Pages

Sunday, November 24, 2013

ಯೋಗ ಗುರು, ಸ್ವಾಮಿ (ಬಾಬಾ) ರಾಮದೇವಜೀ ಅನ್ನೋ ಈ ಹೆಸರು...

ಹೆಸರಲ್ಲೇ ಅದೇನೋ ಅದ್ಭುತ ಶಕ್ತಿ ಇದೆ. ಹೆಸರು ಕೇಳಿದರೆನೆ ಹಲವರಲ್ಲಿ ಅದಮ್ಯ ಶಕ್ತಿಯ ಸಂಚಾರ, ಇನ್ನು ಕಪ್ಪುಹಣದ ಒಡೆಯರಿಗೆ ಶತ್ರುವಿನ ಮನೋಭಾವ. ಬೋಧನೆಗೆ ಮೀರಿ ಇವರು ಕರ್ಮ ನಿಷ್ಥರಾಗಿರುವುದೇ ಶಕ್ತಿಯ ರಹಸ್ಯದ ಮೂಲ. ಇವರು ಆರೋಗ್ಯ, ಆಧ್ಯಾತ್ಮ ಮತ್ತು ಸದಾಚಾರದ ಪಾಠಗಳನ್ನು ಇಡೀ ಜಗತ್ತಿಗೆ ಸಾರಿದ್ದಲ್ಲದೆ ಅದನ್ನು ತಮ್ಮ ಜೀವನದ ಜೊತೆ ಜೋಡಿಸಿಕೊಂಡು ಅನುದಿನ ಅಂತಹ ಮಹತ್ತರ ಬದುಕನ್ನು ನಡೆಸಿ ತೋರಿಸಿ ಕೋಟ್ಯಾಂತರ ಜನರಿಗೆ ಪ್ರೇರಕರಾಗಿದ್ದಾರೆ.

ಯಾವ ಸಮಯದಲ್ಲಿ ಒಂದು ಕಡೆ ದೇಶದಲ್ಲಿ ಭ್ರಷ್ಟಾಚಾರ, ಅನೈತಿಕತೆ ಹಾಗೂ ಕ್ರೌರ್ಯದ ವೈಭವೀಕರಣ ನಡೆಯುತ್ತಿದೆಯೋ, ಎಲ್ಲಿ ಒಂದು ಕಡೆ ಇಂತಹ ವ್ಯವಸ್ಥೆಯನ್ನು ನೋಡಿ ನಾಗರೀಕರಲ್ಲಿ ನಿರಾಸೆ ಬೀಡು ಬಿಟ್ಟಿದೆಯೋಅಂತಹ ರಾಜಕೀಯ, ಸಾಮಾಜಿಕ, ರೋಗತ್ರಸ್ತ  ಹಾಗೂ ಆಧ್ಯಾತ್ಮಿಕ ವೈಪರಿತ್ಯಗಳ ಮಧ್ಯ ಮತ್ತೆ ಭಾರತೀಯ ಮೌಲ್ಯ, ಸಿದ್ಧಾಂತ, ಸಂಸ್ಕೃತಿ ಮತ್ತು ಮಾನಸೀಕ ಹಾಗೂ ದೈಹೀಕ ಬಲಾಢ್ಯತೆಯನ್ನು ಪುನಃಶ್ಚೇತನಗೊಳಿಸಿ ಕೆಚ್ಚೆದೆಯಿಂದ ಹೂಂಕರಿಸಿದ ದೈವಾಂಶ ಸಂಭೂತವೆ ಅಂದರು ಅದು ಅತಿಶೋಕ್ತಿಯೆನಲ್ಲ.

