Pages

Showing posts with label ಕನ್ನಡ ಸಪ್ತರ್ಷಿಗಳ ಶಿಷ್ಯ. Show all posts
Showing posts with label ಕನ್ನಡ ಸಪ್ತರ್ಷಿಗಳ ಶಿಷ್ಯ. Show all posts

Wednesday, November 27, 2013

ನನ್ನ ನಾ ಮರೆಯುವ ಮುನ್ನ...




















ಎಲ್ಲ ಸಂಬಂಧಗಳ ಸೂತ್ರಗಳು ಶಿಥಿಲವಾಗುವ ಮುನ್ನ 
ನಿನ್ನ ಅಲೌಕಿಕ ಬಂಧದ ಗುರುತ್ವವು ನನ್ನ ಹಿಡಿದಿಟ್ಟಿರಲಿ

ಪಾಪಕೂಪಕದ ಕಂದಕಕ್ಕೆ ಕಾಲ್ಜಾರಿ ಈ ಮನವು ಒದ್ದಾಡುವ ಮುನ್ನ
ನಿನ್ನ ಮನೆಯಲ್ಲೊಂದಿಷ್ಟು ಪ್ರಾಯಶ್ಚಿತ್ತಕ್ಕೆ ನನಗೆಂದು ಜಾಗವಿರಲಿ

ನನ್ನ ನಾ ಮರೆಯುವ ಮುನ್ನ
ನಿನ್ನ ನಾಮದ ಕನವರಿಕೆ ನನ್ನ ನಾಲಿಗೆಗೆ ಅನವರತವಾಗಲಿ

ನಾನೆಂಬ ಉಸಿರು ಬೆಂಕಿಯಾಗಿ ಓಡಲ ಆವರಿಸುವ ಮುನ್ನ
ನೀನೆಂಬ ಶಾಖಕ್ಕೆ ಈ ಘನ ಹೃದಯ ಕರಗಿ ನೀರಾಗಲಿ

ಈ ಭವದ ಮಾಯೆ ನನ್ನ ಕಟ್ಟಿಕ್ಕುವ ಮುನ್ನ
ಆತ್ಮದ ರೆಕ್ಕೆಗಳು ನನ್ನನ್ನು ನಿನ್ನೆಡೆಯ ಪಯಣಕ್ಕೆ ಕರೆದೊಯ್ಯಲಿ

ಎಲ್ಲ ಕಳೆದುಕೊಳ್ಳುವ ಭಯ ನನ್ನ ಕಾಡುವ ಮುನ್ನ
ನಿನ್ನ ಪ್ರೀತಿಯ ಆಲಿಂಗನದಲಿ ನನ್ನದೆನ್ನುವ ಪೊರೆಯಲ್ಲ ಕಳಚಲಿ

ಏನಾದರು ಸರಿ, ಎಂದಾದರು ಸರಿ, ಎಂತಾದರು ಸರಿ
ನಿನ್ನ ಪೂಜೆಗೆ ಈ ಪುಷ್ಪ ಸದಾ ಮೀಸಲಾಗಿರಲಿ

ಈ ಮಣ್ಣು, ಆ ಮಣ್ಣ ಸೇರಿ ಮತ್ತೆ ಮೂರ್ತವಾಗುವ ಹುನ್ನಾರ ಮಾಡುವ ಮುನ್ನ
ನಿನ್ನದೆನ್ನುವ ಈ ಚೇತನ ನಿನ್ನಡಿಗೆ ಶಾಶ್ವತವಾಗಿ ಅರ್ಪಣೆಯಾಗಲಿ

ಓ ಕೃಷ್ಣಾ, ಈ ಚೇತನ ನಿನ್ನಡಿಗೆ ಶಾಶ್ವತವಾಗಿ ಮುಡಿಯಾಗಲಿ...


-- ಕೆ. ಕಲ್ಯಾಣ

Sunday, November 13, 2011

ಸತರಂಗಿ ಜೀವನದ ಮನರಂಗಿ ರೂಪಗಳು…


ಈ ಬಾಳು ಅಥವಾ ಜೀವನದ ಬಗ್ಗೆ ನಾವೆಲ್ಲಾ ಆಗಾಗ ತುಂಬಾನೆ ಯೋಚಿಸಿ ಇದರ ಕೊನೆ-ಮೊದಲು ಅರ್ಥ ಆಗದೆ ಅದರ ಪಾಡಿಗೆ ಅದನ್ನ ಬಿಟ್ಟು ಜಾಗ ಖಾಲಿಮಾಡಿದ್ದುಂಟು. ನನಗೂ ಇದರ ಅನುಭವ ಸುಮಾರು ಸಾರಿ ಆಗಿದೆ. ಅದಕ್ಕೆ ಈ ಜಗದ ಪ್ರಯೋಗಾಲಯದಲ್ಲಿ (Laboratory) ಜೀವನದ ಮೇಲೆ ಕೆಲವು ಸಂಶೋಧನೆಗಳನ್ನ (experiment) ಗಳನ್ನ ಮಾಡಿ, ಸೂಕ್ಷ್ಮದರ್ಶಕದ (microscope) ಕೆಳಗಿಟ್ಟು ನೋಡಿ, ಜೀವನದ ವಿವಿಧ ರೂಪಗಳನ್ನ ಪರೀಕ್ಷಿಸಿ ನಮ್ಮ ಪ್ರಭಂದ (thesis) ಬರೆಯೋಣ ಬನ್ನಿ.

ಜೀವನ ಒಂದು ಸಿನೇಮಾ ಅನ್ಕೊಂಡ್ರೆ,

ನಿಮಗೆ ಯವತ್ತಾದ್ರು ನಿಮಗಾಗಿ ಯಾರಾದ್ರು ಕಥೆ ಬರೀಬೇಕು, ಪ್ಲೆ-ಬ್ಯಾಕಲ್ಲಿ ಹಾಡು ಹೇಳಬೇಕು, ನಿಮ್ಮ ಜೊತೆ ಸಿನೆಮಾ ಮಾಡಬೇಕು ಅಂತ ಅನ್ನಿಸಿದ್ದಿದೆಯಾ? ಅಥವಾ ಯಾವಾಗಲು ಅನ್ನಿಸುತ್ತಾ?

ಒಂದು ರಹಸ್ಯ ಹೇಳ್ತಿನಿ ಕೇಳಿ, ಈ ಜಗವೇ ಥಿಯೇಟರ, ಇಲ್ಲಿ ನಮ್ಮದೆ ಒಂದು ಚಿತ್ರ, ನಮ್ಮ ಹೆಸರೇ ಆ ಚಿತ್ರದ ಹೆಸರು ಕೂಡ, ಈ ಚಿತ್ರದಲ್ಲಿ (ಸಿನೇಮಾದಲ್ಲಿ/cinema) ನಾವೇ ನಾಯಕ(hero) /ನಾಯಕಿ (heroin) ಯರು. ಆ ದೇವರು ನಮಗೆಂದೇ ವಿಶಿಷ್ಠವಾಗಿ ಬರೆದ ಕಥೆ ಈ ನಮ್ಮ ಜೀವನ. ಈ ಪಾತ್ರಕ್ಕೆ ನಾವೇ ಒಪ್ಪೋದು ಅಂತ ನಮ್ಮನ್ನೆ ಆಯ್ಕೆ (ಸೆಲೆಕ್ಟ್/select) ಮಾಡಿರೋದು, ಬಣ್ಣ ಹಾಕ್ಸಿರೋದು.

