Pages

Sunday, April 28, 2013

ಬುಡ-ಬುಡಕ್ಯಾ

ಚುನಾವಣಿ ಬಂತಣ್ಣ ಚುನಾವಣಿ
ಮತ್ತೆ ಬಡವನ ಮನೆಗೊಡುವ ಹಣಾ ಹಣಿ
ಬುಡ-ಬುಡಕ್, ಬುಡ-ಬುಡಕ್

ಐದೊರ್ಸ ಮನೆ ಕೊಳ್ಳೆ ಹೊಡೆದು ಹಿತ್ಲಿಂದ ಓಡ್ದೋರು
ಮುಂದಗಡಿ ಬಾಗ್ಲೆದ್ರು ಕರ್ಚಿಫ್ಫು ಹಿಡ್ಕೊಂಡು ಕಾಯತವರಣ್ಣ
ರಿಸೋರ್ಟಲ್ಲಿ ವ್ಯವಹಾರ ಮಾಡ್ಕೊಂಡು ತಲೆ ಮರ್ಸ್ಕೊಂಡವರೆಲ್ಲ
ಬೀದಿಗಿಳಿದು ರೋಡ ರೋಡಲ್ಲಿ ಭಿಕ್ಷೆ ಬೇಡತಾವರಣ್ಣ

ಚುನಾವಣಿ ಬಂತಣ್ಣ ಚುನಾವಣಿ
ಬುಡ-ಬುಡಕ್, ಬುಡ-ಬುಡಕ್

ಕುರ್ಸೀಗೆ ಸಂಬಂಧ ಮರ್ಕೊಂಡೋರೆಲ್ಲ
ಬಾಟ್ಲಲ್ಲಿ ಜನ್ಮಾಂತರದ ನೆಂಟಸ್ತನ ಬೆಳೆಸ್ತಾವರಣ್ಣ
ವಿಧಾನಸಭೇಲಿ ಮಾಡಿದ ಪೂರ್ವಾಭ್ಯಾಸದ ನಾಟ್ಕಾನೆಲ್ಲ
ಬೀದಿಗಿಳಿದು ಪ್ರದರ್ಶನ ಮಡತಾವರಣ್ಣ

ಚುನಾವಣಿ ಬಂತಣ್ಣ ಚುನಾವಣಿ
ಬುಡ-ಬುಡಕ್, ಬುಡ-ಬುಡಕ್

ಪ್ರತಿ ದಿನದ ದಿನ ಪತ್ರಿಕೇಲಿ ದರ್ಸನ ಕೊಟ್ಟು
ಅಸ್ಟೋತ್ತರ, ಶತನಾಮಾವಳಿ ಬರೆಸ್ಕೊಂಡೋರೆಲ್ಲ
ಗಲ್ಲಿ ಗಲ್ಲಿಲಿ ಮೈಕ್ ಹಿಡ್ಕೊಂಡು ಸ್ಪೀಕರಲ್ಲಿ
ಬಿಲ್ದಪ್ಪು ಕೊಟ್ಕೊಂಡು ಓಡಾಡ್ತವರಣ್ಣ

ಚುನಾವಣಿ ಬಂತಣ್ಣ ಚುನಾವಣಿ
ಬುಡ-ಬುಡಕ್, ಬುಡ-ಬುಡಕ್

ಸಿ. ಬಿ.ಐ., ಸಿ. ಒ.ಡಿ. ಅಂತೆಲ್ಲ ಕಂಬಿಎಣಿಸಿದೊರೆಲ್ಲ
ಊಸರವಳ್ಳಿ ಹಂಗ ಬಣ್ಣ ಬಳಕೊಂಡು
ಯಕ್ಷಗಾನ ಮಾಡತಾವರಣ್ಣ 


ಚುನಾವಣಿ ಬಂತಣ್ಣ ಚುನಾವಣಿ
ಬುಡ-ಬುಡಕ್, ಬುಡ-ಬುಡಕ್ 


ಒಂದು ದಿನದ ಸುಖಕ್ಕ ನೀ ಐದೊರ್ಸ
ದಾರಿದ್ರ್ಯ ಅಭಾವದ ಸಂಕೋಲೆ ಕಟ್ಕೊಂಡು ನರಳಬ್ಯಾಡಣ್ಣ
ನೀ ರಾಜ, ನೀನೆ ದೇಶದ ಭವಿಷ್ಯ
ಅದಕ್ಕ ಸ್ವಲ್ಪ ಒಳ್ಳೇದು ಕೆಟ್ಟದ್ದು ಅರ್ತ್ಕೊಂಡು ನಿನ್ನ ಮತ ಹಾಕಣ್ಣ
ದೇಶ ಕಟ್ಟಕ್ಕ ನಿನ್ನ ಅನುದಾನ ನೀಡಣ್ಣ

ಚುನಾವಣಿ ಬಂತಣ್ಣ ಚುನಾವಣಿ
ಮತ್ತೆ ಬಡವನ ಮನೆಗೊಡುವ ಹಣಾ ಹಣಿ

ಬುಡ-ಬುಡಕ್, ಬುಡ-ಬುಡಕ್
ಬುಡ-ಬುಡಕ್, ಬುಡ-ಬುಡಕ್ 

- ಕೆ. ಕಲ್ಯಾಣ

No comments:

Post a Comment