ನರೇಂದ್ರ ಮೋದಿಯನ್ನು ಭಾರತದ ರಾಜಕೀಯದಲ್ಲಿ ಖಳನಾಯಕನೆಂದು
2002 ರಿಂದ 2014 ವರೆಗೆ ಜರಿದ ಪಕ್ಷಗಳು, 2014 ರ ಚುನಾವಣೆಯ ಕೊನೆಯ ಹಂತದ ಮತದಾನದ ವರೆಗೂ ಖಾಂಗ್ರೇಸ್ ಮೊದಲಾಗಿ ಜಾತ್ಯಾತೀತತೆಯ ಸೋಗಿನ ಅನೇಕ
ಪಕ್ಷಗಳು ಪಕ್ಷಾತೀತವಾಗಿ ಮಾಡಿದ್ದು ಮೋದಿ ವಿರೋಧವನ್ನೇ. ಆ ವಿರೋಧವು ಸಿದ್ಧಾಂತಗಳ
ವಿರೋಧವಾಗಿರದೆ ವಯಕ್ತೀಕ ಟೀಕೆ, ವಯಕ್ತೀಕ ವಿರೋಧಕ್ಕೆ ಸೀಮಿತವಾಗಿದ್ದವು. ತಮ್ಮ ಪಕ್ಷ ಹಾಗೂ ಸಿದ್ಧಾಂತಗಳನ್ನು
ಬಲಗೊಳಿಸದೆ, ತಮ್ಮ ಆದ್ಯತೆ, ಕಾರ್ಯ
ವೈಖರಿಯನ್ನು ಜನರ ಮುಂದಿಡದೆ ಮೋದಿಯನ್ನು ಸಾರ್ವತ್ರಿಕವಾಗಿ ತೆಗಳುವುದನ್ನೇ ತಮ್ಮ ಚುನಾವಣಾ
ಪ್ರಚಾರದ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದವು.
ಇದೆಲ್ಲದ್ದಕ್ಕೆ ಪ್ರತಿಯಾಗಿ ಅನೇಕಾನೇಕ ವಿಚಾರಗಳಲ್ಲಿ ಮೋದಿ
ಬಳಸಿದ ಅಸ್ತ್ರ "ಮೌನ". ಅದೆಂತಹ ಮೌನ? ಅಸ್ತ್ರಕ್ಕೆ
ಪ್ರತಿ ಅಸ್ತ್ರ ಹೂಡದೆ, ತನ್ನ 56 ಇಂಚಿನ ಉಕ್ಕಿನ ಎದೆಯನ್ನು ಉಬ್ಬಿಸಿ ಅವುಗಳನ್ನೆಲ್ಲ
ನಿಸ್ತೇಜ ಮಾಡಿ, ದೇಶಕ್ಕಾಗಿ ನಮ್ಮ ಪೂರ್ವಜರು ಮಾಡಿದ ತ್ಯಾಗ-ಬಲಿದಾನಗಳು,
ಅದಕ್ಕೆ ಸಲ್ಲದ ಗೌರವ, ದೇಶದ ಇಂದಿನ ಸ್ಥಿತಿ, ಅದರ
ಕಾರಣ, ಅದಕ್ಕೆ ಪ್ರತಿಯಾಗಿ ತನ್ನ ಹಾಗೂ ಬಿಜೆಪಿ ಯ ಕಾರ್ಯತಂತ್ರವನ್ನು ದೇಶದ ಮೂಲೆ ಮೂಲೆಗೂ ಹೋಗಿ ಮತದಾರರ ಮುಖಾ ಮುಖಿಯಾಗಿ ಹೃದಯಕ್ಕೆ ನಾಟುವಂತೆ ಹೇಳಿದಾಗ ಭಾರತಾಂಬೆಯ
ಒಡಲಾಳದಿಂದ ಜನಸ್ತೋಮವಾಗಿ ಹರಿದದ್ದೇ "ಮೋದಿ ಅಲೆ (ಸುನಾಮಿ)".
