Pages

Sunday, October 14, 2012

"ಜಿಂದಗಿ ನಾ ಮಿಲೇಗಿ ದೋಬಾರಾ...!"


                                                                                                             


ಮಾನವ ಜೀವನ ಶೈಲಿ ವಿಕಸಿತಗೊಂಡಂತೆಲ್ಲ ಜೀವನ ಆದರ್ಶಗಳು ಒಂದೊಂದಾಗಿ ಯುಗ-ಯುಗಗಳಿಂದ ಪ್ರಪಾತದ ಕಡೆಗೆ ನುಗ್ಗುವುದನ್ನ ನಾವು ಗಮನಿಸಿದ್ದೇವೆ. ವೈಜ್ಞಾನಿಕತೆ ಬೆಳೆದಂತೆಲ್ಲ ವೈಚಾರಿಕತೆಯ ನಲ ಕುಸಿಯುತ್ತ ಬಂದಿದೆ. ಸತ್ಯಯುಗ ದಲ್ಲಿ ಸತ್ಯ, ತ್ರೆತಾಲಯುಗದಲ್ಲಿ  ಆದರ್ಶ, ದ್ವಾಪರದಲ್ಲಿ ಧರ್ಮ ಇನ್ನು ಕಲಿಯುಗದಲ್ಲಿ ಕರ್ಮ ಹೀಗೆ ಒಂದೊಂದು ಯುಗದಲ್ಲಿ ಒಂದೊಂದಕ್ಕೆ ಮಹತ್ವ. ಆದರೆ ಶಾಸ್ತ್ರಗಳ ನೆಲೆಗಟ್ಟಲ್ಲಿ ಈಗಿರುವುದು ಘೋರ ಕಲಿಯುಗ. ಯುಗದಲ್ಲಿ ಮನಸ್ಸಿಗೆ ಬಹಳ ಮಹತ್ವ. ಘೋರ ಕಲಿಯುಗಕ್ಕಿಂತಲೂ ಮೊದಲಿನ ಯುಗಗಳಲ್ಲೂ ಮನಸ್ಸಿಗೆ ಮಹತ್ವವಿತ್ತು ಆದರೆ ಮಹತ್ವದ ಹಿಂದಿನ ಸಿದ್ಧಾಂತ ಮಾತ್ರ ಕಾಲಾಂತರದಲ್ಲಿ ಬದಲಾಗ್ತಾ ಬಂದಿದೆ. ಅಂದು ಮನಸ್ಸಿನ ಹತೋಟಿ  ಚಾರಿತ್ರಿಕ ಜೀವನದ ಬುನಾದಿಯಗಿತ್ತು ಆದರೆ ಇಂದು ಅದು ಸ್ವೇಚ್ಚೆಯಲ್ಲಿ  ಅರಮನೆಯಗಿದೆ.

ಇವತ್ತಿನ ಅಧುನಿಕ ಸಮಾಜದಲ್ಲಿ ಉನ್ನತ ಜೀವನದ ಮಾಪಕಗಳು ಎರಡು. ಹಣ, ಬಲ ಎಲ್ಲವೂ ನಾಣ್ಯದ ಒಂದು ಮುಖವಾದರೆ ಇನ್ನೊಂದು ಮುಖ ಭಾವೋದ್ವೇಗದ್ದು. ಏನಿದು ಭಾವೋದ್ವೇಗ ಅಂದ್ರೆ? ಭಾವಗಳ ಉನ್ಮಾದತೆ ಅಥವಾ ಇಂಗ್ಲಿಷಲ್ಲಿ ಹೇಳೋದಾದ್ರೆ "excitement of emotions” ಅಂತ. ಇದರರ್ಥ ದೇಹ ಒಂದನ್ನು ಬಿಟ್ಟುನಮ್ಮ ಅಸ್ತಿತ್ವವೆಲ್ಲ ಭಾವಗಳ ಸಮುಚ್ಚಯ ಮಾತ್ರ. ಭಾವಗಳ ಮೂಲ ಮನಸ್ಸು. ಮನಸ್ಸಿನ ಲಗಾಮು ಹತೋಟಿಲಿದ್ರೆ ಜೀವನ ಸಾರ್ಥಕ ಇಲ್ಲದಿದ್ರೆ ನಿರರ್ಥಕ. ಭಾರತೀಯ ಸಮಾಜದಲ್ಲಿ ಮನಸ್ಸಿನ ಹತೋಟಿಗೆ ಮೊದಲಿಂದಲು ತುಂಬಾ ಮಹತ್ವ. ಆದ್ರೆ ಆಧುನಿಕತೆಯ ಗಾಳಿಲಿ ಇದರ ಪರಿಮಳ ಬೇಡಿಕೆ ಕಳೆದುಕೊಳ್ತಾ ಇದೆ.

