ನಾನು ಮೂರುದಿವಸಗಳ ಪ್ರವಾಸಕ್ಕೆಂದು ನನ್ನ ಕುಟುಂಬದ ಜೊತೆ ಗುಜರಾತಿಗೆ ಹೋಗಿದ್ದೆ. ಇದರ ಹಿಂದೆ ಎರಡು ಮುಖ್ಯ ಉದ್ದೇಶಗಳಿದ್ದವು.
ಒಂದು, ಇತಿಹಾಸ ಪ್ರಸಿದ್ಧ ಸೋಮನಾಥ ಮಂದಿರದ ಹಾಗೂ ದ್ವಾರಕಾಧೀಶ ಮಂದಿರ ದರ್ಶನ ಮತ್ತು ಅವರ ಆಶೀರ್ವಾದ ಪಡೆಯುವದಕ್ಕೊಸ್ಕರ.
ಎರಡು, ಪ್ರಗತಿಯ ಹರಿಕಾರವಾದ ಗುಜರಾತ ರಾಜ್ಯದ ಸಾಕ್ಷಿಯಾಗುವುದಕ್ಕೆ. ಇನ್ನೊಂದು ರೀತಿ ಹೇಳಬೇಕು ಅಂದರೆ ಮೋದಿ-ರಾಜ್ ಪ್ರತ್ಯಕ್ಷ ಸ್ವರೂಪ ನೋಡುವುದಕ್ಕೆ. ನಿಜವಾಗಿಯೂ ಈ ರಾಜ್ಯದ ಪ್ರಗತಿಯಾಗಿದೆಯೋ ಅಥವಾ ಇದು ಬರೀ ಹೊಗಳಿಕೆಯ ಗಾಳಿಯಿಂದ ತುಂಬಿಕೊಂಡಿದೆಯೋ ಅಂತ ತಿಳಿದುಕೊಳ್ಳುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿತ್ತು. ನಿಜಸ್ವರೂಪ ಅರಿಯದೆ ಯಾವುದೇ ಪ್ರಾಂತ್ಯದ/ವ್ಯಕ್ತಿಯ ಬಗ್ಗೆ ಉತ್ಪ್ರೇಕ್ಷೆಯ ಮಾತುಗಳನ್ನಾಡುವ ಹಾಗೂ ಬೆಂಬಲಿಸುವ ಪ್ರಮೆಯವೇನು ನಮಗಿಲ್ಲ ಅಂತ ನಾನು ಅಂದುಕೊಂಡಿದ್ದೆನೆ.
ಸೋಮನಾಥೇಶ್ವರ ಮತ್ತು ದ್ವಾರಕೇಶ್ವರನ ದರ್ಶನ ಪಡೆದು ಮನಸ್ಸು ಶಾಂತವಾಗಿ ಧನ್ಯತೆಯಲ್ಲಿ ತೇಲುವ ಅನುಭವವಾಯಿತು. ಬಹುದಿನಗಳ ಕನಸು ನನಸಾಗಿದ್ದು ಖುಷಿ ಕೊಟ್ಟಿತು. ಜಯ ದ್ವಾರಕಾಧೀಶ, ಜಯ ಸೋಮನಾಥ.
ಅಹಮದಾಬಾದ ನಗರದ ಸಾಬರಮತಿ ನದಿ ತೀರದ ಸತ್ಯ-ಶಾಂತಿಯ ಹಾದಿಯಲ್ಲಿ ನಡೆದ ರಾಷ್ಟ್ರೀಯ ಸಂತ ಮಹಾತ್ಮಾ ಗಾಂಧೀಜಿಯವರ ಸಾಬರಮತಿ ಆಶ್ರಮವನ್ನು ನೋಡುವ ಸೌಭಾಗ್ಯ ನಮ್ಮ ಪಾಲಿಗೆ ಸ್ಪೂರ್ತಿದಾಯಕವಾಗಿತ್ತು.
ಈ ಜನ್ಮಕ್ಕೆ ನಾನೊಬ್ಬ ಹೆಮ್ಮೆಯ ಕನ್ನಡಿಗ ( ಹೆಮ್ಮೆಯ ಭಾರತೀಯನೂ ಅಹುದು) ಮತ್ತು ಬೆಂಗಳೂರಿಗನಾಗಿದ್ದರೂ ಅಹಮದಾಬಾದ ಮತ್ತು ಇಡೀ ಗುಜರಾತ (ನಾವು ಪ್ರವಾಸ ಮಾಡಿದ ಎಲ್ಲ ಜಾಗಗಳು) ರಾಜ್ಯದ ಬೆಳವಣಿಗೆಯನ್ನು ಕಂಡು ಬೆರಗಾಗಿದ್ದು ನಿಜ.
