Pages

Tuesday, May 29, 2012

ರಾದ್ಧಾಂತ



ನಿನ್ನೆ ಬೆಳಿಗ್ಗೆ ನಾನು ಬೆಂಗಳೂರು ಮಹಾನಗರ ಪಾಲಿಕೆಯ ವಾತಾನುಕೂಲ ವಜ್ರ ಬಸ್ಸಲ್ಲಿ ಆಫ಼ೀಸಿಗೆ ಹೋಗಬೇಕಾದ್ರೆ ಕಿವಿಗೆ ಹೆಡ್‌ಫೋನ್ ಹಾಕ್ಕೊಂಡು ಅದರಲ್ಲಿ ಯಾವುದೋ ಒಂದು ಪ್ರೈವೇಟ್ ಮ್ಯುಜಿಕ್ ಸ್ಟೇಷನ್ ಹಾಕ್ಕೊಂಡು ಅದನ್ನ ಕೇಳ್ಕೊಂಡು ಹೋಗ್ತಾ ಇದ್ದೆ. ಅದರಲ್ಲಿ ಒಬ್ಬ ಅರ್. ಜೆ. ಎಲ್ಲ ಕೇಳುಗರಿಗೂ ಒಂದು ವಿಷಯದ ಬಗ್ಗೆ ತಮ್ಮ ಅನುಭವಗಳನ್ನ ಹಂಚಿಕೊಳ್ಳಕ್ಕೆ ಫೋನ್ ನಂಬರ್ ಮತ್ತು ಎಸ್.ಎಮ್.ಎಸ್ ಮಾಡಕ್ಕೆ ಅಂತ ಬೇರೊಂದು ನಂಬರ್ ಕೊಟ್ಟು ಬಿಟ್ಟು ಅವರ ಅಭಿವ್ಯಕ್ತಿಯ ಮಧ್ಯ ಹಾಡುಗಳನ್ನ ಕೇಳಿಸ್ತಾ ಇದ್ದ. ಮಾತಾಡಬೇಕಾಗಿರೊ ವಿಷಯ ಏನಂದ್ರೆ, ನೀವು ನಿಮ್ಮ ಜೀವನದಲ್ಲಿ ಯಾವತ್ತಾದ್ರು ಯಾವುದಾದ್ರು ಹುಡುಗಿ ಅಥವಾ ಹುಡುಗನನ್ನ ಚುಡಾಯಿಸಿದ್ದುಂಟಾ? ಹೌದು ಅಂತಾದ್ರೆ, ಹೇಗಿತ್ತು ನಿಮ್ಮ ಅನುಭವ? ಅಂತ ಅವರ ರೇಡಿಯೋ ಮೇಲೆ ಹಂಚಿಕೊಳ್ಳ ಬೇಕಿತ್ತು.

ಅದಕ್ಕೆ ಒಬ್ಬ ಶ್ರೋತ್ರು ಫೋನ್ ಮಾಡಿ, ಸಾರ್, ನಾನು ಮೊದಲನೆ ಸಲ ನಮ್ಮ ಕ್ಲಾಸ್‌ಮೇಟ್ ಹುಡುಗಿಗೆ ಚುಡಾಯಿಸಿದ್ದೆ ಆಗ ಅವಳು ಎಲ್ಲರೆದ್ರು ಜೋರಾಗಿ ಕೆನ್ನೆಗೆ ಹೊಡೆದಿದ್ಲು. ಇದೆಲ್ಲ ನಮಗೆ ಸೆಟ್ ಆಗಲ್ಲಾ ಅನ್ಕೊಂಡು ದೂರ ಸರಿದ್ಬಿಟ್ಟೆ. ಅದಕ್ಕೆ ಅರ್.ಜೆ. ಹೇಳಿದ್ದು "ಎನ್ ಸಾರ್? ಎನ್ ಸಾರ್...! ನೀವು ಇಷ್ಟು ಬೇಗ ಸೊಲೊಪ್ಪಿಕೊಂಡು ಬಿಟ್ರಾ? ನೀವು ಅವರಿಗೆ ನಿಮ್ಮ ಹೃದಯದ ಭಾವನೆಗಳನ್ನ ಸರಿಯಾಗಿ ನಿವೇದನೆ ಮಾಡಲಿಲ್ವಾ? ಇರಲಿ ಬಿಡಿ, ಆದ್ರೆ ಅವರಿಗೆ ನಿಮ್ಮ ನೆನಪಂತೂ ಇದ್ದೇ ಇರುತ್ತೆ. ಹಾಗೆ ಬೇರೆ ಕಡೆ ಪ್ರಯತ್ನಪಡತಾಯಿರಿ ಯಶಸ್ಸು ಒಂದಿಲ್ಲ-ಒಂದು ದಿವಸ ಸಿಕ್ಕೆ ಸಿಗುತ್ತೆ ಅಂತ ಸಮಜಾಯಿಷಿ ಹೇಳಿ ಮುಂದಿನ ಗೀತೆ ಪ್ರಸಾರ ಮಾಡದಾ.