ಈ ಬಾರಿಯ ಚುನಾವಣೆಯ ವಿಶೇಷವೆಂದರೆ ಎಲ್ಲಾ ಪಕ್ಷಗಳವರು ಎಲ್ಲಿ
ಹೋದರು, ಯಾವ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರೂ,
ಮಾಧ್ಯಮಗಳ ಯಾವುದೇ ಪ್ರಶ್ನೆಗೆ ಉತ್ತರ ನೀಡಿದರೂ, ಮೋದಿ
ಅಲೆಯ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸದೆ, ಅಲ್ಲಗಳೆಯದೆ
ಪೂರ್ತಿಯಾಗುತ್ತಿರಲಿಲ್ಲ. ಇದರ ಅರ್ಥ ಮೋದಿ ಅಲೆಯ ರಭಸ ಎಷ್ಟಿತ್ತೆಂದು ಯಾರಿಗಾದರೂ
ಅರಿವಾಗಬಹುದು. ಇದನ್ನರಿತ ಅನೇಕ ಚಿಕ್ಕ-ಪುಟ್ಟ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಆಗಲೇ
ಮೋದಿಯ ಸುರಕ್ಷಿತ ತೆಕ್ಕೆಗೆ ಸೇರಿಕೊಂಡವು.
ಕೆಲವೇ ದಿನಗಳಲ್ಲಿ ಮೋದಿಯವರು ಪಕ್ಷದಲ್ಲಿ ಅಜಾತಶತ್ರುವಾಗಿ
ಬೆಳೆದರು. ಮೋದಿ ಅಲೆಯನ್ನ ಮೋದಿಯ ಅಲೆಯಾಗಿಯೇ ಉಳಿಸಿ ದಾರಿ ಸುಗಮಗೊಳಿಸುವಲ್ಲಿ ಪ್ರಮುಖರಾಗಿ
ದುಡಿದದ್ದು ರಾಜನಾಥ್ ಸಿಂಗ್ ಹಾಗೂ ಅರುಣ್ ಜೆಟ್ಲಿ. ದೇಶಾದ್ಯಂತ ಮೋದಿ ಬಗೆಗಿನ ಜನರ ಆಶಾ ಭಾವನೆಯನ್ನು
ಮನಗಂಡು, ತಮ್ಮ ಸ್ವಂತಿಕೆಯನ್ನೂ ಸ್ವಲ್ಪ ಪಕ್ಕಕ್ಕಿಟ್ಟು ಪಕ್ಷದೊಳಗಣ
ವಿರೋಧಗಳನ್ನು ಸಮರ್ಥವಾಗಿ ಎದುರಿಸಿ ಮೋದಿಯವರ ಬೆಂಬಲಕ್ಕೆ ಇವರು ನಿಂತದ್ದು ತುಂಬಾ ಪ್ರಶಂಸನೀಯ.
ಮೂರನೆಯ ಸ್ಥಾನ ಮೋದಿಯ ನೆರಳು ಅಂತಲೇ ಕರೆಸಿಕೊಳ್ಳುವುದರಲ್ಲಿ ಖುಷಿ ಪಡುವ ಅಮಿತ್ ಷಾ ಅವರದು. ಇವರ
ಕಾರ್ಯ ಚತುರತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿರುವ ಸ್ಥಾನಗಳನ್ನು ಗಮನಿಸಿದಾಗಲೇ
ಅರ್ಥವಾಗುತ್ತದೆ. ಇವರೆಲ್ಲ ಎಲೆಮರೆಯ ಕಾಯಿಗಳಲ್ಲಾ, ಮರ
ಬುಡದ ಬೇರುಗಳು ಅಂತ.
