Pages

Wednesday, January 22, 2014

ಮತ್ತೆ ದೇಶದ ಭವಿಷ್ಯದ ಬಾಗಿಲು ತಟ್ಟುತ್ತಿದ್ದಾನೆ ತುಘಲಕ್ !


ದೇಶದ ಇಂದಿನ ಕೇಂದ್ರ ಹಾಗೂ ಬಹುತೇಕ ರಾಜ್ಯ ಸರಕಾರಗಳ ಆಡಳಿತದ ವೈಖರಿಯನ್ನು ನೋಡಿದರೆ ಇತಿಹಾಸದ ಪುಟಗಳಲ್ಲಿ ಹುದುಗಿಹೋದ ಒಬ್ಬ ರಾಜನ ನೆನೆಪಾಗುತ್ತದೆ. ಆ ರಾಜನ ಹೆಸರು ಮೊಹಮ್ಮದ ಬಿನ್ ತುಘಲಕ್. ವ್ಯಕ್ತಿಗತವಾಗಿ ಅವನೊಬ್ಬ ತುಂಬಾ ಜಾಣ ಮತ್ತು ಬುದ್ಧಿವಂತನಾಗಿದ್ದನಂತೆ ಆದರೆ ಅವನ ಕಾರ್ಯಶೈಲಿಯಿಂದಾಗಿ ಅವನೋರ್ವ ಮೂರ್ಖ ರಾಜನೆಂದೇ ಪ್ರಸಿದ್ಧನಾಗಿದ್ದನೆ.

ಈತನ ಕೆಲವು ಪ್ರಮುಖ ನಿರ್ಧಾರಗಳನ್ನು ಗಮನಿಸಿದಾಗ ಇಂದು ದೇಶದ ಆಡಳಿತ ಸೂತ್ರ ಸಹ ಇಂತಹುದೇ ಜನರ ಕೈಯಲ್ಲಿದೆ ಎಂದೆನಿಸುವುದಿಲ್ಲವೆ. ಹಾಗೆ ನೋಡಿದರೆ ಇವರು ಕೂಡ ಬುದ್ಧಿಮಾನ್ಯರೆ ಆದರೆ ಅದರ ಲಾಭ  ಈ ದೇಶಕ್ಕೆ ಕಿಂಚಿತ್ತು ಇಲ್ಲ. ಸರಕಾರ ತೆಗೆದುಕೊಳ್ಳುವ ನಿರ್ಧಾರಗಳನ್ನು ಗಮನಿಸಿದರೆ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಹಾಗೆ ಅನ್ನಿಸುತ್ತದೆ. ಮಾನಸಿಕ ಗುಲಾಮಿತನ ಹಾಗೂ ತುಷ್ಟೀಕರಣ ಎಂಬ ಬೇತಾಳಗಳ ಬೆನ್ನಟ್ಟಿ ಇಡಿ ದೇಶದ ದಾರಿತಪ್ಪಿಸಿವೆಯಲ್ಲದೆ ಪ್ರಗತಿಯನ್ನು ಕುಂಠಿತಗೊಳಿಸಿವೆ. ಅಹಂಕಾರ ಮತ್ತು ಅಧಿಕಾರದ ಮತ್ತಿನಲ್ಲಿ ದೇಶದ ಒಳಿತು-ಕೆಡಕುಗಳ ಪರಿವೆಯೂ ಇವರಿಗೆ ಇಲ್ಲದಂತಾಗಿದೆ.  ಇವರ ಜಾಣತನವೆಲ್ಲವೂ ಜನರ ದಾರಿತಪ್ಪಿಸುವುದು, ಮುರ್ಖರನ್ನಾಗಿಸುವುದು ಮತ್ತು ತಮ್ಮ ಒಡೆಯರ ಪ್ರೀತಿಗೆ ಸೈ ಅನಿಸಿಕೊಳ್ಳುವುದಕ್ಕೆ ಸೀಮಿತವಾಗಿದೆ. ಪ್ರಜಾಪ್ರಭುತ್ವದ ಈ ದೇಶದಲ್ಲಿ ಜನರ ಅಭಿಪ್ರಾಯಕ್ಕೆ ಮೂರು ಕಾಸು ಬೆಲೆಯೂ ಇಲ್ಲ. 'ನಮಗೆ ಮತ ಹಾಕಿ ಆರಿಸಿದ್ದಿರಲ್ಲ ಇನ್ನು ೫ ವರ್ಷಕ್ಕೆ ನಮ್ಮನ್ನು ಸಹಿಸಿಕೊಳ್ಳಿ' ಅನ್ನುವ ದರ್ಪ ಅವರದು. ತುಘಲಕ್ ಮಾಡಿದ್ದು ಇದನ್ನೇ. ಅವನಿಗೂ ಯಾರ ಸಲಹೆ ಕೇಳುವ ಪುರಸೊತ್ತು, ನಮ್ರತೆ ಇರಲಿಲ್ಲ. ಅವನ ತಪ್ಪು ನಿರ್ಧಾರಕ್ಕೆ ಇಡಿ ರಾಜ್ಯ ಅದರ ದುಷ್ಪರಿಣಾಮ ಎದುರಿಸಬೇಕಾಯಿತು.