ಭೂಮಿಯ ಮೇಲಿನ ನಮ್ಮ ಮೊದಲ ಉಸಿರಿಂದ ಹಿಡಿದು ಕೊನೆಯ ಬಡಿತದ ವರೆಗೂ ನಾವೇನೆ ಲೈಮ್-ಲೈಟ್ (ಫ಼ೋಕಸ್/focus) ನಲ್ಲಿರೋದು. ನಮ್ಮ ಮಾತುಗಳೇ ಸಂಭಾಷಣೆ (dialogues), ನಮ್ಮ ನಡೆ ನುಡಿಗಳೇ ಸಾಹಸ (ಆಕ್ಷನ್/action). ನಮ್ಮ ಚಿತ್ರ ಸೋಲದ ಹಾಗೆ (ಫ಼್ಲೊಪ್/flop ಆಗದ ಹಾಗೆ) ನಾವೇ ನೋಡಿಕೊಳ್ಳಬೇಕು.

ಇದರಲ್ಲಿ ಕ್ಷಣ-ಕ್ಷಣಕ್ಕೆ ಬದಲಾಗೊ ರೋಮಾಂಚನ (thrill) ಇದೆ, ಜೀವನದ ಜೊತೆ ಗೊದ್ದಾಟದ ಸಾಹಸ (action)  ಇದೆನಕ್ಕು ನಗಿಸೊ ಹಾಸ್ಯ (comedy) ಇದೆ, ಮನಸ್ಸನ್ನ ತೋಯಿಸೊ ದುಃಖ (tragedy) ಇದೆ, ಸೊತು-ಗೆಲ್ಲೊ ಕಲೆ (art) ಇದೆ, ಕನಸಗಳ ಬೆನ್ನಟ್ಟೊ ಛಲ (daring) ಇದೆ, ಎರಿಳಿತಗಳ ಸರಿಗಮ (music) ಇದೆ, ಸುಖದ ಸಂಗೀತ - ದುಃಖದ ಮೌನ ರಾಗ ಇದೆ, ಸಂಭ್ರಮದ ನೃತ್ಯ (dance) ಇದೆ, ಎಲ್ಲರನ್ನು ಜೊತೆಗಿರಿಸೊ ಕೌಟುಂಬಿಕ ನಾಟಕ (family drama) ಇದೆ, ಕನಸುಗಳ ನಿರ್ದೇಶನ (direction) ಇದೆ, ಪ್ರಯತ್ನಗಳ ಹೂಡಿಕೆ (investment/production) ಇದೆ, ಅನುಭವಗಳ ಲಾಭ (profit) ಇದೆ.

ಜೀವನ ಒಂದು ಪಾಠಶಾಲೆ ಅನ್ಕೊಂಡ್ರೆ,

ಶಾಲೆ/ಕಾಲೇಜ್ ಗಳು ಜೀವನ ಹೊರೆಯೊ ವಿದ್ಯೆ ಕಲಿಸಿದ್ರೆ, ಜೀವನದ ಪಾಠಶಾಲೇಲಿ ಬದುಕು ರೂಪಿಸೊ ಕಲೇನ ಕಲಿಸೋದು. ಜಗದ ವಿದ್ಯಾಲಯದಲ್ಲಿ ವಿದ್ಯೆ ಕಲಿತು ಪದವಿ ಪಡೆದುಕೊಂಡ್ರೆ, ಬಾಳಿನ ವಿಶ್ವ ವಿದ್ಯಾಲಯದಲ್ಲಿ ಅನುಭವಗಳ ಪದಕ ಪಡೆದುಕೊಳ್ಳೊದು. ವಿದ್ಯೆ ಬಾಳಿಗೆ ಅರ್ಥ ಕೊಟ್ಟ್ರೆ, ಅನುಭವಗಳ ಪಾಠ ಜೀವನಕ್ಕೆ ಅರ್ಥ ಕೊಡುತ್ತೆ. ವಿದ್ಯೆ ಜೀವಕ್ಕೆ ಜೀವನ ಕೊಟ್ಟ್ರೆ, ಅನುಭವಗಳು ಜೀವನಕ್ಕೆ ಜೀವ ಕೊಡುತ್ವೆ. ಜೀವನ್ವಿದ್ಯೆ... , ಆದಿ ಮಾನವರಿಂದ ಮಾನವಂತರಾಗಿ ಬದುಕೊ ದಾರಿ ತೊರಿಸಿ ಕೊಡುತ್ತೆ.

ಜೀವನ ಒಂದು ಲೆಕ್ಕಾಚಾರ ಅನ್ಕೊಂಡ್ರೆ,

ಇದು ಸುಖ-ಸಂತೋಷಗಳ ಸಂಕಲನ (addition), ವ್ಯಥೆ-ದುಃಖಗಳ ವ್ಯವಕಲನ (subtraction), ಸಂಕಲ್ಪ-ಪ್ರಯತ್ನಗಳ ಗುಣಾಕಾರ (multiplication), ಸೋಲು-ತಪ್ಪುಗಳ ಭಾಗಾಕಾರ (division), ನೆನಪುಗಳ ಭಾಗಲಬ್ಧ (quotient), ಅನುಭವಗಳ ಶೇಷ (reminder). ಕೆಲವೊಮ್ಮೆ ಅರ್ಥವಾಗದ ಬೀಜಗಣಿತ (algebra), ಉಪಯೋಗಕ್ಕೆ ಬಾರದ ಸೂತ್ರಗಳು)/ಮೂಢ ಆಚರಣೆಗಳು (formulas/values), ಅವಗಳನ್ನ ಪಾಲಿಸೊದ್ರಲ್ಲೆ (memorise) ಕಳೆದುಹೋಗುತ್ತೆ ಜೀವನ.

ಜೀವನ ಒಂದು ಬೋಧಿ ವೃಕ್ಷ ಅನ್ಕೊಂಡ್ರೆ,

ಬುದ್ಧನ ಬೋಧಿ ವೃಕ್ಷದ ಙ್ನಾನವನ್ನ, ಬಸವಣ್ಣನ ಅನುಭವ ಮಂಟಪದ ಅನುಭವಗಳಿಗಳನ್ನ ಮತ್ತು ಪುರಂದರರ ವೈರಗ್ಯದ ವಾಣಿಯನ್ನ, ನಮ್ಮ ಜೀವನದ ಪರೀಕ್ಷೆಗೊಡ್ಡಿ ಬದುಕಿನ ನಿಜ ಅರ್ಥದ ಸಾಕ್ಷಾತ್ಕಾರ ಮಾಡಿಸೊ, ಆದಿ-ಅಂತ್ಯಗಳಿಲ್ಲದ (ನಮ್ಮ ಜೀವನವಿಡಿ ಆವರಿಸಿದ) ಈ ಜೀವನವೇ ಬೋಧಿ ವೃಕ್ಷ. ಜೀವನವೆಂಬ ಕುರುಕ್ಷೇತ್ರದಲ್ಲಿದ್ದು ಅನುಭವಗಳ ಗೀತೋಪದೇಶ ಪಡೆದ ನಾವುಗಳೇ ನಮ್ಮ ಪಾಲಿಗೆ ನಿಜ ಸಂತರು, ಬುದ್ಧರು, ಅರ್ಜುನರು. ಇಲ್ಲಿ ದಿನಕ್ಕೊಂದು ಹೊಸ ಪಾಠ, ಹೊಸ ಪ್ರ್ಯಾಕ್ಟಿಕಲ್, ಹೊಸ ಅವಿಷ್ಕಾರ. ಬದುಕಿಗಿಂತ ದೊಡ್ಡ ಙ್ನ್ಯಾನ ಭಂಡಾರ ಇನ್ನೊಂದಿಲ್ಲ.
  
