ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದ ಈ ಅರವತ್ತೇಳು ವರ್ಷಗಳಲ್ಲಿ
ಶೀರ್ಷಿಕೆಯ ಈ ಪ್ರಶ್ನೆ (ಬದಲಾಗುವುದಾ ಈ ಭಾರತ...!?!?) ದೇಶದ ಕಾಳಜಿ ಇರುವ ಪ್ರತಿಯೊಬ್ಬರ ಮನಸ್ಸಿನಲ್ಲೂ
ಬಂದಿರದೇ ಇರಲಾರದು. ವಿಪರ್ಯಾಸವೆಂದರೆ, ಈ ಪ್ರಶ್ನೆ ಕೇಳಿದವರೆಲ್ಲರೂ ಬರೀ ಉತ್ತರಕ್ಕಾಗಿ ಕಾದವರೇ, ಹೊರತಾಗಿ ಇದಕ್ಕೆ
ಉತ್ತರವಾಗಿ ಯಾರೂ ನಿಲ್ಲಲೇ ಇಲ್ಲ. ಬೇರೆಯವರನ್ನ ದೂಶಿಸುವುದು ಸಹಜದ ಕೆಲಸ. ಹರಿಯುವ ಪ್ರವಾಹಕ್ಕೆ
ಹರಿದು ಹೋಗದ ಬೀಜಗಳೇ ವೃಕ್ಷವಾಗಿ ನಿಲ್ಲುವುದು.
ಈ ತರಹ ಹಳಿಯುವವರೆಲ್ಲರಿಗೂ ತಾವು ಒಳ್ಳೆಯವರು ಮತ್ತು ತಮ್ಮ ಸುತ್ತಲಿರುವವರೆಲ್ಲರೂ
ಹೆಚ್ಚು ಕಮ್ಮಿ ಒಳ್ಳೆಯವರೇ. ಆದರೆ ಬೇರೆಯವರು ಮಾತ್ರ ಕೆಟ್ಟವರು, ಭ್ರಷ್ಟಾಚಾರಿಗಳು, ಅನೈತಿಕ ಚಾರಿತ್ರ್ಯ
ಉಳ್ಳವರು ಅಂತ ಅನ್ನಿಸುತ್ತದೆ. ಆದರೆ ನಿಜವಾಗಿ ಇದನ್ನ ಸ್ವಲ್ಪ ಆಳವಾಗಿ ಯೋಚಿಸಿದಾಗ ದೇಶದ ಎಲ್ಲರಿಗೂ
ತಮ್ಮ ಹಾಗೂ ತಮ್ಮ ಸುತ್ತಲಿನವರ ಬಗ್ಗೆ ಇದೇ ತರಹದ ಅಭಿಪ್ರಾಯ ಇರುತ್ತದೆ ಎಂದು ಗೊತ್ತಾಗುತ್ತದೆ. ನಮ್ಮ
ಹತ್ತಿರದವರನ್ನ ನಾವು ಅರಿತಿರುವುದರಿಂದ ಅವರನ್ನು ಮಾತ್ರ ಒಳ್ಳೆಯವರೆಂದುಕೊಳ್ಳುತ್ತೇವೆ. ಅಂದರೆ ಇದರರ್ಥ,
ವಾಸ್ತವದಲ್ಲಿ ನೂರಕ್ಕೆ ಎಂಬತ್ತು-ತೊಂಬತ್ತು ಜನ ಒಳ್ಳೆಯವರೇ.
ಹೀಗಿರುವಾಗ
ನಮ್ಮ ದೇಶದ ಇಂದಿನ ಸ್ಥಿತಿಗೆ ಏನು ಕಾರಣ?
ಇದಕ್ಕೆ
ಎರಡು ಮುಖ್ಯ ಕಾರಣಗಳಿವೆ.
