Pages

Sunday, October 28, 2012

ಮೆಲುಕು


(ಯಾದೋಂ ಕಿ ಬಾರಾತ್ ನಿಕಲಿ ಹೈ ಆಜ್ ದಿಲ್ ಕೆ ದ್ವಾರೆ... )

" ಪಾಪು ಆರು-ವರಿ ಅಗ್ಲಿಗತ್ತದ ಏಳು, ಮತ್ತ ಸಾಲಿಗಿ ತಡಾ ಆಗ್ತದ..." ರಾಜಮಾತೆಯವರು ಅಂದ್ರೆ ನಮ್ಮ ಮಾತೃಶ್ರೀ ಯವರು ಧನ್ನೂರಿನ ಸಂಸ್ಥಾನದ ಕಿರಿಯ ರಾಜಕುಮಾರರಾದ ಕುಮಾರ ಕಲ್ಯಾಣರನ್ನು ಪ್ರೀತಿಯಿಂದ ಎಬ್ಬಿಸಿದರು.

ಗುಡಿಯ ನೋಡಿರಣ್ಣ, ದೇಹದ ಗುಡಿಯ ನೋಡಿರಣ್ಣ,ಗುಡಿಯ ನೋಡಿರಿದು ಪೊಡವಿಗೆ ಒಡೆಯನು ಅಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣ, ದೇಹದ ಗುದಯಾಯ ನೋಡಿರಣ್ಣ,"ಇದು ಆಕಾಶವಾಣಿಯ ಗುಲ್ಬರ್ಗಾ ಕೇಂದ್ರ ಇಲ್ಲಿಯ ವರೆಗೆ ತಾವು ಭಕ್ತಿ ಗೀತಾಂಜಲಿ ಕೆಳುತಿದ್ದಿರಿ". ಇನ್ನು ಸ್ವಲ್ಪವೇ ಸಮಯದಲ್ಲಿ ಅನಿತಾ ಗೋತಗಿ ಅವರಿಂದ ವಿಚಾರ ದೀಪಿಕೆ ಪ್ರಸಾರವಾಗಲಿದೆ...

"
ಪಾಪ್ಯಾ ಏಳು, ನಿಂಗ ಮಾರಿ ತೊಳ್ಕೊಂಡು ಹಾಲ ಕುಡಿಲಿಕ್ಕೆ ಒಂದು ತಾಸ ಬೇಕು... ಏಳು, ಇಲ್ಲಂದ್ರ ನೀರ ತಂದು ಹಾಕ್ತೀನಿ ನೋಡು......" ಅಂತ Mrs . ಕುಲಕರ್ಣಿ ಅವರು ಮತ್ತ ಸ್ವಲ್ಪ ಸಿಟ್ಟಿನಾಗ ಹೇಳಿದ್ರು.
"
ಹಾಂ ಏಳ್ತಿನಿ, ಒಂದು ಐದು ನಿಮಿಷರೆ ನಿಂದರು, ಅಕ್ಕ ಎದ್ದಳೆನು?"
"
ಅಕಿಗಿ ಇವತ್ತ ಕ್ಲಾಸ್ ಇಲ್ಲ ಅಂತ. ನಿಂದೊಬ್ಬಂದೆ ಅದ ಸಾಲಿ ಇವತ್ತ, ನಡಿ, ಅವಾ, ರಿಕ್ಷಾದವಾ ಬರತಾನ ಇಷ್ಟ್ರಾಗ, ಏಳು
"

"
ಇಲ್ಲಿಯವರೆಗೆ ಬೆಂಗಳೂರು ಕೇಂದ್ರದ ಸಹ ಪ್ರಸಾರದಲ್ಲಿ ಪ್ರದೇಶ ಸಮಾಚಾರ ಕೇಳುತ್ತಿದ್ದೀರಿ", "ಇನ್ನು ಮುಂದೆ ಗಾಂಧೀ ಸ್ಪುರ್ಧೆ ಪ್ರಸಾರವಾಗಲಿದೆ".

"
ಸಾಡೇ ಸಾತ ಆಯಿತು ಎಳ್ತೆನಿಲ್ಲ ನೀ..."
"
ಅವಾಗೆ ಎದ್ದೀನಿ, ಹಲ್ಲ ತಿಕ್ಕೊಲಿಗತ್ತಿನಿ. ನನಗ ಇವತ್ತ ಹಾಲಿನ ಸರಿ ನಾಕು ಬಿಸ್ಕಿಟ ಬೇಕು ನೋಡು" ಹಂಗೂ ಹಿಂಗೂ ಹಾಲು ಕಿಡಿದು ಸ್ನಾನ ಮಾಡಿ ಬಂದಾಯಿತು...
ನನ್ನ ಸಾಲಿ ಡ್ರೆಸ್ ಎಲ್ಲಿ ಅವ? ಸಾಕ್ಸ್ ಒಗದಿಲ್ಲ? ಹೊಲಸ ಹಡಿ ಆಗ್ಯಾವ, ನಿನಗ ನಿನ್ನೆ ಗಿ ಅಂತ ಹೇಳಿಲ್ಲ ಏನು? ಹೋಗಚಕಡಿ...!"
ಯಹ ಆಕಾಶವಾಣಿ ಕಾ ವಿವಿಧ ಭಾರತಿ ಕಾ ಪ್ರಸಾರಣ ಹೈ ಅಬ ಆಪ ಚಿತ್ರಲೋಕ ಕಾರ್ಯಕ್ರಮ ಸುನೆಂಗೆ... "

"ಪಾಮ್, ಪಾಮ್, ಅರೆ ಕಲ್ಯಾಣಿ...." ರಿಕ್ಷಾವಾಲಾ ದಸ್ತಗೀರ ಬಹು ಪರಾಕ್, ಬಹುಪರಾಕ್ ಅಂತ ಕರಿಲಿಕ್ಕಿ ಶುರು ಮಾಡದ...
"ಅಪ್ಪಾ! ರಿಕ್ಷಾದವಾ ಬಂದ ನೋಡು ಆಗಳೇ, ಪೋಣೆ ಒಂಬತ್ತು ಆಗ್ಲಿಗತ್ತದ, ನಡಿ ಜಲ್ದಿ" "ಅನ್ನಾ-ಹುಳಿ ಬಡಸಿನಿ ನೋಡು, ಣು ಸಾವಕಾಶ, ನಾ ಹೇಳ್ತೀನಿ ಅವನಿಗಿ ಅಷ್ಟರಾಗ ಪ್ರಬುಧ್ಹಗ ಕರ್ಕೊಂಡು ಬಾ ಅಂತ"

