ಇದರ ಅನುಭವ ನಿಮಗೂ ದಿನ ನಿತ್ಯದ ಲೈಫಲ್ಲಿ ಆಗಿರುತ್ತೆ.

ಇಲ್ಲಿ ನನ್ನ ಗೆಳೆಯರ (ಸಾಫ಼್ಟವೇರ್ ಎಂಜಿನೀಯರ್‌ಗಳ) ಕೆಲ ಅನುಭವಗಳ ಹಾಸ್ಯನ ಮೆಲಕು ಹಾಕೋಣ ಬನ್ನಿ.

ಒಂದೇರಡು ವರ್ಷಗಳ ಹಿಂದೆ ನನ್ನ ಸ್ನೇಹಿತ ಸತ್ಯ, ಬಕ್ರಾ ಅಗಿದ್ದು ಹೀಗೆ. ಅವನು ಹೇರ್-ಕಟ್‌ಗೆ ಅಂತ ಮಲ್ಲೇಶ್ವರಮ್‍ನ ಹದಿನೈದನೇ ಕ್ರಸಲ್ಲಿರೊ ಒಂದು ಅಂಗಡಿಗೆ ಹೋಗ್ತಿದ್ದ, ಪ್ರತಿ ಸಾರಿ ಅಂಗಡಿಯವನು ಹೇರ್-ಕಟ್‌ಗೆ ಅಂತ ೨೫ ರೂಪಾಯಿ ಮತ್ತು ಶವಿಂಗ್‌ಗೆ ಅಂತ ೧೫ ರೂಪಯಿ ತಗೊಳ್ತಿದ್ದನಂತೆ. ಒಂದುಸಾರಿ ಅಂಗಡಿಯವನು ಮತಾಡ್ತಾ ಇವನ ಕೆಲಸದ ಬಗ್ಗೆ ತಿಳಿಕೊಂಡನಂತೆ. ಯಾವಾಗ ಅಂಗಡಿಯವನಿಗೆ ಇವನು ಸಾಫ಼್ಟವೇರ್ ಎಂಜಿನೀಯರ್ ಅಂತ ಗೊತ್ತಯಿತೊ ಅವಾಗಿಂದ ಅವನ ಬೆಲೆಗಳು ಬದಲಾದ್ವಂತೆ(ರೇಟ್ಸ್ ಚೆಂಜ್). ಆಗಿಂದ ಹೇರ್-ಕಟ್‌ಗೆ ಅಂತ ೪೦ ರೂಪಾಯಿ ಮತ್ತು ಶವಿಂಗ್‌ಗೆ ಅಂತ ೨೫ ರೂಪಯಿ ಮಾಡಿದ್ನಂತೆ. ಸತ್ಯ, ನೀವು ಬೇರೆಯವರಿಗೆ ಹಳೆ ಬೆಲೆನೆ (ರೇಟ್ಸ್‌ಲ್ಲೆ) ತಗೋಳ್ತಿರ ಅದ್ರೆ ನನಗೆ ಮಾತ್ರ ಯಾಕೆ ಜಸ್ತಿ ಅಂತ ಕೇಳಿದ್ದಕ್ಕೆ, ಅಂಗಡಿಯವನು ಹೇಳಿದ್ದು, ಸರ್, ಅವರಿಗೆ ಹೇರ್-ಕಟ್ ಮಾಡೋನು ಹೊಸಬ, ನನ್ನ ಬಗ್ಗೆ ನಿಮಗೆ ಗೊತ್ತೇ ಇದೆ ಅಲ್ವಾ, ಅಲ್ಲಿ ಶೇವಿಂಗ್‌ಗೆ ಬಳಸೋದು ಮಾಮೂಲಿ ಬ್ಲೇಡು ಮತ್ತು ಮಾಮೂಲಿ ಕ್ರೀಮು. ಸರ್ ನನಗೆ ಗೊತ್ತು ನೀವೇನು, ನಿಮ್ಮ ಇಮೇಜ್ ಏನು ಅಂತ, ಅದಕ್ಕೆ ಸರ್ ಈ ಬದಲಾವಣೆ/ಭಿನ್ನತೆ(ಡಿಫರೆನ್ಸ್)" ಅಂದ್ನಂತೆ.

ಪಾಪ ನನ್ನ ಸ್ನೇಹಿತ ಶೇವ್ ಮಾಡಿದ ತಲೆಗೆ ಬಿಟ್ಟಿ (ಫ್ರೀ) ಕಿರೀಟ ಹಕಿಸ್ಕೊಂಡು, ಬಿಸಿ ತುಪ್ಪನ ನುಂಗಕ್ಕೂ ಆಗದೆ, ಉಗಳಕ್ಕೂ ಆಗದೆ ಬಂದು ಬಿಟ್ಟನಂತೆ. ಆದ್ರೆ ಅವನ ಪ್ರಶ್ನೆ, ಒಂದು ಬ್ಲೇಡ್ ಬದಲಾಯಿಸಿದ ಮಾತ್ರಕ್ಕೆ ಬೆಲೆಗಳು ಇಷ್ಟೊಂದು ಬದಲಾಗುತ್ವಾ ಅನ್ನೊ ಪ್ರಶ್ನೆಗೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಆಂದಿನಿಂದ ಅವನು ತನ್ನ ಹೇರ್-ಕಟ್ ಅಂಗಡಿನೇ ಬದಲಾಯಿಸಿ ಬಿಟ್ಟನಂತೆ. ಮತ್ತೆ ಅಲ್ಲಿಂದ ಯಾವತ್ತು ಅನಾವಷ್ಯಕವಾಗಿ ತನ್ನ ಕೆಲಸದ ವಿವರಗಳನ್ನ ಅವರಿವರಿಗೆ ಕೊಡೊದಿಲ್ವಂತೆ.