ಅಹಮದಾಬಾದ ಮತ್ತು ಗಾಂಧಿನಗರದ ಎಲ್ಲ ಮುಖ್ಯ ರಸ್ತೆಗಳು 200 ರಿಂದ 300 ಫೀಟ ಗಳಷ್ಟು ಅಗಲವಾಗಿವೆ ಅಲ್ಲದೆ ಒಳ ರಸ್ತೆಗಳು ಸಹ 50 ರಿಂದ 100 ಫೀಟ ಅಗಲವಾಗಿವೆ. ಎಲ್ಲ ರಸ್ತೆಗಳ ಮಧ್ಯ ಡಿವೈಡರ್ ಗಳನ್ನ ನಿರ್ಮಿಸಲಾಗಿದೆ. ಯಾವ ರಸ್ತೆಯಲ್ಲೂ ಅಗೆದಿರುವುದನ್ನು ನಾವು ಕಾಣಲಿಲ್ಲ, ಅಲ್ಲದೆ ಒಂದೂ ಗುಂಡಿ, ತಗ್ಗು, ರಸ್ತೆ ತಡೆಯನ್ನು ಕಾಣಲಿಲ್ಲ. ಬಿಸಿಲ ಬೇಗೆ ಅತಿಯಾಗಿದ್ದರೂ ನಾವು ರಸ್ತೆಗಳ ಮೇಲೆ ಚಲಿಸುವಾಗ ಮತ್ತು ಮಾರ್ಕೆಟ್ಸು ಗಳಲ್ಲಿ ಸುತ್ತುವಾಗ ತುಂಬಾ ತುಂಬಾ ಖುಷಿ ಪಟ್ಟೆವು.
ನಾವು ದ್ವಾರಕಾ ಮತ್ತು ಸೋಮನಾಥಕ್ಕೆ ಹೋಗುವಾಗ ರಸ್ತೆ ಮಾರ್ಗವನ್ನೇ ಆಯ್ಕೆ ಮಾಡಿಕೊಂಡೆವು. ಈ ಎರಡೂ ಉರುಗಳು ಅಹಮದಾಬಾದ ನಿಂದ ಹೆಚ್ಚು ಕಮ್ಮಿ 400 ಕಿ.ಮೀ. ದೂರದಲ್ಲಿವೆ, ಆದರೆ ಅಲ್ಲಿಯೂ ಸಹ ರಸ್ತೆಗಳ ಗುಣಮಟ್ಟ ನಗರದಷ್ಟೇ ಚೆನ್ನಾಗಿತ್ತು. ಹೆಚ್ಚು-ಕಮ್ಮಿ ಎಲ್ಲ ಕಡೆಯೂ ಡಿವೈಡರ್ ಗಳಿವೆ.
ನಮ್ಮ ಬೆಂಗಳೂರು ಇನ್ನು ಹತ್ತು ವರ್ಷಗಳು ಕಳೆದರು ಸಹ ಈ ಸ್ಥಿತಿಗೆ ತಲುಪುವುದು ಅಸಾಧ್ಯದ ಮಾತು ಅನ್ನಿಸುತ್ತದೆ. ಬೆಂಗಳೂರಿನ ಅನೇಕ ಮುಖ್ಯ ರಸ್ತೆಗಳು ಅತಿ ಚಿಕ್ಕದಾಗಿರುವವು. ವರ್ಷದ ಹನ್ನೆರಡು ತಿಂಗಳು ಇವುಗಳ ಗುಣಮಟ್ಟ ಕಾಪಾಡುವುದೇ ಕಷ್ಟವಾಗಿರುವಾಗ, ಇನ್ನು ವಿಸ್ತರಿಸುವುದಂತೂ ಆಗದ ಕೆಲಸವೇ ಸರಿ.