"
ಅವ್ವ, ಅವ್ವಾ..."
"
ಏನಾಯಿತು ಈಗ?"
"
ಯಾಕೋ ತಲಿ ಬ್ಯಾನಿ ಆಗ್ಲಿಗತ್ತದ ನೋಡ?"
"
ಇಷ್ಟ್ಹೊತನ ಛೋಲೋ ನೆ ಇದ್ದಿ ಈಗ ಏನಾಯಿತು? ನಾಟಕ ಮಡ್ತೇನು? ಎರಡು ಬಳ್ಳೋಲಿ ಹಳಕ ತಿನು, ಎಲ್ಲಾ ಕಮ್ಮಿ ಆಗ್ತದ. ಖರೆ ನು ತಲಿ ಬ್ಯಾನಿ  ಇದ್ದ್ರ ಕಮ್ಮಿ ಆಗ್ತದ ಇಲ್ಲಂದ್ರ ಹಣೆ ಮ್ಯಾಲ ಎಲ್ಲಾ ಗುಳ್ಳಿ ಬರ್ತಾವ ನೋಡು"ಒಳಗೊಳಗೇ ಎದೆ ಒಂದು ಸಲ ಡಪ್ ಅಂತು, ಅಂತೂ ಚೇತರಿಸಿಕೊಂಡು  "ಇಲ್ಲಮ್ಮ, ನನಗ ಬಳ್ಳೋಲಿ ಭ್ಯಾಡ..., ನಾ ಸಲಿಗೆ ಹೋಗ್ತೀನಿ, ಆದ್ರ ಜಾಸ್ತಿ ಆಯಿತಂದ್ರ ಮಧ್ಯಾಣ ಮನಿಗಿ ಬರ್ತೀನಿ"

"
ಅರೆ, ಕಲ್ಯಾಣ ಭಾಯಿ... ಆಜಾವ್ ಯಾರ್"
ಸವಾರಿ ಅಂತೂ-ಇಂತೂ ಶಾಲೆಗೆ ಮುಟ್ಟಿತು.

"
ಶರಣು ನಿನ್ನ ಕಡಿ ಕೆಂಪಂದು ಪೆನ್ನ ಅದ ಏನು ಕೊಡು, ಒಂಬತ್ತನೇ ಪಾಠದ್ದು ಉತ್ತರ ಬರ್ದಿನಿ ಆದ್ರ ಪ್ರಶ್ನೆ ಬರದಿಲ್ಲ."
"
ಅಬೇ ನೀ ಯಾವಾಗ ನೋಡದರನು ನಂಬಲ್ಲೆ ತಗೋ ಪೆನ್ನ, ನೀ ಅವತ್ತ ಪೆಪರ್ಮಿಂಟ್ ಕೊಡು ಅಂದ್ರ ಕೊಟ್ಟಿ? ನಾ ಯಾಕ ಪೆನ್ನ ಕೊಡಲಿ ನಿಂಗ ಕೊಡಲ್ಲ ಹೋಗು"
"
ಕೊಡಲ ಹೋದ್ರ  ಹೋಗು, ನಂಬಲ್ಲಿ ಒಂದು ಚೀಲ ಪೆನ್ನ ಅವ ಮನ್ಯಾಗ"ಶರಣು ಹೇಳ್ದ, "ನಮ್ಮನ್ಯಾಗ ಎರಡು ಚೀಲ ಅವ, ಒಂದು ನೀಲಿದು, ಇನ್ನೊಂದು ಕೆಂಪಂದು ಮತ್ತ ಖರ್ರಂದು ಮತ್ತ ಹಸರಂದನು ಅವ"
"
ನಿನ್ನ ಕಡಿ ಎಷ್ಟವ ಅಲ್ಲ ನಂಬಲ್ಲಿ ಅದರ್ಕಿಂತ ಒಂದು ಹೆಚ್ಚೇ ಅವ"ಶರಣು ಚೇತರಿಸಿ ಕೊಂಡು "ನಮ್ಮ ಕಡಿ ಚುಕ್ಕಿ ಎಷ್ಟವ ಅಲ್ಲ ಅಷ್ಟು ಅವ"
"
ನಾ ಹೇಳಿಲ್ಲ, ನಿಮ್ಮ ಕಡಿ ಎಷ್ಟವ ಅದರ್ಕಿಂತ ಒಂದು ಹೆಚ್ಚಿಗಿ ಅಂತ"ಶರಣು ಹಂಗೆ ಕುದ್ದು, ಸಲ ಇರ್ಲಿ, ಮುಂದಿನ ಸಲ ನೋಡ್ಕೋತೀನಿ ಅಂತ ಸುಮ್ನಾದ.ಲಕ್ಷ್ಮಿ ಟೀಚರ್  "ರೂಲ್ ನಂಬರ್ 27 ,.... 27 " "ಕಲ್ಯಾಣಿ, ಎನ್ಮಾಡ್ಲಿತಿದಿ? ಯಕಡಿ ಅದ ನಿನ್ನ ಲಕ್ಷ್ಯ?"
"
ರಾಜ್ಯಾ, ಮಗನಾ, ಸುಮ್ಮ ಕೂಡಲೇ,   ಎಸ್, ಎಸ್...ಟೀಚರ್"ಟೀಚರ್ "ಹಾಜರಿ ತಗೊಮುಂದ ಆಟಾ ಮಾಡ್ಲಿಗತ್ತಿರಿ? ನಾಚಿಕಿ ಬರಲ್ಲ? ನಿವಿಬ್ರು ಅಲ್ಲಿ ಕ್ಲಾಸ್ ರೂಂ ಹೊರಗ ನಿಂದರ್ರಿ"
ಮುಂದಿನ ಸಬ್ಜೆಕ್ಟು ಇತಿಹಾಸದ್ದು. ಅದರಲ್ಲಿ ಎಲ್ಲೋ ಒಂದು ಕಡೆ ಶಿವಾಜಿಯ ಫೋಟೋ ಇತ್ತು. ಆಗ ಶಿವರಾಜ ಸರ್ ಅವರು ಭಾರತದ ಅಂದಿನ ಇತಿಹಾಸದಲ್ಲಿ ಶಿವಾಜಿಯ ಮಹತ್ವ ಮತ್ತು ಶಿವಾಜಿ ಮತ್ತು ಬಿಜಾಪುರದ ನವಾಬ ಅಫಜಲ ಖಾನರ ಮಧ್ಯ ನಡೆದ ಯುದ್ಧದಲ್ಲಿ ಶಿವಾಜಿ ನರ ರಾಕ್ಷಸ ಅಫಜಲ್ ಖಾನನ ಜೊತೆ ವೀರಾವೇಶ ದಿಂದ ಹೋರಾಡಿ ಅವನ ಎದೆ ಬಿರಿದು ಕೊಂದ ಕಥೆ ರೋಚಕವಾಗಿ, ಧ್ವನಿಯ ಏರಿಳಿತ ಹಾಗೂ ಹಾವ ಭಾವ ಗಳಿಂದ ಹೇಳಿದ ರೀತಿ ಎಂಥವನಲ್ಲಾದರೂ ಶಿವಾಜಿ ಹಾಗೂ ಭಾರತಾಂಬೆಯ ಮೇಲೆ ಪ್ರೀತಿ ಹುಟ್ಟಿಸುವಂತಿತ್ತು.