ಇನ್ನು ನಮ್ಮ ರೂಮ್‌ಮೇಟ್ ಪ್ರಭಾಕರನ ವಿಷಯ ಏನಂದ್ರೆ, ಮೊನ್ನೆ ಅವನು ಎರಡು ದಿವಸದಿಂದ ಹೊಟ್ಟೆ ನೋವಾಗ್ತಿದೆ ಅಂತ ಬೆಂಗಳೂರಿನ ಖಾಸಗಿ (ಪ್ರೈವೇಟ್) ಆಸ್ಪತ್ರೇಲಿ (ಹಸ್ಪಿಟಲ್‌ನಲ್ಲಿ) ಒಂದರಲ್ಲಿ ಪರೀಕ್ಷೆ ಮಾಡಿಸಕ್ಕೆ ಹೋಗಿದ್ನಂತೆ. ಆಗ ವೈದ್ಯರು ಇವನ ನೋವು/ತೊಂದರೆಗಳ ಬಗ್ಗೆ ವಿಚಾರಿಸ್ತ, ಎಲ್ಲಿ ಕೆಲ್ಸ ಮಾಡೋದು, ಏನು ಕೆಲ್ಸ ಮಡೋದು ಅಂತ ಕೇಳಿದ್ರಂತೆ. ಆಗ ಈ ನಮ್ಮ ಮುಗ್ಧ ಹುಡುಗ (ಇನ್ನೊಸೆಂಟ್ ಬೇಬಿ) ಸತ್ಯ ಹರೀಶ್ಚಂದ್ರನ ತರಹ ಇದ್ದಿದ್ನ ಇದ್ದ ಹಾಗೆ ಹೇಳಿ ಬಿಟ್ನಂತೆ. ಆವನಿಗೇನು ಗೊತ್ತು, ಎದುರುಗಡೆ ವೈದ್ಯನ ರೂಪದಲ್ಲಿರೋದು ನಕ್ಷತ್ರಿಕ/ವಿಷ್ವಾಮಿತ್ರ ಅಂತ. ಅವನು ಬೇಕಾಗ್ದಿರೊ ಪರೀಕ್ಷೆಗಳನ್ನೆಲ್ಲ (ಟೆಸ್ಟ್) ಬರೆದು, ತರಕಾರಿ ತಿನ್ನದೆ ತಿಂಗಳು ಕಳೆದಿದ್ದವನಿಗೆ ಎರಡು ದಿನಕ್ಕಾಗೊಷ್ಟು ಮಾತ್ರೆಗಳನ್ನು ವೆಜಿಟೇಬಲ್ ತರಹ ಬರೆದು ಕೈಗಿಟ್ಟು ನಾಳೆವರೆಗೆ ರಿಪೋರ್ಟ್ ತಂದು ತೋರಿಸು. ಆರೊಗ್ಯದಲ್ಲಿ ಯಾವುದೇ ವ್ಯತ್ಯಾಸ ಕಣಿಸ್ದಿದ್ರೆ ಅಡ್ಮಿಟ್ ಆಗಬೇಕಾಗುತ್ತೆ ಅಂತ ಹೇಳಿದ್ರಂತೆ. ಕೊನೆಗೆ ಯಾವುದಕ್ಕು, ಆರೊಗ್ಯದ ವಿಷಯದಲ್ಲಿ ಯಾವುದೇ ರಿಸ್ಕ್ ತಗೊಳ್ಳೊದು ಸರಿಯಲ್ಲ, ಆರೊಗ್ಯ ಇದ್ರೆ ಎಲ್ಲ, ಇಲ್ದಿದ್ರೆ ಏನಿದ್ರೂ ಏನು ಪ್ರಯೋಜನ ಅಂತ ಹೇಳಿ ಕೊನೆಗೆ ಒಂದು ಹುಳನ ಇವನ ತಲೆಲಿ ಬಿಟ್ಟು ಕಳಿಸಿದ್ರಂತೆ.