ಇನ್ನು ರಾಜಕೀಯದ
ಹೊರಗಿದ್ದು, ರಾಜಕೀಯದ ಸ್ವಚ್ಚತೆಗಾಗಿ, ಭಾರತದ
ಅಭ್ಯುದಯಕ್ಕಾಗಿ, ಭಾರತಮಾತೆಯ ಸೇವಕರಾಗಿ, ಹಗಲಿರುಳು
ಅವಿರತವಾಗಿ ದುಡಿದದ್ದು ಸ್ವಾಮಿ (ಬಾಬಾ) ರಾಮದೇವ. ಹೆಚ್ಚು ಕಡಿಮೆ ಕಳೆದೊಂದು ವರ್ಷದಿಂದ
ಸ್ವಾಮಿಜಿಯವರು ಸಂಕಲ್ಪ ಮಾಡಿ (ಮೋದಿ ನೇತೃತ್ವದಲ್ಲಿ ಸರಕಾರ ಸ್ಥಾಪನೆ ಮಾಡುವುದು), ತಮ್ಮ ಹರಿದ್ವಾರದ ಆಶ್ರಮದಿಂದ ಹೊರಗುಳಿದು ದೇಶಾದ್ಯಂತ
ಸಂಚರಿಸಿ ಜನರಲ್ಲಿ ಯೋಗ ಮಾಧ್ಯಮದಿಂದ, ಸರಕಾರದ ಕುನೀತಿಗಳು, ಕಪ್ಪುಹಣ,
ವ್ಯವಸ್ಥಾ ಪರಿವರ್ತನೆಯ ಅವಶ್ಯಕತೆಯ ಬಗ್ಗೆ ಜನಜಾಗೃತಿ ಮೂಡಿಸಿದ್ದರು. ಅದು ಒಂದು ಕಿಡಿಯಾಗಿ,
ಮೋದಿಯವರ ಬಿರುಗಾಳಿಗೆ ಕಾಳ್ಗಿಚ್ಚಾಗಿ ವಿರೋಧಿಗಳ ಅಹಂಕಾರದ ಲಂಕೆಯ ಭಾಸ್ಮಕ್ಕೆ
ಕಾರಣವಾಯಿತು.
ಇನ್ನು ಕೊನೆಯದಾಗಿ ಹಗಲಿರುಳು ಮೋದಿಗಾಗಿ ದುಡಿದ ಸಂಘಟನೆಗಳು. ನಮೋ ಬ್ರಿಗೇಡ್, ನಮೋ ಫಾರ್ ಪಿಎಮ್, ನಮೋ ಆರ್ಮಿ, ನರೆಂದರ ಮೋದಿ ಫ್ಯಾನ್ಸ್, ಮಿಷನ್ ೨೭೨ +, ಒಂದೇ ಎರಡೇ ಅನೇಕ ಸಂಘಟನೆಗಳು ತಲೆ ಯೆತ್ತಿದವು. ಯುವಕರು ಇವುಗಳಲ್ಲಿ ಅಭೂತಪೂರ್ವವಾಗಿ ಸಮರೋಪಾದಿಯಲ್ಲಿ ಪಾಲ್ಗೊಂಡರು. ಈ ಸಂಘಟನೆಗಳ ಅಸ್ತಿತ್ವದ ಸಮಯ ಮಾತ್ರ ಚಿಕ್ಕದು. ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದ ಮರುದಿನವೇ ಇವುಗಳ ಅಂತ್ಯ. ಯಾವುದೇ ಹಮ್ಮು ಬಿಮ್ಮಿಲ್ಲದೆ, ನಾನು ಮಾಡುತ್ತಿರುವುದು ನನ್ನ ಮಾತೃ ಭೂಮಿಯ ಸೇವೆ ಅಂತ ತಿಳಿದು ತಮ್ಮ ಅಮೂಲ್ಯ ಸಮಯ, ಶ್ರಮ, ಹಣ ಎಲ್ಲವನ್ನು ನೀಡಿ ಅವಿರತವಾಗಿ ದುಡಿದರು. ಈಗ ನಮ್ಮ ದೇಶದ ನೆಲ, ಜಲ ಜನರ ಬಗ್ಗೆ ಹೆಮ್ಮೆ ಹೊಂದಿರುವ ನರೇಂದ್ರ ಮೋದಿ ಪ್ರಧಾನಮಂತ್ರಿ ಯಾಗದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಅಂತ ತಿಳಿದು ದುಡಿದಿದ್ದಾರೆ. ಇವರು ಮಾಡಿದ ಓಟರ್ ರೆಜಿಸ್ಟ್ರೇಷನ್ (ಮತದಾರ ನೋಂದಣಿ) ಕಾರ್ಯಕೂದ ಅತ್ಯಂತ ಶ್ಲಾಘನೀಯ. ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ ಹುಟ್ಟಿಕೊಂಡ ಗ್ರುಪ್ ಗಳಿಗಂತೂ ಲೆಕ್ಕವೇ ಇಲ್ಲ. ಈ ತಾಣಗಳಲ್ಲಿ ಒಂದು ವರ್ಷದಿಂದ ಹರಿದಾಡುತ್ತಿರುವ ದೇಶಾಭಿಮಾನದ ಅಂಡರ್ ಕರೆಂಟ್ ನೋಡಿದರೆ ಯಾರಿಗಾದರು ಈ ಪರಿವರ್ತನೆಯ ಅರ್ಥವಾದಿತು.