ಅಲ್ಲಿರಸ್ತೆಗಳಷ್ಟೆ ಅಲ್ಲ ರಸ್ತೆ ಬದಿಗಳು ಮತ್ತು ಅದಕ್ಕೆ ಆಂಟಿಕೊಂಡ ಗೋಡೆಗಳು ಎಲ್ಲವು ಸ್ವಚ್ಛವಾಗಿವೆ. ಅದೇ ಬೆಂಗಳೂರಿನಲ್ಲಿ ನೋಡಿದರೆ ಸಿನೆಮಾ ಪೋಸ್ಟರಗಳು, ಬ್ಯಾನ್ನೆರಗಳು, ರಾಜಕೀಯದ ರ್ಯಾಲಿಗಳ ಪೋಸ್ಟರಗಳು (ಕಾರ್ಯಕ್ರಮ ನಡೆದಾದ ಎಷ್ಟೋ ದಿನಗಳ ನಂತರವೂ ನೇತಾಡುತ್ತಿರುತ್ತವೆ), ರಾಜಕೀಯ ವ್ಯಕ್ತಿಗಳ ಹುಟ್ಟುಹಬ್ಬದ ಅಭಿನಂದನೆಗಳ ಪೋಸ್ಟರಗಳು ರಸ್ತೆಯ ಎರಡು ಕಡೆಯಲ್ಲಿಯು ಶೃಂಗರಿಸಲ್ಪಟ್ಟಿರುತ್ತವೆ.
ಅಹಮದಾಬಾದ-ಗಾಂಧಿನಗರ ಈ ಎರಡೂ ಅವಳಿನಗರಗಳ ಮಧ್ಯದ ಕಾರಿಡಾರ್ (30-35 ಕಿ. ಮೀ.) ರಸ್ತೆ ತುಂಬಾ ಮನೋಹರವಾಗಿದೆ. ನನಗೆ ಯುರೋಪ್ ನಲ್ಲಿರುವ ಅನುಭವ ನೀಡುತಿತ್ತು. ಇದನ್ನೆಲ್ಲಾ ನೀವು ನಂಬದಿದ್ದರೆ 2014 ರ ಚುನಾವಣೆಗಿಂತ ಮುಂಚೆ ಒಂದು ಸಾರಿ ಗುಜರಾತಗೆ ಭೇಟಿ ಕೊಡುವುದು ಉತ್ತಮ. ಈ ಭೇಟಿ ನಿಮ್ಮ ಮತವನ್ನ ಪ್ರಗತಿಗಾಗಿ(ಮೊದಿಫಿಕೆಶನ್ ಗಾಗಿ) ಚಲಾಯಿಸಲು ನಿಮ್ಮನ್ನ ಪ್ರೇರೇಪಿಸಬಹುದು.
ಇನ್ನೊಂದು ಕುತೂಹಲಕಾರಿ ವಿಷಯವೆಂದರೆ, ನಾನು ಗುಜರಾತನ್ನು ಸುತ್ತುವಾಗ ಸುಮಾರು 13 ಜನರನ್ನು ಸಂದರ್ಶಿಸಿದೆ (ಮಾತನಾಡಿಸಿದೆ). ಎಲ್ಲರು ಜನಸಾಮಾನ್ಯರು. ಆಟೋ ರಿಕ್ಷಾ ಓಡಿಸುವವರು, ಹೊಟೇಲುಗಳಲ್ಲಿ ಕೆಲಸಮಾಡುವವರು, ಕಾಲೇಜ್ ವಿದ್ಯಾರ್ಥಿಗಳು, ಮಂದಿರದ ಪೂಜಾರಿಗಳು, ಗೈಡ್ ಗಳು, ಪೊಲೀಸರು (ಎಲ್ಲ ಕಾಂಗ್ರೇಸ್ ವಕ್ತಾರರು ಯಾವಾಗಲು ಹೇಳೋದು ಗುಜರಾತಿಗೆ ಹೋಗಿ ಅಲ್ಲಿಯ ಜನರು ಪಡುವ ಪರದಾಟಗಳನ್ನು ಕಣ್ಣಾರೆ ನೋಡಿ. ಅಲ್ಲಿಯ ಜೀವನ ದುರ್ಭರವಾಗಿದೆ ಅಂತ). 13 ರ ರಲ್ಲಿ 12 ಜನ ಗುಜರಾತಿನ ಸರಕಾರಕ್ಕೆ (ಮೋದಿ-ರಾಜ್ ಗೆ) ತಮ್ಮ ಬೆಂಬಲ ನೀಡಿದರು. ಒಬ್ಬ ಆಟೋ ಚಾಲಕ ಮಾತ್ರ ಅದಕ್ಕೆ ವ್ಯತಿರಿಕ್ತ ಅಭಿಪ್ರಾಯ ಸೂಚಿಸಿದ. ಅವನ ಮಾತಿನಂತೆ ಅವನಿಗೆ ಯಾವುದೋ ಕಾರಣದಿಂದ ಸರಕಾರದ ಒಂದು ಇಲಾಖೆಯಿಂದ ತುಂಬಾ ತೊಂದರೆಯಾಗಿತ್ತು ಅನ್ನಿಸುತ್ತಿತ್ತು.