ನಮಗೆ ಮಧ್ಯಾನದ  ಊಟಕ್ಕೆ ಅಂತ ಒಂದು ಗಂಟೆ ವಿರಾಮ ಇರುತ್ತಿತ್ತು. ಊಟದ ನಂತರ ಮೈದಾನದಲ್ಲಿ ನಾವು ಆಡ್ತಾ ಇದ್ದ ಆಟಗಳಲ್ಲಿ ಮುಖ್ಯವಾದದದ್ದು ನಾನೇ ಹೆಣೆದಿದ್ದ ಭಾರತ- ಬ್ರಿಟಿಷ್ ಎಂಬ ಆಟ. ಇದರಲ್ಲಿ ಮುಖ್ಯವಾಗಿ ಎರಡು ತಂಡಗಳು ಇರುತಿದ್ವು ಒಂದು ಭಾರತದ ತಂಡ ಇನ್ನೊಂದು ಇಂಗ್ಲಿಷರದ್ದು. ಹ್ಯಾಗೆ ನಾನು ಯಾವಾಗಲು ಭಾರತದ ತಂಡದ ಕಡೆಗೋ ಹಾಗೆ ನಿರಂಜನ ಎಂಬ ಎತ್ತರದ ಹಾಗೂ ದಷ್ಟ-ಪುಷ್ಟ ಆಳಾದ ನನ್ನ ಮಿತ್ರ ಯಾವಾಗಲು ಪರಕೀಯರ ಸರದಾರ. 3 ರಿಂದ 6 ನೇ ತರಗತಿಯ ಮಧ್ಯ ನಾವು ಓದುತಿದ್ದುದರಿಂದ ನಮಗೆ ತುಂಬಾ ಪರಿಚಿತ ಬ್ರಿಟಿಷ್ ಅಧಿಕಾರಿ ಅಂದ್ರೆ ಕಿತ್ತೂರಿನ ರಾಣಿ ಜೊತೆ ಹೋರಾಡಿದ ಧಾರವಾಡದ ಥ್ಯಾಕರೆ ಸಾಹೇಬ. ನಿರಂಜನ ನಮ್ಮ ಥ್ಯಾಕರೆ ಸಾಹೇಬ. ನಂತರ ನಮಗೆ ಬೇರೆಯವರ ಪರಿಚಯವಾಗ್ತಾ ಇದ್ದಂತೆ ಅವರ ಹೆಸರಲ್ಲೂ ಒಬ್ಬನನ್ನ ಆಟಕ್ಕೆ ನೇಮಿಸ್ತಾ ಇದ್ವಿ. ನಾವು ಇತಿಹಾಸದಿಲ್ಲಿ, ಓದಿದ ಹಾಗೂ ಕೇಳಿ ತಿಳಿದ ಪ್ರಸಂಗಗಳೇ ನಮ್ಮ ನಾಟಕದ ವಿಷಯವಸ್ತು ಅಥವಾ ಸ್ಕ್ರಿಪ್ಟ್. ಪರಿಣಾಮ ಮೊದಲೇ ಗೊತ್ತಿದ್ದಂತೆ ಆಂಗ್ಲರು ಸೋಲಬೇಕು ಹಾಗೂ ಭಾರತೀಯರು ಗೆಲ್ಲಬೇಕು. ಆಟದ ಹೆಸರಲ್ಲಿ ನಿರಂಜನ ಮಹಾ ಪ್ರಭುವನ್ನ ಎಷ್ಟು ಸಾರಿ ನುಗ್ಗು ಮಾಡಿದ್ವೋ ಗೊತ್ತಿಲ್ಲ. ಆದರು ನಮಗೆಲ್ಲರಿಗೂ ಅದು ತುಂಬಾ ವಿಶಿಷ್ಠ ಹಾಗೂ ಅಚ್ಚು ಮೆಚ್ಚಿನ ಆಟ. ಮೆಲುಕಲ್ಲೂ ಮ್ರುಷ್ಟ್ಹಾನ್ನ ರುಚಿ ಕೊಡುತ್ತೆ. ಮೇಲೆ ಮನೆಗೆ ಬಂದ ಮೇಲೆ, ಓಣಿಯ ಪೋರರ ಜೊತೆಯ ಆಟಗಳೇ ಬೇರೆ. ಆದ್ರೆ ಎಲ್ಲೇ ಇದ್ದರು ಥಳುಕು ಮಾತ್ರ ನಮ್ಮದೇ ಇರಬೇಕು.

ಗಲ್ಲಿ ಕ್ರಿಕೇಟು, ಗಿಲ್ಲಿ-ದಾಂಡು, ಗೋಟಿ, ಸ್ಟಾಪು, ಕುಂಟ್ಲಿಪಿ, ಧಪ್ಪಂಧುಪ್ಪಿ, ಮುಟ್ಟಾಟ, ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪಂತಂಗ ಹಾರಿಸೋದು ಒಂದೇ ಎರಡೇ, ಮಣ್ಣಿನ ಗೊಂಬೆ ಮಣ್ಣಲ್ಲಿ ಬೇರೆತಹಾಗೆ. ಆಮೇಲೆ ರಜೆಯ ದಿನಗಳಲ್ಲಿ ಮನೆಯ ಮಹಡಿ ಮೇಲೆ ಕಾರ್ಡ್ಸು, ಕ್ಯಾರಂ ಬೋರ್ಡು, ಹಾವು-ಏಣಿ ಆಟ, ಅಂತಾಕ್ಷರಿ, ಅಬ್ಬಬ್ಬಾ. ಓಣಿಯ ರಾಘವೇಂದ್ರ ದೇವಸ್ಥಾನದಲ್ಲಿ ಒಬ್ಬ ಅಜ್ಜಿ ಇರ್ತಾ ಇದ್ರು ಅವರಿಗೆ ಕಣ್ಣು ಕಾಣಿಸ್ತಾ ಇರಲಿಲ್ಲ, ಅವರಲ್ಲಿ ಹೋಗಿ ಅವರಜೊತೆ ಚಾಷ್ಟಿ ಮಾಡೋದು, ಕಥೆ ಕೇಳೋದು, ಖುಷಿ ಕೊಡ್ತಾಯಿತ್ತು. ಮಧ್ಯಮ ಕೆಳ ವರ್ಗದವರ ಓಣಿಯಾದ್ದರಿಂದ ಎಲ್ಲರ ಮನೆಯಲ್ಲೂ ಬಡತನ ತಾಂಡವವಾಡೋದು ಸಹಜ ವಾದ್ರು ಹೃದಯ ಶ್ರೀಮಂತಿಕೆಗೆ ಏನೂ ಕಮ್ಮಿ ಇರಲಿಲ್ಲ. ನಾವು ಅಲ್ಲಿ ಸಾಮೂಹಿಕವಾಗಿ ಆಚರಿಸ್ತಾ ಇದ್ದ ಒಂದೊಂದು ಹಬ್ಬವೂ ಸಂತಸಗಳ ಸುರಿಮಳೆ ಹಾಗಿರ್ತಾಯಿತ್ತು. ಅದೊಂದು 25-30 ಮನೆಗಳ ಅವಿಭಾಜ್ಯ ಕುಟುಂಬವಾಗಿತ್ತು. ಅಂಥದ್ರಲ್ಲಿ ಎಲ್ಲರ ಎಲ್ಲ ನೋವು ಸಹನಿಯವೇ ಹಾಗೂ ಎಲ್ಲರ ಸುಖವೂ ನಮ್ಮ ಸಂತಸವೇ. ಜೀವನ ಉತ್ಸವವಾಗಿರ್ತ ಇತ್ತು.