ಮನಸ್ಸನ್ನ / ಭಾವನೆಗಳನ್ನ ನಾನಾ ಜನರು ನಾನಾ ರೀತಿಯಾಗಿ ಬಣ್ಣಿಸ್ತಾರೆ. ಸಾಮಾನ್ಯ ಜನರಿಗೆ ಇದು ಸ್ವಭಾವವಾದರೆ, ಕಲೆಗಾರರಿಗೆ ಇದೊಂದು ಲಾ ಪ್ರೇರಕ, ವೈದ್ಯರಿಗೆ ಇದು ಕೆಲವು ಕಾಯಿಲೆಗಳ ಮೂಲ, ಪ್ರೇಮಿಗಳಿಗೆ ಪ್ರಚೋದಕ, ಧಾರ್ಮಿಕರಿಗೆ ಆಚರಣೆ, ಯೋಗಿಗಳಿಗೆ/ಸನ್ಯಾಸಿಗಳಿಗೆ ಇದು ವಂಚಕ. ಅದಕ್ಕೆ ಹಲವರು ಇದನ್ನ ಶ್ವಾನಕ್ಕೆ ಹೋಲಿಸ್ತಾರೆ ಯಾಕಂದ್ರೆ ಎಲ್ಲದರಲ್ಲೂ ಮೂಗುತುರಿಸಿ ಮೂಸಿನೋಡುತ್ತೆ, ಇನ್ನು ಕೆಲವರು ಇದು ನೊಣಕ್ಕೆ ಸಮಾನ ಅಂತಾರೆ, ಯಾಕಂದ್ರೆ ಮನಸ್ಸಿಗೆ ಮಲ ಹಾಗೂ ಮ್ರುಷ್ಟಾನ್ನದ ನಡುವೆ ವ್ಯತ್ಯಾಸವೇ ಗೊತ್ತಿಲ್ಲ. ಏನೇ ಇರಲಿ ನಮ್ಮ ಜೀವನದ ಪೂರಕ ಬಾಧಕಗಳು ಮಾತ್ರ ಇದರ ಕೈವಶವೇ.

ಆಧ್ಯಾತ್ಮಿಕವಾಗಿ ಇಂತಹ ಮನಸ್ಸಿನ ಪೂರ್ಣ ಚಿತ್ರಣ ಮಾಡಬೇಕೆಂದರೆ, ಅದು ಹೀಗೆ. ಮಾನವನ ದೇಹವೇ ರಥದ ಸಮಾನ, ಪಂಚ ಜ್ಞಾನೆಂದ್ರಿಯಗಳಾದ ಕಣ್ಣು, ಮುಗು, ಕಿವಿ, ನಾಲಿಗೆ ಹಾಗೂ ಚರ್ಮ ಗಳು ಐದು ಅಶ್ವಗಳು (ಕುದುರೆಗಳು), ಮನಸ್ಸೇ ಸಾರಥಿ, ಬುದ್ಧಿಯೇ ಲಗಾಮು ಹಾಗೂ ಆತ್ಮವೇ ಇವೆಲ್ಲದರ ಸರದಾರ/ಮಾಲೀಕ/ಚುಕ್ಕಾಣಿ. ಆತ್ಮ ತನ್ನ ಹಿಡಿತವನ್ನ ಮನಸ್ಸಿಗೆ ಕೊಟ್ಟರೆ / ಆತ್ಮ ವಿಸ್ಮ್ರುತಿಯಾದರೆ ಅದು ಬುದ್ಧಿಯನ್ನು ತನ್ನ ಹತೋಟಿಗೆ ತೆಗೆದುಕೊಂಡು ಜೀವನ ಪಥದಲ್ಲಿ ಸಾಗುತ್ತೆ. ಆಗ ಮನಸ್ಸು ಬಯಸ್ಸಿದ್ದೆ ಸರಿ, ಅದು ಬಯಸದ್ದೇ ತಪ್ಪುಪಂಚ ಜ್ಞಾನೆಂದ್ರಿಯಗಳು, ಸೌಂದರ್ಯ, ಪರಿಮಳ, ಮಾಧುರ್ಯ, ರುಚಿ ಹಾಗೂ ಮ್ರುದುತ್ವವೆಂಬ ಮಯಾಮೃಗಗಳ  ದಾಸಾನು ದಾಸರಾಗಿ ಅವುಗಳ ಬೆಂಬತ್ತಿ ಜೀವನ ಸಾಗಿಸಿದರೆ ಜೀವನದ ಗತಿ ಏನು? ಆತ್ಮದ ಸದ್ಗತಿಯೆಂತು?
ಇಂದಿನ ಜನಾಂಗದಲ್ಲಿ ಆತ್ಮವಿಸ್ಮೃತಿ ತುಂಬಾ ಅಧಿಕವಾಗಿದೆ. ಇದಕ್ಕೆ ಕಾರಣ ನಮ್ಮ ಚುಕ್ಕಾಣಿಯನ್ನ ಮನಸ್ಸಿನ ಕೈಗಿತ್ತು ನಿದ್ರಿಸಿದರೆ ಹೇಗೆ? ಹೇಗೆ ಸ್ವಾತಂತ್ರ್ಯಕ್ಕೂ ಕಾಯಿದೆ ಕಟ್ಟಳೆಗಳು ಅವಶ್ಯಕವೋ ಹಾಗೇ ಮನಸ್ಸಿಗೂ ನಿಯಮಗಳು ಬೇಕು. ಹ್ಯಾಗೆ ಕಾನೂನು ಇಲ್ಲದೆ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲವೋ (ಯಾಕೆ ಅಂದ್ರೆ ಒಬ್ಬರ ಸ್ವಾತಂತ್ರ್ಯ ಇನ್ನೊಬ್ಬರಿಗೆ ಮುಳುವಾಗುತ್ತೆ). ಮನಸ್ಸಿಗೂ ಯಮ-ನಿಯಮ, ಬೇಲಿ ಇಲ್ಲದಿದ್ರೆ ನಮ್ಮ ಜೀವನ ದಾರಿತಪ್ಪೋದಲ್ಲದೆ ಇನ್ನೊಬ್ಬರ/ಸಮಾಜದ ಅಧೋಗತಿಗೆ ಕಾರಣವಾಗುತ್ತೆ.