ಕೊನೆಯದಾಗಿ ಭಾರತೀಯ ಮತದಾರ. ಎಲ್ಲ ಸಮೀಕ್ಷೆಗಳನ್ನು ಮೀರಿ,
ರಾಜಕೀಯ ಪಂಡೀತರ ಲೆಕ್ಕಾಚಾರಗಳನ್ನು ಮೀರಿ ಆಶ್ಚರ್ಯಜನಕವಾಗಿ ಮೋದಿಯವರ ಪರವಾಗಿ ಮತದಾನ
ಮಾಡಿದ್ದು. ಇಂದು ಬಿಜೆಪಿ ಯಲ್ಲಿ ಯಾರು ಏನೇ ಹೇಳಲಿ, ಪಕ್ಷದ
ಘಟಾನುಘಟಿಗಳಿಂದ ಹಿಡಿದು ನಿನ್ನೆ ಪಕ್ಷ ಸೇರಿ ಇಂದು ಅಭ್ಯರ್ಥಿಯಾಗಿ ಟಿಕೆಟ್ ಪಡೆದು ಗೆದ್ದಿರುವವರೆಲ್ಲ ಅರ್ಥಮಾಡಿಕೊಳ್ಳಬೇಕಾದ ಒಂದು
ವಿಷಯವೆಂದರೆ ಇದಕ್ಕೆಲ್ಲ ಮೋದಿ ಅಲೆಯೇ ಕಾರಣ. ಅಭ್ಯರ್ಥಿ ಯಾರೇ ಆಗಿರಲಿ ನಾವು ಮತಹಾಕುತ್ತಿರುವುದು ಮಾತ್ರ ಮೋದಿಯವರಿಗೆ ಅಂತ ಮತದಾನ ಮಾಡಿದ್ದೆ ಪೂರ್ಣ ಬಹುಮತಕ್ಕೆ ಕಾರಣವಾಯಿತು.
ದಾಸರು ಹೇಳುವ ಪದದಂತೆ "ನೀನ್ಯಾಕೋ ರಂಗ ನಿನ್ನ ಹಂಗ್ಯಾಕೋ
ನಿನ್ನ ನಾಮದ ಬಲವೊಂದಿದ್ದರೆ ಸಾಕೋ" ಎನ್ನುವಂತೆ, ಮತದಾರ
ಬಾಂಧವರು "ಮೋದಿ ಯಾಕೋ, ಮೋದಿಯ ಹಂಗ್ಯಾಕೋ, ಮೋದಿಯ
ನಾಮವೊಂದಿದ್ದರೆ ಸಾಕೋ" ಅಂತ ಮತ ನೀಡಿದ್ದು ಗೆಲುವಿಗೆ ನಾಂದಿಯಾಯಿತು.
ಈ ಮೋದಿ ಅಲೆ (ಸುನಾಮಿ) ಮಾಡಿದ್ದಾದರೂ ಏನು?