ಅವರು ತೆಗೆದುಕೊಳ್ಳುವ ನೀತಿ-ನಿರ್ಧಾರಗಳೆಲ್ಲದರ ಹಿಂದೆ ಪರದೆಯ ಹಿಂದಿನ ಸೂತ್ರಗಳ ಕೈವಾಡವಿರುತ್ತವೆ. ಒಂದು ಪ್ರಜಾಪ್ರಭ್ತ್ವ ಸರಕಾರದ ಈ ಸ್ಥಿತಿ ನೋಡಿದರೆ ಸ್ವಾತಂತ್ರ್ಯ ಎಲ್ಲಿದೆ? ಅದು ಬರೀ ಒಂದು ಮನೆತನದ ಆಳಾಗಿ ಉಳಿದಿದೆಯೇ? ಎಂಬ ಪ್ರಶ್ನೆ ಚಿತ್ತವನ್ನು ಕೊರೆಯುತ್ತದೆ. ಇದಕ್ಕೆ ಕಾರಣ, ಮಾನಸಿಕ ಗುಲಾಮರಾದ ನಾಯಕರು ಮತ್ತು ಅವರಿಗೆ ಮತಹಾಕಿ ಚುನಾಯಿಸುವ ನಾವುಗಳು ತಾನೇ. ತನ್ನ ಒಲೆಯಲ್ಲಿ ತಾನೇ ಕಕ್ಕಸ ಮಾಡಿ, ನೋಡಿ ನನ್ನ ದೈವ ಅಂದಹಾಗಾಯಿತು ನಮ್ಮ ಪಾಡು.

ಅಧಿಕಾರದಿಂದ ಹಣ, ಹಣದಿಂದ ಅಧಿಕಾರ ಮತ್ತು ಅಧಿಕಾರದ ಮದದಲ್ಲಿನ ಗುಂಡಾ ಪ್ರವೃತ್ತಿ, ಇಂತಹುದೊಂದು ವಿಷವರ್ತುಲ ನಮ್ಮನ್ನು ಸುತ್ತಿ ನಿಷ್ಕ್ರಿಯರನ್ನಾಗಿಸಿದೆ. ದಾದಾಗಿರಿಯಿಂದ ಮಾಧ್ಯಮಗಳ ನಿಯಂತ್ರಣ. ವಾಸ್ತವದಲ್ಲಿ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ಥಂಬಗಳಲ್ಲಿ ಒಂದು. ಹೇಗೆ ಒಬ್ಬ ರಾಜಕಾರಣಿ ತನ್ನದೇ ಹೆಸರಿನಲ್ಲಿ ಒಂದು ಸ್ವಂತಂತ್ರ ಮಾಧ್ಯಮ ಹೊಂದಿರಲು ಸಾಧ್ಯ? ಇದರ ಗಂಭೀರ ಪರಿಣಾಮಗಳೇನಾಗಬಹುದು ಎಂದು ಚರ್ಚಿಸುವವರಾರು? ತುಘಕ್ ದರ್ಬಾರ್ ನಲ್ಲಿ ಎಲ್ಲವೂ ಸಾಧ್ಯ.

ಇಂದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಬಂಧಗಳು ತಮ್ಮ ಅನುಕೂಲ ಅನಾನುಕೂಲತೆಗಳ ಲೆಕ್ಕಾಚಾರಕ್ಕೆ ಜೋತು ಬಿದ್ದಿವೆ. ಒಂದುವೇಳೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿನ ಅಧಿಕಾರಾರೂಢ ಪಕ್ಷ ಒಂದೇ ಆಗಿದ್ದಲ್ಲಿ ರಾಜ್ಯಕ್ಕೆ ವಿವಿಧ ಯೋಜನೆಗಳ ಅಡಿಯಲ್ಲಿ ಅನುದಾನ ಹರಿದು ಬರುತ್ತದೆ ಇಲ್ಲವಾದಲ್ಲಿ ಮಲತಾಯಿ ಧೋರಣೆ ತಪ್ಪಿದ್ದಲ್ಲ. ಜನರಿಂದ ಚುನಾಯಿಸಲ್ಪಟ್ಟ ಒಂದು ದೇಶದ/ರಾಜ್ಯದ ಸರಕಾರ ತನ್ನ ಪಕ್ಷದ ಇತಿ-ಮಿತಿಗಳಲ್ಲಿ ಲಾಭ-ನಷ್ಟಗಳ ಲೆಕ್ಕಾಚಾರ ಹಾಕಿ ಒಂದು ಕಂಪನಿಯ ತರಹ  ವ್ಯವಹಾರ ನಡೆಸುವುದು ಸರಿಯೇ? ಎಲ್ಲ ರಾಜ್ಯಗಳು ಈ ದೇಶದ ಅವಿಭಾಜ್ಯ ಅಂಗವಲ್ಲವೆ? ಹಾಗಾದಲ್ಲಿ ಯಾಕೆ ತುಷ್ಟಿಕರಣದ ಇಂತಹುದೊಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಾಗುತ್ತಿದೆ? ಯಾಕೆ ದೇಶಕ್ಕಿಂತ ಪಾರ್ಟಿಗಳು ದೊಡ್ದವಾಗುತ್ತಿವೆ? ಯಾಕೆ ನಮ್ಮ ಯೋಜನೆ, ನಿರ್ಣಯಗಳು ಮುಂದಿನ ಚುನಾವಣೆಯನ್ನು ಲಕ್ಷ್ಮಣ ರೇಖೆಯಾಗಿ ಪರಿಗಣಿಸಿ ಕಾರ್ಯ ನಿರ್ವಹಿಸುತ್ತಿವೆ? ಈ ಯಕ್ಷ ಪ್ರಶ್ನೆಗಳಿಗೆ ಉತ್ತರ ನಾವೇ ಹುಡುಕಬೇಕಿದೆ. 

ಸರಕಾರದ ಅಂಗ ಸಂಸ್ಥೆ (ಏಜೆನ್ಸಿ) ಗಳನ್ನು ಸ್ವತಂತ್ರವಾಗಿ ಕೆಲಸಮಾಡಲು ಬಿಡುತ್ತಿಲ್ಲ. ಕಾರ್ಯಾಂಗದ ಮೇಲೆ ಶಾಸಕಾಂಗದ ಹಿಡಿತ ಸರಿಯೇ? ಈ ಸರಕಾರ ಅದೇಕೆ CBI, CVC, ED, ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಗಳನ್ನು ತನ್ನ ಸ್ವೆಚ್ಛಾಚಾರಕ್ಕೆ ಮತ್ತು ವಿರೋಧಿಗಳ ಕಡಿವಾಣಕ್ಕೆ ಬಳಸಿಕೊಳ್ಳುತ್ತಿದೆ? ಈ ಸಂಸ್ಥೆಗಳು ಇರುವುದು ಸತ್ಯಾಂಶವನ್ನು ನಿಷ್ಪಕ್ಷ ವಾಗಿ ದೇಶದ ಮುಂದೆ ತೆರೆದಿಡಲು ಆದರೆ ಇವುಗಳ ಖುಲ್ಲಂ-ಖುಲ್ಲಾ ದುರುಪಯೋಗ ದೇಶದ ಅರಾಜಕತೆಯ ಇಳಿಜಾರಿಗೆ ಇಟ್ಟ ಬಹುದೊಡ್ಡ ಹೆಜ್ಜೆಯಾಗಿದೆ.

