Pages

Showing posts with label ಕಿಚ್ಚೆಬ್ಬಿಸದ ಕಿಡಿಗಳು. Show all posts
Showing posts with label ಕಿಚ್ಚೆಬ್ಬಿಸದ ಕಿಡಿಗಳು. Show all posts

Sunday, April 28, 2013

ಬುಡ-ಬುಡಕ್ಯಾ

ಚುನಾವಣಿ ಬಂತಣ್ಣ ಚುನಾವಣಿ
ಮತ್ತೆ ಬಡವನ ಮನೆಗೊಡುವ ಹಣಾ ಹಣಿ
ಬುಡ-ಬುಡಕ್, ಬುಡ-ಬುಡಕ್

ಐದೊರ್ಸ ಮನೆ ಕೊಳ್ಳೆ ಹೊಡೆದು ಹಿತ್ಲಿಂದ ಓಡ್ದೋರು
ಮುಂದಗಡಿ ಬಾಗ್ಲೆದ್ರು ಕರ್ಚಿಫ್ಫು ಹಿಡ್ಕೊಂಡು ಕಾಯತವರಣ್ಣ
ರಿಸೋರ್ಟಲ್ಲಿ ವ್ಯವಹಾರ ಮಾಡ್ಕೊಂಡು ತಲೆ ಮರ್ಸ್ಕೊಂಡವರೆಲ್ಲ
ಬೀದಿಗಿಳಿದು ರೋಡ ರೋಡಲ್ಲಿ ಭಿಕ್ಷೆ ಬೇಡತಾವರಣ್ಣ

ಚುನಾವಣಿ ಬಂತಣ್ಣ ಚುನಾವಣಿ
ಬುಡ-ಬುಡಕ್, ಬುಡ-ಬುಡಕ್

ಕುರ್ಸೀಗೆ ಸಂಬಂಧ ಮರ್ಕೊಂಡೋರೆಲ್ಲ
ಬಾಟ್ಲಲ್ಲಿ ಜನ್ಮಾಂತರದ ನೆಂಟಸ್ತನ ಬೆಳೆಸ್ತಾವರಣ್ಣ
ವಿಧಾನಸಭೇಲಿ ಮಾಡಿದ ಪೂರ್ವಾಭ್ಯಾಸದ ನಾಟ್ಕಾನೆಲ್ಲ
ಬೀದಿಗಿಳಿದು ಪ್ರದರ್ಶನ ಮಡತಾವರಣ್ಣ

ಚುನಾವಣಿ ಬಂತಣ್ಣ ಚುನಾವಣಿ
ಬುಡ-ಬುಡಕ್, ಬುಡ-ಬುಡಕ್

ಪ್ರತಿ ದಿನದ ದಿನ ಪತ್ರಿಕೇಲಿ ದರ್ಸನ ಕೊಟ್ಟು
ಅಸ್ಟೋತ್ತರ, ಶತನಾಮಾವಳಿ ಬರೆಸ್ಕೊಂಡೋರೆಲ್ಲ
ಗಲ್ಲಿ ಗಲ್ಲಿಲಿ ಮೈಕ್ ಹಿಡ್ಕೊಂಡು ಸ್ಪೀಕರಲ್ಲಿ
ಬಿಲ್ದಪ್ಪು ಕೊಟ್ಕೊಂಡು ಓಡಾಡ್ತವರಣ್ಣ

ಚುನಾವಣಿ ಬಂತಣ್ಣ ಚುನಾವಣಿ
ಬುಡ-ಬುಡಕ್, ಬುಡ-ಬುಡಕ್

ಸಿ. ಬಿ.ಐ., ಸಿ. ಒ.ಡಿ. ಅಂತೆಲ್ಲ ಕಂಬಿಎಣಿಸಿದೊರೆಲ್ಲ
ಊಸರವಳ್ಳಿ ಹಂಗ ಬಣ್ಣ ಬಳಕೊಂಡು
ಯಕ್ಷಗಾನ ಮಾಡತಾವರಣ್ಣ 


ಚುನಾವಣಿ ಬಂತಣ್ಣ ಚುನಾವಣಿ
ಬುಡ-ಬುಡಕ್, ಬುಡ-ಬುಡಕ್ 


ಒಂದು ದಿನದ ಸುಖಕ್ಕ ನೀ ಐದೊರ್ಸ
ದಾರಿದ್ರ್ಯ ಅಭಾವದ ಸಂಕೋಲೆ ಕಟ್ಕೊಂಡು ನರಳಬ್ಯಾಡಣ್ಣ
ನೀ ರಾಜ, ನೀನೆ ದೇಶದ ಭವಿಷ್ಯ
ಅದಕ್ಕ ಸ್ವಲ್ಪ ಒಳ್ಳೇದು ಕೆಟ್ಟದ್ದು ಅರ್ತ್ಕೊಂಡು ನಿನ್ನ ಮತ ಹಾಕಣ್ಣ
ದೇಶ ಕಟ್ಟಕ್ಕ ನಿನ್ನ ಅನುದಾನ ನೀಡಣ್ಣ

ಚುನಾವಣಿ ಬಂತಣ್ಣ ಚುನಾವಣಿ
ಮತ್ತೆ ಬಡವನ ಮನೆಗೊಡುವ ಹಣಾ ಹಣಿ

ಬುಡ-ಬುಡಕ್, ಬುಡ-ಬುಡಕ್
ಬುಡ-ಬುಡಕ್, ಬುಡ-ಬುಡಕ್ 

- ಕೆ. ಕಲ್ಯಾಣ

Sunday, February 27, 2011

ಬಕ್ರಾ...!


"ಏನು? ಬಕ್ರಾ ನಾ!" ಅಂತ ಮುಖ ಕೆಡಿಸಿಕೊಳ್ಳಬೇಡಿ. ಇಲ್ಲಿ ನಾನು, ಎಮ್ ಟಿವಿ ಬಕ್ರಾ ಇಲ್ಲ ಉದಯ ಟಿವಿಯ ಕುರಿಗಳು ಸರ್ ಕುರಿಗಳು ಕಾರ್ಯಕ್ರಮದ ಬಗ್ಗೆ ಏನೊ ಚರ್ಚೆ ಮಾಡ್ತಿನಿ ಅನ್ಕೊಂಡ್ರ? ಇಲ್ಲಾಂದ್ರೆ ಕೆಲವೊಂದು ಸಾರಿ, ಕೆಲವು ಪರಿಸ್ಥಿತಿಗಳು, ಅಥವಾ ಕೆಲವೊಬ್ರು ನಮಗೆ ನಾಮ ಹಾಕೋದ್ರ ಬಗ್ಗೆ ವಿಮರ್ಷೆ ಮಾಡ್ತಿನಿ ಅಂತಿರ್ಬೇಕು ಅಲ್ಲಾ?

ನಾನು ವರ್ಣನೆ ಮಾಡಕ್ಕ ಹೊರಟಿರೋದು ಈ ಥರದ ಯಾವ ಕುರಿಯ/ಬಕ್ರಾ ಬಗ್ಗೆನು ಅಲ್ಲಾರಿ. ನಮ್ಮ ಬಕ್ರಾನೇ ಬೇರೆ, ಅದರ ವೈಶಿಷ್ಠ್ಯವೆ ಬೇರೆ. ನಮ್ಮ ರೇಡಿಯೊ-ಸಿಟಿ ನ ಲಿಂಗೊ-ಲೀಲಾ ಅವರ ಕನ್ನಡ ಸ್ಲ್ಯಾಂಗಲ್ಲಿ (ಒರಟು ಪದದಲ್ಲಿ) ಇದರ ನಿವ್-ಗನ್ನಡದ(ಆಂಗ್ಲೊ-ಕನ್ನಡ) ಅರ್ಥ ಹೇಳೋದಾದ್ರೆ ಬಕ್ರಾ = ಸಾಫ಼್ಟವೇರ್ ಎಂಜಿನೀಯರ್ ಅಂತ.

"ಏನ್ರಿ ಹೀಗೆ ಹೇಳ್ತಿದಿರಾ ನೀವೂಸಾಫ಼್ಟವೇರ್ ಎಂಜಿನೀಯರ್ ಎಲ್ಲಿ, ಬಕ್ರಾ ಎಲ್ಲಿ? ಬರೀಬೇಕು ಅಂತ ಏನೇನೊ ಬರೆದು ನಿಮ್ಮ ತಲೇನು ಕೆಡಿಸ್ಕೊಂಡು ಬೇರೆಯವರ ತಲೆಗು ಹುಳಾ ಬಿಡಬೇಡಿ. ಅವರಿಗೆ ತಂತ್ರ ಗ್ನಾನ (ಟೆಕ್ನಿಕಲ್ ನಾಲೇಜ್) ಇರುತ್ತೆ, ಏನೆಲ್ಲ ಅವಿಷ್ಕಾರ ಮಾಡಿದಾರೆ, ಮಾಡ್ತಿದಾರೆ. ನಿಜವಾದ ಅರ್ಥದಲ್ಲಿ ಹೇಳೊದಾದ್ರೆ ನಮ್ಮ ಇಂದಿನ ಆಧುನಿಕ ಜಗತ್ತಿನ ಕೊಡುಗೆಗೆ ಆವರೇ ಮೂಲ ಕಾರಣರು. ನಿಮ್ಮ ಮಾತಿಗೆ ನಾವು ಒಪ್ಪೋದಿಲ್ಲ" ಅಂತಿರಾ?

ರಿ...ರೀ..., ಸ್ವಲ್ಪ... ಸ್ವಲ್ಪ ತಡಿತೀರಾ...!  ನೀವು ಹೇಳಿರೋದು ನೂರಕ್ಕ್ ನೂರು ಸತ್ಯ. ಇದರಲ್ಲಿ ದೂಸರಾ ಮತೇ ಇಲ್ಲ. ಸದ್ಯಕ್ಕೆ ಇಲ್ಲಿ ಅವರ ಕೊಡುಗೆಗಳನ್ನ ಒಂದು ಚುರು ಪಕ್ಕಕ್ಕಿಟ್ಟು, ಜಗತ್ತು (ಬೇರೆಯವರು) ಅವರ ಬಗ್ಗೆ ಏನು ಅನ್ಕೊತಾರೆ ಅಂತ ಯೋಚಿಸಿದ್ರೆ ನಿಮಗೆ ಇದರ ವಾಸ್ತವ ಗೊತ್ತಾಗಬಹುದು. ಙ್ನಾನದಲ್ಲಿ (ನಾಲೇಜಲ್ಲಿ) ಅವರಿಗೆ  ಸರಿಸಾಟಿ ಸಿಗೋದು ಕಷ್ಟ, ಆದ್ರೆ ಲೌಕಿಕ ವ್ಯವಹರದಲ್ಲಿ ಮಾತ್ರ ೧೦೦ಕ್ಕೆ ೯೦ (೯೦/೧೦೦) ಮಂದಿ ಹಿಂದೇನೆ. ಇದರ ಲಾಭ ಬೇರೆಯವರು ತಗೊಂಡು ಅವರನ್ನ  ಬಕ್ರಾ ಮಾಡ್ತರೆ. ನೀವು ಸಾಫ಼್ಟವೇರ್ ಎಂಜಿನೀಯರ್ ಆಗಿದ್ರೆ ಇದರ ಅನುಭವ ನಿಮಗೂ ದಿನ ನಿತ್ಯದ ಲೈಫಲ್ಲಿ ಆಗಿರುತ್ತೆ.