ಇನ್ನೊಬ್ಬ ಶ್ರೋತ್ರು ಫೋನ್ ಮಾಡ್ಬಿಟ್ಟು, "ಸಾರ್ ನಾನು ನಿಮಗೆ ಹಾಗೇ ಸುಮ್ಮನೆ ಮಾತಾಡೋಣ ಅಂತ ಫೋನ್ ಮಾಡಿದೆ ಅಷ್ಟೆ. ನಮ್ಮದ್ಯಾವುದು ಈ ಥರದ ಕಥೆಗಳಿಲ್ಲ ಬಿಡಿ. ಚುಡಾಯಿಸೋದಿರಲಿ ಯಾವೊಂದು ಹುಡ್ಗಿಗೂ ಮಾತುಕೂಡ ಆಡ್ಸಿಲ್ಲಾ" ಅಂದ. ಅದಕ್ಕೆ ಆ ರೇಡಿಯೊ ಸಖ ಹೇಳಿದ್ದು, "ಎನ್ರಿ ನೀವು ಒಂದ್ಸಾರಿನೂ ಹುಡ್ಗಿರ್ನಾ ಚುಡಾಯಿಸೋದಿರಲಿ ಮಾತುಕೂಡ ಆಡಿಸ್ಲಿಲ್ವಾ? ಎನ್ ಸಾರ್, ನಿಮಗೆ ನಿಮ್ಮ ಕಾಲೇಜ್ ಲೈಫ಼್ ಬೋರು/ವೇಸ್ಟ್ ಅಂತ ಅನ್ನಿಸಲ್ವಾ?. ಇನ್ನು ಮುಂದೆನಾದ್ರು ಸುಧಾರಿಸಿ ಕೊಳ್ಳಿ ನಿಮ್ಮ ಈ ವ್ಯವಹಾರವನ್ನ." ಅಂತ ಫೊನ್ ಟ್ಟುಬಿಟ್ಟ. ಆಮೇಲೆ ಏನಿದು ಶ್ರೋತ್ರುಗಳೆ, ನಮಗೆ ಕರೆಮಾಡೋರು ಎಲ್ಲರು ಸಭ್ಯರೇ ಅಂತ ಕಾಣ್ಸುತ್ತೆ ಅಂದ. ಆದಾದ ಸ್ವಲ್ಪ ಹೊತ್ತಿನಲ್ಲಿ ನನ್ನ ನಿಲ್ದಾಣ ಬಂತು ನಾನು  ಕೆಳಗಿಳಿದು ಆಫೀಸ್ ಕಡೆ ಹೊರಟೆ.

ಆಮೇಲೆ ಸಾಯಂಕಾಲ ಮನೆಗೆ ಬರಬೇಕಾದ್ರೆ ಅದೇ ಸ್ಟೇಷನ್ ಮೇಲೆ ಬೇರೊಬ್ಬ ಅರ್. ಜೆ. ಮಾತಾಡ್ತಿದ್ದ. ಅವನ ರೇಡಿಯೊ ಹೆಸರು, ಲವ್ ಫ಼್ರೆಂಡ್ ಅಂತ. ನಿಮ್ಮ ಲವ್ ಸಮಸ್ಯೆಗಳೇನಾದ್ರು ಇದ್ರೆ ಅಥವಾ ಪ್ರೀತಿ ಬಗ್ಗೆ ಹಂಚಿಕೊಳ್ಳೋದೇನಾದ್ರು ಇದ್ರೆ ಆತನ ಜೊತೆ ಮನಸ್ಸು ಬಿಚ್ಚಿ ಮಾತಾಡಬಹುದಂತೆ.