ಇಂತಹ ಲಂಗು ಲಗಾಮಿಲ್ಲದ ಮನಸ್ಸು ವ್ಯಕ್ತಿ, ಸಮಾಜ, ದೇಶ ಹಾಗೂ ಮನುಕುಲದ ಅಳಿವಿಗೂ ಬುನಾದಿಯಗುತ್ತೆ. ಹಿಂದಿನ ಕಾಲದಲ್ಲಿ ಮಾನ, ಮರ್ಯಾದೆ, ಚಾರಿತ್ರ್ಯ, ವ್ಯಕ್ತಿತ್ವ, ಸನ್ನಡತೆ ಎಲ್ಲಕ್ಕೂ ಬಹಳ ಮಹತ್ವವಿತ್ತು. ಆದ್ರೆ ಇದು ಈಗ ತುಂಬಾ ಕಡಿಮೆಯಾಗ್ತಾ ಇದೆ. ಅವತ್ತು ಅವರು ಹೇಳ್ತಿದ್ದಿದ್ದು, "ದುಡ್ಡು ಕಳಕೊಂಡ್ರೆ ಏನಿಲ್ಲ ಮತ್ತೆ ಸಂಪಾದಿಸಬಹುದು, ಆರೋಗ್ಯ ಕಳಕೊಂಡ್ರೆ ಸ್ವಲ್ಪ ಕಳಕೊಂಡ ಹಾಗೇ, ಆದ್ರೆ, ಮಾನ / ಮರ್ಯಾದೆ ಕಳಕೊಂಡ್ರೆ, ಜೀವನಾನೆ ಕಳಕೊಂಡ ಹಾಗೇ" ಅಂತಆದ್ರೆ ಇಂದಿನವರು ಹೇಳೋದು "ಮರ್ಯಾದೆ ಹೋದ್ರೆ ಏನಂತೆ ದುಡ್ಡು ಬಂದ್ರೆ ಎಲ್ಲಾ ಮರ್ಯಾದೆನು ಸಿಗುತ್ತೆ, ಅಷ್ಟಕ್ಕೂ ಯಾವ ನನ್ಮಗ ನಿಯತ್ತಗಿದನೆ ಹೇಳು?, ಆರೋಗ್ಯ ಕಳಕೊಂಡ್ರೆ ದುಡ್ಡಿಂದ ಸರಿಪಡಿಸಿಕೊಳ್ಳಬಹುದು, ಆದ್ರೆ ದುಡ್ಡು ಕಳಕೊಂಡ್ರೆ ಎಲ್ಲಾನು ಕಳಕೊಂಡ ಹಾಗೇನೆ" ಅಂತ.

ಇಂದಿನ ಯುವ ಜನಾಂಗದ ಮೂಲ ಮಂತ್ರ, "ಏನೇ ಮಾಡಿ, ಎಂಜಾಯ್ ಮಾಡಿ". ನಾವು ಅನೇಕ ಬಾರಿ ಬೇರೆಯವರು/ಸ್ನೇಹಿತರು ಹೇಳಿರೋದನ್ನ ಕೇಳಿರಬಹುದು, "ಮಾಮ್, ಇರೋತನಕ ಎಲ್ಲಾನು ಅನುಭೋಗ (ಎಂಜಾಯ್) ಮಾಡು, ಲೈಫಾಲ್ಲಿ ಏನೂ ಜೊತೆಗೆ ಬರೋದಿಲ್ಲ". ತರಹ ಮಾಡೋರಿಗೆನಾದ್ರು ತಿಳಿಹೇಳಕ್ಕೆ ಹೋದ್ರೆ ಅವರು ಕೊಡೊ ಸಮಜಾಯಿಷಿ ಏನು ಗೊತ್ತೇ?

"
ಫ್ರೆಂಡೆ, ಇದು ನನ್ನ ಜೀವನ. ಹ್ಯಾಗೆ ಬದುಕ ಬೇಕು ಅನ್ನೋದು ನನಗೆ ಚೆನ್ನಾಗಿ ಗೊತ್ತು. ನಿನ್ನಿಂದ ಪಾಠ ಕಲಿಬೇಕಿಲ್ಲ. ಅಷ್ಟಕ್ಕೂ ಇದು ನಾನು ಕಷ್ಟ ಪಟ್ಟು ಸಂಪಾದಿಸಿರೋ ಹಣ, ಯಾರದ್ದೋ ಮನೆದಲ್ಲಾ ಅಪ್ಪ, ಗುರುವೇ".

"
ಜಗತ್ತಲ್ಲಿ ಇದನ್ನೆಲ್ಲಾ ಬೇರೆ ಯಾರು ಮಾಡೋದೇ ಇಲ್ವಾ? ಒಂದು ತಿಳ್ಕೊ ಜಗತ್ತಲ್ಲಿ ಥರ ಬದುಕಿದ್ರೆನೆ ಒಂದು ಸ್ಟೇಟಸ್/ಮರ್ಯಾದೆ ಇರೋದು, ಗೂಬೆ ಥರಾ ಬದುಕಿದ್ರೆ ಯಾರು ಕೇರೇ ಮಾಡಲ್ಲ".