ಇಲ್ಲಿ ನನ್ನ ಗೆಳೆಯರ (ಸಾಫ಼್ಟವೇರ್ ಎಂಜಿನೀಯರ್‌ಗಳ) ಕೆಲ ಅನುಭವಗಳ ಹಾಸ್ಯನ ಮೆಲಕು ಹಾಕೋಣ ಬನ್ನಿ.

ಒಂದೇರಡು ವರ್ಷಗಳ ಹಿಂದೆ ನನ್ನ ಸ್ನೇಹಿತ ಸತ್ಯ, ಬಕ್ರಾ ಅಗಿದ್ದು ಹೀಗೆ. ಅವನು ಹೇರ್-ಕಟ್‌ಗೆ ಅಂತ ಮಲ್ಲೇಶ್ವರಮ್‍ನ ಹದಿನೈದನೇ ಕ್ರಸಲ್ಲಿರೊ ಒಂದು ಅಂಗಡಿಗೆ ಹೋಗ್ತಿದ್ದ, ಪ್ರತಿ ಸಾರಿ ಅಂಗಡಿಯವನು ಹೇರ್-ಕಟ್‌ಗೆ ಅಂತ ೨೫ ರೂಪಾಯಿ ಮತ್ತು ಶವಿಂಗ್‌ಗೆ ಅಂತ ೧೫ ರೂಪಯಿ ತಗೊಳ್ತಿದ್ದನಂತೆ. ಒಂದುಸಾರಿ ಅಂಗಡಿಯವನು ಮತಾಡ್ತಾ ಇವನ ಕೆಲಸದ ಬಗ್ಗೆ ತಿಳಿಕೊಂಡನಂತೆ. ಯಾವಾಗ ಅಂಗಡಿಯವನಿಗೆ ಇವನು ಸಾಫ಼್ಟವೇರ್ ಎಂಜಿನೀಯರ್ ಅಂತ ಗೊತ್ತಯಿತೊ ಅವಾಗಿಂದ ಅವನ ಬೆಲೆಗಳು ಬದಲಾದ್ವಂತೆ(ರೇಟ್ಸ್ ಚೆಂಜ್). ಆಗಿಂದ ಹೇರ್-ಕಟ್‌ಗೆ ಅಂತ ೪೦ ರೂಪಾಯಿ ಮತ್ತು ಶವಿಂಗ್‌ಗೆ ಅಂತ ೨೫ ರೂಪಯಿ ಮಾಡಿದ್ನಂತೆ. ಸತ್ಯ, ನೀವು ಬೇರೆಯವರಿಗೆ ಹಳೆ ಬೆಲೆನೆ (ರೇಟ್ಸ್‌ಲ್ಲೆ) ತಗೋಳ್ತಿರ ಅದ್ರೆ ನನಗೆ ಮಾತ್ರ ಯಾಕೆ ಜಸ್ತಿ ಅಂತ ಕೇಳಿದ್ದಕ್ಕೆ, ಅಂಗಡಿಯವನು ಹೇಳಿದ್ದು, ಸರ್, ಅವರಿಗೆ ಹೇರ್-ಕಟ್ ಮಾಡೋನು ಹೊಸಬ, ನನ್ನ ಬಗ್ಗೆ ನಿಮಗೆ ಗೊತ್ತೇ ಇದೆ ಅಲ್ವಾ, ಅಲ್ಲಿ ಶೇವಿಂಗ್‌ಗೆ ಬಳಸೋದು ಮಾಮೂಲಿ ಬ್ಲೇಡು ಮತ್ತು ಮಾಮೂಲಿ ಕ್ರೀಮು. ಸರ್ ನನಗೆ ಗೊತ್ತು ನೀವೇನು, ನಿಮ್ಮ ಇಮೇಜ್ ಏನು ಅಂತ, ಅದಕ್ಕೆ ಸರ್ ಈ ಬದಲಾವಣೆ/ಭಿನ್ನತೆ(ಡಿಫರೆನ್ಸ್)" ಅಂದ್ನಂತೆ.

ಪಾಪ ನನ್ನ ಸ್ನೇಹಿತ ಶೇವ್ ಮಾಡಿದ ತಲೆಗೆ ಬಿಟ್ಟಿ (ಫ್ರೀ) ಕಿರೀಟ ಹಕಿಸ್ಕೊಂಡು, ಬಿಸಿ ತುಪ್ಪನ ನುಂಗಕ್ಕೂ ಆಗದೆ, ಉಗಳಕ್ಕೂ ಆಗದೆ ಬಂದು ಬಿಟ್ಟನಂತೆ. ಆದ್ರೆ ಅವನ ಪ್ರಶ್ನೆ, ಒಂದು ಬ್ಲೇಡ್ ಬದಲಾಯಿಸಿದ ಮಾತ್ರಕ್ಕೆ ಬೆಲೆಗಳು ಇಷ್ಟೊಂದು ಬದಲಾಗುತ್ವಾ ಅನ್ನೊ ಪ್ರಶ್ನೆಗೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಆಂದಿನಿಂದ ಅವನು ತನ್ನ ಹೇರ್-ಕಟ್ ಅಂಗಡಿನೇ ಬದಲಾಯಿಸಿ ಬಿಟ್ಟನಂತೆ. ಮತ್ತೆ ಅಲ್ಲಿಂದ ಯಾವತ್ತು ಅನಾವಷ್ಯಕವಾಗಿ ತನ್ನ ಕೆಲಸದ ವಿವರಗಳನ್ನ ಅವರಿವರಿಗೆ ಕೊಡೊದಿಲ್ವಂತೆ.

ಇನ್ನು ನಮ್ಮ ರೂಮ್‌ಮೇಟ್ ಪ್ರಭಾಕರನ ವಿಷಯ ಏನಂದ್ರೆ, ಮೊನ್ನೆ ಅವನು ಎರಡು ದಿವಸದಿಂದ ಹೊಟ್ಟೆ ನೋವಾಗ್ತಿದೆ ಅಂತ ಬೆಂಗಳೂರಿನ ಖಾಸಗಿ (ಪ್ರೈವೇಟ್) ಆಸ್ಪತ್ರೇಲಿ (ಹಸ್ಪಿಟಲ್‌ನಲ್ಲಿ) ಒಂದರಲ್ಲಿ ಪರೀಕ್ಷೆ ಮಾಡಿಸಕ್ಕೆ ಹೋಗಿದ್ನಂತೆ. ಆಗ ವೈದ್ಯರು ಇವನ ನೋವು/ತೊಂದರೆಗಳ ಬಗ್ಗೆ ವಿಚಾರಿಸ್ತ, ಎಲ್ಲಿ ಕೆಲ್ಸ ಮಾಡೋದು, ಏನು ಕೆಲ್ಸ ಮಡೋದು ಅಂತ ಕೇಳಿದ್ರಂತೆ. ಆಗ ಈ ನಮ್ಮ ಮುಗ್ಧ ಹುಡುಗ (ಇನ್ನೊಸೆಂಟ್ ಬೇಬಿ) ಸತ್ಯ ಹರೀಶ್ಚಂದ್ರನ ತರಹ ಇದ್ದಿದ್ನ ಇದ್ದ ಹಾಗೆ ಹೇಳಿ ಬಿಟ್ನಂತೆ. ಆವನಿಗೇನು ಗೊತ್ತು, ಎದುರುಗಡೆ ವೈದ್ಯನ ರೂಪದಲ್ಲಿರೋದು ನಕ್ಷತ್ರಿಕ/ವಿಷ್ವಾಮಿತ್ರ ಅಂತ. ಅವನು ಬೇಕಾಗ್ದಿರೊ ಪರೀಕ್ಷೆಗಳನ್ನೆಲ್ಲ (ಟೆಸ್ಟ್) ಬರೆದು, ತರಕಾರಿ ತಿನ್ನದೆ ತಿಂಗಳು ಕಳೆದಿದ್ದವನಿಗೆ ಎರಡು ದಿನಕ್ಕಾಗೊಷ್ಟು ಮಾತ್ರೆಗಳನ್ನು ವೆಜಿಟೇಬಲ್ ತರಹ ಬರೆದು ಕೈಗಿಟ್ಟು ನಾಳೆವರೆಗೆ ರಿಪೋರ್ಟ್ ತಂದು ತೋರಿಸು. ಆರೊಗ್ಯದಲ್ಲಿ ಯಾವುದೇ ವ್ಯತ್ಯಾಸ ಕಣಿಸ್ದಿದ್ರೆ ಅಡ್ಮಿಟ್ ಆಗಬೇಕಾಗುತ್ತೆ ಅಂತ ಹೇಳಿದ್ರಂತೆ. ಕೊನೆಗೆ ಯಾವುದಕ್ಕು, ಆರೊಗ್ಯದ ವಿಷಯದಲ್ಲಿ ಯಾವುದೇ ರಿಸ್ಕ್ ತಗೊಳ್ಳೊದು ಸರಿಯಲ್ಲ, ಆರೊಗ್ಯ ಇದ್ರೆ ಎಲ್ಲ, ಇಲ್ದಿದ್ರೆ ಏನಿದ್ರೂ ಏನು ಪ್ರಯೋಜನ ಅಂತ ಹೇಳಿ ಕೊನೆಗೆ ಒಂದು ಹುಳನ ಇವನ ತಲೆಲಿ ಬಿಟ್ಟು ಕಳಿಸಿದ್ರಂತೆ.

ಆಮೇಲೆ ಇವನು, ಎಲ್ಲಾ ಪರೀಕ್ಷೆಗಳನ್ನ ಮಾಡಿಸ್ಕೊಂಡು ರಿಪೋರ್ಟ್ ತಗೊಂಡು ಹೋದಾಗ, ವೈದ್ಯರು ಇವನಿಗೆ ಎರಡು ದಿವಸ ಆಸ್ಪತ್ರೇಲಿ ಆಡ್ಮಿಟ್ ಮಾಡಿಸ್ಕೊಂಡು ಚೆನ್ನಾಗಿ ದೋಚಿ, ಈಗ ಪರವಗಿಲ್ಲ ಅಂತ ಮನೆಗೆ ಕಳಿಸಿದ್ರಂತೆ. ಒಟ್ಟರೆ ಎರಡು ದಿನದ ಈ ಗೃಹಚಾರದಲ್ಲಿ ಇವನು ಕಳ್ಕೊಂಡಿದ್ದು ಹನ್ನೆರಡು ಸವಿರ ಚಿಲ್ಲರೆ (೧೨,೦೦೦+). ಅಂದಿನಿಂದ ಆಗಾಗ ರಾತ್ರಿ ಕನಸಲ್ಲಿ ಅಸ್ಪತ್ರೇನ, ಸ್ಟ್ರೆಚ್ಚರ್ನ ಕಂಡು ಹೆದರಿ ಬೆಚ್ಚಿ ಬೀದ್ದು ರಾತ್ರಿಯೆಲ್ಲ ಎದ್ದು ಕೂಡ್ತಾನೆ.