ರಜೆಯಲ್ಲಿ ಹಳ್ಳಿಗೆ ಹೋಗಿ ಎಲ್ಲರಿಂದ ಸಣ್ಣ ದೇಸಾಯಿ / ಪಾಪಣ್ಣ ದೇಸಾಯಿ ಅಂತ ಎಲ್ಲರಿಂದ ಕರೆಸಿಕೊಂಡು ಬೀಗೋದು. ಅಬ್ಬಾ ಅದರ ಗಮ್ಮತ್ತೇ ಗಮ್ಮತ್ತು. ಹೊಲದಲ್ಲಿ ಅಮ್ಮನ ಜೊತೆ ಸುತ್ತಾಡೋದು, ಊಟ ಕಟ್ಟಿಕೊಂಡು ಹೋಗಿ ಹೊಲದಲ್ಲಿ ಊಟ ಮಾಡೋದು, ರಾತ್ರಿ ಮನೆಯ ಬೆಳದಿಂಗಳಲ್ಲಿ ಚಂದ್ರಮನ ನೆರಳಲ್ಲಿ ಚುಕ್ಕಿ ಎಣಿಸೋದು ತುಂಬಾ ಖುಷಿ ಕೊಡ್ತಾಯಿತ್ತು. ನಮಗೆ ಹೊಲ ಮಾರಿದ ಅಜ್ಜಿ ಒಬ್ಬಳು ಗಂಡ ಸತ್ತ ಮೇಲೆ ಹಳ್ಳಿಲಿ ನಮ್ಮ ಮನೆಯಲ್ಲೇ ಇರ್ತಾ ಇದ್ಳು. ಅವಳ ಹೆಸರು "ಪೀರವ್ವಾ" ಅಂತ. ಪ್ರತೀ ಸಾರಿ ನಾನು ರಜೆಯಲ್ಲಿ ಹಳ್ಳಿಗೆ ಹೋದಾಗ ಅವಳನ್ನ ಯಾಮಾರಿಸ್ತಾ ಇದ್ದದ್ದು ಹೇಗೆ ಅಂತ ಹೇಳ್ತೀನಿ ಕೇಳಿ. ಅವ್ಳು "ಮಗಾ ಪರೀಕ್ಷಾದಾಗ ಪಾಸಾದಿ? ಏಟು ನಂಬರ ಬಿದ್ದಾವ ನಿಂಗ?", ಅಂತ ಕೇಳೋಳು. ಅವಳಿಗೆ ಓದು ಬರಹ ಬರ್ತಾ ಇರಲಿಲ್ಲ. ಆಗ ನಾನು ಹೇಳೋ ದಾಟಿ ಮೇಲೆ ಅವಳು ನನಗೆ ಬಂದಿರೋ ನಂಬರು ಜಾಸ್ತಿನಾ ಇಲ್ಲಾ ಕಮ್ಮಿನಾ ಅಂತ ಗೊತ್ತು ಹಿಡಿಯೋಳು. ನಾನು ಅವಳಿಗೆ "ನನಗೆ ಮೂರುನೂರಾ ಮೂವತ್ತು ಬಂದಾವ ನಂಬರು" ಅಂತ ಎಳೆದು ದಪ್ಪ ದನಿಯಲ್ಲಿ ಹೇಳಿದ್ರೆ ಅದಕ್ಕೆ ಅವಳು "ನಾ ಹೇಳಿಲ್ಲ ನಿ ಷಾಣೆ ಇದ್ದಿ ಅಂತ, ನಿ ಹಿಂಗೆ ಮಾರ್ಕಸ್ ತಗಿ ಧೊಡ್ಡ ಸಾಬ ಆಗತಿ ಅಂತ?" ಅಂತ ಅನ್ನೋಳು. ಒಂದು ವೇಳೆ ನಾನು ಮುಖ ಸಣ್ಣಗೆ ಮಾಡಿಕೊಂಡು "ನನಗೆ ಬರೇ ನಾಕನೂರಾ ಎಂಬತ್ತೆಂಟು ಬಂದಾವ ನಂಬರ" ಅಂದ್ರೆ ಅವ್ಳು "ಯಾಕೆ ಮಗಾ ಈಟು ಕಮ್ಮಿ ತಗೊಂಡಿದಿ ನಂಬರ, ಮುಂದ ಛೋಲೋ ಓದು" ಅನ್ನೋಳು. ಅವಳು ಇವತ್ತು ನಮ್ಮ ಜೊತೆ ಇಲ್ಲ ಆದ್ರೆ, ಇದನ್ನ ನೆನೆದು ಈಗಲೂ ನಗು ಬರುತ್ತೆ. ಅಂದು ಮನಸೂರೆಗೊಂಡ ಅವಳ ಮುಗ್ಧತೆ ಇನ್ನೂ ಮರೆಯಕ್ಕಾಗಿಲ್ಲ.