ನಮ್ಮ ಪತಾಂಜಲಿ, ಚರಕ, ಸುಶ್ರುತರಾದಿಯಾಗಿ ಅನೇಕ ಋಷಿ-ಮುನಿಗಳು ತಿಳಿಸಿದ ಆರೋಗ್ಯ, ಪ್ರಾಣಾಯಾಮ ಮತ್ತು ಆಯುರ್ವೇದದ ಸೂತ್ರಗಳನ್ನು ಮತ್ತು ರಾಮ, ಕೃಷ್ಣಸುಭಾಷಚಂದ್ರ ಭೋಸ, ಭಗತ್ ಸಿಂಗ್, ಆಜಾದ ಚಂದ್ರಶೇಖರ್, ಮಹಾರಾಣಾ ಪ್ರತಾಪ್, ಶಿವಾಜಿ, ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ರೇ ಮೊದಲಾದ  ದೇಶದ ಗಡಿ, ನಾಡು, ನುಡಿಗಾಗಿ ಹೋರಾಟದಲ್ಲಿ ನೆತ್ತರು ಹರಿಸಿದ ಲಕ್ಷಾಂತರ ಸ್ವಾಭಿಮಾನಿ ಯೋಧರ ಕನಸುಗಳನ್ನು ಮತ್ತು ನಮ್ಮ ಹಿಂದು ಧರ್ಮವೇ ಮೊದಲಾಗಿ ರಾಷ್ಟ್ರ ಧರ್ಮವನ್ನು ಕಾಲಕಾಲಕ್ಕೆ ಅಳಿವಿನ ಅಂಚಿನಿಂದ ಪಾರುಮಾಡಿದ ಚಾಣಕ್ಯ, ವಿದ್ಯಾರಣ್ಯ, ಗುರುಗಿವಿಂದ ಸಿಂಹ, ಬಂದಾ ಬೈರಾಗಿ, ದಯಾನಂದ ಸರಸ್ವತಿ, ಶ್ರೀ ಅರವಿಂದ, ಶ್ರೀ ರಾಮಕೃಷ್ಣ ಪರಮಹಂಸ, ವಿವೆಕಾನಂದರೆ ಮೊದಲಾಗಿ ವೇದ ಸಂಸ್ಕೃತಿಗೆ ಮತ್ತೆ ಹೊಸ  ಜೀವ ತುಂಬಿದ ಅನೇಕರ ಕನಸುಗಳನ್ನ ಕಲೆ ಹಾಕಿ ಮತ್ತೆ ಅವುಗಳನ್ನ ಜನಮಾನಸದ ವಿಷಯಗಳನ್ನಾಗಿ ಮಾಡಿ ಜನರ ಸಹಕಾರದಿಂದಲೇ ಹಳಿತಪ್ಪಿದ ಸಭ್ಯತೆ ಮತ್ತು ಸಂಸ್ಕೃತಿಗೆ ಹೊಸ ದಿಕ್ಕು ದೆಸೆ ತೋರಿಸಲು ಹೊರಟ ಮಹಾನ್ ಆತ್ಮಕ್ಕೆ ನಾವೆಲ್ಲ ಅದೆಷ್ಟು ಋಣಿಯೋ ತಿಳಿಯದು.