"
ನಾನು ತಗೊಳ್ಳೋದು ಬರೀ ಇನ್ನೂರು-ಮುನ್ನೂರು. ನಮ್ಮ ಪ್ಯೂನ ನೋಡಿದ್ರೆ ನಿನಗೆ ಗೊತ್ತಾಗುತ್ತೆ, ಅವನೇ ನ್ನುರಿಂದ ಸಾವಿರ ಗಿಟ್ಟಿಸ್ತಾನೆ, ಅದಲ್ಲದೆ ಹತ್ತು ಸಾರಿ ಅಲೀಬೇಕು".


ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡೋ ನಮ್ಮ ಯುವ ಪೀಳಿಗೆ ಹೇಳೋ "ಜಿಂದಗಿ ನಾ ಮಿಲೇಗಿ ದೋಬಾರಾ" ಎಂಬ ಅಪೌಕ್ತ/ಅಪಕ್ವ ಹೇಳಿಕೆಗೂ, ನಮ್ಮ ಭಾರತದ ಆಧ್ಯಾತ್ಮದ ನೆಲೆಗಟ್ಟಲ್ಲಿ ಹೇಳಿರೋ "ಮಾನವ ಜನ್ಮ ದೊಡ್ಡದು, ಇದ ಹಾನಿಮಾಡಲು ಬೇಡಿ ಹುಚಪ್ಪಗಳಿರಾಎಂಬ ಅನುಭವದ ಆಳಕ್ಕೂ ತುಂಬಾ ಅಜಗಜಾಂತರ ಇದೆ. ಮೊದಲನೆಯದು, ವ್ಯಕ್ತಿ ಹಾಗೂ ಆತನ ಭೌತಿಕ ಸುಖಕ್ಕೆ(ಹಣ, ಹೆಣ್ಣು, ಹೊನ್ನು, ಮಣ್ಣು) ಪ್ರೇರಣೆ ಕೊಟ್ಟರೆ, ಎರಡನೆಯದು ನಮ್ಮನ್ನ ಅಲೌಕಿಕ ಆಧ್ಯಾತ್ಮದ  ಸುಖದ ದಾರಿಗೆ ಕರೆದೊಯ್ಯುತ್ತೆ. ನಾವು ಭೌತಿಕ ಸುಖದ ಅನ್ವೇಷಣೆಯಲ್ಲಿ, ವಸ್ತುಗಳನ್ನ ಸಂಗ್ರಹಿಸ್ತ ಹೋಗ್ತೇವೆ, ವ್ಯಕ್ತಿತ್ವವನ್ನ ಮಾರಿಕೊಳ್ಳತೆವೆ. ಏನೇ ಮಾಡಿ, ಹ್ಯಾಗೆ ಮಾಡಿ, ಒಳ್ಳೆದಿರಲಿ ಕೆಟ್ಟದ್ದಿರಲಿ, ಸಮಾಜ ಎತ್ತಿಕುಟ್ಟಿ ಹೋಗಲಿ, ನಾನು ಮಾತ್ರ ಎಂಜಾಯ್ ಮಾಡಬೇಕು.ಇಂದಿನ ಭಾರತದ ಸಮಾಜ ಭೌತಿಕತೆಗೆ ಹಿಡಿದ ಕನ್ನಡಿಯಾಗಿದೆ... ಪಾಪ, ಅತ್ಯಾಚಾರ, ಕೊಲೆ, ಸುಲಿಗೆ, ಭ್ರಷ್ಟಾಚಾರ, ಅನೈತಿಕತೆ, ಎಲ್ಲವೂ ಇದರ ನರನಾಡಿಗಳೇ ಮತ್ತು ಎಲ್ಲವೂ ಸಮಂಜಸವೇ".

ಸುಖವಾದ್ರು ಎಂತಹುದು ಅಂತೀರಾ? ಉದಾಹರಣೆಗೆ, ನನಗೆ ಒಂದು ಜೊತೆ ಹೊಸ ಬಟ್ಟೆ ಬೇಕು, ಅದಕ್ಕೆ ನಾನು ಹೊಸ ಬಟ್ಟೆ ಖರಿದಿಸಿದ್ರೆ ನನಗೆ ಖುಷಿ, ಸಂತೋಷ, ಆನಂದ ಅನ್ನಿಸ ಬೇಕು ತಾನೆ? ಆನಂದ ಏನೋ ಆಗುತ್ತೆ ಆದ್ರೆ ಅನ್ಕೊಂಡಿರೋ ಆನಂದ ಅನ್ನಿಸಲ್ಲ ಯಾಕೆ? " ಹೊಸ ಬಟ್ಟೆಗಳನ್ನ ನಾನು ಧರಿಸಿ ಹೊರಗೆ ಹೋದಾಗ ಗೆಳೆಯರು, ಜನರು, ಮನೆಯವರು ಎಲ್ಲರು ನೋಡಿ, "ಎಷ್ಟು ಚೆನ್ನಾಗಿದೆ ನಿನ್ನ ಬಟ್ಟೆ, ಎಲ್ಲಿ ತಗೊಂಡೆ? " ಅಂದಾಗ ಇನ್ನೂ ಆನಂದ ಆಗುತ್ತೆ. ಆಮೇಲೆ ಇನ್ನೂ ಕೆಲವರು, ನಾನು ಇಂತಹ ಬಟ್ಟೆ ತಗೊಳ್ಬೇಕಂದ್ರೆ ನನಗೆ ಇಂತಹ ಬಟ್ಟೆ ಸಿಕ್ಕೋದೇ ಇಲ್ಲಾ. ನಿನ್ನ ಸೆಲೆಕ್ಷನ್ ತುಂಬಾ ಚೆನ್ನಾಗಿರುತ್ತೆ" ಅಂದಾಗ  ಇನ್ನು ಆನಂದ ಆಗುತ್ತೆಎಲ್ಲಿವರೆಗೆ ಬೇರೆಯವರು ಹೊಗಳೋದಿಲ್ಲವೋ ಅಥವಾ ಅವರಿಗೆ ಥರದ ಬಟ್ಟೆ ಸಿಕ್ಕಲಿಲ್ಲ ಅಂತ ಗೊತ್ತಗೊದಿಲ್ವೋ ಅಲ್ಲಿಯವರೆಗೆ ನನಗೆ ನಾನು ಅನ್ಕೊಂಡಿರೋ ಆನಂದ ಸಿಗೋದೆ ಇಲ್ಲ. ಅಂದ್ರೆ ಇದರ ಅರ್ಥ ನನಗೆ ಬಟ್ಟೆ ತಂದಿರೋ ಖುಷಿ, ಖುಷಿನೇ ಅಲ್ಲ.