ಒಂದು,
ಸಮಾಜದಿಂದ ಕೆಟ್ಟದ್ದರ ವಿಜೃಂಭಣೆ ಹಾಗೂ ವೈಭವೀಕರಣ ಮತ್ತು ದೇಶದ ಬಹುತೇಕ
ರಾಜಕೀಯ ಪಕ್ಷಗಳಿಂದ ಹಾಗೂ ಅವುಗಳ ಪ್ರಮುಖರಿಂದ ಭ್ರಷ್ಟ ವ್ಯವಹಾರದ ಆಚರಣೆ ಮತ್ತು ಅಂತಹ ಇನ್ನೂ ಅನೇಕ
ಜನರಿಗೆ ಆಶ್ರಯ ನಿಡುತ್ತಿರುವುದು. ದೇಶಕ್ಕೆ ದಿಕ್ಕು-ದೆಸೆ ತೋರಿಸಬೇಕಿದ್ದವರೇ ದುಡ್ಡು ಮತ್ತು ಅಧಿಕಾರದ
ಆಸೆಯಿಂದ ಇಂತಹ ಅವ್ಯವಹಾರಗಳಲ್ಲಿ ತೊಡಗುವ ಆದರ್ಶ ತೋರಿಸಿದಾಗ ಉಳಿದ ಜನರ ವ್ಯವಹಾರವು ಕೆಡುತ್ತದೆ.
ಅದಕ್ಕೇ "ಯಥಾ ರಾಜ, ತಥಾ ಪ್ರಜಾ" ಅಂತ ಹೇಳೋದು.
ಎರಡು,
ಸಾಮಾನ್ಯ ಜನರು ಸಹ ಈ ತರಹ ಭ್ರಷ್ಟಾಚಾರ ಮಾಡಿಯೇ ಜೀವನದಲ್ಲಿ ಹೊಟ್ಟೆ ಬಟ್ಟೆಯನ್ನ
ಮೀರಿ ಸಂಪಾದಿಸೋದಕ್ಕೆ ಆಗೋದು, ಕೂಡಿಹಾಕಕ್ಕೆ ಆಗೋದು ಅಂತ ಅಂತಹ ದುರಾಚಾಗಳಲ್ಲಿ ತೊಡಗುವುದು. ಶಿಷ್ಠಾಚಾರದಿಂದ
ಏನು ಲಾಭವಿಲ್ಲ ಅಂತ ನಂಬಿ ಪೂರ್ತಿಯಾಗಿ ಅದನ್ನ ತ್ಯಜಿಸುವುದು. ಇಂದಿನ ಸಮಾಜದಲ್ಲಿ ಬದುಕೊದು ಇದೆ
ತರಹ ಅಂದ್ಕೊಂಡು ಅದಕ್ಕೆ ತನು ಮನದಿಂದ ಸಮರ್ಪಿತರಾಗುವುದು. ಯಾಕಂದ್ರೆ ದೇಶದ ಇಂದಿನ ಬೆಳವಣಿಗೆಯಲ್ಲಿ
ಇದಾವುದೂ ಕೆಟ್ಟದ್ದಲ್ಲ, ಇದು ಪ್ರಕೃತಿ ಸಹಜ ಅನ್ನೋ ಭಾವನೆ ಸಾಂಕ್ರಾಮಿಕ ರೋಗದ ತರಹ ಎಲ್ಲರಲ್ಲಿ ಹರಡತಾ
ಇರೋದೇ ಇದಕ್ಕೆಲ್ಲ ಕಾರಣ.
ಇದು ಬದಲಾಗೋದು
ತ್ರಿಕೋನಿಯ ಪ್ರಯಾಸದಿಂದ ಅಥವಾ ತಂತ್ರದಿಂದ.
1.