ಈ ಸುನಾಮಿ ಜತ್ಯಾತೀತತೆಯ ಹೆಸರಿನಲ್ಲಿ ಜಾತೀಯತೆಯ ಅಂಗಡಿಗಳನ್ನು
ನಡೆಸುತ್ತಿದ್ದ ಪಕ್ಷಗಳಿಗೆ, ಅದರ ನಾಯಕರುಗಳಿಗೆ ಅವರ ಅಂಗಡಿಗಳಿಂದ ಹೊರಗೆಳೆದು ತಂದು
ಬೆತ್ತಲೆಮಾಡಿ ನಿಲ್ಲಿಸಿದೆ. ಹತ್ತು, ಇಪ್ಪತ್ತು, ಮೂವತ್ತು
ಅಭ್ಯರ್ಥಿಗಳು ನಮ್ಮ ಜೋತೆಯಲ್ಲಿದ್ದರೆಂದು ಮೆರೆಯುತ್ತಿದ್ದ, ಸರಕಾರದ ಒಂದು ಚುಕ್ಕಾಣಿಯನ್ನು ತಮ್ಮ ಕೈಯಲ್ಲೂ ಹಿಡಿದು ಆಡಿಸುತ್ತಿದ್ದವರಿಗೆಲ್ಲ
ಮೂಲೆಗುಂಪಾಗಿಸಿದೆ. ಜಾತೀಯ ಆಧಾರದ ಮೇಲೆ ಜನರನ್ನು ತುಷ್ಟೀಕಾರಣದ ಬುಟ್ಟಿಗೆ ಹಾಕಿ ತಮ್ಮ
ವಿಲಾಸಕ್ಕೆ ಪುಂಗಿ ಊದಿ ಮತದಾರರನ್ನು ಆಡಿಸುತ್ತಿದ್ದ ಹಾವಡಿಗರನ್ನೆಲ್ಲ ನೀರು ಕುಡಿಸಿದೆ.
ಕೋಮುವಾದದ ದಳ್ಳುರಿಗೆ ದೇಶವನ್ನು ತಳ್ಳಿ, ಜನರನ್ನು
ಉರುವಲಾಗಿಸಿ ತಮ್ಮ ರಾಜಕೀಯದ ರೊಟ್ಟಿ ಬೇಯಿಸುತ್ತಿದ್ದವರನ್ನೆಲ್ಲ ಉದರ ಜ್ವಾಲೆಗೆ ತಳ್ಳಿದೆ.
ದೇಶದ ಹಾಗೂ ಇಲ್ಲಿಯ ಜನರ ಸುರಕ್ಷತೆಯನ್ನು ಹಗುರವಾಗಿ ಪರಿಗಣಿಸುತ್ತಿದ್ದ ನಾಯಕರನ್ನೆಲ್ಲ
ಅಸುರಕ್ಷತೆಯ ಕಂದಕಕ್ಕೆ ನೂಕಿದೆ. ಅಂಕೆ ಮೀರಿ ಅಹಂಕಾರದಲ್ಲಿ ಮೆರೆಯುತ್ತಿದ್ದವರನ್ನೆಲ್ಲ
ವೈಕಲ್ಯಕ್ಕೆ ತಳ್ಳಿದೆ.
ಈ ಸುನಾಮಿಯ ನಂತರ ಅನೇಕ ಪಕ್ಷಗಳು ಪೂರ್ತಿಯಾಗಿ ಕೊಚ್ಚಿಕೊಂಡು
ಹೋಗಿವೆ. ಇನ್ನು ಕೆಲವು ಉಸಿರಾಡುತ್ತಿದ್ದರೂ ಅಲ್ಲಿ ಬದುಕುಳಿದವರ ಸಂಖ್ಯೆ ಮಾತ್ರ ಬೆರಳೆಣಿಕೆಗೂ
ಕಮ್ಮಿ. ಮೋದಿ ಸುನಾಮಿಯ ಹೊಡೆತದಿಂದ ತತ್ತರಿಸಿ ಇವು ಹಲವಾರು ವರ್ಷಗಳ ಅಜ್ನಾತಕ್ಕೆ ಸರಿದಿವೆ.
ಮತದಾರರ ನಿರ್ಣಯದಿಂದಾಗಿ ಇವರ ಕಣ್ಣು, ಬಾಯಿ, ಮೂಗು,
ಕಿವಿ, ಎಲ್ಲಾ
ಕಡೆ ನೀರು ನುಗ್ಗಿದೆ.