ಸುಖ ಈಗ ಬರೀ ಸುಖ/ಆನಂದವಾಗಿ ಉಳಿದಿಲ್ಲ, ಭಾವೊದ್ವೇಗವೇ (excitement /enjoyment) ಇಂದು ಆನಂದ ಅಂತ ಅಂದುಕೊಂಡು ಬಿಟ್ಟಿದಿವಿ.ನರ-ನಾಡಿಗಳಲ್ಲೆಲ್ಲ ರಕ್ತ ಸಂಚಾರ ಜಾಸ್ತಿಯಾಗಿ, ಹೃದಯದ ಬಡಿತ ಎಲ್ಲೇ ಮೀರಿ, ಉಸಿರು ರಾಕಿಂಗ್ ರಾಗ ಹಾಡಿದಾಗ ಆಗುವ ಆನಂದವನ್ನೇ ನಾವು ನಿಜವಾದ ಆನಂದ ಅನ್ಕೊಂಡಿದ್ದಿವಿ. ಅದರಲ್ಲಿ ಸ್ವಲ್ಪ ಕಮ್ಮಿಯಾದರೂ ಜೀವನ ಬೋರಿಂಗ ಅನ್ನಿಸಿ ಖಿನ್ನತೆಯ ಆಳಕ್ಕೆ ಧುಮುಕಿ ಬಿಡ್ತಿವಿ. ನಾ ಮೊದಲು ತಾ ಮೊದಲು ಎಕ್ಸೈಟ್ಮೆಂಟ್ ಕೊಡಬೇಕು ಅನ್ನೋ ರೇಸ್  ಜೀವನದಲ್ಲಿ ಒಂದು ಸಾರಿ ಪ್ರಾರಂಭ ಆಗಿಬಿಟ್ಟರೆ, ಅದಕ್ಕೆ ಏನೇನು ಬಲಿ ಆಗುತ್ವೆ ಅನ್ನೋದು ಜೇವನದ  ಕೊನೆ ಗಳಿಗೆನಲ್ಲಿ ಬ್ಯಾಲನ್ಸ್ ಶೀಟ್ ತಗೆದು ನೋಡಿದಾಗಲೇ ಗೊತ್ತಾಗೋದು...

"ಮಂಗನಿಂದ ಮಾನವ" ಅಂತ ಜನ ಹೇಳಿದಾಗ, ನೋಡಕ್ಕೆನೋ ಮಾನವ ಮಂಗನಂತೆ ಕಾಣಿಸ್ತಾನೆ ಆದ್ರೆ ಈತನ ಬಾಲ ಎಲ್ಲಿ ಹೋಯಿತು ಅಂತ ನನಗೆ ಅನ್ನಿಸೋದು. ಆದ್ರೆ ಅದಕ್ಕೆ ಇಂದು ಉತ್ತರ ಸಿಕ್ಕಿದೆ. ಪ್ರಾಣಿಗಳಿಗೂ ಮಾನವನಿಗೂ ಇರೋ ವ್ಯತ್ಯಾಸ ಏನಂದ್ರೆ ಪ್ರಾಣಿಗಳಿಗೆ ಬಾಲ ಇದೆ ಮಾನವನಿಗೆ ಇಲ್ಲಾ, ಪ್ರಾಣಿಗಳಿಗೆ ಬುದ್ಧಿ ಇಲ್ಲಾ ಆದ್ರೆ ಮಾನವನಿಗೆ ಬುದ್ಧಿ ಇದೆ. ಮಂಗನ ಬಾಲವೇ ಮಾನವನ ಬುದ್ಧಿ ಆಯ್ತಾ ಅಂತ. ನೀವೇನಂತೀರ, ಆಮೇಲೆ ತಿಳಿಸಿ.