ಬರಿ 2G ಸ್ಕ್ಯಾಮ್, ಆದರ್ಶ ಅನಾದರ್ಷ, ಕಾಮನ್ ವೆಲ್ತ್ ಲೂಟ್, ಕೋಲ್ಗೇಟ್
(ಕರಿಮುಖ, ಬಿಳಿಹಲ್ಲು) ಹಗರಣ, ಅಳಿಯ ದೇಶ ತೊಳೆಯ, ಬೋ
ಫೋರ್ಸ್, ಅಂತ ಹೇಳಿ ಭ್ರಷ್ಟಾಚಾರ, ಕೊಲೆ, ಸುಲಿಗೆ, ವಂಚನೆ, ಮೋಸ, ಅತಿಯಾಯಿತು, ಈ ದೇಶ ಉದ್ಧಾರ
ಆಗಲ್ಲಾ ಅಂತ ಹೇಳಿದ್ರೆ ಅದು ಬರೀ ನಿದ್ದೆಗಣ್ಣಲ್ಲಿ ಬಡಬಡಿಸಿದ ಹಾಗಿರುತ್ತೆ. ಪ್ರತಿಯೊಬ್ಬ ಭಾರತೀಯನು
ಕುಂಭಕರ್ಣನ ನಿದ್ದೆಯಿಂದ ಎಚ್ಚೆತ್ತುಕೊಂಡು ತನ್ನ ನಾಗರೀಕ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಅರಿತು
ರಾಷ್ಟ್ರದ ಒಳಿತಿಗಾಗಿ ತನ್ನ ಕರ್ತವ್ಯವನ್ನು ಮಾಡಬೇಕು. ಸ್ವಾರ್ಥ ತೊರೆದು ರಾಷ್ಟ್ರ ಮೊದಲಾಗಬೆಕು.
ಹೀಗೆಂದಾಗ ಕೆಲವರು, "ಸ್ವಾಮಿ, ನಾವೇನೋ ಇದನ್ನ ತಪ್ಪದೆ ಪರಿಪಾಲಿಸ್ತಿವಿ ಆದ್ರೆ ಬೇರೆಯವರು
ಪಾಲಿಸಬೇಕಲ್ಲ" ಅಂತಾರೆ. ಬೇರೆಯವರು ಬದಲಾಗದಿದ್ದರೂ ನಾನು ಮಾತ್ರ ನನ್ನ ನೈತಿಕತೆಯ ದಾರಿಯಿಂದ
ಅಧಃ ಪತನಕ್ಕೆ ಇಳಿಯಲಾರೆನೆಂಬ ಧೃಢ ಸಂಕಲ್ಪ ಒಂದಿದ್ದರೆ ಸಾಕು. ಅದು ಎಷ್ಟೋಮಟ್ಟಿಗೆ ನಮ್ಮನ್ನ ಸರಿ
ದಾರಿಯಲ್ಲಿಡುತ್ತೆ. ಅದೇ ತರಹ ಇದು ಬೇರೆಯವರಿಗೂ ಪ್ರೇರಕ ವಾಗುತ್ತದೆ.
ತಡವಾಗಿ ಏಳುವ ಅಭ್ಯಾಸ ಮಾಡಿಕೊಂಡ ಇಂದಿನ ಪೀಳಿಗೆಗೆ ಹ್ಯಾಗೆ ಸೂರ್ಯ ಹುಟ್ಟೋದು
ಪಶ್ಚಿಮದಲ್ಲೋ ಹಾಗೆ ಅವರಿಗೆ ಜಗತ್ತಿನ ಎಲ್ಲ ಕೊಡುಗೆಗಳೂ ಪಶ್ಚಿಮದ್ದೇ ಅನ್ನೋ ತಪ್ಪು ಕಲ್ಪನೆ. ಅದಕ್ಕೆ ಅವರು ಕೇಳೋದು ಭಾರತ ಐರೊಪ್ಪ್ಯ ರಾಷ್ಟ್ರಗಳ ಹಾಗೆ ಆಗುವುದಾ? ಅಮೇರಿಕ ತರಹ ತಂತ್ರಜ್ಞಾನದಲ್ಲಿ
ಮುಂದುವರೆಯುವುದಾ? ಚೀನಾಕ್ಕೆ ಪ್ರತಿಸ್ಪರ್ಧೆ ಕೊಡುವುದಾ? ಅಂತೆಲ್ಲ.