ಇನ್ನೂ ಕೆಲವು ಪ್ರಸಂಗಗಳು ಎಲ್ಲರ ಗಮನಕ್ಕೆ/ಅನುಭವಕ್ಕೆ ಬರುತ್ವೆ. ಆಟೋ ದವರು ನಮ್ಮನ್ನ ದೂರದಿಂದ್ಲೆ ಗಮನಿಸಿ, ನಮ್ಮ ಹಾವ-ಭಾವ, ವೇಷ-ಭುಷಣೆಗಳನ್ನ ಕಲೆ ಹಾಕಿ ಇವನು ಬಕ್ರಾ (ಸಾಫ಼್ಟವೇರ್ ಎಂಜಿನೀಯರ್) ಅಂತ ನಿರ್ಧಾರಕ್ಕೆ ಬಂದಿರ್ತಾರೆ. ಅದಕ್ಕೆ ನೀವು ಅವರಿಗೆ "ಎಮ್.ಜಿ. ರಸ್ತೆಗೆ ಬರ್ತಿರಾ?" ಅಂತ ಕೇಳ್ತಿದಂಗೇನೆ, "ಸರ್, ಒನ್ ಅಂಡ್ ಹಾಫ್ ಮೀಟರ್ ಕೊಡಿ, ಇಲ್ಲಾ, ಮೀಟರ್ ಮೇಲೆ ಒಂದು ಹತ್ತು ರೂಪಾಯಿ ಜಾಸ್ತಿ ಕೊಡಿ" ಅಂತ ಕೇಳ್ತಾರೆ. ಯಾಕಂದ್ರೆ ಅವರಿಗೆ ಗೊತ್ತು, ಇವನು ಹ್ಯಾಗೂ ಬಂದೆ ಬರ್ತಾನೆ ಅಂತ.

ತರಕಾರಿ ಅಂಗಡಿಯವರೂ ಸಹ "ಗುರು, ೫ ರೂಪಾಯಿಗೆ ಈ ಕಾಲದಲ್ಲಿ ಏನು ಬರಲ್ಲಾ ಗೊತ್ತಾ? ಕೊತ್ತಂಬರಿ ಸೊಪ್ಪು, ಒಂದು ಕಟ್ಟಿಗೆ ನಾವು ಕೊಂಡುಕೊಂಡು ತಂದಿರೋದೇ ೨೦ ರೂಪಾಯಿಗೆ ನಿನಗೆ ೫ ರೂಪಾಯಿಗೆ ಹ್ಯಾಗೆ ಕೊಡಲಿ" ಅಂತ ಹೇಳೋದು.

ಈ ತರಹ ಪ್ರತಿದಿನವೂ ಎಷ್ಟೊಂದು ಕಡೆ ನಮಗೆ ಗೊತ್ತಿದ್ದೂ-ಗೊತ್ತಿರದೆಯೂ ಅವರವರ ಹುದ್ದೆಗೆ (ಡೆಜಿಗ್ನೇಷನ್‌ಗೆ) ತಕ್ಕಂತೆ ಸರಕಾರದ ವಿವಿಧ ತೆರಿಗೆಗಳ (ಟ್ಯಾಕ್ಸ್) ಜೊತೆ (ಅನ್-ನೋಟಿಸ್ಡ, ಅನ್-ಕ್ಯಾಲ್ಕುಲೇಟೆಡ್) ಗಮನಕ್ಕೆ/ಗಣನೆಗೆ ಬಾರದ ಅದೆಷ್ಟೋ ತೆರಿಗೆಗಳನ್ನ (ಟ್ಯಾಕ್ಸ್) ಸಾಫ಼್ಟವೇರ್ ಎಂಜಿನೀಯರ್ ಇಮೇಜ್-ಗೋಸ್ಕರ ಕಟ್ತಾನೆ ಇರ್ತಿವಿ.

ಇಂದಿನ ನಮ್ಮ ಘನ ಸರಕಾರದ ಆಯ ವ್ಯಯದ ತೂಗುಯ್ಯಾಲೆಯ ೩೦% ರಿಂದ ೪೦% ಭಾಗ ಇವರಿಂದ (ಸಾಫ಼್ಟವೇರ್ ಇಂಡಸ್ಟ್ರೀಯಿಂದ) ಪಡೆದ ಹಣದಿಂದಲೆನೇ ತೂಗೋದು. ಆದ್ರೂ ಸರಕಾರದಿಂದ, ಜನರಿಂದ ಬಕ್ರಾ ಅಗೋದು ಮಾತ್ರ ನಮ್ಮ ಈ ಬಡಪಾಯಿಯೇ. ಕೆಲಸ ಇರಬೇಕಾದ್ರೆ ಹಮ್ ಸಾಥ್ ಸಾಥ್ ಹೈ ಅನ್ನೊ ಇವರು, (ರಿಸೆಷನ್‌ನಿಂದ) ಕೆಲಸ ಕಳ್ಕೊಂಡಾಗ ಹಮ್ ಆಪ್ಕೆ ಹೈ ಕೌನ್ ಅಂತಾರೆ. ಎಷ್ಟೊಂದುಸಾರಿ, ದಿನ-ರಾತ್ರಿ ಕಣ್ಣಿಗೆ ನಿದ್ದೆ ಇಲ್ಲದೆ ಗುರಿ ಮುಟ್ಟಕ್ಕೆ (ಪ್ರಾಜೆಕ್ಟ್ ಟಾರ್ಗೆಟ್ ಮೀಟ್ ಮಾಡಕ್ಕೆ) ಅಂತ ದುಡಿದು ಆರೋಗ್ಯ ಕಳ್ಕೊಂಡು, ಅರೋಗ್ಯ ಕೊಂಡುಕೊಳ್ಳೊ ಸ್ಥಿತಿ ತಲಪ್ತಾನೆ. ಇಷ್ಟೆಲ್ಲ ಆದ್ರೂ ಎಲ್ಲವನ್ನೂ, ಎಲ್ಲರನ್ನೂ ಮೌನವಾಗಿ ಸಹಿಸ್ಕೊಂಡು ಜೀವನ ಸರಿದೂಗಿಸೋಕ್ಕೆ ಬಡಿದಾಡೊ ನತದೃಷ್ಟ ಇವನು.

ನಿವು ಜೀತ ಪದ್ಧತಿ ಬಗ್ಗೆ ಕೇಳಿದ್ದಿರಾ? ಈ ಪದ್ಧತಿ ನಮ್ಮ ದೇಶದಲ್ಲಿ ಕೊನೆಗೊಂಡು ಹೆಚ್ಚು-ಕಮ್ಮಿ ೨೦ ರಿಂದ ೩೦ ವರ್ಷಗಳಾಗಿರಬೇಕು. ಇದು ಮುಖ್ಯವಾಗಿ ಕೃಷಿಕರಿಗೆ ಸಂಬಂದಿಸಿದ್ದು. ಇದರಲ್ಲಿ ಯಾವುದೇ ಕೃಷಿಕ ತನಗೆ ಹಣದ/ಧಾನ್ಯದ ಅಗತ್ಯ ಇದ್ದಾಗ ತನ್ನ ಭೂಮಿನ ಅಲ್ಲಿಯ ಸಾಹುಕಾರನ ಹತ್ತಿರ ಅಡವಿಟ್ಟು ಇಲ್ಲ ನೇರವಾಗಿ ಅವನಿಂದ ಹಣ ಪಡೆದು ಅವಷ್ಯಕತೆಗಳನ್ನ ಪೂರೈಸಿಕೊಂಡು ಅದರ ಬದಲಿಗೆ ಜೀವನ ಪೂರ್ತಿ ಆ ಸಾಹೂಕರನ ಭೂಮಿಲಿ/ಮನೆಲಿ (ಆ ಸಾಲ ತೀರೊವರೆಗು) ದುಡಿಬೇಕಿತ್ತು. ಈ ತರಹ ದುಡಿಯೊ ಆಳಿಗೆ/ಕೆಲಸಗಾರನಿಗೆ ಜೀತದ ಆಳು ಮತ್ತು ಈ ಪದ್ಧತಿನ ಜೀತ ಪದ್ಧತಿ ಅಂತಿದ್ರು.

ಇದನ್ನೆಲ್ಲಾ ಯಾಕೆ ಹೇಳ್ತಿದಿನಿ ಅನ್ಕೊಂಡ್ರಾ? ಅನ್ಯಾಯ, ಶೋಷಣೆಯ ಅಡಿಪಾಯದ ಮೇಲೇನೆ ನಿಂತಿದ್ದ, ಕೃಷಿ ಜೀತವೇನೋ ಈಗ ನಿಂತಿದೆ. ಆದ್ರೆ, ಈ ಹೊಸ ಯುಗದಲ್ಲಿ ಹೊಸ ತರಹದ, ಶರತ್ತುಗಳನ್ನ ಆಧರಿಸಿದ ಜೀತ ಪದ್ಧತಿ ಹುಟ್ಟಿಕೊಂಡಿದೆ. ಜನ, ಪದ್ಧತಿಯ ರೀತಿ, ನೀತಿಗಳು ಬದಲಾಗಿವೆ ಹಾಗು ಇದು ಈಗ ಕಾನೂನಿನ ಚೌಕಟ್ಟಿಗೂ ಒಳಪಟ್ಟಿದೆ. ಆದ್ರೆ, ಇದು ಕೆಲಸ ಮಾಡೊ ರೀತಿ ಮಾತ್ರ ಅದೆ ಹಳೆ ತರಹನೆ ಇದೆ.

