ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...! ( ಭಾಗ - ೩)
2014 ರಲ್ಲಿ ಕಿಂಗ್ ನ ಚುನಾಯಿಸಿ, ಕಿಂಗ್ ಮೇಕರ್ ಗಳನ್ನಲ್ಲ...
ಇಂದು ದೇಶದಲ್ಲಿ ಅನೇಕ ಪ್ರಾದೆಶಿಕ ಪಕ್ಷಗಳು ತಲೆಯೆತ್ತಿವೆ. ನೋಡುವುದಕ್ಕೆ ಈ ಪಕ್ಷಗಳ ಮಧ್ಯ ವೈಚಾರಿಕ ಭಿನ್ನತೆ ಕಂಡರೂ ಇವುಗಳ ಉದ್ದೇಶ ಮಾತ್ರ ಕುರ್ಸಿ, ದುಡ್ಡು ಮತ್ತು ಅಧಿಕಾರ ಮಾತ್ರ. ಒಂದು ಕಡೆ ಪ್ರಾದೇಶಿಕವಾಗಿ ಇವುಗಳಿಂದ ಅಲ್ಪ-ಸ್ವಲ್ಪ ಅನುಕೂಲವಾದ್ರೆ ಇನ್ನೊಂದು ಕಡೆ ರಾಷ್ಟ್ರೀಯ ಮಟ್ಟದಲ್ಲಿ ಇವುಗಳಿಂದ ದೇಶದ ಪ್ರಗತಿ ಕುಂಠಿತವಾಗುತ್ತಿದೆ. ಸ್ವಾರ್ಥ ಹಾಗೂ ಪ್ರಾದೇಶಿಕ ಉದ್ದೇಶಗಳಿಗೆ ಸೀಮಿತವಾಗಿರುವ ಇವುಗಳ ಅಸ್ತಿತ್ವದಿಂದ ದೇಶ ನಲುಗಿಹೋಗಿದೆ.
ಈ ಪಕ್ಷಗಳಿಗೆ ತಾವು ಸರಕಾರ ರಚಿಸಲು ಸಾಧ್ಯವಿಲ್ಲ ಅನ್ನುವ ಸತ್ಯ ಗೊತ್ತಿದೆ. ಆದರೆ, ಆ ಪಕ್ಷಗಳಿಗೆ ಕೆಲವು ಸ್ಥಾನಗಳನ್ನು ಗಿಟ್ಟಿಸಿ ಕಿಂಗ್ ಆಗುವುದಕ್ಕಿಂತಲೂ ಕಿಂಗ್ ಮೇಕರ್ ಆಗುವುದೇ ಲಾಭಕಾರಿ ಅನ್ನುವುದನ್ನ ಅರ್ಥಮಾಡಿಕೊಂಡು ಬಿಟ್ಟಿವೆ. ಮತದಾರರ ಧೂಳುತುಂಬಿದ ಗಲ್ಲಿಗಳಿಂದ ಹೊರಟ ಇವರು ಮುಂದೆ ರಾಜಕೀಯ ವಲಯದಲ್ಲಿ ಕೆಂಪು ಬತ್ತಿಯನ್ನ ಹಾಕಿಕೊಂಡು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಮಾಡಿಸಿ ತಮ್ಮ ಕಾರಿನ ಕಿಟಕಿ ಏರಿಸಿ ತಿರುಗುತ್ತಾರೆ.
ಚುನಾವಣೆಯ ನಂತರ ಬಹುಮತದಿಂದ ವಂಚಿತವಾದ ಯಾವುದೋ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿ ಆ ಅಧಿಕಾರಾರೂಢ ಪಕ್ಷದ ತಳವನ್ನು ನೆ_ತ್ತ ಬದುಕುತ್ತವೆ, ಇಲ್ಲವೆ ದೇಶದ ಚುಕ್ಕಾಣಿಯನ್ನು ಹಿಂಭಾಗದಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸುತ್ತವೆ. ಮತ ನೀಡಿದ ಪ್ರಜೆ ಐದು ವರ್ಷಕ್ಕೆ ಇವರಾಡುವ ನಾಟಕಗಳನ್ನು ಮೂಕ ಪ್ರೇಕ್ಷಕನಾಗಿ ನೋಡುವ ಹೊರತು ಏನು ಮಾಡುವಂತಿಲ್ಲ.