ಆಮೇಲೆ ಇವನು, ಎಲ್ಲಾ ಪರೀಕ್ಷೆಗಳನ್ನ ಮಾಡಿಸ್ಕೊಂಡು ರಿಪೋರ್ಟ್ ತಗೊಂಡು ಹೋದಾಗ, ವೈದ್ಯರು ಇವನಿಗೆ ಎರಡು ದಿವಸ ಆಸ್ಪತ್ರೇಲಿ ಆಡ್ಮಿಟ್ ಮಾಡಿಸ್ಕೊಂಡು ಚೆನ್ನಾಗಿ ದೋಚಿ, ಈಗ ಪರವಗಿಲ್ಲ ಅಂತ ಮನೆಗೆ ಕಳಿಸಿದ್ರಂತೆ. ಒಟ್ಟರೆ ಎರಡು ದಿನದ ಈ ಗೃಹಚಾರದಲ್ಲಿ ಇವನು ಕಳ್ಕೊಂಡಿದ್ದು ಹನ್ನೆರಡು ಸವಿರ ಚಿಲ್ಲರೆ (೧೨,೦೦೦+). ಅಂದಿನಿಂದ ಆಗಾಗ ರಾತ್ರಿ ಕನಸಲ್ಲಿ ಅಸ್ಪತ್ರೇನ, ಸ್ಟ್ರೆಚ್ಚರ್ನ ಕಂಡು ಹೆದರಿ ಬೆಚ್ಚಿ ಬೀದ್ದು ರಾತ್ರಿಯೆಲ್ಲ ಎದ್ದು ಕೂಡ್ತಾನೆ.

ಇನ್ನೂ ಕೆಲವು ಪ್ರಸಂಗಗಳು ಎಲ್ಲರ ಗಮನಕ್ಕೆ/ಅನುಭವಕ್ಕೆ ಬರುತ್ವೆ. ಆಟೋ ದವರು ನಮ್ಮನ್ನ ದೂರದಿಂದ್ಲೆ ಗಮನಿಸಿ, ನಮ್ಮ ಹಾವ-ಭಾವ, ವೇಷ-ಭುಷಣೆಗಳನ್ನ ಕಲೆ ಹಾಕಿ ಇವನು ಬಕ್ರಾ (ಸಾಫ಼್ಟವೇರ್ ಎಂಜಿನೀಯರ್) ಅಂತ ನಿರ್ಧಾರಕ್ಕೆ ಬಂದಿರ್ತಾರೆ. ಅದಕ್ಕೆ ನೀವು ಅವರಿಗೆ "ಎಮ್.ಜಿ. ರಸ್ತೆಗೆ ಬರ್ತಿರಾ?" ಅಂತ ಕೇಳ್ತಿದಂಗೇನೆ, "ಸರ್, ಒನ್ ಅಂಡ್ ಹಾಫ್ ಮೀಟರ್ ಕೊಡಿ, ಇಲ್ಲಾ, ಮೀಟರ್ ಮೇಲೆ ಒಂದು ಹತ್ತು ರೂಪಾಯಿ ಜಾಸ್ತಿ ಕೊಡಿ" ಅಂತ ಕೇಳ್ತಾರೆ. ಯಾಕಂದ್ರೆ ಅವರಿಗೆ ಗೊತ್ತು, ಇವನು ಹ್ಯಾಗೂ ಬಂದೆ ಬರ್ತಾನೆ ಅಂತ.

ತರಕಾರಿ ಅಂಗಡಿಯವರೂ ಸಹ "ಗುರು, ೫ ರೂಪಾಯಿಗೆ ಈ ಕಾಲದಲ್ಲಿ ಏನು ಬರಲ್ಲಾ ಗೊತ್ತಾ? ಕೊತ್ತಂಬರಿ ಸೊಪ್ಪು, ಒಂದು ಕಟ್ಟಿಗೆ ನಾವು ಕೊಂಡುಕೊಂಡು ತಂದಿರೋದೇ ೨೦ ರೂಪಾಯಿಗೆ ನಿನಗೆ ೫ ರೂಪಾಯಿಗೆ ಹ್ಯಾಗೆ ಕೊಡಲಿ" ಅಂತ ಹೇಳೋದು.

ಈ ತರಹ ಪ್ರತಿದಿನವೂ ಎಷ್ಟೊಂದು ಕಡೆ ನಮಗೆ ಗೊತ್ತಿದ್ದೂ-ಗೊತ್ತಿರದೆಯೂ ಅವರವರ ಹುದ್ದೆಗೆ (ಡೆಜಿಗ್ನೇಷನ್‌ಗೆ) ತಕ್ಕಂತೆ ಸರಕಾರದ ವಿವಿಧ ತೆರಿಗೆಗಳ (ಟ್ಯಾಕ್ಸ್) ಜೊತೆ (ಅನ್-ನೋಟಿಸ್ಡ, ಅನ್-ಕ್ಯಾಲ್ಕುಲೇಟೆಡ್) ಗಮನಕ್ಕೆ/ಗಣನೆಗೆ ಬಾರದ ಅದೆಷ್ಟೋ ತೆರಿಗೆಗಳನ್ನ (ಟ್ಯಾಕ್ಸ್) ಸಾಫ಼್ಟವೇರ್ ಎಂಜಿನೀಯರ್ ಇಮೇಜ್-ಗೋಸ್ಕರ ಕಟ್ತಾನೆ ಇರ್ತಿವಿ.