ಆದರೆ ಉಳಿದವರಲ್ಲಿ ಇವರಾರೂ ಒಬ್ಬರಿಗೊಬ್ಬರು ಸಂಬಂಧ ಪಟ್ಟವರಲ್ಲ, ಆದರೆ, ಇವರೆಲ್ಲರೂ ಮುಖ್ಯವಾಗಿ ಹೇಳಿದ 3 ಸಾಮಾನ್ಯ ಅಂಶಗಳನ್ನೇ ಇಲ್ಲಿ ಉಲ್ಲೇಖಿಸುತ್ತಿರುವುದು.
ಮೊದಲನೆಯದಾಗಿ, ನಿರಂತರ ವಿದ್ಯುತ್ ಸರಬರಾಜಿನದು. ವರ್ಷದ ಒಂದು ದಿನವೂ, ಒಂದು ಕ್ಷಣವೂ, ಒಂದು ಹಳ್ಳಿಯೂ ಬಿಡದೆ ತಡೆ ಇಲ್ಲದ ಈ ವಿದ್ಯತ್ ಸರಬರಾಜನ್ನು ಸಾಧಿಸಿದ ರಾಜ್ಯ ಸರಕಾರದ ಬಗ್ಗೆ ಹೆಮ್ಮೆಇಂದ ಹೇಳಿಕೊಳ್ಳುತ್ತಾರೆ. ಇದರ ಬಗ್ಗೆ ಹೇಳಿಕೊಳ್ಳುವಾಗ ಅವರ ಕಣ್ಣಲ್ಲಿ 5 ರಿಂದ 8 ವರ್ಷಗಳ ಹಿಂದಿನ ದಿನಗಳ ಬವಣೆ ಎದ್ದು ಕಾಣುತ್ತದೆ. ಇಲ್ಲಿ ಮನೆಗಳಿಗೆ ಬಳಸುವ ವಿದ್ಯುತ್ ನ ಸರಬರಾಜು ಮತ್ತು ಕೃಷಿಗೆ ಬಳಸುವ ವಿದ್ಯುತ್ತಿನ ಸರಬರಾಜು ಈ ಎರಡನ್ನು ವಲಯಗಳನ್ನು ಬೆರ್ಪಡಿಸಲಾಗಿದೆ. ವಿದ್ಯುತ್ತಿನ ಸ್ವಾವಲಂಬನೆಯ ಬಗ್ಗೆ ಬರೀ ಅಹಮದಾಬಾದನ ಜನ ಅಷ್ಟೇ ಅಲ್ಲ ಸೋಮನಾಥ, ಪೋರಬಂದರ್, ದ್ವಾರಕಾದಂತಹ ದೂರದ ಹಳ್ಳಿ, ಪಟ್ಟಣಗಳ ಜನರು ಸಹ ಖುಷಿಯಿಂದ ಹೇಳಿಕೊಳ್ಳುತ್ತಾರೆ. ಇಂದು ಗುಜರಾತ್ ತನಗೆ ಬೇಕಾದ ವಿದ್ಯುತ್ತನ್ನು ತಾನೇ ಉತ್ಪಾದಿಸಿದ್ದಲ್ಲದೆ ಇತರ ಕೆಲವು ರಾಜ್ಯಗಳಿಗೂ ಸುಮಾರು 500-600 ಕೋಟಿಯಷ್ಟು ವಿದ್ಯುತ್ತನ್ನು ಮಾರಾಟಮಾಡುತ್ತಿದೆ. ಈ ಸ್ವಾವಲಂಬನೆ ರಾಜ್ಯದ ಅನೇಕ ಮುಚ್ಚುತ್ತಿರುವ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳಿಗೆ ಭರವಸೆ ನೀಡಿ, ಚಾಲನೆ ನೇಡಿದೆ.