ಇಂದಿನ ಕೃಷಿಕ ನಮ್ಮ ಸಾಫ಼್ಟವೇರ್ ಎಂಜಿನೀಯರ್ / ಖಾಸಗಿ ಕ್ಷೆತ್ರದ ಶ್ರಮಿಕ ವರ್ಗ (ಸಾಫ಼್ಟವೇರ್ ಎಂಜಿನೀಯರ್ / ಪ್ರೈವೇಟ್ ಸೆಕ್ಟರ್ ವರ್ಕಿಂಗ್ ಕ್ಲಾಸ್ಸ್), ಸಾಹುಕಾರನ ಸ್ಥಾನಾನ ಖಾಸಗಿ ಕ್ಷೇತ್ರದ ಬ್ಯಾಂಕಗಳು ಅಲಂಕರಿಸಿವೆ (ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್) ಮತ್ತು ಸಾಫ್ಟ್‌ವೇರ್ ಕಂಪನಿಗಳೇ ಜೀತದ ಭೂಮಿಯಾಗಿವೆ. ನಮ್ಮ ಸಾಫ಼್ಟವೇರ್ ಎಂಜಿನೀಯರ್ ಬ್ಯಾಂಕಗಳಿಂದ ತನ್ನ ಆಸೆ-ಅವಷ್ಯಕತೆಗಳನ್ನ ಈಡೇರಿಸಿಕೊಂಡು ನಂತರ ತನ್ನ ಸಾಲಕ್ಕನುಗುಣವಾಗಿ ಅದನ್ನ ತೀರಿಸೋಕೆ ಜೀತದ ಆಳಾಗಿ ತನ್ನ ಪರಿವೆ ತನಗಿಲ್ಲದ ಹಾಗೆ ದುಡಿಯುವನು. ಸಾಲ ಜಾಸ್ತಿ ಇದ್ದಷ್ಟು, ದುಡಿಮೆಯ ಅವಧಿಯೂ ಜಾಸ್ತಿ ಇರುತ್ತೆ. ಮನೆ-ಗಿನೆಗಂತ ಸಾಲ ಪಡೆದಿದ್ರಂತೂ ಮುಗಿಯಿತು, ದುಡಿಯೊ ಅವಧಿ ಮುಗಿಯೊವರೆಗು ದುಡಿತಾನೇ ಇರಬೇಕು. ಇದರಲ್ಲೂ ನಮ್ಮ ಅಮಾಯಕ ಸಾಫ್ಟ್‌ವೇರ್ ಎಂಜಿನೀಯರ್ರೇ ಬಕ್ರಾ. ಬ್ಯಾಂಕಗಳಿಗೆ ಗೊತ್ತು ಇವನಿಗೆ ಸಾಲ ಕೊಟ್ರೆ ನೀಯತ್ತಾಗಿ ದುಡಿದು ಹಿಂತಿರುಗಿಸ್ತಾನೆ ಅಂತ. ತಪ್ಪಿಸ್ಕೊಂಡ್ರೆ ಇವನಿಗೆ ಹಿಡಿಯೊದು ಸರಳ. ಅದಕ್ಕಾಗೆ ಬ್ಯಾಂಕಗಳು ಇವರನ್ನ ಹುಡುಕಿ, ಹುಡಿಕಿ ಬೇಡ ಅಂದ್ರು, ಅವಷ್ಯಕತೆನ ಹುಟ್ಟುಹಾಕಿ (ಕ್ರಿಯೇಟ್ ಮಾಡಿ) ಸಾಲ ಕೊಡೋದು, ಕ್ರೆಡಿಟ್ ಕಾರ್ಡ್ ಕೊಡೋದು. ಇದೆ ಬ್ಯಾಂಕಗಳಿಗೂ ಸುರಕ್ಷಿತವಾದ (ಸೇಫ್) ವ್ಯವಹಾರ (ಬಿಜಿನೆಸ್). ಅವರ ವ್ಯವಹಾರ (ಬಿಜಿನೆಸ್) ನಡೆಯೋದೆ ಇಂಥವರಿಂದ.

ವಿಚಿತ್ರ ಏನಂದ್ರೆ, ಇವನು ಬಡ್ಡಿ (ಇಂಟರೆಸ್ಟ್) ಕಟ್ಟಿ ಸಾಲವಾಗಿ (ಕ್ರೆಡಿಟ್ ಹಣ) ಪಡೆದ ಹಣದಿಂದ ಏನಾದ್ರು ಖರೀದಿಸಿದಾಗ ಆ ವ್ಯಾಪಾರಕ್ಕೆ ಪರೋಕ್ಷವಾಗಿ ಈತನೆ ಪ್ರೊತ್ಸಾಹಿಸಿದ ಹಾಗಾಯಿತು. ಪಡೆದ ಸಂಬಳದಿಂದ ತೆರಿಗೆ ಅಂತ ಅರ್ಧ ಹಣ ಸರಕಾರದ ಬೊಕ್ಕಸಕ್ಕೆ (ಟ್ರೆಜರಿಗೆ) ತುಂಬಿ, ನಂತರ ಏನಾದ್ರು ತೆಗೆದುಕೊಂಡ್ರೆ ಅದಕ್ಕೆ, ವ್ಯಾಟ್ (ವ್ಯಾಟ್) ಕಟ್ಟಿ, ಸೇವಾ ತೆರಿಗೆ (ಸರ್ವೀಸ್ ಟ್ಯಾಕ್ಸ್) ಕಟ್ಟಿ, ಮನೋರಂಜನಾ ತೆರಿಗೆ ಕೊಟ್ಟಿದ ಮೇಲೂ, ಎಲ್ರೂ ಅಳಿದುಳಿದ ಇವನನ್ನೆ ಕಿತ್ತು ತಿನ್ನಕ್ಕೆ ನೋಡೋದು. ಸಾಫ಼್ಟವೇರ್ ಎಂಜಿನೀಯರ್ ಅಂದ್ರೆ ಸಾಕು ಎದುರುಗಡೆಯವರು ನಮ್ಮನ್ನ ನೋಡೋ ದೃಷ್ಟಿ, ವ್ಯವಹರಿಸೊ ರೀತಿ ಎಲ್ಲವು ಥಟ್ಟನೆ ಬದಲಾಗಿ ಬಿಡುತ್ತೆ. ಘಜನಿ ಮೊಹಮ್ಮದ ಪದೇ ಪದೇ ಲೂಟಿ ಮಾಡಿದ ಸೋಮನಾಥ ಮಂದಿರದ ತರಹ ಇವನನ್ನ ನೋಡೊದು.

ಬೆಂಗಳೂರಂಥ ಬೃಹತ್ ನಗರದ ಅರ್ಧ ವ್ಯವಹಾರ (ಬಿಜಿನೆಸ್) ಇವರ ಮೇಲೆನೆ ನಿಂತಿರೋದು. ಖಾಸಗಿ ಸಾರಿಗೆ ವ್ಯವಸ್ಥೆ (ಪ್ರೈವೇಟ್ ಟ್ರಾನ್ಸಪೋರ್ಟ್), ಊಟ, ತಿಂಡಿ (ಕೇಟರಿಂಗ್), ರಿಯಲ್ ಎಸ್ಟೇಟ್, ದೊಡ್ಡ ವ್ಯಾಪಾರಿ ಮಳಿಗೆಗಳ ವ್ಯವಹಾರ (ಬಿಗ್ ಮಾಲ್-ಗಳ ಬಿಸಿನೆಸ್), ಎಲ್ಲಕ್ಕೂ ಚಾಲನೆ/ವ್ಯಪಾರ ಸಿಗೋದು ಇವನಿಂದ್ಲೆ. ಆದ್ರು ಎಲ್ಲರು ಇವನ್ನೆ ಬಕ್ರಾ ಮಾಡೋಕ್ಕೆ ನೊಡೋದು.

ಇನ್ನು ಈತನ ವಯಕ್ತಿಕ (ಪರ್ಸನಲ್) ವಿಷಯಕ್ಕೆ ಬಂದಾಗ, ಮೊನ್ನೆ ನಮ್ಮ ತರುಣ ಹೇಳಿದ ವಿಚರ ಹೇಳ್ತಿನಿ ಕೇಳಿ.

ಇದು ನಮ್ಮ ತರುಣ ಮದುವೆ ವಿಚಾರ. ಅವನು ಹೇಳೊದು ಕೇಳಿದ್ರೆ ನಗು ಬಂದು ಬಿಡುತ್ತೆ. ಇತ ನಮ್ಮ ಸಂಬಧಿಕರವನು, ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್. ಸಾಫ಼್ಟವೇರ್ ಎಂಜಿನೀಯರ್. ಅವನು ಹೇಳೊ ಪ್ರಕಾರ ಇತ್ತೀಚೆಗೆ ಹೆಣ್ಣಿನ ಕಡೆಯವರು, ಹುಡುಗ ಸಾಫ಼್ಟವೇರ್ ಎಂಜಿನೀಯರ್ ಅಂದಕೂಡಲೆ ಇನ್ನೂರು-ಮುನ್ನೂರು ಮೀಟರ್ ದೂರದಿಂದ ಓಡಿ ಹೋಗ್ತಾರಂತೆ. ಇಲ್ಲಾ ಜಾತಕ ಕಲೀತಿಲ್ಲ ಅಂತ ತಿಳಿಸಿ ಬಿಡ್ತಾರಂತೆ.

ಅಂಥದ್ರಲ್ಲೂ ಮೊನ್ನೆ ಕ್ರಿಷ್ಣಪ್ಪ ಅನ್ನೋರೊಬ್ರು ಬಿ.ಎ. ಓದಿರೊ ತಮ್ಮ ಎರಡನೆ ಹುಡುಗಿಗೆ ಗಂಡು ನೋಡಬೇಕು ಅಂತ ಮದುವೆ ಮಧ್ಯಸ್ಥ ವಾಮನಾಚಾರ್ಯರ ಜೊತೆ ಮನೆಗೆ ಬಂದಿದ್ರಂತೆ. ಆವರು ಬಂದಿದ್ದು ತರುಣನಿಗೆ ಮರಭುಮಿಯಲ್ಲಿ ಓಯೆಸಿಸ್ ಕಂಡ ಸಂತಸ.

ಬಂದವರು ಮನೇಲಿ ಆಥಿತ್ಯೋಪಚಾರ ಎಲ್ಲಾ ಸ್ವೀಕರಿಸಿದ ಮೇಲೆ ಹುಡುಗಿಯ ಅಪ್ಪ ಕೇಳಿದ್ದು "ನಿಮ್ಮ ಹುಡುಗ ಎಲ್ಲಿ ಕೆಲ್ಸಾ ಮಾಡೋದು? ವಿಪ್ರೊನಲ್ಲಾ, ಇನ್ಫ಼ೊಸಿಸ್‌ನಲ್ಲಾ? ಎಷ್ಟು ಸಂಪಾದಿಸೋದು ತಿಂಗಳಿಗೆ? ಯಾವ ಪ್ಲ್ಯಾಟ್‌ಫಾರ್ಮ್‌ನಲ್ಲಿ ಕೆಲಸ ಮಡೋದು?, ಮದುವೆ ಆದ್ಮೇಲೆ ಬೇರೆ ಮನೆ ಮಾಡಿ ಇರೋದಾ ಹ್ಯಾಗೆ? ವಿದೇಶ ಪ್ರವಾಸ ಮಾಡಿದ್ದಾನಾ ಯಾವತ್ತಾದ್ರು? ಹೋಗಿದ್ರೆ, ಯಾವ, ಯಾವ ದೇಶಗಳಿಗೆ ಹೋಗಿ ಬಂದಿದ್ದಾನೆ? ಇದು ಸ್ವಂತ ಮನೇನ ಅಥವಾ ಸೈಟ್ ಏನಾದ್ರು ಕೊಂಡುಕೊಂದಿದ್ದಾನಾ ಅವನ ಹೆಸರಲ್ಲಿ? ಎದುರ್ಗಡೆ ನಿಂತಿರೋದು ನಿಮ್ಮ ಕಾರಾ? ಯಾಕೆ ಕೇಳ್ತಾ ಇದಿನಿ ಅಂದ್ರೆ, ನನ್ನ ತಂಗಿಯ ಮೈದುನನ ಹೆಂಡತಿಯ ತಮ್ಮ ಮೊನ್ನೆ ಅಮೇರಿಕದಿಂದ ರಜೆಗಂತ ಬಂದಿದಾರೆ, ಅವರು ೩ ವರ್ಷದಿಂದ ಅಲ್ಲೆ ಇರೋದು, ಜಾವ ಪ್ಲ್ಯಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡೋದಂತೆ, ಜಾವಾಗೆ ತುಂಬಾ ಡಿಮ್ಯಾಂಡ್ ಇದೆಯಂತೆ?, ಒಂದು ಮನೆಕೂಡ ತಗೊಂಡಿದಾರಂತೆ, ಎರಡು ಕಾರುಗಳು ಇದೆಯಂತೆ, ಸ್ವಂತಕ್ಕೆ ಮತ್ತೆ ಅವರ ಹೆಂಡತಿಗಂತ ಬೇರೆ, ಬೇರೆ.....".

