ಎಲ್ಲ ಸಂಬಂಧಗಳ ಸೂತ್ರಗಳು ಶಿಥಿಲವಾಗುವ ಮುನ್ನ
ನಿನ್ನ ಅಲೌಕಿಕ ಬಂಧದ ಗುರುತ್ವವು ನನ್ನ ಹಿಡಿದಿಟ್ಟಿರಲಿ
ಪಾಪಕೂಪಕದ ಕಂದಕಕ್ಕೆ ಕಾಲ್ಜಾರಿ ಈ ಮನವು ಒದ್ದಾಡುವ ಮುನ್ನ
ನಿನ್ನ ಮನೆಯಲ್ಲೊಂದಿಷ್ಟು ಪ್ರಾಯಶ್ಚಿತ್ತಕ್ಕೆ ನನಗೆಂದು ಜಾಗವಿರಲಿ
ನನ್ನ ನಾ ಮರೆಯುವ ಮುನ್ನ
ನಿನ್ನ ನಾಮದ ಕನವರಿಕೆ ನನ್ನ ನಾಲಿಗೆಗೆ ಅನವರತವಾಗಲಿ
ನಾನೆಂಬ ಉಸಿರು ಬೆಂಕಿಯಾಗಿ ಓಡಲ ಆವರಿಸುವ ಮುನ್ನ
ನೀನೆಂಬ ಶಾಖಕ್ಕೆ ಈ ಘನ ಹೃದಯ ಕರಗಿ ನೀರಾಗಲಿ
ಈ ಭವದ ಮಾಯೆ ನನ್ನ ಕಟ್ಟಿಕ್ಕುವ ಮುನ್ನ
ಆತ್ಮದ ರೆಕ್ಕೆಗಳು ನನ್ನನ್ನು ನಿನ್ನೆಡೆಯ ಪಯಣಕ್ಕೆ ಕರೆದೊಯ್ಯಲಿ
ಎಲ್ಲ ಕಳೆದುಕೊಳ್ಳುವ ಭಯ ನನ್ನ ಕಾಡುವ ಮುನ್ನ
ನಿನ್ನ ಪ್ರೀತಿಯ ಆಲಿಂಗನದಲಿ ನನ್ನದೆನ್ನುವ ಪೊರೆಯಲ್ಲ ಕಳಚಲಿ
ಏನಾದರು ಸರಿ, ಎಂದಾದರು ಸರಿ, ಎಂತಾದರು ಸರಿ
ನಿನ್ನ ಪೂಜೆಗೆ ಈ ಪುಷ್ಪ ಸದಾ ಮೀಸಲಾಗಿರಲಿ
ಈ ಮಣ್ಣು, ಆ ಮಣ್ಣ ಸೇರಿ ಮತ್ತೆ ಮೂರ್ತವಾಗುವ ಹುನ್ನಾರ ಮಾಡುವ ಮುನ್ನ
ನಿನ್ನದೆನ್ನುವ ಈ ಚೇತನ ನಿನ್ನಡಿಗೆ ಶಾಶ್ವತವಾಗಿ ಅರ್ಪಣೆಯಾಗಲಿ
ಓ ಕೃಷ್ಣಾ, ಈ ಚೇತನ ನಿನ್ನಡಿಗೆ ಶಾಶ್ವತವಾಗಿ ಮುಡಿಯಾಗಲಿ...
-- ಕೆ. ಕಲ್ಯಾಣ
No comments:
Post a Comment