ಒಂದು ತಿಳಿದಿರಲಿ, ಒಂದೊಂದು ದೇಶಕ್ಕೂ ಒಂದೊಂದು ಮೂಲ, ಪಶ್ಚಿಮಕ್ಕೆ ತಂತ್ರಜ್ಞಾನ ಮೂಲವಾದ್ರೆ ಭಾರತಕ್ಕೆ ಆಧ್ಯಾತ್ಮ. ಭಾರತಲ್ಲಿ
ಎಂದಿಗೂ ಜೀವನಕ್ಕೆ ಪ್ರಾಮುಖ್ಯತೆ ಆಡಂಬರಕ್ಕಲ್ಲ. ಇನ್ನು ಈ ಪಶ್ಚಿಮದ ದೆಶಗಳವರಾರೂ ತಮ್ಮ ರಾಷ್ಟ್ರದ ಮೂಲಸ್ವರೂಪವನ್ನ ತೊರೆದು ಆಧುನಿಕತೆಯ ಕೈ ಹಿಡಿದವರಲ್ಲ. ಹೇಗೆ ಬೇರುಗಳಿಂದ ಬೇರ್ಪದಿಸಲ್ಪಟ್ಟ ಮರ ಬಹಳ ದಿನ ಬದುಕುವುದಿಲ್ಲವೋ ಹಾಗೆಯೇ
ತನ್ನ ಇತಿಹಾಸ, ಸಂಸ್ಕೃತಿಯ ಕೊಂಡಿಯಿಂದ ಕಳಚಿಕೊಂಡ ದೇಶವೂ ಕೂಡ ಪಾಶ್ಚಿಮಾತ್ಯದ ಗುರುತ್ವಾಕರ್ಷಣೆಗೆ
ಮುದುಡಿ ಮೂಲೆಗುಂಪಾಗಿ ಬೀಳುವುದಕ್ಕೆ ತಡವಾಗುವುದಿಲ್ಲ.
ಪ್ರಕೃತಿದತ್ತವಾಗಿ ವಿಶ್ವಕ್ಕೆ ಭಾಸ್ಕರ ನಾಗಿದ್ದ ದೇವತುಲ್ಯ ಭಾರತ ಇಂಡಿಯಾಎಂಬ
ದಯನೀಯತೆಯ ಹಣೆಪಟ್ಟಿಯಿಂದ ಮತ್ತೆ ಭಾರತವಾದ್ರೆ ಸಾಕು, ಅದರಲ್ಲೇ ಅದರ ಘನತೆ ಇದೆ. ಆಗಲೇ ಇಡೀ ವಿಶ್ವ ಮತ್ತೆ ಭಾರತಕ್ಕೆ ನತಮಸ್ತಕವಾಗೋದು, ಬೇರೆ ದೇಶಗಳ ಅನುಕರಣೆಯಿಂದಲ್ಲ
ಅನ್ನೋದನ್ನು ಎಲ್ಲರು ಅರಿಯಬೇಕು.
ಇನ್ನು ಫ್ರೆಂಚ್ ಕ್ರಾಂತಿ, ರಷಿಯಾದ ಕ್ರಾಂತಿ, ಇಟಲಿಯ ಕ್ರಾಂತಿ, ಜರ್ಮನಿಯ ಕ್ರಾಂತಿ,
ಅಮೆರಿಕಾದ ಸ್ವಾತಂತ್ರ್ಯ ಇದಾವುದು ಒಂದು ದಿನದ ಒಬ್ಬ ವ್ಯಕ್ತಿಯ ಪಾಲ್ಗೊಳ್ಳುವಿಕೆಯಿಂದ ಆಗಿರುವುದಲ್ಲ.
ಇಡೀ ದೇಶ ಒಂದಾಗಿ ಹೋರಾಡಿದ ಫ಼ಲಶ್ರುತಿಯಾಗಿ ಈ ದೇಶಗಳು ಇಂದು ವಿಶ್ವದಲ್ಲಿ ತಲೆಯೆತ್ತಿ ನಿಂತಿವೆ.