ಜೀವನ ಒಂದು ಜ್ಯೋತಿಷ್ಯ ಶಾಸ್ತ್ರ ಅನ್ಕೊಂಡ್ರೆ,

ಭೂಮಿ ಮೇಲೆ ಸಿಗದಿರೋದನ್ನ ಗೃಹಗಳಲ್ಲೆಲ್ಲೊ ಹುಡುಕೋದು, ಹಣೆ ಮೇಲೆ ಚಮಕಾಯಿಸದ ನಕ್ಷತ್ರಗಳನ್ನ ಆಗಸದಲ್ಲೆಲ್ಲೊ ಕನೆಕ್ಷನ್ ಕೊಡಿಸೋದು, ಅಯೋಗ್ಯರ  ದೋಷಗಳನ್ನ ಕುಂಡಲಿಲಿ ಸರಿಪಡಿಸೋಕ್ಕೆ ಹೆಣಗಾಡೋದು, ಗುಣ-ಸ್ವಭಾವಗಳನ್ನ ರಾಶಿಯ ಶಾಂತಿಯಿಂದ ಬದಲಯಿಸೊಕ್ಕೆ ಪ್ರಯತ್ನಿಸೋದು, ಹಸ್ತದಲ್ಲಿಲ್ಲದ ಅದೃಷ್ಟನ ಅಂಗೈಲಿ ಕೊರಿಸೋದು, ಮನಸ್ಸೊಲಿಸಕ್ಕಾಗದೋರು, ತಮ್ಮನ್ನೇ ತಿದ್ದಿಕೊಳ್ಳಕ್ಕಾಗದೋರು, ಗೃಹ-ನಕ್ಷತ್ರಗಳಿಗೆ ಒಲಿಸೋದ್ರಲ್ಲಿ ಜೀವನ ಸವಿಸೋದು.

ಜೀವನ ಒಂದು ಮರುಕಳಿಸೊ ತಿಂಗಳ ಬಾಬತ್ತಾದ್ರೆ,

ಸಂಬಳದ ಮೊದಲ ದಿನವೇ ಹುಟ್ಟು, ಚಿಂತೆಗಳಿಲ್ಲದ ಬಾಲ್ಯವೇ ಮೊದಲ ವಾರ, ಕಂಡ-ಕಂಡದ್ದನ್ನೆಲ್ಲ ಬೇಡೊ/ಬಯಸೊ ಯೌವ್ವನವೇ ಎರಡನೇ ವಾರ, ಬ್ಯಾಲನ್ಸ್ ತಪ್ಪಿದ ಚುರುಕು ತಗಲಿ, ಲೆಕ್ಕ ಹುಡುಕೊ ವಯಸ್ಕರ ಘಟ್ಟವೇ ಮೂರನೇ ವಾರ, ಕಳಕೊಂಡು ಹುಡುಕೊ ವೃದ್ಧಾಪ್ಯವೇ ನಾಲ್ಕನೇ ವಾರ. ತಿಂಗಳ ಕೊನೆ ನಾಲ್ಕು ದಿನಗಳೇ ಉಸಿರಾಟಕ್ಕಾಗಿ ಬಡಿದಾಡೊ ಕೋಮಾ.

ಜೀವನ ವ್ಯಾಪ್ತಿ

ಜೀವನ ಕೆಲವೊಬ್ಬರಿಗೆ ಎರಡು ಹೊತ್ತಿಗೆ ಹೊಟ್ಟೆ ಹೊರೆಯೊಕ್ಕೆ ನಡೆಸೊ ದೈನಂದಿನ ಸಮರ. ಮತ್ತೆ ಕೆಲವೊಬ್ಬರಿಗೆ ಅತಿರೇಕದ ಚೆಲ್ಲಾಟ, ಇನ್ನೂ ಕೆಲವರಿಗೆ ಎರಡು ತುತ್ತನ್ನೂ ಅರಗಿಸಿಕೊಳ್ಳಕ್ಕಾಗದ ಗ್ರಹಚಾರ. ಕೆಲವರಿಗೆ ಮೈ ಮುಚ್ಚಿಕೊಳ್ಳಕ್ಕೆ ಪಡೊ ಪರದಾಟ, ಆದ್ರೆ ಇನ್ನ ಕೆಲವರಿಗೆ ಪ್ರದರ್ಶನದ ಹುಚ್ಚಾಟ. ಕೆಲವರಿಗೆ ಆಸರೆಯ ಹುಡುಕಾಟ, ಇನ್ನ ಹಲವರಿಗೆ ಸೂರಿನ (ಮನೆಗಳ) ವ್ಯಾಪಾರ.

ಜೀವನ ಪ್ರೀತಿಯ ಸೆಲೆ, ಉಸಿರಿನ ಬಲೆ, ಸೃಷ್ಟಿಯ ಮಲೆ, ಬ್ರಹ್ಮನ ತಲೆ, ಬದುಕುವ ಕಲೆ, ಹೊಟ್ಟೆ ತುಂಬಿಸೊ ಒಲೆ. ಇದರ ವ್ಯಾಪ್ತಿ ಅಳಿಯೋಕ್ಕೆ ಅಗದು. ಕೋಟಿ ಜೀವರಾಶಿಗೆ ಕೋಟಿ ರೀತಿಯಾಗಿ ಕಾಣಿಸುತ್ತೆ.

ಜೀವನ ಸೂತ್ರ

ಇತ್ತೀಚೆಗೆ ಒಮ್ಮೆ ದೂರದರ್ಶನದಲ್ಲಿ ಒಬ್ಬ ವಯೋವೃದ್ಧ ಸಾಹಿತಿಗಳ ಸಂದರ್ಷನ ಪ್ರಸಾರವಾಗಿತ್ತು. ನನಗೂ ಆಕಸ್ಮಿಕವಾಗಿ ನೋಡೊ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರಿಗೆ ನಿಮಗೆ ೮೮ ವಯಸ್ಸಾದ್ರೂ ನಂದದ ನಿಮ್ಮ ಉತ್ಸಾಹ ಮತ್ತು ಆರೋಗ್ಯದ ಗುಟ್ಟೇನು ಅಂತ ಕೇಳಿದಾಗ, ಅವರು ಹೇಳಿದ ಉತ್ತರ ಮಾತ್ರ ತುಂಬಾ ಮಾರ್ಮಿಕವಾಗಿತ್ತು. ಅವರು ಹೇಳಿದ್ದು, "ನಾನು, ದಿನಾಲು ಸ್ವಲ್ಪ ಪ್ರಾಣಾಯಾಮ ಮಾಡ್ತೆನೆ, ಮಿತ ಆಹಾರ ಸೇವಿಸ್ತೆನೆ, ಆದ್ರೆ ಎಲ್ಲಕ್ಕಿಂತಲು ಮುಖ್ಯವಾಗಿ ನಾನು ಯಾರ ಬಗ್ಗೇನೂ, ಯಾವ ವಿಷಯದ ಬಗ್ಗೇನೂ ಅವಶ್ಯಕತೆಗಿಂತ ಜ್ಯಾಸ್ತಿ ಚಿಂತಿಸಲ್ಲ ಮತ್ತೆ ಯಾರಾದ್ರು ನನ್ನ ಬಗ್ಗೆ ಏನು ಅನ್ಕೋತಾರೆ ಅಂತಲೂ ಯೋಚಿಸಲ್ಲ, ಯಾಕೆ ಗೊತ್ತಾ? ಯಾಕಂದ್ರೆ, ನಾವು ಯಾರ ಬಗ್ಗೆ ತಲೆ ಕೆಡಿಸ್ಕೊಂಡಿರ್ತಿವೋ ಅವರು ಆರಮಾಗಿ ಮಸಾಲೆ ದೋಸೆ ತಿನ್ನತಾ ಕಾಲ ಕಳೀತಾ ಇರಬಹುದು" ಅಂತ. ಇದನ್ನ ನಮ್ಮ ಜೀವನದಲ್ಲೂ ಅಳವಡಿಸಿಕೊಂಡ್ರೆ ಒಳ್ಳೆದಲ್ವಾ? ಹಾಗೇನೆ ನಮ್ಮ ಜೀವನದಲ್ಲೂ ನೆಮ್ಮದಿ ಬೇಕಾದ್ರೆ ಪ್ರೊಬ್ಲಮ್ಸಗಳಿಗೆ ಆಗಾಗ ಮಸಾಲೆ ದೋಸೆ ತಿನ್ನಿಸಿ ಮರೆತು ಬಿಡಬೇಕು ಅಂತ.