ಶುರುವಾಗಿದೆ ಹೊಸ ತುಘಲಕ್ ದರ್ಬಾರ್...

ಕೇಂದ್ರ ಸರ್ಕಾರದ ಅರಾಜಕತೆ ಒಂದೆಡೆಯಾದರೆ ಚಳುವಳಿಯಿಂದ ಪಕ್ಷ ಕಟ್ಟಿ ಮೊನ್ನೆ ತಾನೆ ಅಧಿಕಾರಕ್ಕೆ ಬಂದ ಪಕ್ಷಗಳು ಅರಾಜಕತೆಗೆ ಇನ್ನೊಂದು ಅಧ್ಯಾಯ ಬರೆಯುತ್ತಿವೆ. ಪ್ರಜಾಪ್ರಭುತ್ವ ಅಂದರೆ ಜನರು ಅಭ್ಯರ್ಥಿಗಳನ್ನ ಚುನಾಯಿಸಿ ಕಳಿಸುವುದು ಮಾತ್ರ, ಆಮೇಲೆ ಗೆದ್ದವನದ್ದೆ ದರ್ಬಾರು ಅನ್ನೋ ಪರಿಪಾಠ ಹಾಕಿದ್ದ ಕೇಂದ್ರ ಸರಕಾರಕ್ಕೆ ಸವಾಲಾಗಿ ಅದರ ತದ್ವಿರುದ್ಧವಾಗಿ ಆದರೆ ತುಂಬಾ ಬಾಲಿಶವಾಗಿ ಅಂದರೆ ಬೀದಿ ರಾಜಕಾರಣಕ್ಕೆ ನಾಂದಿ ಹಾಡುತ್ತಿರುವುದು ತುಂಬಾ ವಿಪರ್ಯಾಸದ ಸಂಗತಿ. ಸರಕಾರಗಳು ಇನ್ನು ಮುಂದೆ ಪ್ರತಿ ಹೆಜ್ಜೆಗೂ ಜನರ ಅಭಿಪ್ರಾಯ ಸಂಗ್ರಹಿಸುವುದೇ ಕೆಲಸ ಅನ್ನೋ ವ್ಯಾಖ್ಯಾನ ಬರೆಯುತ್ತಿವೆ. ಸರಕಾರ ಎಂದರೆ ಜವಾಬ್ದಾರಿ, ನಿಲುವುಗಳ ಸ್ಪಷ್ಟತೆ, ನೀತಿ ನಿರ್ಧಾರಗಳನ್ನು ಜನ ಹಾಗೂ ದೇಶ ಹಿತದಲ್ಲಿ ತೆಗೆದುಕೊಳ್ಳುವ ಸ್ವಾಯತ್ತತೆ. ಅದರ ಗಾಂಭೀರ್ಯತೆಯನ್ನು ಅರಿಯದೆ ತಮ್ಮ ಹಟಕ್ಕಾಗಿ ಸರಕಾರವನ್ನು ಮತ್ತು ದೇಶವನ್ನು ಮುಜುಗರಕ್ಕೆ ಎಡೆಮಾಡಿ, ಕೆಲವರ ಹಿತಕ್ಕಾಗಿ ಅನೇಕ ಸಾರ್ವಜನಿಕರಿಗೆ ತೊಂದರೆ ಕೊಡುವುದು ಇದಾವ ಪ್ರಜಾಪ್ರಭುತ್ವ? ತುಘಲಕ್ ರ ಈ ಬೀದಿ ದರ್ಬಾರು ಅದೆಷ್ಟು ಸಮಂಜಸ, ಅದೆಷ್ಟು ಪ್ರಜಾ ಹಿತಕಾರಿ ಹಾಗೂ ದೇಶ ಕಂಟಕಕಾರಿ?  ನೀವೇ ಯೋಚಿಸಿ. 