ನನಗೆ ಆಟೋಟಗಳಿಗಿಂತಲೂ ಸಾಂಸ್ಕೃತಿಕ ಕಾರ್ಯಗಳಲ್ಲಿ ತುಂಬಾ ಆಸಕ್ತಿಅದಕ್ಕೆ ೨ ನೇ ತರಗತಿ ಯಿಂದ ೯ ನೇ ತರಗತಿಯವರೆಗೆ ಕ್ಲಾಸಲ್ಲಿ ನಾನೇ ಕಲ್ಚರಲ್ ಅಕ್ಟಿವಿಟಿಸ್ ಲಿಡರು. ಸಿನೆಮಾ ಗೀಳು ನನಗೆ ಹೊಸತೇನಲ್ಲಅದರಲ್ಲೂ ಆಕ್ಟಿಂಗ್ ಮಾಡಿ ತೋರಿಸುವುದು ಅಂದ್ರೆ ನನಗೆ ಪಂಚಪ್ರಾಣ. ಮನೆಗೆ ಬರುವ ಅಣ್ಣ, ಅಕ್ಕ, ತಂದೆ, ತಾಯಿ ಎಲ್ಲರ ಮಿತ್ರರ ತಲೆಗಳೇ ನನ್ನ ಭೋಜನ ಪಾಕಗಳು. ನನ್ನ ಕಲಾ ಕೌಶಲ್ಯವನ್ನ ತೋರಿಸಿ ಅಹುದು ಅಹುದು ಅನ್ನಿಸಿಕೊಳ್ಳುವುದು ನನಗೆ ತುಂಬಾ ಖುಷಿ ಕೊಡೋದು. ಭಕ್ತ ಸಿರಿಯಾಳ, ಭಕ್ತ ಪ್ರಲ್ಹಾದ, ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ನನ್ನ ಮೇಲೆ ಪ್ರಭಾವ ಬೀರಿದ ಚಿತ್ರಗಳು. ಭಕ್ತ ಸೀಯಾಳ ಚಿತ್ರವನ್ನ ನಾನು 3 ಸಾರಿ ನೋಡಿದ್ದೆ. ಮೂರೂ ಸಲ ಅಮ್ಮ ಜೋತಿಗಿದ್ಳು. ಅದರಲ್ಲಿ ಶಿವ ಸಿರಿಯಾಳನ  ಪರೀಕ್ಷೆಗಾಗಿ ಆತನ ಮಗನ ಶಿರ ಕಡಿದು ಭೋಜನ ತಯಾರಿಸಿ ಬಡಿಸುವಂತೆ ಕೇಳಿದಾಗ, ಅದಕ್ಕೆ ಸಿರಿಯಾಳು ಮಗನ ಶಿರ ಕಡಿದು ಶಿವನಿಗೆ ಉಣ ಬಡಿಸುವ ದೃಶ್ಯ ಒಂದಿದೆ. ದೃಶ್ಯ ಬಂದಾಗಲೆಲ್ಲ ಅಮ್ಮ ನನ್ನನ್ನ ಹತ್ತಿರ ಕರೆದುಕೊಂಡು ಸೆರಗು ಹೊದಿಸಿ ಬಿಡೋಳು. ನನಗೆ ಮಾತ್ರ ಉತ್ಸುಕತೆ, ಪರದೆ ಮೇಲೆ ಏನು ತೋರಿಸ್ತಾರೆ ಅಂತ. ಎಳೆ ಮನಸ್ಸಿಗೆ ಅದು ಆಗ ಅರ್ಥವಾಗುವಂತಿರಲಿಲ್ಲ. ನಾನು 10 ನೇ ಓದು ಮುಗಿಸಿದ ಮೇಲೆ ಮತ್ತೆ ಅದೇ ಚಿತ್ರ ನೋಡಿದಾಗ ಅರ್ಥವಾಯಿತು ಅಮ್ಮನ ಕಳ ಕಳಿ. ಇಂದಿನ ಮಕ್ಕಳು ಚಿಕ್ಕವರಿದ್ದಾಗಲೇ ಅದೆಷ್ಟು, ಹಿಂಸೆ, ಕೊಲೆ, ಅತ್ಯಾಚಾರಗಳನ್ನ ನೋಡುತ್ತಾರೆ. ಅದರ ಪರಿಣಾಮವೇ ಸಮಾಜದ ಕೈಗನ್ನಡಿಯಾಗಿದೆ.