ಇದೆ ಭಾರತದ ಅಭ್ಯುದಯಕ್ಕೂ ನಾಂದಿ. ಇದರ ಅರ್ಥ ರಕ್ತ ಕ್ರಾಂತಿಯೆಂದಲ್ಲ, ಇದರರ್ಥ ಎಲ್ಲರೂ ಒಗ್ಗಟ್ಟಾಗಿ
ಭಾರತದ ಏಳಿಗೆಗೆ ಶ್ರಮಿಸುವುದು/ಹೋರಾಡುವುದು. “ನಾನು ಎನ್ನುವುದು ಭಾರತವಾಗಬೇಕು”.
ಅದಕ್ಕೆ
ಒಬ್ಬ ಕವಿ ಹೇಳ್ತಾನೆ
ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೆ,
ಗಂಗೆ ಇದ್ದರೆ, ಸಿಂಧುವಿದ್ದರೆ, ಗಿರಿ ಹಿಮಾಲಯವಿದ್ದರೆ,
ವೇದವಿದ್ದರೆ, ಭೂಮಿ ಇದ್ದರೆ, ಘನ ಪರಂಪರೆ ಇದ್ದರೆ,
ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ?
ನಿಜ, ಎಲ್ಲರು ಯೋಚಿಸಬೇಕಾದ ವಿಷಯ.
2.
ಮೊದಲು ಇಂದಿನ ಸ್ವಾರ್ಥ, ಬಲಹೀನ, ಭ್ರಷ್ಟ ಹಾಗು ಅನೈತಿಕ ಹಾಗು ದೇಶದ ಸ್ವಾಭಿಮಾನದ
ಲವಲೇಶವೂ ಇಲ್ಲದ ದಬ್ಬಾಳಿಕೆಯ ಸರಕಾರದಿಂದ ಹೊರಬಂದು ಈ ಅಧಿಕಾರದ ಚುಕ್ಕಾಣಿ ಒಳ್ಳೆಯವರ ಕೈ ಸೇರಬೇಕು.
ಸ್ವಾಭಿಮಾನಿ ಸಚ್ಚರಿತ್ರೆಯ ನೇತೃತ್ವ(ಸರಕಾರ)ದಿಂದ/ನಾಯಕ(ರಿ)ನಿಂದ ದೇಶವನ್ನ ಅಭಿವೃದ್ಧಿಯ ಪಥದ ಮೇಲೆ
ಕೊಂಡೊಯ್ಯಲು ಸಾಧ್ಯ. ಅಂತಹ ನಾಯಕರು ತೆಗೆದುಕೊಳ್ಳುವ ಒಂದೊಂದು ಸ್ವಾಭಿಮಾನಿ ನಿರ್ಧಾರದಿಂದ ದೇಶ ವಿಶ್ವದೆಲ್ಲೆಡೆ
ತಲೆ ಎತ್ತಿ ನಿಲ್ಲುವಂತಾಗುತ್ತದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಕೊಟ್ಟ ಹಾಗೂ ದೇಶದ ಸುರಕ್ಷತೆಗೆಂದು
ಜೀವನ ಮುಡಿಪಾಗಿಟ್ಟ ಯೋಧರಿಗೆ ಸರ್ಕಾರ, ದೇಶ ಮತ್ತು ಸಮಾಜದಲ್ಲಿ ಅತ್ಯುನ್ನತ ಸನ್ಮಾನ ಹಾಗೂ ಗೌರವ
ನೀಡುವುದರಿಂದ ದೇಶದ ಪ್ರಜೆಗಳಲ್ಲಿ, ಅದರಲ್ಲೂ ಯುವಕರಲ್ಲಿ ದೇಶಕ್ಕಾಗಿ ತನು, ಮನ, ಧನದಿಂದ ಸಮರ್ಪಿತರಾಗಿ
ದುಡಿಯುವ, ಚಾರಿತ್ರ್ಯವಂತರಾಗಿ ಸನ್ಮಾರ್ಗದಲ್ಲಿ ಬದುಕುವ ಆದರ್ಶದ ಗುರಿ ಕುಡಿಯೊಡೆಯುತ್ತದೆ ಅದೇ ಮುಂದಿನ
ದಿನಗಳಲ್ಲಿ ಹೆಮ್ಮರವಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ.