ನಾವು ಎಷ್ಟೊಂದು ಸ್ಪೂರ್ತಿಯ ಸೆಲೆಗಳನ್ನ, ನುಡಿಮುತ್ತುಗಳನ್ನ ಓದಿರ್ತಿವಿ, ಅವುಗಳಿಂದ ಜೀವನದಲ್ಲಿ ಸ್ಪೂರ್ತಿ ಪಡಕೊಂಡಿರ್ತಿವಿ, ತಪ್ಪುಗಳನ್ನ, ನಡವಳಿಕೆಗಳನ್ನ ತಿದ್ದಿಕೊಂಡಿರ್ತಿವಿ. ಅಂಥದ್ರಲ್ಲಿ ಈಗ ಒಂದು ನುಡಿ ಮುತ್ತು ನೆನಪಿಗೆ ಬರ್ತಾ ಇದೆ. "ನೆಲಕ್ಕೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ" ಅನ್ನೋದು. ತಪ್ಪು ಮಾಡಿ ಆ ತಪ್ಪನ್ನ ಸಮರ್ಥಿಸಿ ಕೊಳ್ಳೊದಕ್ಕೆ ಇದನ್ನ ಬಳಸೋದು ಅಂತ ಅಲ್ಲ. ಜೀವನದ ದಾರೀಲಿ ಎಲ್ಲರು ಎಡವೊದು ಸಹಜ. ಆದ್ರೆ ಈ ಥರ ಜೀವನದಲ್ಲಿ ತಪ್ಪು ಹೆಜ್ಜೆ ಇಟ್ಟು ಎಡವಿ ನೆಲಕ್ಕೆ ಬಿದ್ರು, ಮೀಸೆ ಮಣ್ಣಾಗಲಿಲ್ಲ (ಈ ಸೋಲು ಕೊನೆಯಲ್ಲಾ) ಅಂತ ಎದ್ದು ಮತ್ತೆ ಇನ್ನೂ ಹೆಚ್ಚಿನ ಹುಮ್ಮಸ್ಸು ಮತ್ತು ಉತ್ಸಾಹದಿಂದ ಮುನ್ನಡೆದಾಗ ಮಾತ್ರ ಜೀವನದ ಓಟದಲ್ಲಿ ವಿಜಯಲಕ್ಷ್ಮಿ ಓಲಿಯೋದು ಅಂತ.

ಜೀವನ ರೂಪಿಸಿದವರು

ಜೀವನ ನಮ್ಮದಾದ್ರು ಅದನ್ನ ರೂಪಿಸೋದ್ರಲ್ಲಿ ಅದೆಷ್ಟೋ ಸದೃಶ್ಯ-ಅದೃಶ್ಯ ಕೈಗಳ ಕೈಂಕರ್ಯ ಇದೆ. ಜೀವ ಕೊಟ್ಟ ತಾಯಿ, ಜೀವನ ಕೊಟ್ಟ ತಂದೆ, ಜೀವನಕ್ಕೆ ಅರ್ಥ ಕೊಟ್ಟ ಗುರು, ಕೈ ಬಿಡದ ಸ್ನೇಹಿತರು, ಎಡೆ-ಬಿಡದೆ ಜೊತೆ ನಡೆಯೊ ಸಂಗಾತಿ, ನಮ್ಮನ್ನೇ ಆದರ್ಶ ಅನ್ಕೊಂಡ ಮಕ್ಕಳು, ಇದರ ಜೊತೆಗೆ ಜೀವನಕ್ಕೆ ಒಂದು ಟಚ (touch) ಕೊಟ್ಟು ಹೋಗೊ ಅದೆಷ್ಟೋ ಜೀವಗಳು, ಇವರೆಲ್ಲ ನಮ್ಮ ಅಸ್ತಿತ್ವಕ್ಕೆ ಕಾರಣರು.

ಇನ್ನು ಬದುಕು ಬದಲಿಸಿ ಹೋದ ಪ್ರಸಂಗಗಳು, ಜೀವನ ದಾರಿಯಲಿ ಸಾಧನೆಗಳ, ಸಾಹಸ ಗಾಥೆಗಳ ಅಳತೆಗೋಲಾಗಿ/ಗುರುತಿಗಾಗಿ (measurement) ಅಂತ ನೆಟ್ಟ ಮೈಲಿಗಲ್ಲುಗಳು (kilometre/distance boards). ಘನ ಹೃದಯವನ್ನ ಕರಗಿಸಿ ಕಣ್ಣಲ್ಲಿ ಹರಿಸಿದ ವಿಲಕ್ಷಣ ನೆನಪುಗಳು, ಆ ಹಳೆಯದನ್ನ ಕಾಣದ ಹಾಗೆ ಮರೆಸಿ, ತಿರುವು ನೀಡಿದ ಆ ಜೀವನ ದಾರಿಯ ದಾರಿ-ಫಲಕಗಳು ಎಲ್ಲವೂ ಸ್ಮರಣಿಯವೆ.


ಕೊನೆಯದಾಗಿ, ಆ ದೇವರು. ಅವನೇ ಮಿತ್ರ, ಅವನೇ ಸಖ, ಅವನೇ ಸರ್ವಸ್ವ. ಎಲ್ಲರೂ ದೂರ ಸರಿದಾಗ, ನಮ್ಮ ಚಿತ್ತದ ಗಾಢ ನಿದ್ರೆಯಿಂದೆದ್ದು ಬಂದು ಜೊತೆ ನಡೆಯೋನು. ಗ್ರೀಷ್ಮದ ಬದುಕಿಗೆ ವರ್ಷದ ಹನಿಗರೆದವನು, ಶರದದ ರೋಧನಕೆ ಹೇಮಂತನ ಅಪ್ಪುಗೆಯ ಆಸರೆಯಾದವನು, ಶಿಶಿರದ ಏಕಾಂತಕೆ ವಸಂತದ ಬಳಗವಾದವನು, ಆಸೆಗಳ ಅನಾವೃಷ್ಟಿಗೆ ಆನಂದದ ಅತಿವೃಷ್ಟಿ ಸುರಿದವನು, ಅದೃಷ್ಟದ ಹಿಂಗಾರಿಗೆ ಭರವಸೆಯ ಮುಂಗಾರದವನು ಅವನು. ಅವನಿಲ್ಲದೆ ಬದುಕಿಲ್ಲ.


ಜೀವನದಲ್ಲಿ ಕಷ್ಟ - ಸುಖಗಳ ಪಾತ್ರ

ಜೀವನದ ವಿವಿಧ ಮುಖಗಳಲ್ಲಿ ಒಂದು ಮುಖ, ಸುಖ, ಸಂತೋಷ, ಹಣ, ಸಂಪತ್ತು ಗಳ ಬೆನ್ನಟ್ಟೊದು. ನಮಗಾಗಿ ಅಂತ ಒಮ್ಮೆ, ನಮ್ಮವರಿಗಾಗಿ ಅಂತ ಕೆಲವೊಮ್ಮೆ, ಈ ಭಗೀರಥ ಪ್ರಯತ್ನಗಳು (ಸುಖನ ಮನ-ಮನೆಗಳಿಗೆ ತರೊ ಯತ್ನಗಳು) ನಡೀತಾನೆ ಇರುತ್ವೆ. ಆದ್ರೆ ಕೇಳಿದಾಗಲೆಲ್ಲ, ಕೇಳಿದ್ದು, ಕೇಳಿದಷ್ಟು, ಸಿಕ್ಕ ಬಿಟ್ರೆ, ಇವೆಲ್ಲ ಒಂದೆರಡು ದಿವಸ ಖುಷಿ ಕೊಟ್ಟು, ನಂತರ ಜೀವನ ಬೋರ್ ಹೊಡಿಯುತ್ತೆ. ಜೀವನ ಅರಳದೆ ಇದ್ದಿದ್ರಲ್ಲೆ ತೃಪ್ತಿ ಪಟ್ಟುಕೊಳ್ಳುತ್ತೆ.