ಅವರು ಆಸೆಪಟ್ಟಿದ್ದರೆ, ಜ್ಞಾನ, ವೈರಾಗ್ಯದ ನೆಲೆವೀಡಾದ ಹಿಮಾಲಯದ ಉತ್ತುಂಗದ ಶ್ರೇಣಿಗಳಲ್ಲಿ, ಗಿರಿ-ಕಂದರಗಳಲ್ಲಿ ತಪಸ್ಸುಮಾಡಿ ಮುಕ್ತಿಗಾಗಿ ಕಾಡು ಜೀವನ ಸವೆಸಬಹುದಾಗಿತ್ತು . ಅವರು ಇಷ್ಟಪಟ್ಟಿದ್ದರೆ ಅಧಿಕಾರಷಾಹಿ ಜನರ ಚಾಪಲೂಸಿತನ ಮಾಡಿ, ಗುಣಗಾನ ಮಾಡಿ, ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ ಅವರಿಂದ ಪಾದಪೂಜೆ ಮಾಡಿಸಿಕೊಂಡಿರಬಹುದಿತ್ತು. ಆದರೆ ಇಂತಹ ಎಲ್ಲ ವಿಲಾಸಿ ಆಮೀಷಗಳನ್ನು ತಿರಸ್ಕರಿಸಿ ದೇಶ ಮತ್ತು ಸಮಾಜದ ದೀನ-ದಲಿತ, ಪೀಡಿತ, ಶೋಷಿತ, ಹದಗೆಟ್ಟ ಮತ್ತು ಅಸ್ವಸ್ಥ ಸಮಾಜಕ್ಕೆ ಮತ್ತು ದೇಶಕ್ಕೆ ಇಡೀ ವಿಶ್ವದಲ್ಲಿ ನ್ಯಾಯ ಮತ್ತು ಸಮ್ಮಾನ ದೊರಕಿಸವ ಸಂಕಲ್ಪಕ್ಕೆ ಬದ್ಧರಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇಂತಹ ಸುಖ-ಸೌಲಭ್ಯಗಳನ್ನು, ಮಾನ- ಅಪಮಾನಗಳನ್ನು ಭಯ-ಬೆದರಿಕೆಗಳನ್ನು ಬದಿಗೊತ್ತಿ ಸತ್ಯ ಮತ್ತು ನ್ಯಾಯದ ದಾರಿಯಲ್ಲಿ ನಡೆದು ಸರಕಾರ ಮತ್ತು ಕುನೀತಿಯನ್ನು ಎದುರುಹಾಕಿಕೊಂಡು ಸವಾಲೆಸೆಯುವ ಸಂತರು ಸಿಗುವುದು ಬಹಳ ಅಪರೂಪ. ನಿಜವಾಗಿಯೂ ಹೇಳಬೇಕೆಂದರೆ ಶತಮಾನಕ್ಕೆ ಒಬ್ಬರು ಇಬ್ಬರು ಮಾತ್ರ. ಇಂದು ಸಮಾಜ ಇಡೀ ಸಂತ ಸಮಾಜವನ್ನೇ ಪ್ರಶ್ನಾರ್ಥಕ ರೀತಿಯಲ್ಲಿ ನೋಡುತ್ತಿರುವಾಗ, ಹಿಂದು ಧರ್ಮ ಮತ್ತು ಇಂದಿನ ಆದುನಿಕತೆಯ ಮಧ್ಯದ ಕೊಂಡಿ ದಿನೇ ದಿನೇ ಸಡಿಲಗೊಳ್ಳುತ್ತಿರುವಾಗ, ಇದನ್ನೇ ನೆಪವಾಗಿಸಿಕೊಂಡು ಬಹುಸಂಖ್ಯಾತ ಸಮಾಜವನ್ನು ತಿರಸ್ಕರಿಸಿ ಒಡೆದು ಆಳುತ್ತಿರುವ ಸರದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ನಮಗೆಲ್ಲ ಒಂದು ಸಂಸಾರ ನಡೆಸುವುದೇ ಕಷ್ಟವಾಗಿರುವಾಗ ಸಮಾಜಕ್ಕಾಗಿ ಮುಂದಾಳುತ್ವ ವಹಿಸುವುದು ಆಗದಿರುವ ಕೆಲಸ. ಅದೇನಿದ್ದರು ಇದ್ದದ್ದರಲ್ಲೇ ಗೊಣಗಿ ಬಾಲ ಮುದುಡಿಕೊಂಡು ಬದುಕಬೇಕಿರುವ ಪರಿಸ್ಥಿತಿ. ವಿಷಮ ಪರಿಸ್ಥಿತಿಯಲ್ಲಿ, ನಾವುಗಳು ಇಂತಹ ಗುರು, ನಾಯಕರ ಸಮಾನ ಕಾಲಖಂಡದಲ್ಲಿ ಜನ್ಮ ಪಡೆದಿರುವುದು ಮತ್ತು ನಮಗೆ ಅವರ ಸಾಂಗತ್ಯ ಮತ್ತು ಮಾರ್ಗದರ್ಶನ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ.