೧೦೦ ಕ್ಕೆ ೯೦ ರಷ್ಟು ಜನರ ಬುದ್ಧಿಲಿ ಸ್ವಾರ್ಥ, ಅಹಂಕಾರ, ಅಸೂಯೆಗಳೇ ಮನೆ ಮಾಡಿರುತ್ತವೆ .  ಮನಸ್ಸಿನ ವಿಷಯಾಸಕ್ತ ವಿಕೃತ ಸುಖಾಪೆಕ್ಷೆಯೇ ಇರಬಹುದು ಇಲ್ಲಾ ಎಕ್ಸೈಟಮೆಂಟ್ ನಿಂದ ಕೂಡಿದ ಜೀವನಾನಂದದ ಬೇಡಿಕೆಯೇ ಇರಬಹುದು ಇವುಗಳು ಒಂದೇ ಸಾರಿ ತಣಿಯೋದಿಲ್ಲ. ಒಂದರ ಹಿಂದೆ ಒಂದರಂತೆ ಹುಟ್ಟಿಕೊಳ್ಳತಾನೇ ಇರುತ್ತವೆ ಮತ್ತು ಮನಸ್ಸಿನ ನೆಮ್ಮದಿನ ಹಾಳು ಮಾಡತ್ತಾನೆ ಇರುತ್ತವೆ. ಮನಸ್ಸಿನ ಇಂತಹ ಬೇಡಿಕೆಗಳು ಹೆಚ್ಚಾದಂತೆಲ್ಲ ಅವುಗಳ ಪೂರೈಕೆಯ ಹಸಿವು ತೀವ್ರಗೊಳ್ಳುತ್ತೆ. ಪಂಚೇಂದ್ರಿಯಗಳಿಂದ ತಣಿಯದ ಮನದ ಅಪೇಕ್ಷೆಗಳು ಕಾಮ, ಕ್ರೋಧ, ಮೋಹ, ಮದ, ಮತ್ಸರ, ಲೋಭ ಗಳಾಗಿ ಜನ್ಮತಾಳುತ್ತವೆ. ಮುಂದೆ ಇವುಗಳೇ ನಮ್ಮ ಸ್ವಭಾವವಾಗಿ ಪರಿವರ್ತಿತ ಗೊಳ್ಳುತ್ತವೆ.


ಮರ್ಕಟ ಮನಸ್ಸಿಗೆ ಕಡಿವಾಣ ಹಾಕೊದಾದ್ರು ಯಾರುಮತ್ತು ಹೇಗೆ?

ಚಂಚಲವಾದ ಮನಸ್ಸನ್ನ ಒಂದು ನಿಭಂದನೆಗೆ ಒಳಪಡಿಸೋದು ಬಹಳ ಕಷ್ಟವಾದ ಕೆಲಸವಾದ್ರು ಆಗದೆ ಇರೋ ಕೆಲಸವಂತೂ ಖಂಡಿತ ಅಲ್ಲ. ಮನಸ್ಸಿನ ನಿಯಂತ್ರಣಕ್ಕೆ ಮುಖ್ಯವಾಗಿ ಬೇಕಾಗಿರೋದು ಯಾವುದೇ ಕಠಿಣವಾದ  ನಿಯಂತ್ರಣವಲ್ಲ ಬದಲಾಗಿ ಮನಸ್ಸನ್ನ ನಿಯಂತ್ರಣಕ್ಕೆ ತರಬೇಕೆಂಬ ಇಚ್ಛಾ ಶಕ್ತಿ ಹಾಗೂ ಪ್ರಬಲವಾದ ಸಂಕಲ್ಪಶಕ್ತಿ. ಇದನ್ನು ನಿಯಂತ್ರಣಕ್ಕೆ ತರಲು ನಾವು ನಮ್ಮ ಜೀವನ ಪದ್ಧತಿಯಲ್ಲಿ ಕೆಲವು ನಿಯಮಗಳನ್ನ ಹಾಕಿಕೊಳ್ಳಬೇಕಾಗುತ್ತದೆ. ಮನಸ್ಸು ನಿಭಂದನೆಗಳಿಗೆ ಒಳಪಡುವ ಮುನ್ನ ಸ್ವಲ್ಪ ಇದು ಆಗದೆ ಇರುವ ಕೆಲಸವೆನ್ನಿಸುತ್ತದೆ. ಆದರೆ ನಿಭಂದನೆಗಳು ಸ್ವ ಇಚ್ಛಾ ಶಕ್ತಿಯಿಂದ ಕೂಡಿದವು ಆಗಿದ್ದರೆ ಅದರ ನಿಯಂತ್ರಣ ಸುಲಭ ಸಾಧ್ಯ. ವಿಷಯಾಸಕ್ತಿಯನ್ನು (desires) ಕಡಿಮೆ ಮಾಡುತ್ತಾ ಹೋಗುವುದು. ವಿಷಯಾಸಕ್ತಿ ಎಂದರೆ ಲೌಕಿಕ ಆಸೆ ಆಕಾಂಕ್ಷೆ ಮತ್ತು ಭೋಗ ಗಳಿಂದ ಸುಖವನ್ನು ಹೊಂದಬೇಕೆಂಬ ಆಸೆ. ಇಂತಹ ವಿಷಯಾಸಕ್ತಿಯನ್ನು ಕಡಿಮೆ ಮಾಡದ ಹೊರತು ಮನೋ ನಿಗ್ರಹ ಅಸಾಧ್ಯ. ಶಿಸ್ತುಬದ್ಧವಿಲ್ಲದ ಜೀವನಕ್ಕೆ ಬೆಲೆ ಏನು?