ಬದುಕು ಸದಾ ಹಾಸಿಗೆ ಇದ್ದಷ್ಟು ಕಾಲು ಚಾಚೋದಾಗದೆ, ಕಾಲಿದ್ದಷ್ಟು (ಇನ್ನು ಒಂದೆರಡು ಮೊಳ) ಹಾಸಿಗೆನ್ನೇ ಜಾಸ್ತಿ ಮಾಡೋದು ಆಗಬೇಕು. ಇದನ್ನ ಮಾಡೊವಾಗ ಇತರರ ಹಿತಕ್ಕೆ ಧಕ್ಕೆಯಾಗದ ಹಾಗೆ ನ್ಯಾಯಾನ ದಾರಿದೀಪ ಮಾಡಿಕೊಂಡಿದ್ರೆ ಸಾಕು.

ಈ ಜೀವನದ ಕಲ್ಲಿಗೆ ಆಗಾಗ ಉಳಿಯ ಪೆಟ್ಟು (ಕಷ್ಟ) ಬಿದ್ದಾಗ್ಲೆ ಸುಂದರ ಶಿಲೆಯಾಗಿ ಅರಳೊದು. ಸುಖ ನಮಗೆ ವಿಲಾಸಿಗಳಾಗಿಸಿದ್ರೆ, ದುಃಖ ನಮಗೆ ಸಾಹಸಿಗಳಾಗಿಸುತ್ತೆ. ಸುಖ ಇರಲಿ ಆದ್ರೆ ಕಷ್ಟಗಳು ಬೇಡ ಅಂದ್ರೆ ಹ್ಯಾಗೆ? ಕಷ್ಟಗಳು ಬೇಡ ಅನ್ನೊದಕ್ಕಿಂತಲು ಕಷ್ಟಗಳನ್ನೆದುರಿಸೊ ಶಕ್ತಿ ಕೊಡು ಅಂತ ಆ ದೆವರಲ್ಲಿ ಕೇಳಿಕೊಳ್ಳಬೇಕು ಅಷ್ಟೆ. 

ಜೀವನ ಸರಾಂಶ

ಬದುಕಿನ ರೂಪಗಳು ಅನೇಕ. ಆದಿ-ಅಂತ್ಯ ಗಳಿಲ್ಲದ, ಕೊನೆ-ಮೊದಲಿಲ್ಲದ ಜೀವನದ ಸಂಪೂರ್ಣ ವಿಮರ್ಷೆ ಸಾಧ್ಯಾನಾ? ನಿಜ, ಅದು ಅಸಾಧ್ಯ ಅನ್ನೊದು ನನಗೂ ಗೊತ್ತು. ನನ್ನ ಉದ್ದೇಶ ಜೀವನ ಸಾಗರದ ಹನಿಗಳನ್ನ ಎಣಿಸೋದು ಖಂಡಿತ ಆಗಿಲ್ಲ. ನನ್ನ ಉದ್ದೇಶ ನನ್ನ ಬೊಗಸೆಯಲ್ಲಿ ಹಿಡಿದ ಹನಿಗಳ ಬಗ್ಗೆ ನನ್ನ ತರ್ಕಕ್ಕೆ ನಿಲುಕಿದ ರೀತಿಲಿ ಹೇಳೋದು. ಅಂದ್ರೆ, ನಾ ಕಂಡ ಜೀವನದ ವಿಮರ್ಷೆ ಮಾಡೋದು ಅಷ್ಟೆ. ನನ್ನ ಕಣ್ಣ ಬಿಂಬದಲ್ಲಿ ಮೂಡಿದ ಈ ಜಗದ, ಜೀವನದ ಬಣ್ಣಗಳ ವಿಮರ್ಷೆ ಮಾಡೋದು ಅಂತ.

ಪ್ರತಿ ಕ್ಷಣ ನಮ್ಮ ಜೊತೆ ಇದ್ದು ಮನಸ್ಸು ಗೆಲ್ಲೋ ಜೀವನ, ಪಂಚರಂಗಿ, ಸತರಂಗಿ, ನೌರಂಗಿ, ಎಲ್ಲವೂ ಹೌದು. ನನ್ನ ಬಣ್ಣಗಳಿಗೆ ಬೇಕಾದ್ರೆ ನಿಮ್ಮ ಬಣ್ಣನೂ ಸೇರಿಸಿ, ಜೀವನ ಅಲಂಕರಿಸಿ ಓಕುಳಿ ಆಡಬಹುದು,.............. ಎನಂತಿರಾ?                                                                                                                               


ನಿಮ್ಮ ಹತ್ತಿರದ ಬಣ್ಣದ ವ್ಯಾಪಾರಿಗಳು,
ಕಲ್ಯಾಣ ಕುಲ್ಕರ್ಣಿ

Sunday, April 24, 2011

ಉಪಮಾತೀತ


ಪ್ರಾಣ ಎನಲೆ? ಪ್ರಾಣಕೂ ಮಿಗಿಲಾದ ಆತ್ಮೀಯತೆ ನಿನದು
ಉಸಿರು ಎನಲೆ? ಉಸಿರಿಗೂ ಹೆಚ್ಚಾದ ಮಿಷ್ರಣ ನಿನದು
ಬದುಕು ಎನಲೆ? ಬದುಕಿಗೂ ಮೊದಲದ ಬಂಧನ ನಿನದು
ಸಾವು ಎನಲೆ? ಸಾವಿಗೂ ಸೋಲಿಸೊ ಕರುಣೆ ನಿನದು
ಮನಸ್ಸು ಎನಲೆ? ಮನಸ್ಸಿಗೂ ಮೀರಿಸೊ ಮುಗ್ಧತೆ ನಿನದು
ಕನಸು ಎನಲೆ? ಕನಸಿಗೂ ಸುಂದರ ಸ್ಮೃತಿಯು ನಿನದು
ಕಲ್ಪನೆ ಎನಲೆ? ಕಲ್ಪನೆಗೂ ಒಲಿಯದ ಶೃಂಗಾರ ನಿನದು
ಹೃದಯ ಎನಲೆ? ಹೃದಯಕೂ ಕರಗಿಸೊ ವತ್ಸಲ್ಯ ನಿನದು
ಕಾವ್ಯ ಎನಲೆ? ಕಾವ್ಯಕೂ ಸಿಗದ ಭಾವಾಂಜಲಿ ನಿನದುದು
ಒಲುಮೆ ಎನಲೆ? ಒಲವಿಗೂ ನಾಚಿಸೊ ಒಡನಾಟ ನಿನದು
ತಾಯಿ ಎನಲೆ? ತಾಯಿಗೂ ಮರುಗಿಸೊ ಮಮತೆ ನಿನದು
ತಂದೆ ಎನಲೆ? ತಂದೆಗೂ ಮೀರಿದ ಜವಾಬ್ದಾರಿ ನಿನದು
ಗುರು ಎನಲೆ? ಗುರುವಿಗೂ ಅಸಾಧ್ಯದ ಬೋಧನೆ ನಿನದು
ಸ್ನೇಹಿತ ಎನಲೆ? ಸ್ನೇಹಕೂ ಸೊಗಸಾದ ಸಂಗ ನಿನದು
ಪ್ರೇಯಸಿ ಎನಲೆ? ಪ್ರೀತಿಗೂ ಮರೆಸೊ ಸಲಿಗೆ ನಿನದು

ಓ ನನ್ನ ಆತ್ಮ ಚೇತನವೆ,
ನೀನೆ ಅಂಗ, ಸಂಗ, ಅಂತರಂಗ,
ನೀನೆ ನಿತ್ಯ ನೂತನ ಚೆತೋಹಾರಿ, ಚಿರಂಜೀವಿ
ಚಂಚಲ ಚಿತ್ತದಿ ನೆಲೆಸಿಹ ಚಿರದ್ರೂಪಿ
ನೀನೆ ಸರ್ವ ವ್ಯಾಪಿ, ಸಚ್ಚಿದಾನಂದ ಸ್ವರೂಪಿ.