ಸ್ವಾಮಿ ರಾಮದೇವಜೀ ಅವರು ಸತ್ಯ, ಸಚ್ಚರಿತ್ರ, ಸದಾಚಾರ ಮತ್ತು ಸ್ವಸ್ಥ ಜೀವನ ಮಾರ್ಗ, ಬೋಧನೆಯನ್ನು ಜಗತ್ತಿಗೆ ನೀಡಿದ್ದಲ್ಲದೆ ಇಂತಹ ಚಾರಿತ್ರ್ಯವಂತ ಮತ್ತು  ಆರೋಗ್ಯಪೂರ್ಣ ಜೀವನವನ್ನು ಹೇಗೆ ದೇಶ ಮತ್ತು ಸಮಾಜದ ಸ್ವಾಸ್ಥ್ಯ ಸುಧಾರಿಸಲು ಉಪಯೋಗಿಸಬಹುದು ಎನ್ನುವುದಕ್ಕೆ ಅತ್ಯಂತ ಶ್ರೇಷ್ಠ ಉದಾಹರಣೆಯನ್ನು ಪ್ರಸ್ತೂತ ಪಡಿಸಿದ್ದಾರೆ. ಕಾರಣದಿಂದಲೇ ಇವರು ಇತರರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುವುದು. ದೇಶದ ಕೇಂದ್ರ ಸರಕಾರದಿಂದ ಹಿಡಿದು, ಅನೇಕ ರಾಜ್ಯ ಸರಕಾರಗಳು, ಸರಕಾರದ ಇತರೆ ಏಜನ್ಸಿಗಳು  ಮತ್ತು ಮಲ್ಟಿನ್ಯಾಷನಲ್ ಕಂಪನಿಗಳು ಇವರ ಹಿಂದೆ ಮುಗಿದುಬಿದ್ದರೂ, ಎಡೆಬಿಡದ, ನಿರಂತರ ದೇಶಾದ್ಯಂತ ಪ್ರವಾಸದ ಆಯಾಸದ ಮಧ್ಯವೂ  "ಉಶ್...ಶ್..ಶ್.. " ಅನ್ನದ ಅಲೌಕಿಕ ಮುಗುಳ್ನಗೆಯ ಸರದಾರ ಅನ್ನಬಹುದು. ಇಷ್ಟಾದರೂ ಒಂದು ದಿನವೂ ಅವರ ಯೋಗ ಸಂಕಲ್ಪಕ್ಕೆ ಚ್ಯುತಿ ಬಂದಿಲ್ಲ. ಅಬ್ಬಾ ಇದೆಂತಹ ಸಂಕಲ್ಪ? ಇದೆಂತಹ ಆತ್ಮ ಸ್ಥೈರ್ಯ? ಇದೆಂತಹ ಶಕ್ತಿ? ಇದೆಂತಹ ನನ್ನವರಿಗಾಗಿನ ಒಳಗುದಿ? ಕೇಳಿದರೂ ಕಂಡರಿಯದ ಅಪರೂಪದ ಆತ್ಮ. ಸ್ಮಾರಕಗಳಿಗೆ ಹೊರತುಪಡಿಸಿ ವ್ಯಕ್ತಿಗಳಿಗೂ ಏನಾದರು "ವರ್ಲ್ಡ್ ವಂಡರ್ಸ್" ಅನ್ನೊ ನಾಮಾಂಕಿತ ಕೊಟ್ಟಿದ್ದರೆ ಇವರೇ ಪಟ್ಟಿಯಲ್ಲಿ ಪ್ರಥಮರಿರಬಹುದಿತ್ತೇನೋ ಅಂತ ಎಷ್ಟೋ ಬಾರಿ ನ್ನಿಸುತ್ತದೆ.