ಇಂದಿನ ನಮ್ಮ ಘನ ಸರಕಾರದ ಆಯ ವ್ಯಯದ ತೂಗುಯ್ಯಾಲೆಯ ೩೦% ರಿಂದ ೪೦% ಭಾಗ ಇವರಿಂದ (ಸಾಫ಼್ಟವೇರ್ ಇಂಡಸ್ಟ್ರೀಯಿಂದ) ಪಡೆದ ಹಣದಿಂದಲೆನೇ ತೂಗೋದು. ಆದ್ರೂ ಸರಕಾರದಿಂದ, ಜನರಿಂದ ಬಕ್ರಾ ಅಗೋದು ಮಾತ್ರ ನಮ್ಮ ಈ ಬಡಪಾಯಿಯೇ. ಕೆಲಸ ಇರಬೇಕಾದ್ರೆ ಹಮ್ ಸಾಥ್ ಸಾಥ್ ಹೈ ಅನ್ನೊ ಇವರು, (ರಿಸೆಷನ್‌ನಿಂದ) ಕೆಲಸ ಕಳ್ಕೊಂಡಾಗ ಹಮ್ ಆಪ್ಕೆ ಹೈ ಕೌನ್ ಅಂತಾರೆ. ಎಷ್ಟೊಂದುಸಾರಿ, ದಿನ-ರಾತ್ರಿ ಕಣ್ಣಿಗೆ ನಿದ್ದೆ ಇಲ್ಲದೆ ಗುರಿ ಮುಟ್ಟಕ್ಕೆ (ಪ್ರಾಜೆಕ್ಟ್ ಟಾರ್ಗೆಟ್ ಮೀಟ್ ಮಾಡಕ್ಕೆ) ಅಂತ ದುಡಿದು ಆರೋಗ್ಯ ಕಳ್ಕೊಂಡು, ಅರೋಗ್ಯ ಕೊಂಡುಕೊಳ್ಳೊ ಸ್ಥಿತಿ ತಲಪ್ತಾನೆ. ಇಷ್ಟೆಲ್ಲ ಆದ್ರೂ ಎಲ್ಲವನ್ನೂ, ಎಲ್ಲರನ್ನೂ ಮೌನವಾಗಿ ಸಹಿಸ್ಕೊಂಡು ಜೀವನ ಸರಿದೂಗಿಸೋಕ್ಕೆ ಬಡಿದಾಡೊ ನತದೃಷ್ಟ ಇವನು.

ನಿವು ಜೀತ ಪದ್ಧತಿ ಬಗ್ಗೆ ಕೇಳಿದ್ದಿರಾ? ಈ ಪದ್ಧತಿ ನಮ್ಮ ದೇಶದಲ್ಲಿ ಕೊನೆಗೊಂಡು ಹೆಚ್ಚು-ಕಮ್ಮಿ ೨೦ ರಿಂದ ೩೦ ವರ್ಷಗಳಾಗಿರಬೇಕು. ಇದು ಮುಖ್ಯವಾಗಿ ಕೃಷಿಕರಿಗೆ ಸಂಬಂದಿಸಿದ್ದು. ಇದರಲ್ಲಿ ಯಾವುದೇ ಕೃಷಿಕ ತನಗೆ ಹಣದ/ಧಾನ್ಯದ ಅಗತ್ಯ ಇದ್ದಾಗ ತನ್ನ ಭೂಮಿನ ಅಲ್ಲಿಯ ಸಾಹುಕಾರನ ಹತ್ತಿರ ಅಡವಿಟ್ಟು ಇಲ್ಲ ನೇರವಾಗಿ ಅವನಿಂದ ಹಣ ಪಡೆದು ಅವಷ್ಯಕತೆಗಳನ್ನ ಪೂರೈಸಿಕೊಂಡು ಅದರ ಬದಲಿಗೆ ಜೀವನ ಪೂರ್ತಿ ಆ ಸಾಹೂಕರನ ಭೂಮಿಲಿ/ಮನೆಲಿ (ಆ ಸಾಲ ತೀರೊವರೆಗು) ದುಡಿಬೇಕಿತ್ತು. ಈ ತರಹ ದುಡಿಯೊ ಆಳಿಗೆ/ಕೆಲಸಗಾರನಿಗೆ ಜೀತದ ಆಳು ಮತ್ತು ಈ ಪದ್ಧತಿನ ಜೀತ ಪದ್ಧತಿ ಅಂತಿದ್ರು.