-- ಕಲ್ಯಾಣ ಕುಲ್ಕರ್ಣಿ

Sunday, April 10, 2011

ನಾನೊಬ್ಬ ಯುವ ಕವಿ



||ನಾನೊಬ್ಬ ಯುವ ಕವಿ
ಸಾಹಿತ್ಯದ ಲೋಕಕ್ಕಿನ್ನೂ ಉದಯ ರವಿ||

ಸಾಹಿತ್ಯದ ಸಾರವನೆಂದು ತಿಳಿಯುವ ದುರ್ಮಾರ್ಗಕ್ಕೆ ಕಾಲಿಟ್ಟವನಲ್ಲ
ಕವಿಗೋಷ್ಟಿಗೆ ಹೋಗುವ ದುಃಸಾಹಸವನೆಂದೂ ಮಾಡಿದವನಲ್ಲ
ಶಬ್ದಗಳ ಗ್ರಹಿಸಿದ್ದೇನೆ, ಅರ್ಥದ ಗೊಡವೆಗೆ ಹೋದವನಲ್ಲ 
||ನಾನೊಬ್ಬ ಯುವ ಕವಿ||

ರವಿಕಾಣದ್ದನ್ನ ಕವಿ ಕಂಡ ಇದುವೇ ನನ್ನ ಮೊದಲ ಸಂಗ್ರಹ
ನಾ ಕಂಡು ಕೇಳಿದ್ದನ್ನೇ ಇದರಲ್ಲಿ ಬರೆದಿದಿರುವೆ, ನನ್ನ ಅನುಭವಕ್ಕೇನು ಕೊರತೆ ಇಲ್ಲ
ಶಾಕುಂತಲೆ ಬರೆದ ಕಾಳಿದಾಸನೇನು ನಾನಲ್ಲ, ಆದರೂ ಕವಿರತ್ನ ಎಂಬ ಬಿರುದನ್ನು ನನ್ನಯ ನಾಮಕೆ ಸೇರಿಸಲು ಹೇಸಿದವನಲ್ಲ 
||ನಾನೊಬ್ಬ ಯುವ ಕವಿ||

ನನ್ನೀ ಬರಹದ ಮರ್ಮವ ಅರಿತವನಲ್ಲ, ಆದರೂ ನನ್ನಯ ಕವನಗಳಿಗೇನೂ ಬರವಿಲ್ಲ
ನನಗೀಗ ಜಗದಲಿ ಸರಿಸಾಟಿ ಇಲ್ಲ, ಆದರೂ ನೋಬೆಲ್‌ಗೆಂದು ಹಾತೊರೆದವನಲ್ಲ
ನನ್ನ ಬಗ್ಗೆ ನನಗೆ ಹೆಮ್ಮೆ ಇದೆ ಅಷ್ಟೆ, ಜಂಬದ ಕೋಳಿಗೆ ಹೋಲಿಕೆಯೇನು ನಾನಲ್ಲ 
||ನಾನೊಬ್ಬ ಯುವ ಕವಿ||

ನಾ ಬರೆದದ್ದೆಲ್ಲ ಸಾಹಿತ್ಯದ ಏಳಿಗೆಯೇನಲ್ಲ, ಆದರೂ ಬರೆಯುವ ತವಕ ಇನ್ನೂ ನೀಗಿಲ್ಲ
ನಾ ಬರೆದದ್ದರಲ್ಲೇನೂ ತಪ್ಪಿಲ್ಲ, ಇದ್ದರೂ ಒಪ್ಪುವ ಜಾಣನು ನಾನಲ್ಲ
ನಾ ಬರೆದದ್ದೆಲ್ಲ ಸತ್ಯದ ಏಳಿಗೆಯೇನಲ್ಲ, ಆದರೂ ಆಡಂಬರದ ಮಾತು ಇದೇನಲ್ಲ 
||ನಾನೊಬ್ಬ ಯುವ ಕವಿ||

-- ಕಲ್ಯಾಣ ಕುಲ್ಕರ್ಣಿ

Saturday, March 26, 2011

ಕಾಣದಾ ಕರುಣಾಳು



ಗ್ರೀಷ್ಮದ ಬದುಕಿಗೆ ವರ್ಷದ ಹನಿಗರೆದೆ,
ಶರದದ ರೋಧನಕೆ ಹೆಮಂತನ ಅಪ್ಪುಗೆಯ ಆಸರೆಯಾದೆ,
ಶಿಶಿರದ ಏಕಾಂತಕೆ ವಸಂತದ ಬಳಗವಾದೆ,
ಆಸೆಗಳ ಅನಾವೃಷ್ಟಿಗೆ ಅನಂದದ ಅತಿವೃಷ್ಟಿ ಸುರಿದೆ,
ಆದೃಷ್ಟದ ಹಿಂಗಾರಿಗೆ ಭರವಸೆಯ ಮುಂಗಾರಾದೆ.

ನೀ ಯಾರೋ, ನಾ ಕಾಣೆ,
ಆದರೆ ನಿನ್ನೀ ಅವೀರತ ಅನುದಾನಕ್ಕೆ ಅನುಗಾಲ ಋಣಿಯಾದೆ.
ನೀನು ಗೆಳೆಯನೋ, ಗೆಳತಿಯೋ, ತಂದೆ-ತಾಯಿಯೋ, ದೇವರೋ,
ಯಾರದರೂ ಸರಿ, ನೀನು ಸದಾ ಕಾಲ ಚೆನ್ನಾಗಿರು ಅಂತ ಪ್ರಾರ್ಥಿಸುವೆ.

-- ಕಲ್ಯಾಣ ಕುಲ್ಕರ್ಣಿ

Tuesday, March 08, 2011

(ನಿ)ವೇದನೆ



ನಿನ್ನೆಯ ನೆನಪಲಿ ಕಣ್ಣು ಹಸಿಯಾಗಿರಲು
ಇಂದಿನ ಬೆಳಕು ಕಣ್ಣ ಕುಕ್ಕುತಲಿಹುದು

ನಾಳೆಯ ಕನಸುಗಳು ಪುಡಿ-ಪುಡಿಯಾಗಿರಲು
ಮುಳ್ಳ ಜೊತೆಗೂಡಿ ದಾರಿ ತಪ್ಪಿಸುತಲಿಹವು ||

ಕಣ್ಣ ಚಿಪ್ಪಲ್ಲಿ ಕೂಡಿಟ್ಟ ಒಂದೊಂದು ಮುತ್ತೆಲ್ಲ
ಹೃದಯ ಕಂಪನಕೆ ಜಾರಿ ಹನಿಯಾಗಿ ಹರಿದಿಹುದು
ರೆಪ್ಪೆಯಾ ನೆರಳಲ್ಲಿ ಕಟ್ಟಿದ ಮುದನೀಡುವ ಕನಸೆಲ್ಲ
ವಾಸ್ತವದ ಬಿಸಿ ತಾಕಿ ತಾ ಒಣಗಿಹುದು ||

ಮನದ ಮೂಲೆಯಲಿ ಬಚ್ಚಿಟ್ಟ ಆಸೆಗಳೆಲ್ಲ
ಬಿರಿದೆದೆಯ ಬಡಿತದಲಿ ತಾ ನಿಃಶಬ್ದವಾಗಿಹುದು
ಮಡಿಲಲ್ಲಿ ಕೂಡಿಟ್ಟ ಸಂತಸದ ಸಿರಿ ಎಲ್ಲ
ಹರಿದುಹೋದ ಸೆರಗ ಅಂಚನ್ನ ಒದ್ದೆಯಾಗಿಸಿಹುದು ||

|| ನಿನ್ನೆಯ ನೆನಪಲಿ ಕಣ್ಣು ಹಸಿಯಾಗಿರಲು
ಇಂದಿನ ಬೆಳಕು ಕಣ್ಣ ಕುಕ್ಕುತಲಿಹುದು ||

ಅಧರಗಳ ಮೇಲೆ ಅರಳಿದ ತಾವರೆಗಳೆಲ್ಲ
ಕಣ್ಣ ತೆರೆದೊಮ್ಮೆ ನಾ ನೋಡಲು ಮುದುಡಿಹುದು
ಓಡಲಲ್ಲಿ ಹೊತ್ತಿದ ಭಾವಗಳ ಬೆಂಕಿ ಎಲ್ಲ
ಬತ್ತಿದ ತನುವನ್ನೆ ಸಮಿಧೆ ತಾನಾಗಿಸಿಹುದು ||