ನಂತರ ಕಾಲ ಬದಲಾದಂತೆ  ಟೇಸ್ಟ್/ಅಭಿರುಚಿ ಕೂಡ ಸ್ವಲ್ಪ ಬದಲಾಯಿತು. ನಂತರ ನನಗೆ ಇಷ್ಟವಾದ ಚಿತ್ರಗಳಲ್ಲಿ ಶ್ರೀ 420, ಬಂಧನ, ಕಾಡಿನ ರಾಜ, ರಣಧೀರ, ರಾಮಜಾನೆ, ಮುಂತಾದವು. ಅಲ್ಲಿಂದ ಮುಂದೆ ನನ್ನ ಮುಖ್ಯ ಆಟಿಕೆಗಳಲ್ಲಿ ರಿವಾಲ್ವರ್ (ಅದಕ್ಕೆ ಪ್ಲಾಸ್ಟಿಕ್ ಒಂದು ಬುಲೆಟ್ ಇರೋದು) ಇರಲೇ ಬೇಕು. ಯಾವುದೇ ಚಿತ್ರ ಒಂದು ಸಾರಿ ನೋಡಿದ್ರೆ ಮನೆಯಲ್ಲಿ ಅದರ ಸಿಲ್ವರ್ ಜುಬಿಲಿ, ಗೋಲ್ಡನ್ ಜುಬಿಲಿ ಮಾಡದೇ ಕಳಿಸ್ತಾ ಇರಲಿಲ್ಲ. "ನಾಳೆ ಹದಿನೆಂಟನೆ ತಾರೀಕು ನಡೆಯಲಿರುವ ಬಾಶ ಕೆಸನಲ್ಲಿ ನೀನು ಸಾಕ್ಷಿ ಹೇಳಬಾರದು.  ಒಳ್ಳೆ ದೆವೆಅರಿಗೆ ಮ್ರುಶ್ಥನ್ನ ನೈವೇದ್ಯ, ಚಂಡಿ ದೇವರಿಗೆ ರಕ್ತ ಮಾಂಸದ ನೈವೇದ್ಯ ನಿನಗೆ ಯಯದು ಬೇಕೋ ಅದನ್ನ ಆರಿಸ್ಕೋ." ಅಂತ ರಣಧೀರ ಚಿತ್ರದ ಡೈಲಾಗ್ ಶುರು ಹಚ್ಚಿಕೊಳ್ಳೋದು...ನೆನೆಸಿಕೊಂದು ಇವತ್ತು ನಗು ಬರುತ್ತೆ. ಅದರಲ್ಲೂ ಕುಡುಕನ ಪಾತ್ರ ಮಾಡೋದಂದ್ರೆ ಇನ್ನೂ ಇಷ್ಟ. ಆಗಲೇ "ಮೈನೆ ಪ್ಯಾರ್ ಕಿಯಾ" ಚಿತ್ರ ತೆರೆ ಕಂಡಿತ್ತು. ಅದರ ಹಾಡುಗಳು ನಿಮಗೆಲ್ಲ ತಿಳಿದಂತೆ ತೊಂಬಾ ಜನಪ್ರಿಯವಾಗಿದ್ವು. ಅಲ್ಲಿಂದ ನನಗೂ ಹಾಡು ಹೇಳುವ ಆಸಕ್ತಿ ಹೆಚ್ಚಿತು. ಎಸ.ಪಿ.ಬಾಲಸುಬ್ರಹ್ಮಣ್ಯಂ ನನ್ನ ಮಾನಸಿಕ ಗುರು ಹಾಗು ಪ್ರೇರಣೆ. ಮೊದ ಮೊದಲು ಮುಖ ಕೆಡಿಸಿಕೊಂಡರೂ ಸ್ವಲ್ಪ ದಿನಗಳಲ್ಲಿ ನನ್ನ ಗೆಳೆಯರಿಗೆ, ಕ್ಲಾಸ್ ಮೇಟ್ಸ್ ಗಳಿಗೆ, ಮನೆಯವರಿಗೆಲ್ಲ ನಾನೇ ಆರ್. ಜೆ. ಒಣಿಲಿ ಎಲ್ಲರಿಗೂ ನನ್ನ ನಟನಾ ಕೌಶಲ್ಯ ಚಿರಪರಿಚಿತ. ಎಲ್ಲರೂ ನನ್ನ ಏಕ ಪಾತ್ರಾಭಿನಯದ ಅಭಿಮಾನಿಗಳೇಗಣೇಶೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಎಲ್ಲವೂ ನಮ್ಮ ವಿವಿಧ ಕಲೆಗಳಿಗೆ ಹೊರಗೆಡವಲು ಶುಭ ಸಂಧರ್ಭಗಳು. ನಾನು ಉತ್ಸವಕ್ಕೆ ಅಂತಲೇ ಹೊಸ ಹೊಸ ಕಾರ್ಯಕ್ರಮ ತಯ್ಯರಿಸ್ತಾ ಇದ್ದೆ..ಫಿಲ್ಮ ಪೋಸ್ಟರ್ ಗಳನ್ನ ಮತ್ತು ಅದರಲ್ಲಿ ಕಾಣಿಸೋ ಒಂದೊಂದು ಪಾತ್ರದ ಭಾವ ಭಂಗಿಗಳನ್ನ ನೋಡಿ ಕಾಮೆಂಟ್ ಮಾಡೋದು ಅಂದ್ರೆ ಫಿಲಂ ನೋಡೋಕ್ಕಿಂತಲೂ ಖುಷಿ. ಅದು ಒಂದು ತರಹ ನಮ್ಮ ಹಸಿದ ಹೊಟ್ಟೆಗೆ ನಿರುರಿಸಿ ಸ್ವಲ್ಪ ಕಾಲದ ವರೆಗೆ ಶಮನಗೊಳಿಸಿದಂತೆ.

ನಾನು ಚಿಕ್ಕವನಿದ್ದಾಗ ನನಗೆ ನಮ್ಮಪ್ಪನೆ ಹೀರೋ. ರಾತ್ರಿ ಅವರಿಂದ ಕಥೆ ಕೇಳ್ತಾ ಮಲಗಿ ಕೂಳ್ಲೋದು ದಿನನಿತ್ಯದ ರೂಢಿ. ದಿನವೂ ಅದೇ ರಾಮ, ಕೃಷ್ಣ, ಹನುಮಂತರ ಕಥೆಗಳು ಇಲ್ಲ ಅಕ್ಬರ್ ಬಿರಬಲ್ಲರ ಕಥೆಗಳು... ಅವರೂ ಹೇಳುವ ಶೈಲಿಗೆ ಇಂದಿನ 3D ಸಿನೆಮಾಗಳು ನಾಚಿಕೊಳ್ಳಬೇಕು. "ರಾಮ ಕಿಷ್ಕಿಂದಾ ಬರ್ತಾನ. ಅಲ್ಲಿ ಹಣಮಂದೇವರು ಇರ್ತನ. ಅವನಿಗಿ ಭಾಳ ಶಕ್ತಿ ಇರ್ತದ ಅಂದ್ರ ನೂರು ಆನಿಗಿಂತ ಹೆಚ್ಚ ಶಕ್ತಿ ಇರ್ತದ..." ಅಂತ ರನ್ನಿಂಗ್ ಕಾಮೆಂಟ್ರಿ ಶುರು ಮಡಿದ ಕೂಡಲೇ ಕಣ್ಣ ಪರದೆ ಕಳಚಿಕೊಂಡು ಕಲ್ಪನೆಯ ಪರದೆಯ ಮೇಲೆ ಚಿತ್ರಗಳು ಮೂಡೋದಕ್ಕೆ ಪ್ರಾರಂಭವಾಗೋದು. ಕಥೆಗಳ ಜೊತೆ ಜೊತೆಗೆ ಅವರು ನೀಡಿದ ನೀತಿ ಹಾಗೂ ಸಂಸ್ಕಾರದ ಪಾಠಗಳು ಇಲ್ಲಿಯವರೆಗಿನ ದಾರಿಗೂ ದೀಪವಾಗಿ ಎಡವದಂತೆ ಕಾಯ್ತಾ ಬಂದಿವೆ. ಅಪ್ಪ ನನ್ನ ಬಾಲ್ಯದ ಆತ್ಮೀಯ ಗೆಳೆಯ. ಮಧ್ಯದಲ್ಲಿ ಬಾಂಧವ್ಯ ಸ್ವಲ್ಪ ಹೆದರಿಕೊಂಡು ಕಡಿಮೆಯಗಿತ್ತಾದರು ಮತ್ತೆ ಕಾಲೇಜ್ ದಿನಗಳಲ್ಲಿ ಅವರ ಅನುಭವದ ಸಂಗ ಕೂಡಿ ಬಂತು. ಅವರ ಅನುಭವದ ವಿರಾಸತ್ ಮತ್ತು ಚಿಕ್ಕವನಾದ್ರೂ ನನ್ನ ಜೊತೆ ಅವರು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದ ವಿಷಯಗಳು, ಅವರು ಕೊನೆಯ ವರೆಗೂ ಅನುಸರಿಸಿಕೊಂಡು ಹೋದ ನೈತಿಕತೆ ಹಾಗೂ ವಿಶಾಲ ವ್ಯಕ್ತಿತ್ವದ ನಡಿಗೆ ನನಗೆ ತುಂಬಾ ಪ್ರೇರಕ. ಆಧ್ಯಾತ್ಮದ ಕಡೆ ನನ್ನ ವೋಲುವು ಬೆಳೆಸೋದ್ರಲ್ಲಿ ಅವರೇ ನನ್ನ ಮೊದಲ ಗುರುವು ಹೌದು. ಅವರಿರುವ ವರೆಗೂ ಬಡತನ, ಮನೆಯಲ್ಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ. ಆದ್ರೆ ಯಾರಿಗೂ ಅದರ ಬಿಸಿ ತಟ್ಟದಂತೆ ನೋಡ್ಕೊಂಡಿದ್ರು. ನಮ್ಮ ಇಂದಿನ ಸ್ಥಿತಿಯಲ್ಲಿ ಅವರು ಶಾಮಿಲ್ ಆಗಿಲ್ಲವಲ್ಲ ಅನ್ನೋದು ಮಾತ್ರ ಆಗಾಗ ಮನಸನ್ನ ಒದ್ದೆ ಮಾಡುತ್ತೆ.  