ಇನ್ನೊಂದು ಕಡೆ ಸತ್ತಂತಿಹರನು (ಪ್ರಜೆಗಳನ್ನು) ಶತಮಾನಗಳ
ನಿದ್ದೆಯಿಂದ ಬಡಿದೆಚ್ಚರಿಸಿದೆ. ಪರಿವಾರವಾದದ ನೆನೆಗುದಿಯಲ್ಲಿ ನರಳುತ್ತಿದ್ದ ಪ್ರಜಾಪ್ರಭುತ್ವದ
ನಿಜವಾದ ಶಕ್ತಿಯನ್ನು ಜನರ ಕೈಗೆ ನೀಡಿದೆ. ನೂರಾರು ವರ್ಷಗಳಿಂದ ಹಿಂದುಳಿದ ದೇಶದ ಹಣೆಪಟ್ಟಿಯಿಂದ
ನಲುಗುತ್ತಿದ್ದ ಭಾರತಕ್ಕೆ ಇಂದು ಭವ್ಯ ಭಾರತ ಕಟ್ಟುವ ಸದವಕಾಶ ನೀಡಿದೆ. ಇಂಗ್ಲೀಷರ ಆಳ್ವಿಕೆಯ
ನಂತರವೂ ಗುಲಾಮಿ ಮಾನಸಿಕತೆಯಿಂದ ಒದ್ದಾಡುತ್ತಿದ್ದ ಭಾರತೀಯರಿಗೆ ಸ್ವಾಭಿಮಾನದ ಜೋಶ ತಂದಿದೆ.
ಈ ಭಾರತ ಬದಲಾಗದು ಎಂದು ಕೊರಗುತ್ತಿದ್ದ,
ಹಳಿಯುತ್ತಿದ್ದ, ಅಣಕಿಸುತ್ತಿದ್ದವರೆಲ್ಲರಿಗೂ, ಈ
ಫಾಲಿತಾಂಶ ಭಾರತ ಮತ್ತೆ ಸಿಡಿದೆದ್ದಿದೆ ಅಂತ ತೋರಿಸಿದೆ. ತುಳಿದಷ್ಟು ಈ ಭಾರತ ಸಿದಿದೆಳುತ್ತದೆ
ಅನ್ನೋ ವಿಚಾರ ನಮ್ಮ ಕಣ್ಣಮುಂದೆಯೇ ಮತ್ತಮ್ಮೆ ನಿಜವಾಗಿ ಸಾಬೀತಾಗಿದೆ.
ಧರ್ಮನಿರಪೇಕ್ಷತೆಯ (ಜಾತ್ಯಾತೀತತೆಯ) ನೆಪದಲ್ಲಿ ಸಂಪೂರ್ಣವಾಗಿ
ನಮ್ಮ ದೇಶದ ಅಧ್ಯಾತ್ಮದ ಮೂಲವನ್ನು ಅದರ ಜಗದ್ಗುರು ಸ್ಥಾನವನ್ನು ಮರೆತು ಜಗತ್ತಿನೆದುರು
ದಯನೀಯವಾಗಿ ಕಾಣುವಂತೆ ಮಾಡಿದ ಹಿಂದಿನ ಖಾ-ಅಂಗ್ರೇಜ್ ಸರಕಾರ ಇನ್ನು ತೆರೆಯ ಹಿಂದೆ ಸರಿದಿದೆ.
ನಮ್ಮ ಸನಾತನ ಸಂಸ್ಕೃತಿಗೆ ಮಹತ್ವಕೊಡದ, ನಮ್ಮ ಭಾಷೆ, ಉಡುಗೆ,
ನಮ್ಮ ವಿಚಾರಧಾರೆಗಳು, ನಮ್ಮ ಪರಂಪರೆ ಯಾವುದನ್ನೂ ಲೆಕ್ಕಿಸದೆ ವರ್ತಿಸಿದ ಮಾಜಿ ಪ್ರಧಾನ
ಮಂತ್ರಿ ಹಾಗೂ ಅವರ ಮಂತ್ರಿ ಮಂಡಲದ ಸದಸ್ಯರು ತಕ್ಕ ಶಾಸ್ತಿ ಪಡೆದಂತಾಗಿದೆ.
ಮೋದಿಯವರ ನೇತೃತ್ವದಲ್ಲಿ ಬಿಜೆಪಿಗೆ ಪೂರ್ಣ ಬಹುಮತ
ದೊರತಿರುವುದು ಖಚಿವಾದಗಿನಿಂದ ದೇಶದೆಲ್ಲೆಡೆ ಒಂದು ಹೊಸ ಅಲೆ, ಒಂದು
ಹೊಸ ಉತ್ಸಾಹ, ಹೊಸ ಭರವಸೆ, ಹೊಸ
ಚೈತನ್ಯ, ಭಾರತ ತನ್ನನ್ನು ತಾನು ಮರಳಿ ಪಡೆದ ಅನುಭವ. ಈ ಕ್ಷಣದಲ್ಲಿ
ಮೋದಿ ಯವರು ಚುನಾವಣಾ ಪೂರ್ವ ತಮ್ಮ ಅನೇಕ ಸಂದೇಶಗಳಲ್ಲಿ ಹೇಳಿರುವ ಮಾತು ನೆನಪಾಗುತ್ತದೆ.