ಇನ್ನು ನಮ್ಮರಾಜ್ಯದಲ್ಲಿ, ನನ್ನ ಹಳ್ಳಿಯಲ್ಲಿ ದಿನಕ್ಕೆ 10 ಗಂಟೆ ಮಾತ್ರ ವಿದ್ಯುತ್ ಸರಬರಾಜು ಗ್ಯಾರಂಟಿ, ಅದು ಸಹ ಬರೀ ಕಾಗದದ ಮೆಲೆ, ವಾಸ್ತವದಲ್ಲಿ ದಿನದಲ್ಲಿ 12 ರಿಂದ 15 ಗಂಟೆಗಳವರೆಗೆ ವಿದ್ಯುತ್ ಕಡಿತವಿರುತ್ತದೆ. ಬೆಂಗಳೂರಲ್ಲು ಇದೆ ಕಥೆ. ನಮ್ಮ ಬಡಾವಣೆ (area), ತುಂಬಾ ಮುಖ್ಯವಾದ ಪ್ರದೇಶ, ಮಳೆಗಾಲದಲ್ಲಿ ಇಲ್ಲಿಯೂ ಸಹ ಪ್ರತಿ 3-4 ದಿನಕ್ಕೆ ಒಂದು ಸಾರಿ transformer ಕೆಟ್ಟುಹೊಗುತ್ತದೆ, ಆದರೆ ಯಾರಿಗೂ ಇದಕ್ಕೊಂದು ಶಾಶ್ವತ ಪರಿಹಾರ ನೀಡುವ, ಇದರ ಬಗ್ಗೆ ತಲೆಕೆಡಿಸಿಕೊಳ್ಳವ ಪುರಸೊತ್ತೆ ಇಲ್ಲ.
ಎರಡನೆಯದು, ಒಬ್ಬ ವ್ಯಕ್ತಿ ತನ್ನ ಬ್ಯಾಗ್ ನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಹೊತ್ತು ಯಾವುದೇ ಭಯವಿಲ್ಲದೆ ಮಧ್ಯರಾತ್ರಿ ಕೂಡ ಸುತ್ತಬಹುದು. ಒಂದುವೇಳೆ ಅಕಸ್ಮಾತ್ ದುಡ್ಡು ಕಳೆದುಕೊಂಡರೆ ಅದನ್ನ ಹಿಂತಿರುಗಿ ಪಡೆಯುವ ಭರವಸೆ ಇದೆ. ಅದೇ ತರಹ ಒಬ್ಬ ಹುಡುಗಿ ಅಥವಾ ಸ್ತ್ರೀ ಮಧ್ಯ ರಾತ್ರಿಯ 2-3 ಗಂಟೆಯ ಸುಮಾರಿಗೆ (ಯಾವುದಾದರು ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ) ಒಬ್ಬಂಟಿಯಾಗಿ ಯಾವುದೇ ಭಯ ಹಾಗೂ ಸುರಕ್ಷತೆಯ ಅನುಮಾನವಿಲ್ಲದೆ ಹೊರಹೋಗುವಂತಹ ವಾತಾವರಣವಿದೆ. ಈ ಶಬ್ದಗಳು ಮತ್ತು ಪರಿಸ್ಥಿತಿಗಳನ್ನ ನಾನು ಹುಟ್ಟುಹಾಕಿದ್ದಲ್ಲ, ಹೊರತಾಗಿ ಇದೆಲ್ಲವೂ ಕಂಡು ಅನುಭವಿಸುತ್ತಿರುವ ಅಲ್ಲಿಯ ಜನರು ಹಂಚಿಕೊಂಡ ವಿಷಯಗಳ, ನಾನೆನಿದ್ರು ನಿಮಗೆ ಅದನ್ನು ತಿಳಿಸುತ್ತಿರುವುದು ಅಷ್ಟೇ.
ಮೂರನೆಯದಾಗಿ, ಅಲ್ಲಿಯ ಜನರ ಶಾಂತಿ ಮತ್ತು ಸಾಮರಸ್ಯದ ಬದುಕು. ಈ ವಿಷಯದ ಬಗ್ಗೆ ಅನ್ಯ ರಾಜ್ಯಗಳ ಜನರಲ್ಲಿ ಅನೇಕ ಅನುಮಾನಗಳಿವೆ. ಮಾಧ್ಯಮಗಳು ಮತ್ತು ಅನೇಕ ರಾಜಕೀಯ ಪಕ್ಷಗಳ ನಾಯಕರು ಈ ರೀತಿಯ ಅನುಮಾನಗಳನ್ನ ಹುಟ್ಟುಹಾಕಿದ್ದೇ ಇದಕ್ಕೆಲ್ಲ ಕಾರಣ. ಅಹಮದಾಬಾದನಲ್ಲಿ, ಬಾಪು ನಗರ ಎಂಬ ಒಂದು ಬಹು ದೊಡ್ಡ ಪ್ರದೇಶವಿದೆ ಅಲ್ಲಿ ಉತ್ತರ ಭಾರತದಿಂದ ಕೆಲಸಕ್ಕೆಂದು ಒಲಸೆಬಂದ ಅನೇಕ ಕುಟುಂಬಗಳು ಸಾಮರಸ್ಯ ಮತ್ತು ಭ್ರಾತೃತ್ವದ ಭಾವದಿಂದ ಜೀವನ ನಡೆಸುತ್ತಿವೆ. ಇದೆ ತರಹ ಇನ್ನು ಅನೇಕ ಬಡಾವಣೆಗಳಲ್ಲಿ ಜನರು ಯಾವುದೇ ಕೋಮು ಗಲಭೆಗಳಿಗೆ ಎಡೆ ಇಲ್ಲದೆ, ಶಾಂತಿಯಿಂದ ಬದುಕುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಾನು ಬಾಡಿಗೆಗೆ ಬಳಸಿಕೊಂಡ ಆಟೋಗಳಲ್ಲಿ ಮೂರು ಆಟೋ ಚಾಲಕರು ಉತ್ತರ ಭಾರತದವರೇ ಆಗಿದ್ದುದು. ಅವರೆಲ್ಲ ಹೇಳಿದ್ದು ಇಷ್ಟೇ "ಅಹಮದಾಬಾದ ತುಂಬಾ ದುಬಾರಿ ನಗರ ಅನ್ನೋದೊಂದೇ ಸ್ವಲ್ಪ ಕಷ್ಟ, ಆದರೆ, ಇಲ್ಲಿ ಜೀವನಕ್ಕೆ ನಿಜವಾಗಿಯೂ ಬೆಲೆ ಇದೆ. ಯಾವುದೇ ಟೆನ್ಷನ್ (ಒತ್ತಡ) ಇಲ್ಲದ ಬದುಕು ನಡೆಸುತ್ತಿದ್ದೆವೆ. ಜನ ಬಯಸುವಾದಾರು ಇನ್ನೇನು ನೀವೇ ಹೇಳಿ ಸ್ವಾಮಿ" ಅಂತ.
ಇಲ್ಲಿ ನಾವೆಲ್ಲಾ ಕಂಪ್ಯೂಟರ್ (techies) ತಜ್ಞರು ಅರಿಯಬೇಕಾದ ಒಂದು ಮುಖ್ಯ ವಿಷಯವೆಂದರೆ ಗುಜರಾತ್ ನಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಗರ್ಜನೆ (Boom) ಕರ್ನಾಟಕದ ಸಮವಿಲ್ಲ, ಅದರೂ ಅವರೆಲ್ಲರೂ ತಮ್ಮ ಜೀವನಕ್ಕೆ ಬೇಕಾದಷ್ಟನ್ನು ಸಂಪಾದಿಸುತ್ತಿದ್ದಾರೆ. ನಾನು ಅಂದುಕೊಳ್ಳುವುದೇನೆಂದರೆ, ಒಂದುವೇಳೆ ಕಂಪ್ಯೂಟರ್ ತಂತ್ರಜ್ಞಾನ ತನ್ನ ಗತಿ ಕಳೆದುಕೊಂಡರೆ ಬೆಂಗಳೂರು ತನ್ನ ಬೆಳವಣಿಗೆಯ ಗತಿಯನ್ನು ಕೆಲವು ತಿಂಗಳುಗಳಷ್ಟು ಮುಂದುವರೆಸುವುದೂ ಕಷ್ಟವಾಗುತ್ತದೆ. ಆದರೆ ಅಹಮದಾಬಾದ ನಲ್ಲಿ ಬಹಳಷ್ಟು ಉದ್ಯೋಗಗಳು ಸ್ವತಂತ್ರ ಹಾಗೂ ಭಾರತೀಯವಾಗಿವೆ. ಅಂದರೆ ಬೇರೆಯವರ (ಹೊರ ದೇಶಗಳ) ಮೇಲೆ ಅವಲಂಬಿಸಿಲ್ಲ. ಪಶ್ಚಿಮದ ಆರ್ಥಿಕ ತರಂಗಗಳ ಏರಿಳಿತಗಳಿಗೆ ಕುಣಿಯುವ ನಮ್ಮ ಉದ್ಯೋಗಸ್ಥ ಸಮಾಜದಲ್ಲಿ ಇಂತಹ ಸ್ವಾಯತ್ತತೆ ಬರುವುದು ಯಾವಾಗ?