ಇನ್ನು ಅಮ್ಮ ಅವಳ ಪ್ರೀತಿನೆ ಪ್ರೀತಿ. ಅವಳೊಬ್ಬ ಹಠವಾದಿ. ಹಿಡಿದಿದ್ದನ್ನ ಸಾಧಿಸದೆ ಬಿಡದವಳು. ಅವಳ ಡಿಕ್ಷನರಿ ನಲ್ಲಿ ಆಗದು ಅನ್ನೋ ಮಾತೆ ಇಲ್ಲ. ನಮ್ಮದು ಸ್ವಲ್ಪ ದೊಡ್ಡ ಕುಟುಂಬವೇ ಸರಿ. ಅವಳು ಹಳ್ಳಿಲೆ ಇದ್ದರು ಅಥವಾ ಪಟ್ಟಣದಲ್ಲೇ ಇದ್ದರು ಎಂದಿಗೂ ಕೈ ಕಟ್ಟಿ ಕೂಡೋಳಲ್ಲ. ಅವಳಿಗೆ ಕಾಯಕವೇ ಕೈಲಾಸ. ಅಪ್ಪನ ಕಡಿಮೆ ಸಂಬಳದಲ್ಲೂ ಮನೆಯನ್ನ ತೂಗಿಸುವವಳು. ಅವಳು ಅಪ್ಪನ ನಿವೃತ್ತಿಯ ನಂತರ ಹಳ್ಳಿಯ ಜೀವನವನ್ನೇ ಕಾಯಂ ಆಗಿ ಬಯಸಿದಳು. ಅವಳ ಕನಸುಗಳು ನಮ್ಮೆಲ್ಲರ ಕಲ್ಪನೆಗೂ ಬಲು ದೂರ. ಕೆಲವೇ ದಿನಗಳಲ್ಲಿ ಅವಳಿಗೆ ವ್ಯವಸಾಯದ ಎಲ್ಲ ಕೆಲಸಗಳು ಕರಗತವಗಿದ್ವು ಅಂದ್ರೆ ಇಂದು ಅದು ಆಶ್ಚರ್ಯದ ಮಾತು. ಯಾಕಂದ್ರೆ ಅವಳಿಗೆ ಆಗಲೇ ವಯಸ್ಸು ಐವತ್ತು ದಾಟಿತ್ತು. ಅವಳು ದುಡ್ಡಿಗೆ ದುಡ್ಡು ಜೋಡಿಸಿ ಖರಿದಿಸಿದ ಒಂದೊಂದು ವಸ್ತುವು ನನಗೆ ಅಮೂಲ್ಯ. ಅವಳೊಬ್ಬಳಾದ್ರೂ ನಮ್ಮ ಜೊತೆ ಸಂತಸವನ್ನ ಹಚ್ಚಿಕೊಂಡು ಮಕ್ಕಳು ಮೊಮ್ಮಕ್ಕಳನ್ನ ಆಶಿರ್ವದಿಸ್ತಾ ಇದಾಳೆ  ಅಂದ್ರೆ ಅದು ದೇವರ ಕೃಪೆ ಮತ್ತು ನಮ್ಮ ಸೌಭಾಗ್ಯ.  