ಸಂದರ್ಶನಕಾರರು ಕೇಳಿದ್ದು "ಈ ದೇಶ ಬದಲಾಗುವ ಭರವಸೆ ನಿಮಗಿದೆಯೇ?
ತುಂಬಾ ಸಮಸ್ಯೆಗಳಿವೆ ಹೇಗೆ ಬದಲಾಗುತ್ತದೆ?" ಅದಕ್ಕೆ
ಮೋದಿಯವರು ಹೇಳಿದ್ದು "ಕಳೆದ ಸುಮಾರು 60 ವಶಗಳಿಂದ ಅದರಲ್ಲೂ ಕೊನೆಯ 10 ವರ್ಷಗಳಿಂದ ಸದಾ
ನಿರಾಸೆ, ಸೋಲು, ಅವಮಾನಗಳನ್ನು
ಅನುಭವಿಸಿದ ನಿಮಗೆ ಅದರ ಆಚೆಯದ್ದನ್ನು ಕಾಣಲು
ಆಗುತ್ತಿಲ್ಲ. ಆದರೆ ನನಗೆ ಅದು ಸಾದ್ಯ. ನಮ್ಮ
ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ದೇಶದೆಲ್ಲೆಡೆ ಒಂದು ಹೊಸ ಸಕಾರಾತ್ಮಕ ಅಲೆ ಬೀಸುತ್ತದೆ"
ಅಂತ. ಚುನಾವಣೆಯ ಫಲಿತಾಂಶ ಹೊರಬಂದಾಗಿನಿಂದ ಈ ಅನುಭವದ ಒಂದು ಝಲಕ್ ನಮ್ಮೆಲ್ಲರಿಗೂ ಆಗಿದೆ.
ಚುನಾವಣೆಯ ಫಲಿತಾಂಶದ ನಂತರ ಮೋದಿಯವರು ಜನರನ್ನುದ್ದೇಶಿಸಿ
ಮಾತನಾಡಿದ ಅಂಶಗಳು, ಆ ಗತ್ತು, ಅದರ ಪರಿ, ಸಹಭಾಗಿತ್ವದ
ಆಡಳಿತದ ರೂಪುರೇಷೆ ಕೇಳಿದಾಗಲೆಲ್ಲ, ಹೌದು ನಿಜವಾಗಿಯೂ ಸ್ವತಂತ್ರ ಭಾರತದ ಒಬ್ಬ ಪ್ರಧಾನ ಮಂತ್ರಿ
ಮಾತನಾಡುತ್ತಿದ್ದಾನೆ ಅನ್ನಿಸುತ್ತದೆ, ಮೈ-ಮನ ರೋಮಾಂಚನವಾಗುತ್ತದೆ. ವಿಶ್ವನಾಥ ಮತ್ತು ಗಂಗೆಯರ
ಆಶೀರ್ವಾದ ಪಡೆದು ತಮ್ಮ ಅಧಿಕಾರ ಸ್ವೀಕರಿಸುತ್ತಿರುವ ಮೋದಿಯವರಂತಹ ದಮ್ ತಥಾಕಥಿತ ಜಾತ್ಯಾತೀತತೆಯ ಹಣೆಪಟ್ಟಿ ಹೊತ್ತ
ಅನೇಕರಿಗೆ ಇದು ಅಸಾಧ್ಯ. ತಮ್ಮ ಓಟ್ ಬ್ಯಾಂಕ್ ಗೆ
ಮಾಡುವ ಅಪಚಾರ.