ಕಿವಿಯಲ್ಲಿ ಗೋಗರೆವ ಕನಸುಗಳ ಆಕ್ರಂದನವೆಲ್ಲ
ಗಾನ ರಸವಿಲ್ಲದ ಕಂಠವನು ಶುಷ್ಕವಾಗಿಸಿಹುದು
ಕಾಲಚಕ್ರ ತಂದಿಹ ಈ ದೈವದ ಅನಾವೃಷ್ಟಿಯನೆಲ್ಲ
ದೈವತ್ವದಿಂದಲಿ ಚಿಗುರಿಸುವ ಹೊಣೆ ನಿನ್ನದಾಗಿಹುದು ||

ಓ ವಸಂತ ಹೊಣೆ ನಿನ್ನದಾಗಿಹುದು ||


|| ನಿನ್ನೆಯ ನೆನಪಲಿ ಕಣ್ಣು ಹಸಿಯಾಗಿರಲು
ಇಂದಿನ ಬೆಳಕು ಕಣ್ಣ ಕುಕ್ಕುತಲಿಹುದು ||

-- ಕಲ್ಯಾಣ ಕುಲ್ಕರ್ಣಿ

Sunday, March 06, 2011

ಆಕ್ರಂದನ



ದೇವರ ಬರಹ ತಾನರಿಯದೆ ನೊಂದ ಮನವೊಂದು
ಕೇಳು ತಿಹುದು ಪ್ರಶ್ನೆಗಳ ನೂರೊಂದು
ಹುಡುಕುತಲಿಹುದು ಮನವು ಎಲ್ಲೆಲ್ಲು ಅವನನ್ನೆ
ಎಲ್ಲಿಹನೋ ದೂರ ಮಾಡಿ ಕನಸುಗಳಿಂದ ನನ್ನನ್ನೆ

ಅದು ಹೇಗೆ ದೂರಾಯಿತೊ ನನ್ನಿಂದ್ಲೆ ನನ್ನ ಮನ
ಬದುಕುವುದು ಹೇಗೆ ಅತ್ಮದ ವಿನಃ
ನನ ದಾರಿಯು ಕೇಳುತಲಿಹುದು ಗುರಿ ಎಲ್ಲೆಂದು
ತಿಳಿಸುವುದು ಹೇಗೆ ಈ ಪಯಣಕ್ಕೆ ಕೊನೆ ಇಲ್ಲವೆಂದು

ಕೇಳುವರು ಎಲ್ಲರು ನನ್ನ ಮನೆ ವಿಳಾಸ
ಪಾಪ ಅವ್ರಿಗೇನು ಗೊತ್ತು ದಾರಿತಪ್ಪಿಹ ನನ್ನ ಆಯಾಸ
ಹೃದಯ ಒಂದು ಕಡೆ ಆದ್ರೆ ಬಿಡಿತ ಇನ್ನೊಂದೆಡೆ
ಜಗವಿದ್ರು ಜೊತೆಯಾಗಿ ಕೊಲ್ಲೊ ಏಕಾಂತ ಮತ್ತೊಂದೆಡೆ

ಜಾರುತಲಿಹುದು ಭವಿಷ್ಯ ಮರುಳಿನ ಹಾಗೆ
ಅದೆಂತು ಬಾಳುವುದೋ ಕನಸಿಲ್ಲದ ಹಾಗೆ
ಅದು ಹೇಗೆ ಬದಲಾಗುವುದೋ ಈ ನನ್ನ ವ್ಯಥೆ 
ಬರೆಯುವುದು ಹೇಗೋ ಹೊಸದಾದ ಕಥೆ

ನಾನಾಗಿಯೆ ಆರಿಸಿಕೋಂಡ ಜೀವನ ಇದು
ಆದ್ರೆ ನನ್ನಿಂದಲೆ ಪದೇ ಪದೇ ಮುನಿದುಕೊಳ್ಳುವುದು
ಅದೇನು ತಪ್ಪಾಯಿತೋ ನನ್ನಿಂದ ನಾನರಿಯೆ
ಕ್ಷಮಿಸದೆ ಅವನು ಬದುಕುವಾ ಶಿಕ್ಷೆಕೊಡುವುದು ಸರಿಯೇ

ಹಣೆಯ ಮೇಲೆ ಗಿಚಿದಾ ನಾಲ್ಕಕ್ಷರ
ಅದಷ್ಟೇ ಈ ಮಾನವರ ಜೀವನ ಸಾರ
ಅಳಿಯುತಿದೆ ಹಣೆ ಬರಹ ಕಣ್ಣೀರ ಧಾರೆಯಲಿ
ಏನಾದರೇನು ಗೆಲ್ಲಬೇಕು ಅವನೇ ಈ ಆಟದಲಿ

ಉಸಿರಿಹುದು ಆದ್ರೆ ನಾನೇಕೆ ಬುದುಕಿಲ್ಲ
ಮನಸ್ಸಿದೆ ಆದ್ರೆ ಅಲ್ಲೇಕೆ ಮಿಡಿತಗಳಿಲ್ಲ
ಅದೇಕೋ ಅವನಿಗೆ ಈ ಆಕ್ರಂದನ ಕೇಳದು
ಕಣ್ಣು ತೆರದೇಕೆ ನೋವ ನೋಡದ ಹಾಗೆ ಮಲಗಿಹನು

- ಕಲ್ಯಾಣ ಕುಲ್ಕರ್ಣಿ

Tuesday, February 15, 2011

ದ್ಯಾವರೆಲ್ಲವನೆ?




ಕಲ್ಲೀನ ಮೂರ್ತ್ಯಾಗ ಭಿತ್ತಿಯ ಚಿತ್ರದಾಗ ಚಂದಾಗಿ ಕಾಣುವವನ
ನೀ ದ್ಯಾವರಂತ ತಿಳಿಯ ಬ್ಯಾಡವೋ ತಮ್ಮ
ಅವನಿಗೆ ಕಣ್ಣಿಲ್ಲ, ಕರುಳಿಲ್ಲ, ಕಿವಿ, ಹೃದಯ ಮೊದಲಿಲ್ಲ
ಇದ್ದರು ಅಲ್ಲೇನು ಹುರುಳಿಲ್ಲವೋ ತಮ್ಮ ||

ಅಲ್ಲಿಹನು, ಇಲ್ಲಿಹನು ಮನದೊಳಗ ಬೆರೆತಿಹನು
ಎಂದೆಲ್ಲ ನೀ ಅಂದಕೊ ಬ್ಯಾಡಲೋ ಹುಚ್ಚ
ಕುರಿ, ಕೊಳಿಯನೆಲ್ಲ ಕುಣಿ-ಕುಣಿದು ತಿನ್ನೊನು
ಚಿತ್ತಕ್ಕೆ ಚಿಂತೆಯ ಚಿತೆ ಹಚ್ಚಿ ಒಳಗೊಳಗೆ ಸುಡುವವನು
ದ್ಯಾವರಲ್ಲವೋ ತಮ್ಮ ||


ಹಸಿದಿರುವ ಹೊಟ್ಟ್ಯಾಗ ಉರಿ ಬೆಂಕ್ಯಾಗಿ ಧಗಧಗಿಸೋನು
ಆರಿದ ಬಾಯೋರ ಕಣ್ಣಾಗ ನಿಲ್ಲದ ಮಳೆಯಾಗಿ ಸುರಿಯೋನು
ಮೈ ಮುಚ್ಚಿ ಕೊಳ್ಳೋಕೆ ಬಡಿದಾಡೋರ ಕಂಡು ಅಣಕಿಸೋನು
ಕಷ್ಟದ ಸುಳಿಗಾಳಿಗೆ ಒದ್ದಾಡೋರ ನೋಡ್ಬಿಟ್ಟು ಬಿದ್ದು ಬಿದ್ದು ನಗುವವನು
ದ್ಯಾವರಲ್ಲವೋ ತಮ್ಮ ||