ಉಸಿರು ಬಿಡದೆ ಅವರು ಹಾಡ್ತಿರೊ ರಾಗನ ಕೇಳಿ, ಪಕ್ಕದ ರೂಮಲ್ಲಿ ನಿಂತ್ಕೊಂಡು ಕೇಳ್ತಿದ್ದ ತರುಣನಿಗೆ ಶಂಕರ್ ಮಹಾದೇವನ್ ಅವರ ಬ್ರೀದ್‌ಲೆಸ್ ಸಾಂಗ್ ನೆನಪಾಯಿತಂತೆ. ತನ್ನ ಈ ಇಪ್ಪತ್ತು ಸಾವಿರ ರೂಪಾಯಿ ಸಂಬಳದ ಸಾಫ಼್ಟವೇರ್ ಎಂಜಿನೀಯರ್ ಇಮೇಜಗೆ ಮನಸ್ಸಲ್ಲೆ ಬೈದುಕೊಂಡು, ಇನ್ನು ನನ್ನ ಮದುವೆ, ಆಗದ ಮಾತು, ಅನ್ಕೊಂಡು ಗೋಡೆಗೆ ತಲೆ ಜಜ್ಜಿ ಕೊಂಡನಂತೆ. ಇದನ್ನ ಕೇಳಿ ನಾನು ಮೂರು ದಿವಸ ನಕ್ಕಿದ್ದೇ ನಕ್ಕಿದ್ದು. ಈಗ್ಲೂ ಅವನನ್ನ ನೆನಪಿಸಿಕೊಂಡ್ರೆ ನಗು ಬರುತ್ತೆ.

ಇದನ್ನೆಲ್ಲ ಹೇಳಿ, ಓಂದುವರೆ ವರ್ಷದಿಂದ ತನ್ನ ಜೀವನ ನಿಂತಲ್ಲೇ ನಿಂತ್ಕೊಂಡು ಬಿಟ್ಟಿದೆ ಅಂತ ಕೊರಗ್ತಿದ್ದ.

ಮದುವೆ ಆದ ಸಾಫ಼್ಟವೇರ್ ಎಂಜಿನೀಯರ್-ಗಳ ವಿಚಾರ ಬಂದಾಗ, ಕೆಲವೊಬ್ರ ವಿಚಾರದಲ್ಲಿ ಅವರ ಮನೆಯವರೂ ಅವರನ್ನ ಕಾಣೊ ರೀತಿಕೂಡ ಅದೆ ತರಹ ತುಂಬಾ ಎತ್ತರದ ಆಸೆಗಳಿಂದ ಕೂಡಿರುತ್ತೆ, ಅವರ ಸುತ್ಲೂ ತುಂಬಾ ಆಸೆಗಳನ್ನ ಹೆಣೆದುಕೊಂಡಿರ್ತಾರೆ, (ಹೈ ಎಕ್ಸ್‌ಪೆಕ್ಟೇಷನ್ಸ ನಿಂದ ಕೂಡಿರುತ್ತೆ). ಇವುಗಳನ್ನ ಪೂರ್ತಿ ಮಾಡಕ್ಕೂ ಈವರೇ ಹೆಣಗಾಡಬೇಕಿರುತ್ತೆ.

ಅಯ್ಯೋ ಸಾಕ್ರಿ, ಈ ಸಾಫ಼್ಟವೇರ್ ಎಂಜಿನೀಯರ್ ಪುರಾಣ ಅಂತಿರಾ? ಈವಾಗ, ನನ್ನ ಬಕ್ರಾ ಎಂಬ ಶಬ್ದದ ನಿವ್-ಗನ್ನಡದ ಅನುವಾದ ಸರಿ ಇದೆ ಅನ್ನಿಸ್ತಿದೆಯಲ್ವಾ?

ಈ ರೀತಿ ಒಂದಲ್ಲ, ಎರ್ಡಲ್ಲಾ, ಎಲ್ಲದ್ರಲ್ಲೂ, ಎಲ್ಲರಿಂದ್ಲೂ (ತೋಳಗಳಿಂದ) ಒಂದಲ್ಲಾ ಒಂದುಸಾರಿ ಬಕ್ರಾ ಆಗೊ ನಮ್ಮ ಸರಳ ವ್ಯಕ್ತಿತ್ವದ (ಸಾಫ಼್ಟ ಇಮೇಜಿನ/ನೇಚರಿನ) ಸಾಫ಼್ಟವೇರ್ ಎಂಜಿನೀಯರ್ ತಂತ್ರಙ್ನಾನದ ವಿಷಯ ಬಂದಾಗ ಎಲ್ಲರನ್ನು ಮೀರಿ ನಿಲ್ತಾನೆ. ಹೃದಯವಂತಿಕೆಯಲ್ಲೂ ಇವನಿಗೆ ಸರಿ ಸಮಾನರಿಲ್ಲ.

ಏನೋ, ನಾನು ನನ್ನ ಬಳಗದ (ಹಿಂಡಿನ) ಬಗ್ಗೆ ಹೇಳಬೇಕು ಅನ್ನಿಸ್ತು ಅದಕ್ಕೆ ಇದೊಂದು ಚಿಕ್ಕ ಪ್ರಯತ್ನ ಮಾಡಿದಿನಿ. ತಪ್ಪಿದ್ರೆ ತಿದ್ದಿ, ವಾಸ್ತವ ಇದ್ರೆ ಹೊಟ್ಟೆಗೆ ಹಾಕ್ಕೊಳ್ಳಿ.

ಜೈ ಜವಾನ್, ಜೈ ಕಿಸಾನ್, ಜೈ ಸಾಫ಼್ಟವೇರ್ ಎಂಜಿನೀಯರ್!                                                                                                                                                                                                               




ಈ ಬಕ್ರಾಗಳ ಹಿಂಡಿನ ಸದಸ್ಯ,
ಕಲ್ಯಾಣ ಕುಲ್ಕರ್ಣಿ

Wednesday, January 19, 2011

ಇದು ಯಾವ ಯುಗ...?

ಅಂದ ಹಾಗೆ ನನಗೆ ಆಗಾಗ ಒಂದು ಪ್ರಶ್ನೆ ಕಾಡ್ತಾ ಇರುತ್ತೆ, ಅದೇನೆಂದ್ರೆ "ಇದು ಯಾವ ಯುಗ?" ಅನ್ನೋದು. ಇದಕ್ಕೆ ಉತ್ತರ ಹುಡುಕ್ತಾ ಹೋದಾಗ ಈ ಯುಗ ನನಗೆ ಅದೆಷ್ಟೋ ರೀತಿಯಲ್ಲಿ ಕಂಡು ಬಂತು. ಆದ್ರೆ ಅದರಲ್ಲಿ ಅತಿಯಾಗಿ ಸೂಕ್ತ ವಾದವು ಮತ್ತು ವಾಸ್ತವ ವಾದವುಗಳನ್ನ ಪಟ್ಟಿ ಮಾಡಿ ಅವನ್ನ ಈ ಲೇಖನದಲ್ಲಿ ನಿಮ್ಮ ಜೊತೆ ಚರ್ಚೆ ಮಾಡ್ತಾ ಇದಿನಿ.

ನಮ್ಮ ಭಾರತೀಯ ಕಾಲ ಖಂಡದ ವಿಂಗಡಣೆಯ ಪ್ರಕಾರ, ಸತ್ಯ, ನ್ಯಾಯ ಹಾಗು ಅತ್ಯುಚ್ಚ ನಡತೆಗಳನ್ನ ಜೀವನಾದರ್ಶವಾಗಿಟ್ಟು ಕೊಂಡ ಆ ರಾಮನ ಆದರ್ಶ ಯುಗ (ತ್ರೇತಾ ಯುಗ) ಒಂದಿತ್ತಂತೆ. ನಂತರ ಆದರ್ಶಗಳು ಅದಃಪತನಕ್ಕಿಳಿದಾಗ ಬಂದದ್ದು ಆ ಆದರ್ಶ ಹಾಗು ನಡಾವಳಿಗಳನ್ನೆಲ್ಲ ಧರ್ಮಕ್ಕೆ ರೂಪಾಂತರಿಸಿ ಪರಿಪಾಲಿಸೋ ರೀತಿಗೆ ನಾಂದಿ ಹಾಡಿದ ಆ ಶ್ರೀಕೃಷ್ಣನ ಧರ್ಮ ಯುಗ (ದ್ವಾಪರ ಯುಗ) ವಂತೆ. ಸಮಾಜ ಅದಕ್ಕೂ ಹೆದರದೇ ಧರ್ಮಾಚರಣೆಗಳನ್ನ ಗಾಳಿಗೆ ತೂರಿದಾಗ ಹುಟ್ಟಿದ್ದು ಕಲಿಯುಗ. ಅಂದ್ರೆ ತ್ರೇತಾ ಯುಗದ ಆದರ್ಶಗಳಿಂದ, ದ್ವಾಪರದ ಧರ್ಮಾಚರಣೆಗಳಿಂದ ಎಷ್ಟು ಸಾಧ್ಯವೋ ಅಷ್ಟು ಅರಿತು, ಕಲಿತು, ತಿಳಿದು ಜೀವನ ಸಾಗಿಸೋ ಯುಗ ಅಂತ ನಮ್ಮಜ್ಜಿ ಹೇಳ್ತಾ ಇದ್ರು.