ಮೊದಿಯವರ ಜಯ, ಸತ್ಯಕ್ಕೆ
ಸಂದ ಜಯ, ಉಪೇಕ್ಷೆಗೆ ಒಳಪಟ್ಟ ದೇಶದ ಬಹುಸಂಖ್ಯಾತರಿಗೆ ಸಂದ ಜಯ,
ತುಷ್ಠಿಕರಣದ ಕಂದಕದಲ್ಲಿ ನರಳುತ್ತಿದ್ದ ಅಲ್ಪಸಂಖ್ಯಾತರಿಗೆ ಸಂದ ಜಯ. ಭಗವಂತನ ನಂಬಿಕೆ, ಆತನ
ಇರುವಿಕೆ ಮತ್ತು ಆತನ ನ್ಯಾಯ ವ್ಯವಸ್ಥೆಗೆ ಸಂದ ಜಯ.
ಕೊನೆಯ ಎರಡು ಮಾತು...
ಇಷ್ಟೊಂದು ಭರವಸೆಯಿಂದ ಗೆಲ್ಲಿಸಿದ ಬಹುಮತದಿಂದ ಆಶೀರ್ವದಿಸಿದ
ಸರ್ಕಾರದ ಬಗ್ಗೆ ನಮ್ಮೆಲ್ಲರ ಅಪೇಕ್ಷೆ ಇರುವುದು ಸಹಜವೆ, ಆದರೆ
ಕೆಲಸಗಳು ನಮ್ಮ ಆಪೆಕ್ಷೆಗೆ ತಕ್ಕಂತೆ ಹಾಗೂ ನಾವು ಬಯಸಿದ ಅವಧಿಯಲ್ಲಿ ಆಗದಿದ್ದರೆ
ಖಿನ್ನರಾಗುವುದು ಬೇಡ. ನಾವು ಸಹ ಕೇಂದ್ರ ಸರಕಾರಕ್ಕೆ ಪೂರಕವಾಗಿ ಕೆಲಸ ಮಾಡೋಣ. ನಾವೇ ಹರಸಿದ
ಸರಕಾರಕ್ಕೆ, ನಾಯಕತ್ವಕ್ಕೆ
ದಿನಾಲೂ ಪ್ರಶ್ನಿಸುವುದು ಅಥವಾ ಶಂಕೆ ಪಡುವುದು ಬೇಡ.
ಇನ್ನು ಆರಿಸಿ ಹೋದ ಅಭ್ಯರ್ಥಿಗಳಲ್ಲು ಸಹ ಒಂದು ನಿವೇದನೆ.
ನೀವೆಲ್ಲ ಅಧಿಕಾರಕ್ಕಾಗಿ ಚುನಾಯಿಸಲ್ಪಟ್ಟವರಲ್ಲ ಬದಲಾಗಿ ಭಾರತ ಮಾತೆಯ ಸೇವೆಗಾಗಿ
ಆರಿಸಲ್ಪಟ್ಟವರು ಅನ್ನೋ ನಿಸ್ವಾರ್ಥ ಮನದಿಂದ ಸೇವೆ ಮಾಡಿ. ಕ್ಷುಲ್ಲಕ ಹಾಗೂ ವಯಕ್ತೀಕ
ವಿಚಾರಗಳಿಗಾಗಿ ಕಿತ್ತಾಡುವುದು ಲಾಬಿ ಮಾಡುವುದನ್ನು ನಿಲ್ಲಿಸಿ. ನಿಮ್ಮ ಒಂದು ಕ್ಷುಲ್ಲಕ
ವರ್ತನೆಯಿಂದಾಗಿ ಈ ಅವಕಾಶ ಮತ್ತೆ ಸಿಗದೇ ಹೋಗಬಹುದು. ಇದು ಅತ್ಯಂತ ಸನ್ನಿಹಿತ ಕಾಲಕ್ಕೆ ನಿಮಗೆ
ದೊರೆತ ಅವಕಾಶ, ಸರಿಯಾಗಿ ಉಪಯೋಗಿಸಿ. ದೇಶ, ಸಮಾಜ
ಮತ್ತು ನಿಮ್ಮ ಘನತೆಯನ್ನು ಜಗತ್ತಿನಾದ್ಯಂತ ಪಸರಿಸಿ.
ಭಾರತ್ ಮಾತಾ ಕೀ ಜಯ್ !!!
ವಂದೇ ಮಾತರಂ !!!
-- ಕೆ. ಕಲ್ಯಾಣ