ಹಲವರಿಗೆ ತಾವು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಲಿಲ್ಲವಲ್ಲ ಅನ್ನೊ ಕೊರಗು, ಇನ್ನು ಕೆಲವರಿಗೆ ನಾವು ರಾಷ್ಟ್ರಕಂಡ ಅನೇಕ ಧೀಮಂತ ನಾಯಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಲಿಲ್ಲವಲ್ಲ ಅನ್ನೊ ಕೊರಗು. ಆಗ ನಾವಿದ್ದರೆ ಹೀಗೆ ಮಾಡಬಹುದಿತ್ತು, ಹಾಗೆ ಮಾಡಬಹುದಿತ್ತು ಅನ್ನೊ ಹುಮ್ಮಸ್ಸಿಗೆ ನಿರಾಸೆಯ ಮುಸುಕು. ಈಗಲೂ ನಮಗೆಲ್ಲ ಅವಕಾಶಗಳಿವೆ, ರಾಮದೆವಜೀ ಅವರಂತಹ ನಾಯಕರುಗಳಿದ್ದಾರೆ. ರಾಷ್ಟ್ರವನ್ನು ಉಳಿಸುವ ಕೆಲಸ ಮುಗಿದಿದೆ, ಆದರೆ ರಾಷ್ಟ್ರದ ನಾಗರಿಕರನ್ನು ಉಳಿಸುವ ಕೆಲಸ ಇನ್ನು ಬಾಕಿ ಇದೆ. ಅಂದರೆ ಸ್ವಾತಂತ್ರ್ಯ ದೊರಕಿದ್ದಾಯಿತು ಆದರೆ ಸ್ವಾತಂತ್ರ್ಯದ ಲಾಭ ಇಂದಿಗೂ ಬರೀ ಕೆಲೆವೇ ಜನರ ಕೈಯಲ್ಲಿರುವುದು ವಿಪರ್ಯಾಸದ ಸಂಗತಿ. ಸು-ರಾಜ್ಯದ ಹೋರಾಟ ಈಗಲೂ ಬಾಕಿ ಇದೆ. ಇನ್ನು ಕೆಲವರಿಗೆ ನಮ್ಮ ಹಿರಿಯರು ಮಾಡಬೇಕಿದ್ದ ಕೆಲಸಗಳನ್ನು, ಕೈಗೆತ್ತಿಕೊಳ್ಳಬೇಕಿದ್ದ ಸಮಾಜ ಪರಿವರ್ತನೆಯ ಕೆಲಸಗಳನ್ನು ನಾವೇಕೆ ಮಾಡಬೇಕು? ಅವರತಪ್ಪಿಗಾಗಿ ನಮ್ಮ ಜೀವನವನ್ನೇಕೆ ಬಲಿಕೊಡಬೇಕು ಎಂದು ಅನ್ನಿಸುತ್ತಿರಬಹುದು. ಆದರೆ ಇದು ಯಾರಾದರು ಮಾಡಲೇ ಬೇಕಾದ ಕೆಲಸ, ತನ್ನಿಂದ ತಾನಾಗೇ ಆಗದು. ಇದು ನಮ್ಮ ಸದಾವಕಾಶ ಅಂದುಕೊಂಡರೆ ಪ್ರತಿ ಹೆಜ್ಜೆಯಲ್ಲೂ ಪರಿವರ್ತನೆ ನಿಮ್ಮ ಸ್ಪರ್ಶಕ್ಕಾಗಿ ಕಾಯುತ್ತಿದೆ ಅಂತ ಖುಷಿ ಪಡಬಹುದು, ಯಾವ ಕ್ಷೇತ್ರದಲ್ಲಿ ಬೇಕಾದರೂ ನಿಮ್ಮ ಅಮೂಲ್ಯ ಕೊಡುಗೆಯನ್ನು ಕೊಡಬಹುದು ಎನ್ನುವ ಮೈ ಜುಮ್ಮೆನಿಸುವ ಸತ್ಯ ನಮ್ಮನ್ನು ಕಾರ್ಯಪ್ರವೃತ್ತರನ್ನಾಗಿಸಾಲು ಕಾಯುತ್ತಿದೆ.