ಎಂತಹ ಪ್ರಗತಿ! ದಿನ ವೊಂದಕ್ಕೆ ಲಕ್ಷಗಟ್ಟಲೆ ಗಳಿಸುವವನು ಮತ್ತು ನೂರು-ಇನ್ನೂರು ದುಡಿವವನು ಎಲ್ಲರು ದಿನದ ಕೊನೆಯಲ್ಲಿ ತಮ್ಮ ಜೀವನದಲ್ಲಿ ತೃಪ್ತಿ ಕಂಡುಕೊಳ್ಳುತ್ತಾರೆ ಮತ್ತು ನೆಮ್ಮದಿಯಿಂದ ಬದುಕುತ್ತಾರೆ ಎಂದರೆ ಆಶ್ಚರ್ಯವೇ ಸರಿ. ಬೆಂಗಳೂರಲ್ಲಿ, ನಾವೆಲ್ಲಾ ತಂತ್ರಜ್ಞರು ನಮ್ಮನ್ನ ನಾವು ಸವೆಸಿ ದಿನ ಒಂದಕ್ಕೆ ಸಾವಿರಾರು ದುಡಿದರೂ ಜೀವನ ನೆಮ್ಮದಿಯ ಬಗ್ಗೆ ಮಾತಾಡುತ್ತಲೇ ಬದುಕುತ್ತೇವೆ, ಅದನ್ನ ಅನುಭವಿಸುವ ದೈವ ನಮಗಿಲ್ಲ.
ಇದನ್ನೆಲ್ಲಾ ತಿಳಿದುಕೊಂಡ ಮೇಲು ಕೆಲವರಿಗೆ ಅಸಮಾಧಾನವಿದ್ದು ಅವರು ಇನ್ನು ಹೆಚ್ಚಿನ ಪ್ರಗತಿ, ಬೆಳವಣಿಗೆಯನ್ನು (ತತಕ್ಷಣ) ಬಯಸುತ್ತಿದ್ದರೆ ಅವರು ಇನ್ನು ಕೆಲವು ವರ್ಷ ಅಸಮಾಧಾನಿಗಳಾಗಿರಲು ತಯ್ಯಾರಾಗಿರಬೇಕು ಅಥವಾ ತಮಗೆ ಖುಷಿಕೊಡುವ ಕನಸುಗಳೊಂದಿಗೆ ಬದುಕಬೇಕು ಇಲ್ಲ ಒಬ್ಬ ಜೀನಿ (Gin) ಯನ್ನು ಹಿಡುಕಿಕೊಳ್ಳಬೇಕು.
ನಾನು ನನ್ನ ಕೇವಲ 3 ದಿನಗಳ ಪ್ರವಾಸದಿಂದ ಗುಜರಾತನಲ್ಲಿ ಎಲ್ಲವೂ ಸರಿಯಾಗಿ(ದೆ)ರಬಹುದು ಅಂತ ಹೇಳೋದಿಲ್ಲ, ಆದರೆ, ಜಾತ್ಯಾತೀತತೆಯ ಲೇಪದಲ್ಲಿರುವ ಕೋಮುವಾದದಿಂದ, ಭ್ರಷ್ಟಾಚಾರದಿಂದ, ಕ್ಷೇತ್ರೀಯವಾದದಿಂದ, ಸ್ವಾರ್ಥ ಮತ್ತು ಅಧಿಕಾರದ ಮಾನಸಿಕತೆಯಿಂದ ಕೊಳೆತು ಹೋದ ಭಾರತದ ರಾಜಕೀಯದಲ್ಲಿ ಒಳ್ಳೆಯ ಆಡಳಿತಕ್ಕೆ ಈ ರಾಜ್ಯ ಮಾದರಿಯಾಗಿದೆ ಅಂತ ಖಡಾ-ಖಂಡಿತವಾಗಿ ಹೇಳಬಹುದು. ಬರೀ ಎರಡು ಅವಧಿಗಳಲ್ಲಿ (10 ವರ್ಷಗಳಲ್ಲಿ) ಅವರ ಹತ್ತಿರ ಹೇಳಿಕೊಳ್ಳುವುದಕ್ಕೆ ಮತ್ತು ಪ್ರದರ್ಶಿಸುವುದಕ್ಕೆ ಆಶ್ವಾಸನೆಗಳನ್ನು ಮೀರಿ ಏನಾದರೂ ಸತ್ವವುಳ್ಳದ್ದು ಇದೆ. ಕಹಿ ಸತ್ಯವೆಂದರೆ, ಇದು 60 ವರ್ಷಗಳಿಗೂ ಹೆಚ್ಚು ಕೇಂದ್ರ ಹಾಗು ಅನೇಕ ರಾಜ್ಯ ಗಳಲ್ಲಿ ಸರಕಾರ ನಡೆಸಿದ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಇದಕ್ಕೆಲ್ಲ ಬರೀ ಭಾರತೀಯರಾದರೆ ಸಾಲದು, ಭಾರತೀಯತೆಯ ಅತಿರೇಕವು ಬೇಕು.