ಇಂತಹ ಕ್ಷುಲ್ಲಕ ಆದರೆ ಗಂಭೀರ ಪರಿಣಾಮ ಬೀರಬಲ್ಲ ಬೆಳವಣಿಗೆಗಳಿಂದಾಗಿ ದೇಶದ ಘನತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದಿನೇ ದಿನೇ ಕುಸಿಯುತ್ತಿದೆ ಅಲ್ಲದೆ ಜನರ ಸ್ವಾಭಿಮಾನ ನೆಲಕಚ್ಚುತ್ತಿದೆ.

ಈ ದೇಶವೇ ಹೀಗೆ, ಇಲ್ಲಿಯ ವ್ಯವಸ್ಥೆ, ಅವಸ್ಥೆಗಳೆ ಹೀಗೆ, ಅಂದ್ಕೊಂಡು ಸುಮ್ಮನಿರೋಣ ಅಂದ್ರೆ ಹಾಳಾದ ಈ ಮನಸ್ಸು ನಮ್ಮ ತಾಯಿಯನ್ನ ಮತ್ತು ಅವಳ ಕೋಟ್ಯಾಂತರ ಮಕ್ಕಳನ್ನ ಹಾಗೆ ಬಿಟ್ಟು ಹೋಗಕ್ಕೆ ಒಪ್ಪಲ್ವಲ್ಲಾರೀ. 

ದೇಶಕ್ಕೆ ಬೇಕಿರುವುದು ಸರ್ವಾಧಿಕಾರವು ಅಲ್ಲ, ಬೀದಿ ರಾಜಕಾರಣವೂ ಅಲ್ಲ. ಬೇಕಿರುವುದು ಸುಭದ್ರ, ಸಮೃದ್ಧ, ಸ್ವಾಭಿಮಾನಿ ಸರಕಾರ. ಇದರಲ್ಲಿ ಎಲ್ಲರ ಒಳಿತು ಮತ್ತು ದೇಶದ ಅಭಿವೃದ್ಧಿಯಾಗಬೇಕು ಅಷ್ಟೇ. 

ನಾನೇನು ಮಾಡಬಲ್ಲೆ ಅನ್ಕೊಂಡು ಕೊರಗಬೇಕಾದ್ರೆ, ನಮ್ಮ ಕೊಂಚ ಪ್ರಯತ್ನದಿಂದಾಗಿ ದೇಶದ ದೆಸೆ ದಿಶೆ ಬದಲಾಗುವ ಒಂದು ಒಳ್ಳೆಯ ಅವಕಾಶ ಆ ದೇವರೇ ನಮಗೆ (ಸೋಮಾರಿಗಳಿಗೆ) ಕಲ್ಪಿಸಿದ್ದಾನೆ.

ನೀವು ಮಾಡಬೇಕಾದು ಇಷ್ಟೇ.. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಮತ ಹಾಕಿ. ಮತ ಹಾಕುವಾಗ ಈ ಮೇಲಿನ ವಿಷಯಗಳನ್ನೆಲ್ಲ ಒಂದುಸಾರಿ ನಿಮ್ಮ ಬುದ್ಧಿಪಟಲಕ್ಕೆ ತಂದು ವಿವೇಚಿಸಿ. ಒಂದು ಅಭಿವೃದ್ಧಿಪರ, ಸ್ವಾಭಿಮಾನಿ ಪಕ್ಷಕ್ಕೆ, ನೆತೃತ್ವಕ್ಕೆ ತಮ್ಮ ಮತ ಹಾಕಬೇಕು. ಈ ವಿಷಯವಾಗಿ ಬೇರೆಯವರಿಗೂ ತಿಳಿ ಹೇಳಿ. ಈ ಕೊನೆಯ ಅವಕಾಶ ಕೈತಪ್ಪದಿರಲಿ, ಯಾಕಂದ್ರೆ... ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...!

-- ಅಭಿನವ ಭಾರತ 

No comments:

Post a Comment