ಭಾರತ ಮಾತೆಯ ನಿಜ ಸುಪುತ್ರ, ಅನರ್ಘ್ಯ ರತ್ನ, ವಿಶ್ವ ಸಂತ ಶಿರೋಮಣಿಯ ಅನುಯಾಯಿಗಳು ನಾವು ಅಂತ ಕರೆಸಿಕೊಳ್ಳೋದ್ರಲ್ಲಿ ನಮಗೆ ಹೆಮ್ಮೆ ಅನಿಸುತ್ತದೆ. ಇವರ ಸಾಂಗತ್ಯ ನಮಗೆ ದೊರಕಿಸಿಕೊಟ್ಟಿದ್ದಕ್ಕೆ, ತುಸುವಾದರೂ ಸರಿ ಇವರ ಜೊತೆ ಕೂಡಿ ಕೆಲಸ ಮಾಡುವುದಕ್ಕೆ ನಮಗೆ ಅವಕಾಶ ದೊರಕಿಸಿದ್ದಕ್ಕೆ ದೇವರಿಗೆ ದಿನನಿತ್ಯ  ಆಭಾರ ಪ್ರಕಟ ಮಾಡಬೇಕಿನಿಸುತ್ತದೆ.


ಈಗ ತಾವು ಬೇಕಾದರೆ ನನ್ನನ್ನು ಬಾಬಾ ಭಕ್ತನೆಂದುಕೊಳ್ಳಿ ಇಲ್ಲ ಹುಚ್ಚನೆಂದು ಭಾವಿಸಿ. ಆದರೆ ನಿಜವಾಗಿಯೂ  ನಾವು ದೇಶದ ಕಾಳಜಿ ಇರುವವರೇ ಆಗಿದ್ದಲ್ಲಿ  ನಾವು ದೇಶಕ್ಕಾಗಿ ಏನು ಮಾಡುತ್ತಿದ್ದೇವೆನಾವು ಅವರ ಸ್ಥಾನದಲ್ಲಿದ್ದರೆ ಸರಕಾರವನ್ನು ಎದುರುಹಾಕಿ ಕೊಳ್ಳುವ ಎದೆಗಾರಿಕೆ ನಮ್ಮಲ್ಲಿರುತ್ತಿತ್ತೆ? ಬಾಬಾ ರಾಮದೇವಜಿ ಕಪ್ಪುಹಣ ಮತ್ತು ವ್ಯವಸ್ಥೆ ಪರಿವರ್ತನೆಯ ವಿರುದ್ಧ ಸಿಡಿದೆದ್ದಿರುವುದು ಸರಿಯೇ? ತಪ್ಪೇ? ಸರಕಾರ ಅವರ ವಿರುದ್ಧ ಹುಟ್ಟು ಹಾಕುತ್ತಿರುವ ನೂರಾರು ಮೊಕದ್ದಮೆ ಮತ್ತು ಖಟ್ಲೆಗಳಲ್ಲಿ ಏನಾದರು ಹುರುಳಿರಬಹುದೇ? ಅವರು ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಸೋಲ್ಲೆತ್ತಿದಾಗಿನಿಂದಲೇ ಏಕೆ ಅವರ ಮೇಲೆ ಆರೋಪಗುಳನ್ನ ಹೇರಲಾಗುತ್ತಿದೆ? ಆರೋಪಗಳ ಬಗ್ಗೆ ಕೋರ್ಟಿನ ತೀರ್ಮಾನಗಳೇನು ? ನಾಲ್ಕೈದು ವರ್ಷಗಳು ಕಳೆದರು ಅದೇಕೆ ಸರಕಾರಕ್ಕೆ ಮತ್ತು ಆದರ ಇನ್ನಿತರ ಏಜೆನ್ಸಿಗಳಿಗೆ ಇವರ ವಿರುದ್ಧ ಪುರಾವೆಗಳು ಸಿಕ್ಕುತ್ತಿಲ್ಲಎಂದು ನಮ್ಮ ಆತ್ಮಕ್ಕೆ ಏಕಾಂತದಲ್ಲಿ ಒಮ್ಮೆ ಪ್ರಶ್ನಿಸಿ ಕೊಳ್ಳೋಣ. ಉತ್ತರ ಸಿಕ್ಕುತ್ತದೆ. ಸರಕಾರದ ಉಹಾಪೋಹಗಳಿಗೆ, ಮಾಧ್ಯಮದ ಅಪರಚಾರಕ್ಕೆ ಬಾಯಿ ಚಪ್ಪರಿಸಿ ನಮ್ಮಲ್ಲಿ ಮನೆಮಾಡಲು ಎಡೆಮಾಡಿಕೊಡುವುದು ಬೇಡ. ಕೆಲವೊಮ್ಮೆ ಸರಕಾರದ ಸುಳ್ಳು ವಾದಕ್ಕೆ ಜಯ ಸಿಗುವಹಾಗೆ ಅಧಿಕಾರಶಾಹಿಗಳು ಪುರಾವೆಗಳನ್ನು ಸೃಷ್ಟಿಸುವ ಸಂಭವನೀಯತೆ ಇದ್ದೆ ಇದೆ. ಆದರೆ ನಾವು ಮಾತ್ರ ಒಮ್ಮೆ ಅವರನ್ನು ಬೆಂಬಲಿಸಿದ ನಂತರ (ಅವರ ತಪ್ಪು ನಿಜವಾಗಿಯೂ ಸಾಬೀತಗುವವರೆಗೆ) ದಿನೇ-ದಿನೇ ಅವರ ಬಗ್ಗೆ ಸಂಶಯ ಪಡುವುದು ಸರಿಯಲ್ಲ.