ಅಷ್ಟರಲ್ಲಿ ಒಬ್ಬ ಹುಡುಗಿ ಅಲ್ಲಿಗೆ ಕಾಲ್ ಮಾಡಿದ್ಲು. "ಹೇಳಿ ನಿಮ್ಮ ಲವ್ ಫ಼್ರೆಂಡ್ ಮಾತಾಡ್ತಿರೋದು, ನಿಮ್ಮ ಮನಸ್ಸು ಬಿಚ್ಚಿ ಮಾತಾಡಿ. ನಿಮ್ಮದು ಪ್ರೀತಿಯ ಸಮಸ್ಯೆನಾ ಇಲ್ಲಾ ಸವಿ ನೆನಪಾ?" ಅಂದ. ಆಗ ಆ ಹುಡುಗಿ, "ಸಾರ್, ನಮ್ಮದು ಚಿಕ್ಕ ಸಂಸಾರ, ಮನೇಲಿ ನಾನು ಅಪ್ಪಾ-ಅಮ್ಮಾ ಅಷ್ಟೆ ಇರೋದು"... ನಾನು ಓದತಾಯಿರೊ ಕಾಲೇಜಲ್ಲಿ ಒಬ್ಬ ಹುಡುಗ ಇದಾನೆ ಅವನ ಜೊತೆ ಕೆಲ ಕಾಲೇಜ್ ಹೊರಗಡೆಯ ಹುಡುಗ್ರು ಇದಾರೆ, ಅವರೆಲ್ಲಾ ದಿನಾಲು ನಾವು ಕಾಲೇಜ್ ಮುಗಿಸಿ ಮನೆಗೆ ಹೊರಟಾಗ ದಾರಿಲಿ ನಿಂತು ಚುಡಾಯಿಸ್ತಾರೆ, ಇವರಿಂದ ತುಂಬಾ ತೊಂದರೆ ಆಗುತ್ತೆ...! ಮನೇಲಿ ಇದೆಲ್ಲಾ ಹೇಳಿದ್ರೆ ಅಪ್ಪಾ-ಅಮ್ಮಾ ಕಾಲೇಜಿಗೆ ಹೋಗೋದೆ ಬೇಡ ಅನ್ನಬಹುದು. ಕಾಲೇಜಲ್ಲಿ ಹೇಳಿದ್ರೆ ಮರ್ಯಾದೆ ಪ್ರಶ್ನೆ, ಏನ್ಮಾಡೋದು ಅಂತಾನೇ ಗೊತ್ತಾಗ್ತಿಲ್ಲಾ." ಅದ್ದಕ್ಕೆ ಆ ಲವ್ ಫ಼್ರೆಂಡ್ ಹೇಳಿದ್ದು, "ಅಮ್ಮಾ ಸಮಾಧಾನ ಮಾಡಿಕೊಳ್ಳಿ. ನೀವು ಧೈರ್ಯ ಕಳ್ಕೊಬೇಡಿ. ನನಗೆ ನಿಮ್ಮ ಹೃದಯದ ವೇದನೆ ಅರ್ಥವಾಗುತ್ತೆ. ಈ ಹುಡುಗ್ರು ಯಾಕೆ ಹೀಗೆ ಆಡ್ತಾರೊ ಗೊತ್ತಿಲ್ಲ. ಇದರಿಂದ ಬೇರೆಯವರಿಗೆ ಎಷ್ಟು ತೊಂದರೆ ಆಗುತ್ತೆ ಅನ್ನೊ ಪರಿವೆ ಕೂಡಾ ಅವರಿಗೆ ಇರೋದಿಲ್ಲ. ಛೇ, ಅವರಿಗು ಒಬ್ಬ ಅಕ್ಕ-ತಂಗಿ ಅಂತ ಇದ್ರೆ ಗೊತ್ತಾಗಿರೋದು. ನೀವು ನಮಗೆ ನಿಮ್ಮ ಉಳಿದ ವಿವರಣೆಗಳನ್ನ ಕೊಡಿ. ನಾವು ಇದನ್ನ ಹೇಗೆ ತಡೆಗಟ್ಟ ಬಹುದು ಅಂತ ನೋಡ್ತಿವಿ" ಅಂತ ಹೇಳಿ ಫೋನ್ ಕಟ್ ಮಾಡದಾ. ಆಮೇಲೆ, "ಶ್ರೋತ್ರುಗಳೆ, ನಮ್ಮ ಸಮಾಜ ಅದೆಷ್ಟೇ ಮುಂದುವರೆದಿದೆ, ಮಹಿಳೆಯರಿಗೆ ಸಮಾನ ಗೌರವದ ಸ್ಥಾನ-ಮಾನ ಕೊಟ್ಟಿದೆ ಅಂದ್ರೂ ಇಂಥದ್ದನ್ನ ಕೇಳ್ದಾಗ, ನಮ್ಮ ಸಮಾಜದಲ್ಲಿ, ಜನರ ವ್ಯಕ್ತಿತ್ವದಲ್ಲಿ ಇನ್ನೂ ಬದಲಾವಣೆ ಆಗೋದು ತುಂಬಾ ಇದೆ ಅನ್ಸುತ್ತೆ ಅಲ್ಲಾ? ನಿಮ್ಮ ಲವ್ ಫ಼್ರೆಂಡ್ ಜೊತೆ ಕೇಳ್ತಾ ಇರಿ ನಿಮ್ಮ ನೆಚ್ಚಿನ ಸ್ಟೇಷನ್" ಅಂತ ಹೇಳಿ ಯಾವುದೋ ಒಂದು ಹಾಡನ್ನ ಹಾಕಿಬಿಟ್ಟ.