ಸಿರಿವಂತರ ಕಾಲಹಿಡಿದು ಕೆಸರಿಗೆ ಎಳೆಯೋನು
ಬಡವರ ಬೆನ್ನ ಬಗ್ಸಿ ಬೆವರ್ನೀರ ಕುಡಿಸೋನು
ಮಕ್ಕಳ ಕನಸನ್ನ ಮುರಿದ್ದೊಮ್ಮೆ ಅಳಿಸೋನು
ಒಲವಲ್ಲಿ ಒಲಿದೆರಡು ಹೃದಯಕ್ಕೆ ಅಡ್ಡಹಾಕಿ ಕುರೋನು
ದ್ಯಾವರಲ್ಲವೋ ತಮ್ಮ || 

ಬ್ಯಾನ್ಯಂತ, ಬ್ಯಾಸರಂತ, ಸೋಲಂತ, ಸಾವಂತ
ಒಂದಲ್ಲೊಂದು ಗಾಳದಲಿ ನಮ ಹಿಡಿದ-ಹಿಡಿದು ಪೀಡಸೋನು
ತನ್ನ ಮೋಹ, ಮದ, ಮತ್ಸರ, ಅಹಂಕಾರ, ಸಿಟ್ಟೆಂಬ
ಬ್ರಹ್ಮಾಸ್ತ್ರಗಳನೆಲ್ಲ ಈ ಬಡ ಜೀವಗಳ ಮೇಲೆ ಬಿಟ್ಟ-ಬಿಟ್ಟು ಕೊಲ್ಲೋನು
ದ್ಯಾವರಲ್ಲವೋ ತಮ್ಮ ||

ಕೇಳದೆ ಕೊಡುವವನು, ಕೊಟ್ಟೊಮ್ಮೆ ಬೇಡುವವನು
ಕೊಡದಿದ್ರ ಸಿಡುಕೋನು, ಕೊಟ್ಟಿದ್ದು ಕಿತ್ತುಕೊಳ್ಳೋನು
ಕೊಟ್ಟಿದ್ದು ಸಾಲದಂತ ಮತ್ತ ಮತ್ತೆ ಕಾಣಿಕೆ ಕೇಳೊನು
ನಮ್ಮ ಭ್ರಷ್ಟ ರಾಜಕಾರಣಿಗಳ ತರಹ ಆಡೋನು
ದ್ಯಾವರಲ್ಲವೋ ತಮ್ಮ ||

ಕಾಡ-ಬೇಡಿ ಕೊಲ್ಲೋನು, ತನ್ನ ಮನದಂತೆ ಕುಣಿಸೋನು
ತನಗೆ ಒಪ್ಪಾದ್ರೆ ಒಲಿವವನು, ಇಲ್ದಿದ್ರ ಮುನಿವವನು
ನಮ್ಮ ತಪ್ಪಿಗೆ ಕಿವಿ ಹಿಂಡೋನು, ತನ್ ತಪ್ಪಿಗೆ ತೊಡೆ ತಟ್ಟಿ ನಿಲ್ಲೋನು
ಪ್ರೇತಿಗೆ ಬೆಲೆ ಕೊಡದೋನು, ತನ್ ಮಾತೆ ಕೊನೆಯಂತ ಮೆರೆಯೋನು
ದ್ಯಾವರಲ್ಲವೋ ತಮ್ಮ ||

ಮನಸಿಗೆ ಮುರಿದ ಹಾಕಿ, ಭಾವಕ್ಕೆ ಬರಿ ಹಾಕಿ
ಕನಸಿಗೆ ಕಲ್ಲ ಹಾಕಿ, ಗಾಯಕ್ಕೆ ಉಪ್ಪ ಹಾಕಿ
ವೇದನೆಗೆ ರಾಗ ಹಾಕಿ, ಬಿಕ್ಕಳಿಕೆಗೆ ತಾಳ ಹಾಕಿ
ಬಳಲಿದ ಜೀವಕ್ಕೆ ನೋಡೊಮ್ಮೆ ತಕ ಥೈ ಕುಣಿಯೋನು
ದ್ಯಾವರಲ್ಲವೋ ತಮ್ಮ ||

ಅವ ದೇವರಂದ್ರ ಆ ಹುಸಿ ಪಟ್ಟ ಅವನೇನೆ ಇಟ್ಕೊಳ್ಳಲಿ
ಈ ಮಾನವರ ಪರದಾಟ ತಾ ನೋಡಿ ಅನಂದ ಪಟ್ಕೊಳಲಿ
ಇದು ಅವನಿಗೆ ಸಮಾಧಾನ ತರೋದಾದ್ರೆ ತಂದ್ಕೊಡಲಿ
ಯಾಕಂದ್ರೆ ಹಿಂಗೆಲ್ಲ ಆಡೋನೇ ಈ ಕಾಲದಲ್ಲಿ ದ್ಯಾವರಂತಲ್ಲೋ, ತಮ್ಮಾ? ||
                                                      


-- ಕಲ್ಯಾಣ ಕುಲ್ಕರ್ಣಿ



Thursday, February 03, 2011

ಮೊದಲ ಮುಂಗಾರು



ಕೆಂಗಟ್ಟು ಕಂಬನಿಗರೆದ ಕೋಟಿ ಕಂಗಳಲಿ
ಮತ್ತೆ ವರುಣಧ್ವಜದ ಬಣ್ಣದ ಕನಸುಗಳ
ಹೆಣೆಯುತ್ತಿದೆ ಈ ಪರಿವರ್ತನೀಯ ಕಾಲದ ಇರುಳು


ಧರೆಯ ಒಂದೊಂದು ತುಣುಕು
ಅಹಂಭಾವದಲಿ ಸೆಟೆದು
ಅರ್ಥಹೀನ ಸ್ವತಂತ್ರ್ಯದ ಗೀತೆಯ ಹಾಡುತಿರಲು,
ಎಲ್ಲ ದ್ವೇಷದ ಖಡ್ಗಗಳ ಮುರಿದು
ಭ್ರಾತೃತ್ವದ ಹೊಸ ಪಸಿರ ಕ್ರಾಂತಿಗೆ ಪ್ರಾರ್ಥನೆಯ ಹಾಡಿ,
ನೀಡಿದೆ ಜೀವರಾಶಿಗೊಂದು ಜೀವ-ಜೀವನ.


ಜಂಬದ ರವಿಯ ಕೊಂಬಿನ ಇರಿತವ ತಾಳದೆ,
ಸಜೀವ ದಹನಕ್ಕೆ ಸಜ್ಜಾದ ಶರೀರಗಳ
ಕೊರಳ ಕೊಳಲಿಗೆ ಕಿವಿಗೊಟ್ಟು,
ರವಿಗೆ ಚಳ್ಳೆಯ ತಿನಿಸಿ, ಮೋಡಗಳು ಹಂದಿರ ಹೂಡಿ,
ಬುವಿಗೆ ನವ ವಧುವಂತೆ ಶೃಂಗರಿಸಲು
ವರ್ಷದ ನೆಪಮಾಡಿ ಬಂದ ಮೊದಲ ಮುಂಗಾರಿಗೆ
ತತ್ತರಿಸಿದ ಜೀವಗಳಲ್ಲಿ ಉದಿಸಿದ
ಆನಂದದ, ಸಂತೃಪ್ತಿಯ, ಶಾಂತಿಯ ಉಸಿರಿನ ನಮನ


-ಕಲ್ಯಾಣ ಕುಲ್ಕರ್ಣಿ