ಉದಾಹರಣೆಗೆ, ನಿಮ್ಮ ಮನೆಯಲ್ಲಿ ಕೆಲಸ ಮಾಡುವ ಆಳಿನ ಕೈಲಿ ಮಾದಕ ವಸ್ತುಗಳನ್ನ ತರಿಸಿ, ಇಬ್ಬರು ಜೊತೆಗೂಡಿ ಅದನ್ನ ಸೇವಿಸುತ್ತ ರಮಿಸಿದರೆ, ಅಳನ್ನು ನೀವು ಹೇಗೆತಾನೆ ಹತೋಟಿಯಲ್ಲಿಟ್ಟುಕೊಳ್ಳ ಬಲ್ಲಿರಿ? ಅದೇ ತರಹ ಭೌತಿಕ ಸುಖದ ಅನ್ವೇಷಣೆ ಮತ್ತು ಅದರ ಅನುಭೋಗದಲ್ಲಿಯೇ ಮನಸ್ಸಿಗೆ ಚಾಲನೆ ನೀಡುತ್ತ ಇದ್ದರೆ, ಅದು ಹೇಗೆ ತಾನೇ ನಮ್ಮ ನಿಯಂತ್ರಣಕ್ಕೆ ಒಳಪಡಲು ಸಾಧ್ಯ?

ವಿಷಯ ಸುಖದ ಅನ್ವೇಷಣೆಯನ್ನು ನಿಲ್ಲಿಸಬೇಕು ಎಂದರೆ ಸುಖದ ಆಪೇಕ್ಷೆಯನ್ನು ತಡೆಯಬೇಕೆಂದೆನಲ್ಲ. ವಿಷಯ ಸುಖ ಎಂದರೆ ನಿಜವಾದ ಅಲೌಕಿಕ ಸುಖದ ದಾರಿಯಲ್ಲಿ ಅಡ್ಡಿ ಎಂದರ್ಥ. ಅದು ಕಾಮ, ಕ್ರೋಧ, ಮೋಹ, ಮತ್ಸರ, ಲೋಭ ಹಾಗೂ ಅಹಂ ನಿಂದ ಹುಟ್ಟಿದ ಅಪಕ್ವ ಸುಖ. ಇಂತಹ ಆನಂದ ಕ್ಷಣಿಕ. ಇದು ಎಂದಿಗೂ, ಯಾರಿಗೂ ಸಮಾಧಾನ, ತೃಪ್ತಿ ನೆಮ್ಮದಿಯನ್ನು ಕೊಡಲಾರದು.

ಮನಸ್ಸಿಗೆ ನಿಯಂತ್ರಣದಲ್ಲಿಡಲು ಸಹಾಯಕವಾಗುವ ಕೆಲವು ಅಂಶಗಳು.
  • ಮೊದಲೇ ತಿಳಿಸಿದಂತೆ ಬದಲಾಗಬೇಕೆಂಬ ಪ್ರಬಲ ಇಚ್ಛಾ ಶಕ್ತಿ ಹಾಗೂ ಧೃಢ ಸಂಕಲ್ಪ ಮನಸ್ಸಿನ ನಿಯಂತ್ರಣಕ್ಕೆ ಮೂಲ.
  • ಅತಿಯಾಗಿ ಭೌತಿಕ ಸುಖಕ್ಕೆ ಅಂಟಿಕೊಳ್ಳದೆ ಆಧ್ಯಾತ್ಮದಲ್ಲಿ ಮನಸ್ಸನ್ನ ಹರಿಬಿಡುವುದು ಮತ್ತು ಅಂತಹ ಆಸೆಗಳಿಗೆ ನಿಧಾನವಾಗಿ ಕಡಿವಾನಹಕುವುದು.
  • ಧ್ಯಾನದಿಂದ ಮನಸ್ಸು ಸ್ಥಿರಗೊಂಡು ನಮ್ಮ ಚಿಂತನೆಯನ್ನು ಲೌಕಿಕದಿಂದ ಅಲೌಕಿದೆಡೆಗೆ ತಿಗುವುದು.
  • ಒಳ್ಳೆಯ ಸಾಹಿತ್ಯ ಹಾಗೂ ಮಹಾಪುರುಷರ ಆತ್ಮಚರಿತ್ರೆಯ ಸ್ವಾಧ್ಯಾಯದಿಂದ ಮನಸ್ಸು ಆಧ್ಯಾತ್ಮದ ಕಡೆಗೆ ಸಾಗುವುದು.
  • ದೈವ ಶೃದ್ಧೆ ಹಾಗೂ ಭಕ್ತಿಯಿಂದಲೂ ಮನಸ್ಸಿನ ನಿಯಂತ್ರಣ ಸುಲಭವಾಗುವುದು. ಮನೋ ನಿಗ್ರಹವನ್ನು ಕುರಿತು ದೇವರಲ್ಲಿ ಸಲ್ಲಿಸುವ ಆರ್ತತೆಯಿಂದ ಕೂಡಿದ ಪ್ರಾರ್ಥನೆಯಿಂದ ಕಾರ್ಯ ಇನ್ನು ಸರಳವಾಗುವುದು.
  • ನಮ್ಮ ದೈನಂದಿನ ಒತ್ತಡದ ಜೀವನದಲ್ಲೂ ಸ್ವಲ್ಪ ಸಮಯವನ್ನು ಸಂಸಾರಿಕ ಆಲೋಚನೆಗಳಿಂದ ದೂರಮಾಡಿ ದಿನ ಸಂಭವಿಸಿದ ಕೆಲವು ಘಟನೆಗಳನ್ನ ಮೆಲಕು ಹಾಕುವುದು ಮತ್ತು ಬದುಕಿನ ನಿಜ ಅರ್ಥದ ಬಗ್ಗೆ ಚಿಂತನೆ ಮಾಡುವುದು ಮತ್ತು ಯಾವುದಾದರು ತಪ್ಪು ನಡೆದಿದ್ದಲ್ಲಿ ಅದು ಪುನರವರ್ತಿಸದಂತೆ ಎಚ್ಚರವಹಿಸುವುದು.
  • ಬೇರೆಯವರ ಜೀವನ ಶೈಲಿಯನ್ನ ಅನುಸರಿಸದೆ ಅಥವಾ ಅವರಿಗೆ ಸ್ಪರ್ಧಾತ್ಮಕವಾಗಿ ಸ್ಪಂದಿಸದೇ ನಮ್ಮದೇ ಸ್ವಂತದ ನಿರ್ಧಾರಗಳನ್ನ ಶಾಂತಿ ಸಮಾಧಾನದಿಂದ ತೆಗೆದುಕೊಂಡು ಬೇರೆಯವರಿಗೆ ತುಲನಾತ್ಮಕವಾಗಿ ಪರಿಶೀಲಿಸದೆ (comparison) ಸಾಗುವುದು.