ಈ ಮೇಲೆ ಚರ್ಚಿಸಿದಂತೆ ನೂರಕ್ಕೆ ತೊಂಬತ್ತರಷ್ಟು ಜನ ಒಳ್ಳೆಯವೆರೆ ಎಂದಾದಮೇಲೆ
ಅವರೇಕೆ ನಿಧಾನವಾಗಿ ಈ ಅನೈತಿಕ ಮಾರ್ಗವನ್ನ ಅನುಸರಿಸುತ್ತಾ ಇದಾರೆ ಎಂದು ಯೋಚಿಸಿದರೆ ಗೊತ್ತಾಗೋದು,
ಸುತ್ತಲಿನ ಕಲುಷಿತ ವಾತಾವರಣದ ಪ್ರಭಾವದಿಂದ ಅನ್ನೊ ಮಾತು. ಅಂಥವರಿಗೆ ಒಂದು ಸಾರಿ ಒಳ್ಳೆಯದಕ್ಕೆ ಪ್ರಾತಿನಿಧ್ಯ
ಇದೆ ಅಂತ ಗೊತ್ತಾದ್ರೆ ಸಾಕು ಅವರು ಒಳ್ಳೆಯವರಾಗೊದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ. ಅವರಿಗೆ ಸ್ವಚ್ಚಂದವಾಗಿ
ಉಸಿರಾಡೋದಕ್ಕೆ ಅಂದ್ರೆ ನೀತಿವಂತರಾಗಿ, ಪ್ರಾಮಾಣಿಕತೆಯಿಂದ, ಸಚ್ಚರಿತ್ರೆಯಿಂದ ಬದುಕುವುದಕ್ಕೆ ಅವಕಾಶ
ಮಾಡಿಕೊದಬೇಕಾದದ್ದು ಸರಕಾರ ಹಾಗೂ ನಾಯಕರ ಕರ್ತವ್ಯ. ದುಡ್ಡಿನಗಿರುವ ಪ್ರಾಮುಖ್ಯತೆಯನ್ನ ಸಚ್ಚಾರಿತ್ರ್ಯದ
ಕಡೆಗೆ ಹರಿಸಿದಾಗ ದುಡ್ಡಿಗಾಗಿರುವ ಹಪಹಪಿಸುವಿಕೆ ಕಡಿಮೆಯಾಗಿ ಒಳ್ಳೆಯ ಸಮಾಜ ಮತ್ತು ದೇಶ ನಿರ್ಮಾಣವಾಗಲು
ಸಾಧ್ಯವಾಗುತ್ತದೆ. ಆಗ ಜನರ ಮತ್ತು ಸರಕಾರದ ನಡುವಿನ ಅಂತರ ಕಡಿಮೆಯಾಗಿ ಇಬ್ಬರೂ ಒಬ್ಬರಿಗೊಬ್ಬರು
ಪೂರಕವಾಗಿ ಕೆಲಸ ಮಾಡುತ್ತಾರೆ. ಇದು ದೇಶದ ಏಳಿಗೆಗೆ ನಾಂದಿಯಾಗುತ್ತದೆ.