ಇದನ್ನೆಲ್ಲಾ ಯಾಕೆ ಹೇಳ್ತಿದಿನಿ ಅನ್ಕೊಂಡ್ರಾ? ಅನ್ಯಾಯ, ಶೋಷಣೆಯ ಅಡಿಪಾಯದ ಮೇಲೇನೆ ನಿಂತಿದ್ದ, ಕೃಷಿ ಜೀತವೇನೋ ಈಗ ನಿಂತಿದೆ. ಆದ್ರೆ, ಈ ಹೊಸ ಯುಗದಲ್ಲಿ ಹೊಸ ತರಹದ, ಶರತ್ತುಗಳನ್ನ ಆಧರಿಸಿದ ಜೀತ ಪದ್ಧತಿ ಹುಟ್ಟಿಕೊಂಡಿದೆ. ಜನ, ಪದ್ಧತಿಯ ರೀತಿ, ನೀತಿಗಳು ಬದಲಾಗಿವೆ ಹಾಗು ಇದು ಈಗ ಕಾನೂನಿನ ಚೌಕಟ್ಟಿಗೂ ಒಳಪಟ್ಟಿದೆ. ಆದ್ರೆ, ಇದು ಕೆಲಸ ಮಾಡೊ ರೀತಿ ಮಾತ್ರ ಅದೆ ಹಳೆ ತರಹನೆ ಇದೆ.

ಇಂದಿನ ಕೃಷಿಕ ನಮ್ಮ ಸಾಫ಼್ಟವೇರ್ ಎಂಜಿನೀಯರ್ / ಖಾಸಗಿ ಕ್ಷೆತ್ರದ ಶ್ರಮಿಕ ವರ್ಗ (ಸಾಫ಼್ಟವೇರ್ ಎಂಜಿನೀಯರ್ / ಪ್ರೈವೇಟ್ ಸೆಕ್ಟರ್ ವರ್ಕಿಂಗ್ ಕ್ಲಾಸ್ಸ್), ಸಾಹುಕಾರನ ಸ್ಥಾನಾನ ಖಾಸಗಿ ಕ್ಷೇತ್ರದ ಬ್ಯಾಂಕಗಳು ಅಲಂಕರಿಸಿವೆ (ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್) ಮತ್ತು ಸಾಫ್ಟ್‌ವೇರ್ ಕಂಪನಿಗಳೇ ಜೀತದ ಭೂಮಿಯಾಗಿವೆ. ನಮ್ಮ ಸಾಫ಼್ಟವೇರ್ ಎಂಜಿನೀಯರ್ ಬ್ಯಾಂಕಗಳಿಂದ ತನ್ನ ಆಸೆ-ಅವಷ್ಯಕತೆಗಳನ್ನ ಈಡೇರಿಸಿಕೊಂಡು ನಂತರ ತನ್ನ ಸಾಲಕ್ಕನುಗುಣವಾಗಿ ಅದನ್ನ ತೀರಿಸೋಕೆ ಜೀತದ ಆಳಾಗಿ ತನ್ನ ಪರಿವೆ ತನಗಿಲ್ಲದ ಹಾಗೆ ದುಡಿಯುವನು. ಸಾಲ ಜಾಸ್ತಿ ಇದ್ದಷ್ಟು, ದುಡಿಮೆಯ ಅವಧಿಯೂ ಜಾಸ್ತಿ ಇರುತ್ತೆ. ಮನೆ-ಗಿನೆಗಂತ ಸಾಲ ಪಡೆದಿದ್ರಂತೂ ಮುಗಿಯಿತು, ದುಡಿಯೊ ಅವಧಿ ಮುಗಿಯೊವರೆಗು ದುಡಿತಾನೇ ಇರಬೇಕು. ಇದರಲ್ಲೂ ನಮ್ಮ ಅಮಾಯಕ ಸಾಫ್ಟ್‌ವೇರ್ ಎಂಜಿನೀಯರ್ರೇ ಬಕ್ರಾ. ಬ್ಯಾಂಕಗಳಿಗೆ ಗೊತ್ತು ಇವನಿಗೆ ಸಾಲ ಕೊಟ್ರೆ ನೀಯತ್ತಾಗಿ ದುಡಿದು ಹಿಂತಿರುಗಿಸ್ತಾನೆ ಅಂತ. ತಪ್ಪಿಸ್ಕೊಂಡ್ರೆ ಇವನಿಗೆ ಹಿಡಿಯೊದು ಸರಳ. ಅದಕ್ಕಾಗೆ ಬ್ಯಾಂಕಗಳು ಇವರನ್ನ ಹುಡುಕಿ, ಹುಡಿಕಿ ಬೇಡ ಅಂದ್ರು, ಅವಷ್ಯಕತೆನ ಹುಟ್ಟುಹಾಕಿ (ಕ್ರಿಯೇಟ್ ಮಾಡಿ) ಸಾಲ ಕೊಡೋದು, ಕ್ರೆಡಿಟ್ ಕಾರ್ಡ್ ಕೊಡೋದು. ಇದೆ ಬ್ಯಾಂಕಗಳಿಗೂ ಸುರಕ್ಷಿತವಾದ (ಸೇಫ್) ವ್ಯವಹಾರ (ಬಿಜಿನೆಸ್). ಅವರ ವ್ಯವಹಾರ (ಬಿಜಿನೆಸ್) ನಡೆಯೋದೆ ಇಂಥವರಿಂದ.