ಅಕ್ಕ ರತ್ನಾ, ನನ್ನ ಪರಮ ಶತ್ರು. ಬೆಳಿಗ್ಗೆ ಇಂದ ರಾತ್ರಿಯವರೆಗೆ ಅವಳ ಜೊತೆ ಕಿತ್ತಾಟ, ಹೊಡೆದಾಟ. ಆದ್ರೆ ಒಂದು ದಿವಸ ಅವಳಿಲ್ಲ ಅಂದ್ರೆ ಬೇಜಾರೋ ಬೇಜಾರು. ರಾತ್ರಿ ಟೈಮಲ್ಲಿ ಕರೆಂಟ್ ಹೋದಾಗ ಅವಳ ಜೊತೆ ನನ್ನ ಕಿತ್ತಾಟ ಏನಂದ್ರೆ, "ನನ್ನ ಶಿವ ಮೂರನೇ ಕಣ್ಣ ತಗದು ಒಮ್ಮ ನಿಮ್ಮ ಹಣಮಂದೇವರ ಕಡಿ ನೋಡದನಲಾ, ಅವಾ ಅಲ್ಲೇ ಸುಟ್ಟು ಬೂದಿ ಆಗ್ತಾನ" ಅಂತ ಅವಳು ಹೇಳಿದ್ರೆ "ನನ್ನ ಕಡಿ ಹಣಮಂದೇವರ ಇದಾನ. ಅವಾ ನಿನ್ನ ಶಿವನ ಕಣ್ಣಿನ ಮ್ಯಾಲ ಗಧೆ ತಗೊಂಡು ಒಂದು ಹೊಡದು, ಜಟಾ ಹಿಡದು ತಿರಗಿಸ್ದನಲಾ, ನಿನ್ನ ಶಿವ ಅಲ್ಲೆ ಚಕ್ಕರ್ ಬಂದು ಬೀಳ ಬೇಕು" ಅಂತ ನಾನು ಹೇಳತ ಇದ್ದೆ. ಕಿರಿಕಿರಿ ಕರೆಂಟ್ ಬರೋವರೆಗೂ ನಡೆಯೋದು. ಕೆಲವೊಮ್ಮೆ ಅಂತಾಕ್ಷರಿ ಕೂಡಾ ಆಡ್ತಾ ಇದ್ವಿ. ಏನೇ ಮಾಡಿದ್ರು ಜಗಳದಲ್ಲೇ ಕೊನೆಯಾಗೊದಂತೂ ನಿಶ್ಚಿತ. ಆಮೇಲೆ ದೊಡ್ಡವರಾದ ಹಾಗೆ ನಮ್ಮ ಜಗಳ ತಾನಾಗೆ ಕಮ್ಮಿ ಆಯಿತು. ಅಮ್ಮ ಹಳ್ಳಿ ಸೇರಿದ ಮೇಲು ನಾವು ವ್ಯಾಸಂಗಕ್ಕೆ ಅಂತ ತಾಲೂಕಿನಲ್ಲೇ ಇದ್ವಿ. ಆಗ ದಿನಾಲೂ ಅವಳೇ ನನ್ನನ್ನ ರೆಡಿ / ತಯಾರು ಮಾಡಿ ಶಾಲೆಗೆ ಕಳಿಸೋದು. ನನ್ನ ಎರಡನೇ ತಾಯಿಯಾಗಿಬಿಟ್ಟಳು. ಅಲ್ಲಿಂದ ಮುಂದೆ ನನಗೆ ಎಲ್ಲದ್ದಕ್ಕೂ ಅವಳೇ ಸ್ಫೂರ್ತಿ.ಎಲ್ಲಾ ಗೋಲ್ಡನ್ ಏಜ್ ಗೂ ಒಂದು ಅಂತ್ಯ ಇರುತ್ತೆ ಅನ್ನೋ ಹಾಗೆ. ಬಾಲ್ಯ ಕಳೆದು ಕಾಲೇಜು ಮುಗಿಸಿ ಬೆಂಗಳೂರು ಸೇರಿಕೊಂಡು ಆಗಲೇ ವರ್ಷಗಳೇ ಕಳೆದವು. ಇಂದು ಆಧುನಿಕ ತಂತ್ರಜ್ಞಾನವಾದ ಕಂಪ್ಯೂಟರ್ ಹಾಗೂ ಇಂಟರ್ನೆಟ್  ಕ್ರಾಂತಿಯ ಹರಿಕಾರರಾಗಿ ಎಲ್ಲಿಯೂ ಹರಿಯದೆ ಒಂದು ಟೇಬಲು, ಖುರ್ಚಿಗೆ ಸೀಮಿತವಾಗಿ ಬಿಟ್ಟಿದಿವಿ. ಇಂದು ಫೆಸಬುಕ್, ಟ್ವೀಟರ್ ಗಳೇ ನಮ್ಮ ಹರಟೆ ಕಟ್ಟೆಗಳಾಗಿವೆ. ವರ್ಷಗಟ್ಟಲೆ ಮುಖ ನೋಡದಿದ್ರೂ (ಫೆಸ್), ಪುಸ್ತಕದಲ್ಲಿ (ಬುಕ್) ಮಾತ್ರ ಹಾಜರು. ನಾವು ಒಳ್ಳೆ ಸಿಟಿಜನ್ಸ್ ಆಗದಿರಬಹುದು ಆದ್ರೆ ಒಳ್ಳೆ ನೆಟಿಜನ್ಸ್ ಅಂತೂ ಖಂಡಿತ ಆಗಿದಿವಿ ಅಂತ ಬೀಗತಿವಿ

 ಗಾಂಧೀಜಿಯವರು ಒಂದು ಕಡೆ ಹೇಳ್ತಾರೆ " ನನ್ನ ಭೌತಿಕ ಅಗತ್ಯಗಳಿಗೆ ಬಂದಾಗ ನನ್ನ ಹಳ್ಳಿಯೇ ನನ್ನ ಜಗತ್ತು ಹಾಗು ನನ್ನ ಆಧ್ಯಾತ್ಮಿಕ ಅಗತ್ಯಗಳಿಗೆ ಜಗತ್ತೇ ನನ್ನ ಹಳ್ಳಿ" ಅಂತ. ಇಂದಿನವರು ಹೇಳೋದು "ನಮ್ಮೆಲ್ಲ ಅಗತ್ಯಗಳಿಗೂ ಇಂಟರ್ನೆಟ್ಟೆ ನಮ್ಮ ಜಗತ್ತು. ಇಂಟರ್ನೆಟ್ ನಲ್ಲಿಲ್ಲದ್ದು ನಮ್ಮ ಜಗತ್ತಿನದಲ್ಲ / ನಮ್ಮ ಜರೂರತ್ತಿನದಲ್ಲ ಅಂತ.

"
ರೀ... ರೀ... ಊಟಕ್ಕ ಬರ್ರಿ.., ನೀವೇನು ಇವತ್ತ ಇಲ್ಲಿ ಮಾಳಿಗೆ ಮ್ಯಾಲ  ಬಂದು ಕೂತಿರಿ." ಅಂತ ಹೆಂಡತಿ ಕರೀತಾ ಮಾಳಿಗೆಗೆ ಬಂದಳು.
"ಏನಿಲ್ಲ ಚಂದಪ್ಪ ಭಾಳ ದಿವಸಲಿಂದ ನಿನ್ನ (ಅಂದ್ರ ನನ್ನ) ಜೊತೆ ಮಾತಾಡದದ, ಸ್ವಲ್ಪ ಪುರಸತ್ತು ತೊಗೊಂಡು ಬಾರೋ ಮ್ಹಾರಾಯ ಅಂತ ಕರಿಲಿಗತ್ತಿದ್ದ, ಇವತ್ತ ಟೈಮ್ ಸಿಕ್ಕದ ನೋಡು" "ನಡಿ... ಹೊಗರಿ ಕೆಳಗ...., ಮಗರಾಯ ಮಲ್ಕೊಂಡೆನು?"   

ನೆನಪುಗಳ ಬುತ್ತಿಯ ಪ್ರತಿ ತುತ್ತು ಸವಿ ಸವಿನೇ. ಎಲ್ಲರ ಜೊತೆನೂ ಇಂಥದೊಂದು ಬುತ್ತಿ ಇದ್ದೆ ಇರುತ್ತದೆ. ಮ್ರುಷ್ಟ್ಹಾನ್ನ ಯಾವತ್ತು ಹಳಸೋದಿಲ್ಲ.  ನನ್ನ ಬುತ್ತಿಯ ತುತ್ತುಗಳನ್ನ ಸವಿತಾ, ಸವಿತಾ ನಿಮ್ಮ ನೆನಪಿನ ಬುತ್ತಿಯು ಬಿಚ್ಚಿಕೊಂಡರೆ ಬನ್ನಿ ಹಂಚಿಕೊಂಡು ತಿನ್ನೋಣ.

"
ಚಂದಪ್ಪ, ಥ್ಯಾಂಕ್ ಯು, ಮತ್ತ ಸಿಗರಿ, ಟಾ ಟಾ!"



-      --  ಕೆ. ಕಲ್ಯಾಣ
 

No comments:

Post a Comment