ನಾವೆಲ್ಲಾ ಈಗಿರೋದನ್ನ ಕಲಿಯುಗವೇ ಅನ್ಕೊಂಡಿದ್ದಿವಿ. ಆದ್ರೆ ನನ್ನ ಪ್ರಕಾರ ಇದು ಅದಕ್ಕಿಂತ ಸ್ವಲ್ಪ ವಿಭಿನ್ನ. ಇದು ಕೇಳಿದ್ದನ್ನ, ಅರಿತದ್ದನ್ನ ಅಥವಾ ಕಲಿತದ್ದನ್ನ ತಮ್ಮ ವಿವೇಚನೆಗೆ ಮೀರಿ ಚಿಂತಿಸಿ ಬೇರೆಯವರಿಗೆ ಉಪದೇಶ ನೀಡುವ ಕಾಲ. ಇಂದು ನೀವು ಯಾವುದೇ ವಿಷಯ ತಗೊಳ್ಳಿ ಜನ ಅದರ ಬಗ್ಗೆ ವಿವೇಚನಾತ್ಮಕವಾಗಿ ಮಾತಾಡ್ತಾರೆ. ಅದನ್ನ ಎಲ್ಲರೂ ಬದುಕೊ ಶೈಲಿ ಮಾಡ್ಕೊಂಡಿದಾರೆ. ಸ್ವತಃ ಪಾಲಿಸದಿದ್ದರೂ ಸರಿ, ಆದ್ರೆ ತಾವು ಎಲ್ಲವನ್ನೂ ಬಲ್ಲ ತ್ರಿಕಾಲಿಗಾಳು ಅಂತ ಬೀಗುವವರ "ಉಪದೇಶ ಯುಗ" ಅಂತ ನನಗೆ ಎಷ್ಟೋಂದು ಬಾರಿ ಅನ್ಸುತ್ತೆ.

ಇನ್ನು ವೈಙ್ನಾನಿಕವಾಗಿ ಹೇಳೋದಾದ್ರೆ, ಅತ್ಯಂತ ಪ್ರಾಚೀನವಾದದ್ದು ಶಿಲೆಗಳನ್ನ ಬಳಸ್ತಾ ಇದ್ದ ಶಿಲಾಯುಗ, ಆಮೇಲೆ ಬಂದದ್ದು ಕಂಚಿನ ಯುಗ, ನಂತರ ಕೊನೆಯದಾಗಿ ಬಂದದ್ದು ಕಬ್ಬಿಣ ಯುಗ. ಈ ಒಂದೊಂದು ಯುಗದಲ್ಲೂ ಅತ್ಯಧಿಕವಾಗಿ ಬಳಕೆಯಾದ ವಸ್ತುವಿನ ಮೇಲೇನೆ ಆ ಯುಗದ ಹೆಸರಿಟ್ಟಿರೋದು ಅಂತ ತಿಳಿದು ಬರುತ್ತೆ. ಹಾಗಾದ್ರೆ ಈಗ ಎಲ್ಲಕ್ಕಿಂತಲೂ ಜಾಸ್ತಿ ಬಳಕೆಯಾಗೊ ವಸ್ತು ಯಾವುದು ಅಂತ ನಿಮ್ಮ ಅಭಿಪ್ರಾಯ? ನನಗನ್ನಿಸೊ ಮಟ್ಟಿಗೆ ’ಕಾಂಕ್ರೀಟ್’ (concrete) ಅಂತ.

ಈ ಕಾಂಕ್ರೀಟ್ ಯುಗಪುರುಷನ ಪ್ರಭಾವ ಅಷ್ಟಿಷ್ಟಲ್ಲ ಬಿಡಿ. ಮುಟ್ಟಿದ್ದೆಲ್ಲ ಕಾಂಕ್ರೀಟ್, ಕಂಡದ್ದೆಲ್ಲ ಕಾಂಕ್ರೀಟ್, ಇನ್ನೂ ಹೇಳಬೇಕು ಅಂದ್ರೆ ನಮ್ಮ ಕನಸು, ನನಸು, ಆಸೆ, ಆಕಾಂಕ್ಷೆ, ದುಡಿಮೆ, ವ್ಯವಹಾರ ಎಲ್ಲವೂ ಕಾಂಕ್ರೀಟ್. ಕಾಂಕ್ರೀಟ್ ವ್ಯಾಮೋಹ ನಮ್ಮವರಿಂದಲೇ ನಮ್ಮನ್ನು ದೂರಮಾಡಿದೆ, ಅದೆಷ್ಟೋ ಮನಸ್ಸುಗಳ ಮಧ್ಯ ಗೋಡೆ ಹುಟ್ಕೊಂಡು, ಭಾವನೆಗಳಿಗೆ ಗಾಳಿ ಸಿಗದೆ ಉಸಿರು ಕಟ್ಟಿ ಹೋಗೊ ಸ್ಥಿತಿಗೆ ತಂದಿದೆ.

ಇಂದು ನೀವು ಯಾವುದೇ ಪದವೀಧರರನ್ನ ಕೇಳಿ ನಿಮ್ಮ ಜೀವನದ ಗುರಿ ಏನು ಅಂತ, ಸರಿ ಸುಮಾರು ಜನರಿಂದ ಸಿಗೋ ಉತ್ತರ "ಹೆಂಡತಿ, ಮಕ್ಕಳು, ಮನೆ" ಅಂತ. ಸರಿ ಇದು ಮೂಲಭೂತ, ಹೌದು. ಆದ್ರೆ ಇದು ಜೀವನದ ಗುರಿಯಾಗಬೇಕೆ? ಈ ತರಹ ಆಗೋದು ಯಾವಾಗ ಅಂದ್ರೆ ನಾವು ನಮ್ಮ ದುಡಿಮೆ ಮತ್ತು ದಕ್ಷತೆಗಿಂತಲೂ ಎರಡು ಮೂರು ಪಟ್ಟು ಹೆಚ್ಚಿನದ್ದನ್ನ ಆಸೆ ಪಟ್ಟಾಗ. ಕಾಂಕ್ರೀಟ್ ಜಂಗಲ್‌ನ/ಅರಣ್ಯದ ಯಾವುದೋ ಮೂಲೇಲಿ ಒಂದು ಗೋರಿ (ಮನೆ) ಕಟ್ಟಿ / ತಗೊಂಡು ಜೀವನ ಇರೋವರೆಗು ಸರ್ಕಸ್ ಮಾಡ್ಕೊಂಡು, ಅದನ್ನ ತಮ್ಮ ಹೆಸರಿಗೆ ಮಾಡಿಕೊಳ್ಳೊದ್ರಲ್ಲೆ ಮುಗಿದು ಹೋಗಿ ಬಿಡುತ್ತೆ ಎಷ್ಟೋ ಜನರ ಜೀವನ.

ಆದಿನ್ನೆಷ್ಟೋ ಜನರು, 3-ಬೆಡ್‌ರೂಮು, 4-ಬೆಡ್‌ರೂಮು ಮನೆ ತಗೊಳ್ಳೋಕೆ ಅಂತಲೇ ತಮ್ಮ ವೃತ್ತಿ ಜೀವನದ ಅರ್ಧ ಭಾಗವನ್ನ ಮನೆಯವರಿಂದ ದೂರ ಅದೆಲ್ಲೋ ಬೇರೆ ದೇಶದಲ್ಲಿದ್ದು ದುಡಿದು ತರಕ್ಕೆ ಹೋಗ್ತಾರೆ. ಇದೆಲ್ಲದ್ದಕ್ಕೂ ಕೇಂದ್ರ ಆ ಎಕ್ಸ್‌ಟ್ರಾ 10*10(100 sqf)ಗಳು. ಕಲ್ಲು ದೇವರನ್ನ ಪುಜಿಸ್ತಾ ಜನರೂ ಕಲ್ಲಾಗಿ ಬಿಟ್ರಾ? ಮನಸ್ಸಿಗೂ ಕಾಂಕ್ರೀಟ್ ಮಾಡಿಬಿಟ್ರಾ? ಅಂತ ಮನಸ್ಸು ಒಳಗೊಳಗೆ ಕೊರಗುತ್ತೆ. ಅದಕ್ಕೆ ನಮಗೆ ಆಗಾಗ "ಇದು ಕಾಂಕ್ರೀಟ್ ಯುಗಾನಾ?" ಅನ್ನೋ ಪ್ರಶ್ನೆ ಕಾಡುತ್ತೆ.

ಇಂದಿನ ಜಗತ್ತಲ್ಲಿ ಜನರ ವ್ಯವಹಾರ, ಅವರ ನಡೆ, ನುಡಿ, ನೋಡಿದ್ರೆ, ಎಲ್ಲವನ್ನೂ ಒಂದೇಸಾರಿ, ಈಗಿಂದಿಗಲೇ ಪಡೆದುಕೊಳ್ಳಬೇಕೆನ್ನೊ ಅವರ ಚಡಪಡಿಕೆಯ ಜೀವನ ಶೈಲಿ ಗಮನಿಸಿದಾಗ ಯಾರಿಗಾದ್ರು "ಇದು ವೇಗದ (speed) / ಸ್ಪರ್ಧಾತ್ಮಕ (competition) ಯುಗಾ ನಾ?" ಅನ್ನಿಸ್ದೆ ಇರದು. ಹುಟ್ಟಿದಾಗಿಂದ ಸಾಯೋವರೆಗೂ ಯಾವಾಗ್ಲೂ ಬರಿ ಬಡಿದಾಟ. ಎಲ್ಲಿ ಸ್ವಲ್ಪ ತಡವಾದ್ರೂ ಜೀವನವೇ ಕೈ ತಪ್ಪಿ ಹೋಗುತ್ತೆ ಅಥವಾ ಜೀವನ ಅರ್ಥ ಕಳೆದುಕೊಳ್ಳುತ್ತೆ ಅನ್ನೊ ಮನಃಸ್ಥಿತಿ ನಮ್ಮದು. ನಮಗೆ ಸಾಧಿಸಕ್ಕಾಗದ್ದು, ಕೈಗೆಟಕದ್ದು ಬೇರೆಯವರಿಗೆ ಸಿಕ್ಕಿಬಿಟ್ರಂತೂ ಆಯಿತು. ಮನಸ್ಸು ಪೂರ್ತಿಯಾಗಿ ಖಿನ್ನತೆಗೆ (depression-ಗೆ) ತಿರುಗುತ್ತೆ.

ಜೀವನದಲ್ಲಿ ಆಗಾಗ ಸ್ಪರ್ಧೆಗಳಿರುತ್ತೆ ಅವನ್ನ ಧೈರ್ಯ ಮತ್ತು ಯುಕ್ತಿ ಇಂದ ಎದುರಿಸಿ ಗೆಲ್ಲಬೇಕು ನಿಜ, ಆದ್ರೆ ಅದರ ಬದಲು ಜೀವನವನ್ನೆ ಸ್ಪರ್ಧಾ ಕಣವಾಗಿಸಿಬಿಟ್ರೆ ನೆಮ್ಮದಿ ಎಲ್ಲಿಂದ ಬರುತ್ತೆ, ಆರೋಗ್ಯ ಎಲ್ಲಿರುತ್ತೆ?

ಬೇಡಿಕೆಗಿಂತ (demand) ಸರಬರಾಜು (supply) ಕಮ್ಮಿ ಆದಾಗ ಬೆಲೆ ಜಾಸ್ತಿ ಆಗುತ್ತೆ. ಇದು ಸಿಂಪಲ್ ಎಕೊನೊಮಿಕ್ಸ್ ಸಿಧಾಂತ (simple economic theory). ಈ ರೀತಿ ಉನ್ನತ ಶಿಕ್ಷಣದ ಕೆಲವು ಕೋರ್ಸ್‌ಗಳಿಗೆ ಸೀಟುಗಳು ಕಮ್ಮಿ ಇರಬೇಕಾದ್ರೆ ಟೆಸ್ಟ್ ಇಟ್ಟು ಅದರ ಫಲಿತಾಂಶದ ಮೇಲೆ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಹಂಚತಾರೆ. ಈ ಸಂದರ್ಭದಲ್ಲಿ ಸ್ಪರ್ಧೆ ಸರಿ ಎನಿಸುತ್ತೆ ಮತ್ತು ಸೂಕ್ತವೂ ಹೌದು.