ವಿಚಿತ್ರ ಏನಂದ್ರೆ, ಇವನು ಬಡ್ಡಿ (ಇಂಟರೆಸ್ಟ್) ಕಟ್ಟಿ ಸಾಲವಾಗಿ (ಕ್ರೆಡಿಟ್ ಹಣ) ಪಡೆದ ಹಣದಿಂದ ಏನಾದ್ರು ಖರೀದಿಸಿದಾಗ ಆ ವ್ಯಾಪಾರಕ್ಕೆ ಪರೋಕ್ಷವಾಗಿ ಈತನೆ ಪ್ರೊತ್ಸಾಹಿಸಿದ ಹಾಗಾಯಿತು. ಪಡೆದ ಸಂಬಳದಿಂದ ತೆರಿಗೆ ಅಂತ ಅರ್ಧ ಹಣ ಸರಕಾರದ ಬೊಕ್ಕಸಕ್ಕೆ (ಟ್ರೆಜರಿಗೆ) ತುಂಬಿ, ನಂತರ ಏನಾದ್ರು ತೆಗೆದುಕೊಂಡ್ರೆ ಅದಕ್ಕೆ, ವ್ಯಾಟ್ (ವ್ಯಾಟ್) ಕಟ್ಟಿ, ಸೇವಾ ತೆರಿಗೆ (ಸರ್ವೀಸ್ ಟ್ಯಾಕ್ಸ್) ಕಟ್ಟಿ, ಮನೋರಂಜನಾ ತೆರಿಗೆ ಕೊಟ್ಟಿದ ಮೇಲೂ, ಎಲ್ರೂ ಅಳಿದುಳಿದ ಇವನನ್ನೆ ಕಿತ್ತು ತಿನ್ನಕ್ಕೆ ನೋಡೋದು. ಸಾಫ಼್ಟವೇರ್ ಎಂಜಿನೀಯರ್ ಅಂದ್ರೆ ಸಾಕು ಎದುರುಗಡೆಯವರು ನಮ್ಮನ್ನ ನೋಡೋ ದೃಷ್ಟಿ, ವ್ಯವಹರಿಸೊ ರೀತಿ ಎಲ್ಲವು ಥಟ್ಟನೆ ಬದಲಾಗಿ ಬಿಡುತ್ತೆ. ಘಜನಿ ಮೊಹಮ್ಮದ ಪದೇ ಪದೇ ಲೂಟಿ ಮಾಡಿದ ಸೋಮನಾಥ ಮಂದಿರದ ತರಹ ಇವನನ್ನ ನೋಡೊದು.

ಬೆಂಗಳೂರಂಥ ಬೃಹತ್ ನಗರದ ಅರ್ಧ ವ್ಯವಹಾರ (ಬಿಜಿನೆಸ್) ಇವರ ಮೇಲೆನೆ ನಿಂತಿರೋದು. ಖಾಸಗಿ ಸಾರಿಗೆ ವ್ಯವಸ್ಥೆ (ಪ್ರೈವೇಟ್ ಟ್ರಾನ್ಸಪೋರ್ಟ್), ಊಟ, ತಿಂಡಿ (ಕೇಟರಿಂಗ್), ರಿಯಲ್ ಎಸ್ಟೇಟ್, ದೊಡ್ಡ ವ್ಯಾಪಾರಿ ಮಳಿಗೆಗಳ ವ್ಯವಹಾರ (ಬಿಗ್ ಮಾಲ್-ಗಳ ಬಿಸಿನೆಸ್), ಎಲ್ಲಕ್ಕೂ ಚಾಲನೆ/ವ್ಯಪಾರ ಸಿಗೋದು ಇವನಿಂದ್ಲೆ. ಆದ್ರು ಎಲ್ಲರು ಇವನ್ನೆ ಬಕ್ರಾ ಮಾಡೋಕ್ಕೆ ನೊಡೋದು.

ಇನ್ನು ಈತನ ವಯಕ್ತಿಕ (ಪರ್ಸನಲ್) ವಿಷಯಕ್ಕೆ ಬಂದಾಗ, ಮೊನ್ನೆ ನಮ್ಮ ತರುಣ ಹೇಳಿದ ವಿಚರ ಹೇಳ್ತಿನಿ ಕೇಳಿ.

ಇದು ನಮ್ಮ ತರುಣ ಮದುವೆ ವಿಚಾರ. ಅವನು ಹೇಳೊದು ಕೇಳಿದ್ರೆ ನಗು ಬಂದು ಬಿಡುತ್ತೆ. ಇತ ನಮ್ಮ ಸಂಬಧಿಕರವನು, ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್. ಸಾಫ಼್ಟವೇರ್ ಎಂಜಿನೀಯರ್. ಅವನು ಹೇಳೊ ಪ್ರಕಾರ ಇತ್ತೀಚೆಗೆ ಹೆಣ್ಣಿನ ಕಡೆಯವರು, ಹುಡುಗ ಸಾಫ಼್ಟವೇರ್ ಎಂಜಿನೀಯರ್ ಅಂದಕೂಡಲೆ ಇನ್ನೂರು-ಮುನ್ನೂರು ಮೀಟರ್ ದೂರದಿಂದ ಓಡಿ ಹೋಗ್ತಾರಂತೆ. ಇಲ್ಲಾ ಜಾತಕ ಕಲೀತಿಲ್ಲ ಅಂತ ತಿಳಿಸಿ ಬಿಡ್ತಾರಂತೆ.