ನನ್ನ ಮನಮುಟ್ಟಿದ ಪ್ರಸಂಗ ಎಂದರೆ, ನಮ್ಮ ಟ್ಯಾಕ್ಸಿ ಯವನು ನಮ್ಮನ್ನು (೨ ದಿನ ಅವನತ್ಯಾಕ್ಸಿಯಲ್ಲೇ ಸುತ್ತಿದ್ದು) ರೈಲು ನಿಲ್ದಾಣದ ಹತ್ತಿರ ಬಿಟ್ಟು ಅವನು "ಸರ್, ನೀವು ತುಂಬಾ ಕಡಿಮೆ ರಜೆಗಳನ್ನು ತಗೆದುಕೊಂಡು ಬಂದಿದ್ದಿರಾ. ನೀವು ಬಹಳಷ್ಟು ಪ್ರಸಿದ್ಧ ಸ್ಥಳಗಳನ್ನು ನೋಡಲೇ ಇಲ್ಲ. ಮುಂದಿನ ಬಾರಿ ಒಂದು ವಾರದಷ್ಟು ರಜೆಗಳನ್ನ ತೆಗೆದುಕೊಂಡು ಬನ್ನಿ, ಬಂದು ನನಗೆ ಫೋನ್ ಮಾಡಿ. ನಾನು ನಿಮ್ಮನ್ನ ಎಲ್ಲ ಕಡೆ ಸುತ್ತಾಡಿಸ್ತೀನಿ. ಗುಜರಾತ ನಲ್ಲಿ ಇನ್ನು ಅನೇಕ ಒಳ್ಳೆಯ ಪ್ರವಾಸಿತಾಣಗಳಿವೆ" ಅಂತ ಹೇಳಿದಾಗ. ಅವನು ಹೇಳಿದ್ದರಲ್ಲಿ ಅಂಥದ್ದೇನು ವಿಶೇಷ ಇರಲಿಲ್ಲ ಆದರೆ, ಭಾವನಾತ್ಮಕತೆ ಮಾತ್ರ ಎದ್ದು ಕಾಣುತಿತ್ತು. ಆ ಮಹಾನುಭಾವ ಗುಜರಾತ ನವನಲ್ಲ ಅವನು ಉತ್ತರ ಪ್ರದೇಶದವನು, ಆದರೆ ಗುಜರಾತ ಅದೆಷ್ಟು ಅವನನ್ನು ಸೆಳೆದಿತ್ತು ಅನ್ನೋದನ್ನ ಅವನ ಮಾತುಗಳಿಂದ ಗೊತ್ತಾಗುತ್ತಿತ್ತು. ನನ್ನ ಮನಸ್ಸು ಕೇಳಿತು, "ನಾವು ನಮ್ಮ ಭಾರತದ ಬಗ್ಗೆ ಈ ರೀತಿ ಹೆಮ್ಮೆ ಪಡುವುದು ಯಾವಾಗ? ಇಡಿ ಜಗತ್ತನ್ನು ನಮ್ಮ ನಾಡಿಗೆ ಕೈ ಬೀಸಿ ಕರೆಯುವದು ಯಾವಾಗ?" ಅಂತ.
ನನಗೆ ಗುಜರಾತಿಗೆ ಭೇಟಿಕೊಟ್ಟಿದ್ದು ಸಾರ್ಥಕ ಅನ್ನಿಸಿತು. ಈಗ ನಾನು ಎಲ್ಲರಿಗು ಹೇಳಬಹುದು "ನಾನು ಹೇಳುತ್ತಿರುವುದೆಲ್ಲ ನಾನು ಕಂಡದ್ದನ್ನ, ಅಲ್ಲಿಯ ಜನರನ್ನು ಕೇಳಿ ತಿಳಿದುಕೊಂಡಿದ್ದನ್ನ, ಹೊರತಾಗಿ ಯಾರೋ ಹೇಳಿದ್ದನ್ನ ಅಲ್ಲ ಅಥವಾ ಯಾರೊಬ್ಬರ ಬಗೆಗಿನ ಅಂಧ ಶೃದ್ಧೆಯಿಂದ ಅಲ್ಲ".
ಅಬ್ ಕುಛ್ ದಿನ ತೋ ಗುಜಾರೋ ಗುಜರಾತ ಮೇ !!!
-- ಕೆ. ಕಲ್ಯಾಣ
No comments:
Post a Comment