ಆದ್ರೆ ಈ ತರಹದ ಹತ್ತು ಹಲವು ಸ್ಪರ್ಧೆಗಳನ್ನ ಜನ ಅನಾವಷ್ಯಕವಾಗಿ ತಮ್ಮ ಸುತ್ಲು ತಾವೇ ಸೃಷ್ಟಿಸಿಕೊಂಡು ಜೀವನವಿಡಿ ಕಟ್ಕೊಂಡು ಸುತ್ತತಾರೆ. ಉದಾಹರಣೆಗೆ, ನಮಗೊಂದು ಕಾರು ಬೇಕು. ಕಾರು ಕಂಪನಿಗಳು ನಮ್ಮ ದೇಶದಲ್ಲಿ ಸುಮಾರಿದೆ, ನಾಮಗೆ ಕಾರು ಬೇಕು ಅಂತ ಗೊತ್ತಾದ್ರೆ ಸಾಕು, ಬ್ಯಾಂಕುಗಳು, ಕಾರು ಕಂಪನಿಗಳು ಮನೆ ಮುಂದೆ ಬರುತ್ವೆ. ಹಾಗಿದ್ರೆ ಇಲ್ಲಿ ಸ್ಪರ್ಧೆಗೆ ಯಾವುದೆ ಜಾಗವಿಲ್ಲ. ಆದ್ರೆ ನಾವು, ನಮ್ಮ ಸಂಬಂಧಿಕರಿಗಿಂತ ಮೊದಲು ಕಾರು ತಗೋ ಬೇಕು, ಅವರಿಗಿಂತಲೂ ದೊಡ್ಡ ಕಾರು ತಗೋ ಬೇಕು, ಅದನ್ನ ಈಗಲೇ ತಗೋ ಬೇಕು ಅನ್ನೊ ಹತ್ತಾರು ಮನಃಸ್ಥಿತಿಗಳನ್ನ ಸೃಷ್ಟಿಸ್ಕೊಂಡು ನಮ್ಮ ಮುಂದೆ ಇಟ್ಕೊಳ್ಳತೀವಿ. ಇದುವೇ ನಮ್ಮಲ್ಲಿ ಸ್ಪರ್ಧೆ ಮೂಡಿಸುತ್ತೆ. ಇವು ಒಂದು ಆಸೆಯ ಪೂರ್ತಿಗೆ ಮಾತ್ರ ಸೀಮಿತವಾಗಿರದೆ ಒಂದಾದ ಮೇಲೊಂದರಂತೆ ಹುಟ್ಕೊಳ್ತಾನೆ ಇರುತ್ವೆ. ಕೊನೆಗೊಂದು ಸಾರಿ ಜೀವನ ಸೋಲುತ್ತೆ ಆದ್ರೆ ಆಸೆ ಸೋಲಲ್ಲಾ. ತಮಾಷೆಗೆ ಕೇಳ್ತಾ ಇದಿನಿ, ಇದನ್ನೆಲ್ಲ ಯೋಚಿಸ್ತಾ ಇದ್ರೆ ನಿಮ್ಹಾನ್ಸ್‌ (NIMHANS) ರೋಗಿಗಳಿಗೂ ನಮಗೂ ವ್ಯತ್ಯಾಸ ಬರೀ ಆವರಣದ್ದು (compound-ನದ್ದು) ಮಾತ್ರ ಅನ್ಸುತ್ತೆ, ಎನಂತೀರಾ?

ಈಗಾಗಲೇ 60/kmh ಓಡೋ ಮನಸ್ಸಿಗೆ, ವಸ್ತುಗಳು ಹೇರಳವಾಗಿದ್ರೂ, ಯೋಗ್ಯತೆಗಿಂತ ಹೆಚ್ಚು-ಹೆಚ್ಚಿನದ್ದನ್ನ ಬಯಸೊ ಆಸೆಗಳು, ಇಂದೇ-ಈಗಲೇ ಯ ಒತ್ತಡಗಳು 120/kmh ವೇಗ ಕೊಡುತ್ವೆ. ಆತಿಯಾದ ವೇಗದಿಂದ ಕೊನೆಗೆನಾಗುತ್ತೆ ಅನ್ನೊದು ನಮಗೆಲ್ಲರಿಗು ಗೊತ್ತು. ಆದ್ರು ಓಡ್ತಿವಿ, ವಸ್ತುಗಳನ್ನ ಸಂಗ್ರಹಿಸ್ತಿವಿ, ಆಡಂಬರಾನ ಜೀವನ ಸಾಧನೆ ಅಂದ್ಕೊಂಡು ಬೀಗ್ತಿವಿ. ಅದಕ್ಕೇ "ಇದು ವೇಗದ/ಸ್ವ-ಸ್ಪರ್ಧಾತ್ಮಕ ಯುಗಾನಾ?" ಅನ್ಸುತ್ತೆ.

ಇವತ್ತಿನ ದಿನಪತ್ರಿಕೆ, ಸುದ್ದಿ ಸಮಚಾರಗಳನ್ನ ಕೇಳಿದಾಗ, ನೋಡಿದಾಗ ಅದರಲ್ಲಿ ರಾರಾಜಿಸೋದು ಬರೀ ಭ್ರಷ್ಟಾಚಾರ, ಸುಲಿಗೆ, ವಂಚನೆಗಳೆ. ಅದಕ್ಕೆ ಇದು ಬರೀ ಭ್ರಷ್ಟಾಚಾರದ / ಹಗರಣಗಳ ಯುಗಾನಾ ಅಂತ? 21ನೇ ಶತಮಾನದ ಮೊದಲ ದಶಕವಂತು ಅದಕ್ಕೆ ಸೈ ಅಂತ ಹೇಳುತ್ಲೆ ಕೊನೆ ಉಸಿರೆಳೆಯಿತು.

ನಮ್ಮ ದೇಶದ ಇಂದಿನ ಬೆಳವಣಿಗೆಯ ಮಾಪಕ ಯೇನು ಗೊತ್ತಾ? ಸಾಚಾ ಆಗಿದ್ದ ಅದೆಷ್ಟೋ ಜನ ಭ್ರಷ್ಟಾಚರದ LKG / UKG ಗೆ ಸೇರಿದ್ದಾರೆ, ಬರೀ ಭ್ರಷ್ಟಾಚಾರಕ್ಕೆ ಹೆಸರಾದವರೆಲ್ರೂ ನಮ್ಮ ನಿಮ್ಮ ಸಹಾಯದಿಂದ ಹಗರಣಗಳ ಪದವಿ ಪಡೆದುಕೊಂಡಿದಾರೆ. ಇನ್ನೂ ಹಲವರು ಹೆಚ್ಚಿನ ವ್ಯಾಸಾಂಗಕ್ಕೆ ಅಂತ ವಿದೇಶಕ್ಕೆ ಹೋಗಿ ಸ್ವಿಸ್ ಪದವಿ ಕೂಡ ಗರಿಗೇರಿಸಿದ್ದಾರೆ. ಈ ವ್ಯವಸ್ಥೆಲಿ ನಮ್ಮ ನಿಮ್ಮ ಪಾತ್ರ, ಕೆಲವೊಮ್ಮೆ ಶಿಕ್ಷಕರದ್ದು (ನಾವೇ ಭ್ರಷ್ಟಾಚಾರವನ್ನ ಹುಟ್ಟು ಹಾಕೊದು) / ಇನ್ನ ಕೆಲವೊಮ್ಮೆ ವಿದ್ಯಾರ್ಥಿಗಳದ್ದು (ನಾವು ಭ್ರಷ್ಟಾಚಾರಕ್ಕೆ ಬಲಿಯಾಗೋದು ಮತ್ತು ಅದನ್ನ ಕಲಿತುಕೊಳ್ಳೊದು).

ನಾನೊಂದು ಸಾರಿ ಅದೆಲ್ಲೋ ಓದಿದ ನೆನಪು. ಹಿಂದಿನ ಕಾಲದಲ್ಲಿ, ಯುರೋಪಿನಲ್ಲಿ ಹವಾಮಾನ ವೈಪರಿತ್ಯದ ಕಾರಣ ಕೃಷಿಗೆ ಅನುಕೂಲವಾಗಿರಲಿಲ್ಲ. ಆಗ ಜನರು ಮೂಲತಹವಾಗಿ ಅವಲಂಭಿಸಿದ್ದು ವ್ಯಾಪಾರಿ ಹಡುಗುಗಳ ಲೂಟಿ ಮಾಡಿದ ಸಂಪತ್ತಿನ ಮೇಲೆ ಯಂತೆ. ಆದ್ರೆ ಎರಡು ಬಣಗಳು ಕೆಲವೊಮ್ಮೆ ಒಂದೇ ಹಡಗನ್ನ ಲೂಟಿಮಾಡಿ ಕಿತ್ತಡ್ತಾ ಇದ್ವಂತೆ. ಅದರ ಫಿರ್ಯಾದೆ ತಗೊಂಡು ಪೋಪರ ಹತ್ತಿರ ಹೋದ್ರೆ ಅವರು ಸಮುದ್ರವನ್ನ ಹಲವು ಭಾಗಮಾಡಿ ಒಂದೊಂದು ಭಾಗವನ್ನ ಒಂದೊಂದು ಬಣಕ್ಕೆ/ಗುಂಪಿಗೆ ದತ್ತು ಕೊಟ್ಟು ಆ ಭಾಗದಲ್ಲಿ ಲೂಟಿಯಾದ ಜಹಾಜಿನ ಸಂಪತ್ತು ಆ ಭಾಗದ ಓಡೆತನ ಹೊತ್ತ ಬಣದ್ದು ಅಂತ ಹಂಚಿ ಕೊಡುತ್ತಿದ್ರಂತೆ.

ಅದೇ ತರಹ ನಮ್ಮ ಇಂದಿನ ಸರಕಾರದ ಖಾತೆಗಳ ಹಂಚಿಕೆ ಕೂಡ ಅಂತ ಅನ್ಸಲ್ವಾ? ಆಯಾ ಖಾತೆಗೆ / ಇಲಾಖೆಗೆ ತಕ್ಕಂತೆ ಐದು ವರ್ಷ ಲೂಟಿಗೆ ಗುತ್ತಿಗೆ ವಾರಸುದಾರರು ಹುಡುಕಿ ವಹಿಸಿ ಕೊಟ್ಟ ಹಾಗಿದೆ. ಭಾರತದ ಅಖಂಡತೆ ಇನ್ನು ಗೋಡೆಲಿ ನೇತಾಡೋ ನಕ್ಷೆಗೆ ಮಾತ್ರ ಸಿಮಿತ, ವಾಸ್ತವದಲ್ಲಿ ಕೆಲಸಕ್ಕೆ ಬಾರದ ಜಮೀನು ಮಾತ್ರ ಭರತವಾಗಿ ಉಳಿದಿದೆ, ಉಳಿದದ್ದೆಲ್ಲಾ ಪರಕೀಯವೇ.