ಅಂಥದ್ರಲ್ಲೂ ಮೊನ್ನೆ ಕ್ರಿಷ್ಣಪ್ಪ ಅನ್ನೋರೊಬ್ರು ಬಿ.ಎ. ಓದಿರೊ ತಮ್ಮ ಎರಡನೆ ಹುಡುಗಿಗೆ ಗಂಡು ನೋಡಬೇಕು ಅಂತ ಮದುವೆ ಮಧ್ಯಸ್ಥ ವಾಮನಾಚಾರ್ಯರ ಜೊತೆ ಮನೆಗೆ ಬಂದಿದ್ರಂತೆ. ಆವರು ಬಂದಿದ್ದು ತರುಣನಿಗೆ ಮರಭುಮಿಯಲ್ಲಿ ಓಯೆಸಿಸ್ ಕಂಡ ಸಂತಸ.

ಬಂದವರು ಮನೇಲಿ ಆಥಿತ್ಯೋಪಚಾರ ಎಲ್ಲಾ ಸ್ವೀಕರಿಸಿದ ಮೇಲೆ ಹುಡುಗಿಯ ಅಪ್ಪ ಕೇಳಿದ್ದು "ನಿಮ್ಮ ಹುಡುಗ ಎಲ್ಲಿ ಕೆಲ್ಸಾ ಮಾಡೋದು? ವಿಪ್ರೊನಲ್ಲಾ, ಇನ್ಫ಼ೊಸಿಸ್‌ನಲ್ಲಾ? ಎಷ್ಟು ಸಂಪಾದಿಸೋದು ತಿಂಗಳಿಗೆ? ಯಾವ ಪ್ಲ್ಯಾಟ್‌ಫಾರ್ಮ್‌ನಲ್ಲಿ ಕೆಲಸ ಮಡೋದು?, ಮದುವೆ ಆದ್ಮೇಲೆ ಬೇರೆ ಮನೆ ಮಾಡಿ ಇರೋದಾ ಹ್ಯಾಗೆ? ವಿದೇಶ ಪ್ರವಾಸ ಮಾಡಿದ್ದಾನಾ ಯಾವತ್ತಾದ್ರು? ಹೋಗಿದ್ರೆ, ಯಾವ, ಯಾವ ದೇಶಗಳಿಗೆ ಹೋಗಿ ಬಂದಿದ್ದಾನೆ? ಇದು ಸ್ವಂತ ಮನೇನ ಅಥವಾ ಸೈಟ್ ಏನಾದ್ರು ಕೊಂಡುಕೊಂದಿದ್ದಾನಾ ಅವನ ಹೆಸರಲ್ಲಿ? ಎದುರ್ಗಡೆ ನಿಂತಿರೋದು ನಿಮ್ಮ ಕಾರಾ? ಯಾಕೆ ಕೇಳ್ತಾ ಇದಿನಿ ಅಂದ್ರೆ, ನನ್ನ ತಂಗಿಯ ಮೈದುನನ ಹೆಂಡತಿಯ ತಮ್ಮ ಮೊನ್ನೆ ಅಮೇರಿಕದಿಂದ ರಜೆಗಂತ ಬಂದಿದಾರೆ, ಅವರು ೩ ವರ್ಷದಿಂದ ಅಲ್ಲೆ ಇರೋದು, ಜಾವ ಪ್ಲ್ಯಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡೋದಂತೆ, ಜಾವಾಗೆ ತುಂಬಾ ಡಿಮ್ಯಾಂಡ್ ಇದೆಯಂತೆ?, ಒಂದು ಮನೆಕೂಡ ತಗೊಂಡಿದಾರಂತೆ, ಎರಡು ಕಾರುಗಳು ಇದೆಯಂತೆ, ಸ್ವಂತಕ್ಕೆ ಮತ್ತೆ ಅವರ ಹೆಂಡತಿಗಂತ ಬೇರೆ, ಬೇರೆ.....".

ಉಸಿರು ಬಿಡದೆ ಅವರು ಹಾಡ್ತಿರೊ ರಾಗನ ಕೇಳಿ, ಪಕ್ಕದ ರೂಮಲ್ಲಿ ನಿಂತ್ಕೊಂಡು ಕೇಳ್ತಿದ್ದ ತರುಣನಿಗೆ ಶಂಕರ್ ಮಹಾದೇವನ್ ಅವರ ಬ್ರೀದ್‌ಲೆಸ್ ಸಾಂಗ್ ನೆನಪಾಯಿತಂತೆ. ತನ್ನ ಈ ಇಪ್ಪತ್ತು ಸಾವಿರ ರೂಪಾಯಿ ಸಂಬಳದ ಸಾಫ಼್ಟವೇರ್ ಎಂಜಿನೀಯರ್ ಇಮೇಜಗೆ ಮನಸ್ಸಲ್ಲೆ ಬೈದುಕೊಂಡು, ಇನ್ನು ನನ್ನ ಮದುವೆ, ಆಗದ ಮಾತು, ಅನ್ಕೊಂಡು ಗೋಡೆಗೆ ತಲೆ ಜಜ್ಜಿ ಕೊಂಡನಂತೆ. ಇದನ್ನ ಕೇಳಿ ನಾನು ಮೂರು ದಿವಸ ನಕ್ಕಿದ್ದೇ ನಕ್ಕಿದ್ದು. ಈಗ್ಲೂ ಅವನನ್ನ ನೆನಪಿಸಿಕೊಂಡ್ರೆ ನಗು ಬರುತ್ತೆ.