ನಾವು ನಮ್ಮ ಮನೋ ನಿಗ್ರಹಕ್ಕೆ ಕೆಲವು ನಿಮಾಳಿಗಳನ್ನು ಹಾಕಿಕೊಂಡು ಜೀವನನ್ನ ಸರಿಪಡಿಸಲು ಹೊರಟಾಗ, ಇಲ್ಲಿಯವರೆಗೆ ಭೌತಿಕ ಸುಖ ಸಂತೋಷಗಳಿಗೆಯೇ ಅಂಟಿಕೊಂಡಿರುವ ನಮ್ಮ ಮನಸ್ಸು ಹೆಜ್ಜೆ ಹೆಜ್ಜೆಗೂ ತಡೆಗೋಡೆಗಳನ್ನ ನಿರ್ಮಿಸುತ್ತದೆ ಅಲ್ಲದೆ ನಮ್ಮನು ತಪ್ಪು ದಾರಿಗೆ ಎಳೆಯಲು ಅಥವಾ ವಂಚಿಸಲು ಪ್ರಯತ್ನಿಸುತ್ತದೆ. ಆದರೆ ಮನಸ್ಸಿನ ಜೊತೆಯ ತಿಕ್ಕಾಟದಲ್ಲಿ ಪದೇ ಪದೇ ಎದುರಾಗೋ ಸೋಲುಗಳಿಗೆ ಎದೆಗುಂದದೆ ಧೈರ್ಯದಿಂದ ಮುನ್ನುಗ್ಗಬೇಕು. ಸೋಲುಗಳು ನಮ್ಮ ಮನೋ ಸ್ಥೈರ್ಯವನ್ನು ಹಾಳುಮಾಡಲು ಬಿಡದೆ ಪ್ರತಿ ಪರಾಭವವು ನಮ್ಮನ್ನು ಹೊಸ ಉತ್ಸಾಹ ಹಾಗೂ ಪ್ರಯತ್ನಗಳಿಗೆ ಪ್ರೋತ್ಸಹಿಸುವಂತೆ ನೋಡಿಕೊಳ್ಳಬೇಕು. ಸ್ವಲ್ಪ ಆರಂಭಿಕ ಪ್ರಯಾಸದ ನಂತರ ಇದು ಸರಳ ಹಾಗೂ ನೆಮ್ಮದಿಯನ್ನು ಕೊಡುವಂತಹುದಾಗುತ್ತದೆ.

ಪ್ರತಿಯೊಂದು ವಿಷಯವನ್ನು ಆತ್ಮದ ನೆಲೆಗಟ್ಟಲ್ಲಿ ಯೋಚಿಸಿ ನಿರ್ಣಯ ತೆಗೆದುಕೊಳ್ಳುವ ಸ್ವಭಾವವನ್ನು ಬೆಳೆಸಿಕೊಂಡರೆ ಮನಸ್ಸಿನ ಹುಚ್ಚಾಟ ನಿಂತು ವ್ಯಕ್ತಿತ್ವಕ್ಕೆ ಮೆರಗು ನೀಡುತ್ತದೆ ಮತ್ತು ಆತ್ಮೋನ್ನತಿಗೆ ನಾಂದಿಯಾಗುತ್ತದೆ. "ಜಿಂದಗಿ ನಾ ಮಿಲೆಗಿ ದೋಬಾರಾ" ( ಜೀವನ ಮತ್ತೆ ಸಿಗಲಾರದು) ನಿಜ ಆದರೆ ಇದರ ಅರ್ಥ ಬರೀ ಭೌತಿಕ ಸುಖ ಭೋಗಕ್ಕೆಂದೇ ಜೀವನ ಸೀಮಿತಗೊಳಿಸದೆ ಪಾರಮಾರ್ಥಿಕ ಸುಖಕ್ಕೂ ಹಾಗೂ ಜನ್ಮ-ಜನ್ಮಾಂತರಗಳ ಸುಖಕ್ಕೂ ಅದು ಬುತ್ತಿಯಾಗಬೇಕು.

--
ಕೆ. ಕಲ್ಯಾಣ

No comments:

Post a Comment