ಹಲವಾರು ಜನರಿಗೆ ಅವರು ವ್ಯಾಪಾರಿಗಳಾಗಿ ಕಾಣುತ್ತಾರೆ. ಅದು ವ್ಯಾಪಾರವಲ್ಲ ಸ್ವದೇಶಿ ಚಿಕಿತ್ಸೆ ಮತ್ತು ಲೂಟಿಯಾಗುತ್ತಿರುವ ಭಾರತದ ಆರ್ಥಿಕ ಸಂಪತ್ತನ್ನು ಉಳಿಸುವುದಕ್ಕಾಗಿ ನಡೆಸುತ್ತಿರುವ ಅಭಿಯಾನ. ಅವರಿಗೆ ವ್ಯಾಪಾರವೇ ಮಾಡಬೇಕಿದ್ದರೆ ದಿನವಿಡೀ ಅದಕ್ಕಾಗೆ ಬಡಿದಾಡುತ್ತಿದ್ದರು, ಯೋಗಕ್ಕಾಗಿ ಅಲ್ಲ, ವ್ಯಾಪಾರ ಮಾಡುವುದಕ್ಕೆ ದೇಶದಲ್ಲೆಲ್ಲ ನಿರಂತರ, ಒಂದು ದಿನವೂ ವಿಶ್ರಾಂತಿ ಇಲ್ಲದೆ ಸುತ್ತುವ ಅವಶ್ಯಕತೆ ಇರಲಿಲ್ಲ. ನೀವೇ ಹೇಳಿ ಯಾವ ವ್ಯಾಪಾರಿ ವರ್ಷಕ್ಕೆ 365 ದಿನ ನಿರಂತರವಾಗಿ ಸುತ್ತುವನು? ನಿಮಗೇನಾದರೂ ಅನುಮಾನವಿದ್ದರೆ ದಿನನಿತ್ಯ ಬೆಳಿಗ್ಗೆ 5 ಗಂಟೆ ಇಂದ 7:30 ರ ವರೆಗೆ ಹಾಗು ರಾತ್ರಿ 8 ಗಂಟೆ ಯಿಂದ 9 ರ ವರೆಗೆ ಆಸ್ಥಾ ಚಾನಲ್ ವೀಕ್ಷಿಸಿ. ವ್ಯಾಪಾರವೇ ಉದ್ದೇಶವಾಗಿದ್ದರೆ ಸರಕಾರ ಮತ್ತು ಭ್ರಷ್ಟಾಚಾರದ ಸಾಥ್ ಕೊಟ್ಟು ವಿಶ್ವದೆಲ್ಲೆಡೆ ಕೆಲವೇ ವರ್ಷಗಳಲ್ಲಿ ತಮ್ಮ ವ್ಯಾಪಾರವನ್ನು ಪಸರಿಸಬಹುದಿತ್ತು ಆದರೆ ಹಾಗೆ ಮಾಡದೆ ಬಾಬಾ ಅವರ ವಿರೋಧ ಕಟ್ಟಿಕೊಂಡಿದ್ದೇಕೆ? ಇದೆಲ್ಲ ಮಾಧ್ಯಮಗಳು ಕಾಣದ ಸೂತ್ರಕ್ಕೆ ಜೋತುಬಿದ್ದು ಜನರ ದಿಕ್ಕುತಪ್ಪಿಸಲು ನಡೆಸುತ್ತಿರುವ ಪಿತೂರಿ ಅಷ್ಟೇ ಅಂತ ನಿಮಗೆ ಅನ್ನಿಸೋದಿಲ್ವೇ?