ಇದಕ್ಕೆ
ಒಂದು ಒಳ್ಳೆಯ ಉದಾಹರಣೆ ಎಂದರೆ
1965 ರಲ್ಲಿ ಲಾಲ್ ಬಹದ್ದೂರ ಶಾಸ್ತ್ರೀಜೀಯವರು ಪ್ರಧಾನಿಯಾಗಿದ್ದಾಗ ಭಾರತ
ಮತ್ತು ಪಾಕಿಸ್ತಾನದ ನಡುವೆ ಗಾಡಿಯಲ್ಲಿ ಯುದ್ಧ ಪ್ರಾರಂಭವಾಯಿತು. ಆಗ ಪಾಕಿಸ್ತಾನ ಪೂರ್ತಿಯಾಗಿ ಸೋಲುವ
ಸ್ಥಿತಿಗೆ ತಲುಪಿದಾಗ ಅದು ಅಮೆರಿಕಾವನ್ನು ಮಧ್ಯ ಪ್ರವೇಶಿಸಿ ಒಪ್ಪಂದಮಾಡಿಸಿ ಯುದ್ಧ್ಹನಿಲ್ಲಿಸುವಂತೆ
ಭಾರತವನ್ನು ಕೋರುವಂತೆ ಕೇಳಿಕೊಂಡಿತು. ಆಗ ಅಮೇರಿಕ ಭಾರತಕ್ಕೆ ಯುದ್ಧನಿಲ್ಲಿಸುವಂತೆ ಕೇಳಿಕೊಂಡಾಗ
ಭಾರತ (ಶಾಸ್ತ್ರೀಜಿ ) ಅದಕ್ಕೆ ಒಪ್ಪಲಿಲ್ಲ. ಅದಕ್ಕೆ ಅಮೇರಿಕ ತನ್ನಿಂದ ಭಾರತಕ್ಕೆ ನಿರ್ಯಾತವಗುವ
ಗೋಧಿಯನ್ನು ನಿಲ್ಲಿಸಲಾಗುವುದೆಂದು ಬೆದರಿಕೆ ಹಾಕಿತು. ಇದ್ಯಾವುದಕ್ಕೂ ಶಾಸ್ತ್ರೀಜಿ ಮಣಿಯದೆ, ದೇಶದ
ಜನರಿಗೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ತಮಗೆ (ದೇಶಕ್ಕೆ) ಸಾಥ ಕೊಡುವಂತೆ ಕೋರಿಕೊಂಡರು.
ಅವರು ಭಾರತದ ಪ್ರಜೆಗಳಿಗೆ ತಮ್ಮ ವ್ಯರ್ಥ ಖರ್ಚುಗಳನ್ನು / ದುಂದು ವೆಚ್ಚಗಳನ್ನು
ಕಡಿಮೆ ಮಾಡಲು ಮತ್ತು ವಾರಕ್ಕೆ ಒಂದು ದಿನ ಸೋಮವಾರ ಒಂದು ಹೊತ್ತು ಉಪವಾಸ ಮಾಡಲು ಕೇಳಿಕೊಂಡರು. ಇದಕ್ಕೆ
ಭಾರತೀಯರಿಂದ ಅಭೂತಪೂರ್ವ ಸಮರ್ಥನೆ ದೊರೆಯಿತು. ಇದೆ ಸಮಯದಲ್ಲಿ ಅಮೆರಿಕದಿಂದ ಭಾರತಕ್ಕೆ ಬರುವ ಗೋಧಿಯು
ನಿಂತು ಹೋದ ಕಾರಣ ಅವರು ಗಡಿಯಲ್ಲಿನ ಸೈನಿಕರಿಗೂ ಮತ್ತ ಅನ್ನ ಬೆಳೆಯುವ ರೈತನಿಗೂ ಹುರಿದುಂಬಿಸಲು
"ಜೈ ಜವಾನ್, ಜೈ ಕಿಸಾನ್" ಘೋಷಣೆ ಕೊಟ್ಟರು. ಅದೇ ಯುದ್ಧದಲ್ಲಿ ಭಾರತೀಯ ಸೈನ್ಯ ಲಾಹೋರನ್ನ
ವಶಕ್ಕೆ ತೆಗೆದುಕೊಂಡು ತಿರಂಗಾ ಹಾರಿಸಿತು.
ಇದನ್ನೆಲ್ಲಾ ಓದಿ, ಆಗಿನ ಕಾಲ ಬೇರೆ, ಈಗಿನ ಕಾಲ ಬೇರೆ ಅಂತ ಮೂಗು ಮುರಿ
ಬೇಡಿ. ಈಗಲೂ ಇಂತಹ ಸ್ವಾಭಿಮಾನಿ ಕೆಚ್ಚೆದೆಯ ಅಂಡರ್ ಕರೆಂಟ್ ಈ ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಇದೆ.