ಅದಕ್ಕೇ "ಇದು ಹಗರಣಗಳ ಯುಗಾನಾ?" ಅನ್ಸುತ್ತೆ. ಏನಿಲ್ಲಾ ಆಂದ್ರೂ ಭಾರತದ ವಿಷಯದಲ್ಲಂತು ಇದು ನಿಜ ಅನ್ಸುತ್ತೆ.

ಕೆಲವೊಮ್ಮೆ ಇದೇ ದಿನಪತ್ರಿಕೆಗಳನ್ನ ನೋಡಿದ್ರೆ ಅದರಲ್ಲಿ ಕಾಣ್ಸೋದು ಬರೀ ಆತಂಕ, ಭಯೋತ್ಪಾದನೆ, ನರಹಂತಕ ಕೃತ್ಯಗಳ ವಿಷಯ. ಪ್ರತಿ ದಿನವೂ ಭಯ, ಆತಂಕದಲ್ಲಿ ಜೀವಿಸುವ ಹಾಗಿರುವ ಇಂದಿನ ವಾತಾವರಣ ಗಮನಿಸಿದ್ರೆ "ಇದು ಆತಂಕದ ಯುಗವೇ?" ಅಂತ ಅನ್ನಿಸ್ದೆ ಇರದು. ನನಗಂತು ರಕ್ತಬೀಜಾಸುರನ ರಕ್ತದ ಹನಿಗಳು ಮತ್ತೆ ಭುಮಿಯ ಮೇಲೆ ಬೀಳ್ತಾ ಇವೆ ಮತ್ತು ಆ ಹನಿಗಳೇ ಈ ಉಗ್ರವಾದವಾಗಿ / ಉಗ್ರವಾದಿಗಳಾಗಿ ಜಗತ್ತಿಗೆ ಕಾಡ್ತಾ ಇದೆ / ಇದಾರೆ ಅನ್ನಿಸ್ತಿದೆ.

ಒಂದು ಕಡೆ ಭಯೋತ್ಪಾದನೆಯ ಆತಂಕದಲ್ಲಿ ಜೀವ ಹೀಡಿದು ಬದುಕೊ ಸ್ಥಿತಿ, ಇನ್ನೊಂದು ಕಡೆ ಸ್ಥಿಮಿತ ಕಳೆದುಕೊಂಡ ಭುಮಿಯ ಹವಾಮಾನದ ಚಿತ್ರ-ವಿಚಿತ್ರ ನಡವಳಿಕೆಯ ಆತಂಕ. ಇನ್ನು ದೇವರ ಹೆಸರಲ್ಲಿ / ಪ್ರಭುತ್ವದ ಹೆಸರಲ್ಲಿ / ಸಾಮ್ಯತ್ವದ ಹೆಸರಲ್ಲಿ ನೊಡೆಯೊ ಈ ಭಯೋತ್ಪಾದನೆಯ / ಗೂಂಡಾಗಿರಿಯ ಕೃತ್ಯಗಳು ಜನರ ಪ್ರಾಣ ಕಂಟಕಗಳಾಗಿವೆ. ಈ ಎಲ್ಲಾ ಆತಂಕ, ಭಯ, ಭಯೋತ್ಪಾದನೆಯ ಒತ್ತಡಗಳ ಮಧ್ಯ ಬದುಕಿನ ಬಾಡಿದಾಟ ನೋಡಿದ್ರೆ "ಇದು ಆತಂಕದ / ಗೂಂಡಾಗಿರಿಯ ಯುಗವೇ?" ಅನ್ಸುತ್ತೆ.

ಒಂದು ಕಾಲದಲ್ಲಿ ಪ್ರೇಮಿಗಳು ತಮ್ಮ ಪ್ರೇಯಸಿಗೆ "ನಿನಗೆ ನಾನು ಚಂದ್ರ ತಾರೆಗಳನ್ನ ತಂದು ಕೊಡ್ತೇನೆ, ನಾನು ನಿನ್ನ ಅಂಗೈಲಿ ಇಡೀ ಜಗತ್ತಿನ ಖುಷಿನ ತಂದು ಸುರಿತೇನೆ" ಅಂತೆಲ್ಲಾ ಹೇಳಿ ಹಾಗೇ ರೈಲು ಹತ್ಸಿ ಮದುವೆಯಾಗಿ ಬಿಡೋರು. ಆದ್ರೆ ಈಗ ಒಂದು ಮೊಬೈಲ್‌ನಲ್ಲೆ ಅರ್ಧ ಜಗತ್ತು ಸೇರಿಕೊಂಡಿರೊದನ್ನ ನೋಡಿದ್ರೆ ಆ ಸೂರ್ಯ, ಚಂದ್ರ, ತಾರೆಯರನ್ನೂ ನಮ್ಮ ವಿಙ್ನಾನಿಗಳು ಕೈಗೆ ತಂದು ಸುರೀತಾರೆ ಅನ್ಸುತ್ತೆ. ಭೌತಿಕವಾಗಿ ದೂರವಾಗಿದ್ರೂ ಟೆಕ್ನೊಲೊಜಿಕಲ್ ಆಗಿ / ತಾಂತ್ರಿಕವಾಗಿ ಜಗತ್ತು ತುಂಬಾ ಹತ್ತಿರವಾಗಿದೆ.

ಪಕ್ಕದ ಸೀಟು / ಪಕ್ಕದ ಕ್ಯಾಬೀನು / ಪಕ್ಕದ ಮನೆ / ಪಕ್ಕದ ಕುಟುಂಬ ವ್ಯವಸ್ಥೆ ಹಾಳಾದ್ರೂ ಸರಿ, ಆದ್ರೆ ಯಾಹೂ (yahoo)! ನಲ್ಲಿ ’ಹಾಯ್’ ಹೇಳಿ, gmail ನಲ್ಲಿ ಮಿಂಚಂಚೆ (e-mail) ಕಳ್ಸಿ, ಅರ್ಕುಟ್‌ (Orkut)ನಲ್ಲಿ ನೆನಪಿಸ್ಕೊಂಡು, ಫ಼ೇಸ್‌ಬುಕ್‌ (facebook) ನಲ್ಲಿ ಮುಖ ತೋರ್ಸಿ, ಮೊಬೈಲ್ ನಲ್ಲಿ ಮಾತಾಡಿ, 3G ನಲ್ಲಿ ಅಂಜನ ಹಿಡಿದು, ತಂತ್ರಙ್ನಾನದಿಂದ ಲೋಕಾನ, ಲೋಕದ ಸಾಮಾಜಿಕ ಸಂಬಂಧಗಳನ್ನ ಬೆರೆಸೊಕೆ ನಡಿತಾ ಇರೊ ಸಾಮಾಜಿಕ ಕಳಕಳಿಯ ಪ್ರಯತ್ನಗಳನ್ನೆಲ್ಲಾ ನೋಡಿದ್ರೆ "ಇದು ತಂತ್ರಙ್ನಾನದ ಯುಗ" ಅಂತ ಯಾರಿಗಾದ್ರು ಅನ್ನಿಸಿಯೇ ಅನ್ಸುತ್ತೆ.

ಆಕಾಶದ ಆಯಸ್ಕಾಂತಕ್ಕೆ / ಆಕರ್ಷಣೆಗೆ ಭುಮಿಯ ಬೆಲೆಗಳೆಲ್ಲ ಮೋಹಿತವಾಗ್ತಿರೋದನ್ನ ನೋಡಿದ್ರೆ, ಊಟಕ್ಕೆ ಮೊದಲು ಉಪ್ಪಿನಕಯಿ ಅಂತಿದ್ದೋರೆಲ್ಲಾ ಬೆಳಿಗ್ಗೆ ಉಪ್ಪಿನಕಾಯಿ ಯಾಕೆ?, ರಾತ್ರಿ ಬರಿ ಉಪ್ಪಿನಕಾಯಿ ಸಾಕು ಅನ್ನೊ ಹಾಗಾಗಿದೆ. ಅದಕ್ಕೆ "ಇದು ದುಬಾರಿ ಯುಗವೇ?" ಅನ್ನಿಸಲ್ವೆ.

ನಾನು ನಾನು ಅಂತ ಮೆರೆದವರೆಲ್ಲಾ, ಒಂದು ಈರುಳ್ಳಿ ಬೆಲೆಗೆ ಕಣ್ಣಿರಿಡ್ತಾ ಇದಾರೆ. ತರಕಾರಿ ತಿನ್ನೋನೆ ಈಗ ಯುವರಾಜ. ನುಗ್ಗೆಕಾಯಿ, ಕುಂಬಳಕಾಯಿ, ಹೀರೆಕಾಯಿ, ಗಜರಿ, ಅಂತ ಇಟ್ಕೊಂಡು ಮಾರೋನೆ ಮಹಾರಾಜ. ಇನ್ನು ಬೆಳ್ಳುಳ್ಳಿ ತಿಂದ್ರೆ ಹೃದಯಾಘಾತ ತಪ್ಪುತ್ತೆ ಆದ್ರೆ ಖರಿದಿಸಿದ್ರೆ E.C.G. ಟೆಸ್ಟ್ ಉಚಿತ. ಹೋಟೆಲ್‌ಗಳಲ್ಲಿ ರೇಟ್ ಬೋರ್ಡಗಳು ಬದಲಾಗಲಿವೆ. ಒಂದು ಇಡ್ಲಿಗೆ - ರೂ. 10, ಒಂದು ವಡೆಗೆ - ರೂ. 20, ತೆಂಗಿನ ಚಟ್ನಿಗೆ - ರೂ. 15, ಟೊಮ್ಯಾಟೊ ಸಾಂಬಾರಗೆ - ರೂ. 25. ಹೀಗೆ ಮುಂದ್ವರಿಯುತ್ತೆ ಈ ಲೀಸ್ಟು. ಅದಕ್ಕೇ ಇದು "ದುಬಾರಿ ಯುಗ ಅಲ್ವಾ?"

ಕೊನೆಗೆ ನಾನು ಈ ಪ್ರಶ್ನೇನ, ಅಂದ್ರೆ "ಇದು ಯಾವ ಯುಗ?" ಅನ್ನೋ ಪ್ರಶ್ನೇನ ನಿಮ್ಮ ವಿವೇಚನೆಗೆ ಬಿಡ್ತಾ ಇದಿನಿ. ಈ ಲೇಖನ ನಿಮಗೆ ಒಂಚೂರು ಹೊತ್ತಾದ್ರು ವಿಚಾರಗಳ ಆಂಗಳಕ್ಕೆ ಕರೆದೊಯ್ದರೆ ನನ್ನ ಪ್ರಯತ್ನ ಸಾರ್ಥಕ ಅಂದ್ಕೋತಿನಿ.

-- ಕಲ್ಯಾಣ ಕುಲ್ಕರ್ಣಿ