 
ಟಿ.ವಿ. ನವರು ಏನೂ ಕಮ್ಮಿ ಇಲ್ಲ.

ಹೋದವಾರ ಬೆಳಿಗ್ಗೆ ಟಿ. ವಿ. ನೋಡ್ಬೇಕಾದ್ರೆ, ಯಾವುದೋ ಒಂದು ಸಂಗೀತದ ಚಾನಲ್ ಹಾಕಿದ್ದೆ. ಅದರಲ್ಲಿ ಶುಭಾಶಯಗಳ ಕಾರ್ಯಕ್ರಮ ಪ್ರಸಾರವಾಗ್ತಿತ್ತು. ಆಗ ಒಂದು ಮಗು ಫೋನ್ ಮಾಡಿ, "ಸಾರ್ ಇವತ್ತು ನಮ್ಮ ಅಪ್ಪ-ಅಮ್ಮಾ ಅವರ ಮದುವೆ ಎನಿವರ್ಸರಿ, ಅವರಿಗೆ ಶುಭಾಶಯ ತಿಳಿಸ್ಬೇಕಿತ್ತು. ಮತ್ತೆ ಭಾಗ್ಯವಂತರು ಚಿತ್ರದಿಂದ "ನನ್ನ ನಿನ್ನ ಮನವು" ಗೀತೆನ ಪ್ರಸಾರ ಮಾಡ್ತಿರಾ...? ಅಂದಿದ್ದಕ್ಕೆ ಆ ಟಿ.ವಿ. ಸಖಿ ಹೇಳಿದ್ದು "ಆರಾಧನಾ ಅವರ ಅಪ್ಪ-ಅಮ್ಮನಿಗೆ ಮದುವೆ ಎನಿವರ್ಸರಿಯ ಹಾರ್ದಿಕ ಶುಭಾಶಯಗಳು... ಆರಾಧನಾ ಅವರೆ ಇದು ಕೋರಿಕೆಯ ಕಾರ್ಯಕ್ರಮ ಆಗಿರದೆ ಇರೋದ್ರಿಂದ ನಿಮಗಾಗಿ ಒಂದು ಒಳ್ಳೆ ಗೀತೆ ಪ್ರಸಾರ ಮಾಡ್ತಾ ಇದಿವಿ ನೋಡಿ, ಎಂಜಾಯ್ ಮಾಡಿ" ಅಂತ. ನಂತರ ನೋಡಿದ್ರೆ ಅವರ ಲಿಸ್ಟಲ್ಲಿ ಪ್ರಸಾರವಾಗ್ತಿದ್ದ ಗೀತೆ... "ಯಾರೋ, ಯಾರೋ ಗೀಚಿ ಹೋದ, ಹಾಳು ಹಣೆಯ ಬರಹ..." ಅನ್ನೋದು.

ಇದಕ್ಕೆಲ್ಲ ನಗಬೇಕೊ, ಅಳಬೇಕೊ ಅಥವಾ ತಲೆ ಚಚ್ಚಿಕೊಳ್ಳಬೇಕೊ ಗೊತ್ತಾಗಲ್ಲಾ. ಈ ಆರ್.ಜೆ. ಗಳು ಆಡೋದನ್ನ ಸಿರಿಯಸ್ಸಾಗಿ ತಗೊಂಡ್ರೆ ಅಷ್ಟೇ. ಅಲ್ಲಿ ಅವರಿಗೆ ಟೈಮ್ ಪಾಸಾದ್ರೆ ಸಾಕು, ಜನರ ಭಾವನೆಗಳು ಎತ್ಕುಟ್ಟಿಹೋದ್ರೂ ಪರವಾಗಿಲ್ಲ. ಯಾರೇ ಆಗಲಿ ಜನರು ಯಾರನ್ನ ನಂಬತಾರೋ ಅಥವಾ ಆಲಿಸ್ತಾರೋ ಅವರು ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಂಡ್ರೆ ಅವರಿಗೂ, ಅವರ ಸ್ಟೇಷನ್‌ಗೂ, ಸಮಾಜಕ್ಕು ಒಂದು ಬೆಲೆ ಇರುತ್ತೆ.

- ಕೆ. ಕಲ್ಯಾಣ

No comments:

Post a Comment