ಅಲ್ಲೊಂದು ದೀಪ (ಬಲ್ಬ್) ಹಾಕಿ ಪ್ರಕಾಶಿಸೋರು ಬೇಕು ಅಷ್ಟೇ. ಅದೆಷ್ಟೋ ಕಾಯ್ದೆ ಕಾನೂನಿಂದಾಗದ ಬದಲಾವಣೆಗಳು
ಒಬ್ಬ ಸಮರ್ಥ ನಾಯಕನಿಂದ, ಒಂದು ಸ್ವಾಭಿಮಾನಿ ಸರ್ಕಾರದಿಂದ ಆಗಲು ಸಾಧ್ಯ. ಇದಕ್ಕೆ ಶಾಸ್ತ್ರೀಜಿಯ ಉದಾಹರಣೆಯೇ
ಸಾಕ್ಷಿ.
3.
ಇಷ್ಟಾದ ಮೇಲೂ, ಈ ಮೇಲಿನ ಎರಡೂ ತಂತ್ರಕ್ಕೆ ಸಿಕ್ಕದವರೂ ಇರುತ್ತಾರೆ ಅವರಿಗಾಗಿ
ಕಾನೂನು ಬೇಕು. ಅದಕ್ಕೆ ಹೊಸಕಾಯ್ದೆಗಳ ಅವಶ್ಯಕತೆ ಏನು ಇಲ್ಲ, ಇರುವುದನ್ನೇ ಇನ್ನೂ ಸ್ವಲ್ಪ ಬಿಗಿಗೊಳಿಸಿ
ಸರಿಯಾಗಿ ಕಟ್ಟುನಿಟ್ಟಾಗಿ ಅನುಷ್ಟ್ಹಾನಕ್ಕೆ ತಂದರೆ ಸಾಕು. ದುಷ್ಟ ಶಿಕ್ಷಣ ಶಿಷ್ಠ ರಕ್ಷಣೆಯಾಗಬೆಕು.
ಹೌದು, ಇದೆಲ್ಲವೂ ಸರಳವಾದ ಕೆಲಸವಲ್ಲ ಅಥವಾ ಒಂದೆರಡು ದಿನದ ಕೆಲಸವೂ ಅಲ್ಲ
ಮತ್ತೆ ಒಬ್ಬರಿಂದಾಗುವ ಕೆಲಸವೂ ಅಲ್ಲ. ಎಲ್ಲರೂ ಸೇರಿ ಒಂದಾಗಿ ಗುರಿ ಮುಟ್ಟುವವರೆಗೂ ಸತತ ಸಂಕಲ್ಪ
ಬದ್ಧರಾಗಿ ದುಡಿಯಬೇಕಾಗುತ್ತದೆ. ಬರಿ ಕಾಳಜಿಯ ಮಾತುಗಳಿಂದ
ಮತ್ತು ನಿರಾಶಾ ಭಾವದಿಂದ ದೇಶದ ಭವಿಷ್ಯ ಬದಲಾಗುವುದಿಲ್ಲ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ,
ಗುರಿ ಮುಟ್ಟುವ ತನಕ ತಿರುಗಿ ನೋಡದಿರು ಹಿಂದೆ. ಎಂದು ನಡೆಯಬೇಕು. ಆಗ ಬದಲಾವಣೆಯ ಹೊಸ ಉಷಃ ಕಿರಣ ಕಾಣುವುದು.
2014 ರಲ್ಲಿ ಭಾರತದ ರಾಜಕೀಯದಲ್ಲಿ ಅಂತಹದೊಂದು ಭಾಸ್ಕರನ
ಉದಯಕ್ಕೆ ಕಾದಿರುವ ಸಮಸ್ತ ಭಾರತೀಯರಿಗೆ ಶುಭಾಶಯಗಳು.
ಜಯ ಹಿಂದ್
!
-- ಕಲ್ಯಾಣ ಕುಲ್ಕರ್ಣಿ

No comments:
Post a Comment