ಇದೆಲ್ಲವೂ ಕೆಲವರಿಗೆ ಹೊಗಳಿಕೆಯ ಪರಮಾವಧಿ ಅನ್ನಿಸಬಹುದು. ಆದರೆ ಹೊಗಳಿಕೆ ಎಲ್ಲವೂ ನಮಗೆ ಮಾತ್ರ ಸೀಮಿತ. ಅವರ ಸಾಂಗತ್ಯ ಸಿಕ್ಕಿದ್ದಕ್ಕೆ ನಮಗೆ ನಾವೇ ಹೊಗಳಿಕೊಂಡಂತೆ. ಇದಾವುದು ಅವರಿಗೆ ತಟ್ಟದು. ಅವರೆಂದು ಹೊಗಳಿಕೆಗೆ ಸೆಟೆದು ಒಂದೆಡೆ ನಿಂತವರಲ್ಲ ಮತ್ತು ತೆಗಳಿಕೆಗೆ ಸೋತು ಸುಮ್ಮನಿರುವವರೂ ಲ್ಲ. ಅದೇನಿದ್ದರೂ ಒಂದು ನಿರಂತರ ಪ್ರವಾಹ. ಇವೆಲ್ಲವುಗಳನ್ನು ಮೀರಿ ನಿಂತ ವ್ಯಕ್ತಿತ್ವ ಅವರದು.  ಈ ಪ್ರಯತ್ನ ನಮ್ಮ ಅಭಿಪ್ರಾಯಗಳು, ಅಭಿಪ್ರಾಯ ಶೂನ್ಯತೆಯಲ್ಲಿ (ಸಭ್ಯತೆಯ ತಟಸ್ಥತೆಯಲ್ಲಿ) ಅಥವಾ ವಿಭಜಿತ ಅಭಿಪ್ರಾಯಗಳ ದಿಕ್ಕು ಹಿಡಿದು ಹರಿದು ಹಂಚಿ ಹೋಗದೆ, ಒಳ್ಳೆಯದಕ್ಕೆ ಇನ್ನಷ್ಟು, ಮತ್ತಷ್ಟು ಬೆಂಬಲ ಸಿಗಲಿ ಅನ್ನುವ ಉದ್ದೇಶದಿಂದ ಮಾತ್ರ.

-- ಕೆ. ಕಲ್ಯಾಣ


No comments:

Post a Comment