ಅದೆಷ್ಟೋ ಸಾರಿ ಈ ಪಕ್ಷಗಳಿಗೆ ದೇಶದ ಮಹತ್ವದ ನೀತಿ ನಿರ್ಧಾರಗಳ ಬಗ್ಗೆ ಲವಲೇಶವು ತಿಳಿದಿರುವುದಿಲ್ಲ ಹಾಗೂ ಅವರಿಗೆ ಬೇಕಾಗಿಯೂ ಇರುವುದಿಲ್ಲ. ತಮ್ಮ ವೋಟು ಬ್ಯಾಂಕಿಗೆ ಧಕ್ಕೆ ಆಗದಿದ್ದರೆ ಸಾಕು. ಒಬ್ಬರಿಗೊಬ್ಬರು ದೇಶ ಲೂಟಿಯ ಕೈಂಕರ್ಯದಲ್ಲಿ ತೊಂದರೆಯಾಗದಂತೆ ಒಂದು ಅಲಿಖಿತ ಒಪ್ಪಂದದ (ನೀವು ನಮ್ಮ ತಂಟೆಗೆ ಬರಬೇಡಿ, ನಾವು ನಿಮ್ಮ ತಂಟೆಗೆ ಬರಲಾರೆವು ಅನ್ನು ಒಪ್ಪಂದದ) ಮೇರೆಗೆ ಕೆಲಸ ಮಾಡುತ್ತವೆ. ಅದೇ ಹಳೆಯ ಕಾಲದ ಸಾಮ್ರಾಟ ಮತ್ತು ಸಾಮಂತರ ಕಾರ್ಯವೈಖರಿ ಮುಂದು ವರೆಯುತ್ತಿದೆ.
ಇಂದಿಗೂ ದೇಶದಲ್ಲಿ ಮೀರ್ ಜಾಫರ್ ಮತ್ತು ರಾಬರ್ಟ್ರ ಕ್ಲೈವ್ಗಳ ಕೊರತೆ ಇಲ್ಲ . ಪ್ರತಿ ಐದು ವರ್ಷಕ್ಕೆ ದೇಶ ಮತ್ತೆ ಚುನಾವಣೆಯ ಪಾಣಿಪತ್ ನಲ್ಲಿ ಸೋತು ಇಬ್ಬರಲ್ಲಿ ಒಬ್ಬರ ಕೈವಶವಾಗುತ್ತಿದೆ.
ಈ ಪರಿಸ್ಥಿತಿಗಳಲ್ಲಿ ದೇಶ ಸರ್ವತೊಮುಖ ಪ್ರಗತಿ ಸಾಧಿಸುವುದು ಕಷ್ಟ ಎನ್ನುವ ವಿಷಯ ನಾವೆಲ್ಲ ಅರಿತಾಗಿದೆ. ಇದನ್ನರಿತು ಪ್ರಜ್ಞಾವಂತ ಪ್ರಜೆಗಳಾದ ನಾವು ಲೋಕಸಭೆಯ ಚುನಾವಣೆಯಲ್ಲಿ ಕೇಂದ್ರದ ವಿಷಯಗಳನ್ನು ವಿಶ್ಲೇಷಿಸಿ ರಾಷ್ಟ್ರೀಯ ಪಕ್ಷಗಳಿಗೆ ಮತ ನೀಡುವ ನಿರ್ಧಾರ ಮಾಡಬೆಕು.
ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...! ಇನ್ನು ಎಡವಿದರೆ ಏಳೋದು ಕಷ್ಟ.
-- ಅಭಿನವ ಭಾರತ
No comments:
Post a Comment