ಇದನ್ನೆಲ್ಲ ಹೇಳಿ, ಓಂದುವರೆ ವರ್ಷದಿಂದ ತನ್ನ ಜೀವನ ನಿಂತಲ್ಲೇ ನಿಂತ್ಕೊಂಡು ಬಿಟ್ಟಿದೆ ಅಂತ ಕೊರಗ್ತಿದ್ದ.

ಮದುವೆ ಆದ ಸಾಫ಼್ಟವೇರ್ ಎಂಜಿನೀಯರ್-ಗಳ ವಿಚಾರ ಬಂದಾಗ, ಕೆಲವೊಬ್ರ ವಿಚಾರದಲ್ಲಿ ಅವರ ಮನೆಯವರೂ ಅವರನ್ನ ಕಾಣೊ ರೀತಿಕೂಡ ಅದೆ ತರಹ ತುಂಬಾ ಎತ್ತರದ ಆಸೆಗಳಿಂದ ಕೂಡಿರುತ್ತೆ, ಅವರ ಸುತ್ಲೂ ತುಂಬಾ ಆಸೆಗಳನ್ನ ಹೆಣೆದುಕೊಂಡಿರ್ತಾರೆ, (ಹೈ ಎಕ್ಸ್‌ಪೆಕ್ಟೇಷನ್ಸ ನಿಂದ ಕೂಡಿರುತ್ತೆ). ಇವುಗಳನ್ನ ಪೂರ್ತಿ ಮಾಡಕ್ಕೂ ಈವರೇ ಹೆಣಗಾಡಬೇಕಿರುತ್ತೆ.

ಅಯ್ಯೋ ಸಾಕ್ರಿ, ಈ ಸಾಫ಼್ಟವೇರ್ ಎಂಜಿನೀಯರ್ ಪುರಾಣ ಅಂತಿರಾ? ಈವಾಗ, ನನ್ನ ಬಕ್ರಾ ಎಂಬ ಶಬ್ದದ ನಿವ್-ಗನ್ನಡದ ಅನುವಾದ ಸರಿ ಇದೆ ಅನ್ನಿಸ್ತಿದೆಯಲ್ವಾ?

ಈ ರೀತಿ ಒಂದಲ್ಲ, ಎರ್ಡಲ್ಲಾ, ಎಲ್ಲದ್ರಲ್ಲೂ, ಎಲ್ಲರಿಂದ್ಲೂ (ತೋಳಗಳಿಂದ) ಒಂದಲ್ಲಾ ಒಂದುಸಾರಿ ಬಕ್ರಾ ಆಗೊ ನಮ್ಮ ಸರಳ ವ್ಯಕ್ತಿತ್ವದ (ಸಾಫ಼್ಟ ಇಮೇಜಿನ/ನೇಚರಿನ) ಸಾಫ಼್ಟವೇರ್ ಎಂಜಿನೀಯರ್ ತಂತ್ರಙ್ನಾನದ ವಿಷಯ ಬಂದಾಗ ಎಲ್ಲರನ್ನು ಮೀರಿ ನಿಲ್ತಾನೆ. ಹೃದಯವಂತಿಕೆಯಲ್ಲೂ ಇವನಿಗೆ ಸರಿ ಸಮಾನರಿಲ್ಲ.

ಏನೋ, ನಾನು ನನ್ನ ಬಳಗದ (ಹಿಂಡಿನ) ಬಗ್ಗೆ ಹೇಳಬೇಕು ಅನ್ನಿಸ್ತು ಅದಕ್ಕೆ ಇದೊಂದು ಚಿಕ್ಕ ಪ್ರಯತ್ನ ಮಾಡಿದಿನಿ. ತಪ್ಪಿದ್ರೆ ತಿದ್ದಿ, ವಾಸ್ತವ ಇದ್ರೆ ಹೊಟ್ಟೆಗೆ ಹಾಕ್ಕೊಳ್ಳಿ.

ಜೈ ಜವಾನ್, ಜೈ ಕಿಸಾನ್, ಜೈ ಸಾಫ಼್ಟವೇರ್ ಎಂಜಿನೀಯರ್!                                                                                                                                                                                                               




ಈ ಬಕ್ರಾಗಳ ಹಿಂಡಿನ ಸದಸ್ಯ,
ಕಲ್ಯಾಣ ಕುಲ್ಕರ್ಣಿ

No comments:

Post a Comment